ಮಂಗಳವಾರ, 27 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು: ವಸತಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಕುಸಿತ, ಸಾವಿರ ಸೀಟುಗಳು ಉಳಿಕೆ

ಪೋಷಕರು–ಮಕ್ಕಳು ನಿರಾಸಕ್ತಿ, ಹಲವು ಶಾಲೆಗಳಿಗೆ ಮೂಲಭೂತ ಸೌಲಭ್ಯಗಳ ಕೊರತೆ
ಮೈಲಾರಿ ಲಿಂಗಪ್ಪ
Published 3 ಜನವರಿ 2024, 6:36 IST
Last Updated 3 ಜನವರಿ 2024, 6:36 IST
ಅಕ್ಷರ ಗಾತ್ರ

ತುಮಕೂರು: ಜಿಲ್ಲೆಯ ವಸತಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಸಂಖ್ಯೆ ಪ್ರತಿ ವರ್ಷವೂ ಕಡಿಮೆಯಾಗುತ್ತಿದ್ದು, ಶಾಲೆಗಳ ಪರಿಸ್ಥಿತಿ ಕಂಡು ಪೋಷಕರು ತಮ್ಮ ಮಕ್ಕಳನ್ನು ಸೇರಿಸಲು ಹಿಂದೇಟು ಹಾಕುತ್ತಿದ್ದಾರೆ. ಪ್ರತಿ ವರ್ಷ ಸಾವಿರ ಸೀಟುಗಳು ಖಾಲಿ ಉಳಿಯುತ್ತಿವೆ.

ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿ 33, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ 11, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ 9, ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯ 6 ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 59 ವಸತಿ ಶಾಲೆಗಳಿವೆ. ಇವುಗಳಲ್ಲಿ ಒಟ್ಟು 15,950 ಮಕ್ಕಳ ಪ್ರವೇಶಾತಿಗೆ ಅವಕಾಶ ಇದ್ದು, ಪ್ರಸ್ತುತ 14,593 ಮಕ್ಕಳು ಮಾತ್ರ ದಾಖಲಾತಿ ಪಡೆದಿದ್ದಾರೆ. 1,357 ಸೀಟು ಉಳಿದಿವೆ. 6,172 ಬಾಲಕರು, 8,421 ಬಾಲಕಿಯರು ವಸತಿ ಶಾಲೆಗಳಲ್ಲಿ ಅಭ್ಯಾಸ ಮಾಡುತ್ತಿದ್ದಾರೆ. ಬಾಲಕಿಯರ ಸಂಖ್ಯೆಯೇ ಹೆಚ್ಚಿದೆ.

6ರಿಂದ 10ನೇ ತರಗತಿ, ಕೆಲವು ವಸತಿ ಶಾಲೆಗಳಲ್ಲಿ 12ನೇ ತರಗತಿ ವರೆಗೆ ವಿದ್ಯಾಭ್ಯಾಸ ಮಾಡಲು ಅವಕಾಶ ಕಲ್ಪಿಸಲಾಗಿದೆ. ಪ್ರತಿ ಶಾಲೆಯಲ್ಲಿ 250 ಮಕ್ಕಳನ್ನು ದಾಖಲು ಮಾಡಿಕೊಳ್ಳಬೇಕು. ಆದರೆ, ಹಲವು ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಇದಕ್ಕಿಂತ ಕಡಿಮೆ ಇದೆ. ಶಾಲೆಗೆ ಸೇರಿದ ಮಕ್ಕಳು ಕೆಲವೇ ದಿನಗಳಲ್ಲಿ ಶಾಲೆ ಬಿಟ್ಟು ಮನೆಯ ಕಡೆ ಮುಖ ಮಾಡುತ್ತಿದ್ದಾರೆ. ಸರ್ಕಾರದಿಂದ ಹಲವು ಸೌಲಭ್ಯ ಕಲ್ಪಿಸಿದರೂ ಮಕ್ಕಳು, ಪೋಷಕರು ವಸತಿ ಶಾಲೆಗಳತ್ತ ಹೆಚ್ಚಿನ ಆಸಕ್ತಿ ತೋರುತ್ತಿಲ್ಲ.

ಪ್ರವೇಶಾತಿ ಕುಸಿತ ಒಂದು ಕಡೆಯಾದರೆ ಮತ್ತೊಂದು ಕಡೆಯಲ್ಲಿ ಶಾಲೆಗಳನ್ನು ನಡೆಸಲು ಸೂಕ್ತ ಕೊಠಡಿಗಳಿಲ್ಲ. ಸಮಾಜ ಕಲ್ಯಾಣ ಇಲಾಖೆಯಡಿ 7, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಡಿ 1 ಶಾಲೆ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದೆ. ಕೊಠಡಿಗಳ ಕೊರತೆಯಿಂದ ಮಕ್ಕಳ ‘ಪಾಠ, ಊಟ, ನಿದ್ದೆ’ ಎಲ್ಲ ಒಂದೇ ಕಡೆ ಆಗುತ್ತಿದೆ. ಬೋಧನೆ, ಮಲಗಲು ಪ್ರತ್ಯೇಕ ಕೊಠಡಿಗಳಿಲ್ಲ. ಊಟ ಮಾಡಲು ಬೇಕಾದ ಸಭಾಂಗಣದ ವ್ಯವಸ್ಥೆಯೂ ಇಲ್ಲ.

ಕಟ್ಟಡದ ಸಮಸ್ಯೆಯಿಂದಾಗಿ ಗುಬ್ಬಿ ತಾಲ್ಲೂಕಿನ ಬಿಕ್ಕೇಗುಡ್ಡದಲ್ಲಿ ನಡೆಯಬೇಕಿದ್ದ ಸಮಾಜ ಕಲ್ಯಾಣ ಇಲಾಖೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯನ್ನು ನಗರದ ಮೆಳೆಕೋಟೆಯಲ್ಲಿ ನಡೆಸಲಾಗುತ್ತಿದೆ. ಇಲ್ಲಿ 220 ಮಕ್ಕಳು ಓದುತ್ತಿದ್ದಾರೆ. ಇಷ್ಟು ಮಕ್ಕಳಿಗೆ ಕೇವಲ 6 ಕೊಠಡಿಗಳಿದ್ದು, ಅಗತ್ಯ ಸೌಲಭ್ಯಗಳಿಲ್ಲ. ಹಾಸಿಗೆ ವಿತರಣೆ ಮಾಡಿಲ್ಲ. ಮಕ್ಕಳು ನೆಲದ ಮೇಲೆ ಚಾಪೆ ಹಾಸಿಕೊಂಡು ಮಲಗುತ್ತಿದ್ದಾರೆ. ತಾಲ್ಲೂಕಿನ ಕೋರದ ಶಾಲೆಯನ್ನು ದೇವರಾಯನದುರ್ಗದಲ್ಲಿ, ಗೂಳೂರಿನಲ್ಲಿ ನಡೆಯಬೇಕಿದ್ದ ಶಾಲೆಯನ್ನು ಎಸ್‌.ಎಸ್‌.ಪುರಂನಲ್ಲಿ ನಡೆಸಲಾಗುತ್ತಿದೆ.

ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿರುವ ಬಹುತೇಕ ಶಾಲೆಗಳಲ್ಲಿ ಕೊಠಡಿಗಳ ಸಮಸ್ಯೆಯಾಗುತ್ತಿದೆ. ಇದರಿಂದ ಹೆಚ್ಚಿನ ಮಕ್ಕಳನ್ನು ಸೇರಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಕೊಠಡಿಗಳ ಸಂಖ್ಯೆಗೆ ಅನುಗುಣವಾಗಿ ಮಕ್ಕಳನ್ನು ದಾಖಲು ಮಾಡಿಕೊಳ್ಳಲಾಗುತ್ತಿದೆ. ಕೊಠಡಿಗಳ ಸಮಸ್ಯೆಯಿಂದ ಮಕ್ಕಳ ಕಲಿಕೆಯೂ ಕುಂಠಿತವಾಗುತ್ತಿದೆ. ಆಟೋಟಗಳಲ್ಲಿ ಮಕ್ಕಳು ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತಿಲ್ಲ.

ತುಮಕೂರಿನ ಮೆಳೆಕೋಟೆಯಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆ
ತುಮಕೂರಿನ ಮೆಳೆಕೋಟೆಯಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆ

ಸ್ಥಳೀಯರ ‘ಕಾರುಬಾರು’

ಜಿಲ್ಲೆಯ ಎಲ್ಲ ವಸತಿ ಶಾಲೆಗಳಲ್ಲಿ ಸಿಬ್ಬಂದಿಯ ಕೊರತೆ ಇದೆ. ಗುತ್ತಿಗೆ ಆಧಾರದ ಮೇಲೆ ಕೆಲಸಗಾರರನ್ನು ನೇಮಿಸಿಕೊಂಡಿದ್ದಾರೆ. ಶಿಕ್ಷಕರು ಎಫ್‌ಡಿಎ ಎಸ್‌ಡಿಎ ಅಡುಗೆಯವರು ಸೇರಿದಂತೆ ಅಗತ್ಯ ಸಿಬ್ಬಂದಿಯ ಕೊರತೆ ಕಾಡುತ್ತಿದೆ. 10 ಜನ ಶಿಕ್ಷಕರು ಇರಬೇಕಾದ ಕಡೆಗಳಲ್ಲಿ ಕೇವಲ 3 ಜನ ಕಾಯಂ ಶಿಕ್ಷಕರಿದ್ದಾರೆ. ಇದನ್ನು ಸರಿದೂಗಿಸಿಕೊಂಡು ಹೋಗುವ ನಿಟ್ಟಿನಲ್ಲಿ ಅತಿಥಿ ಶಿಕ್ಷಕರನ್ನು ನಿಯೋಜಿಸಿಕೊಳ್ಳಲಾಗಿದೆ. ಗ್ರಾಮೀಣ ಭಾಗದಲ್ಲಿರುವ ವಸತಿ ಶಾಲೆಗಳಲ್ಲಿ ಹೊರ ಗುತ್ತಿಗೆ ಮೇಲೆ ಕೆಲಸ ಮಾಡುತ್ತಿರುವ ಸ್ಥಳೀಯರ ‘ಕಾರುಬಾರು’ ಜೋರಾಗಿದೆ. ಇಡೀ ವಸತಿ ಶಾಲೆಗಳನ್ನು ತಮ್ಮ ನಿಯಂತ್ರಣದಲ್ಲಿ ಇಟ್ಟುಕೊಂಡಿದ್ದಾರೆ. ಅಲ್ಲಿನ ಶಿಕ್ಷಕರು ಅಧಿಕಾರಿಗಳು ಪ್ರಶ್ನಿಸಿದರೆ ಅವರನ್ನು ಗುರಿಯಾಗಿಸಿಕೊಂಡು ‘ಇಲ್ಲ–ಸಲ್ಲದ’ ಆರೋಪ ಮಾಡುವುದು ಸಾಮಾನ್ಯವಾಗಿದೆ ಎಂದು ಅಧಿಕಾರಿಯೊಬ್ಬರು ತಮ್ಮ ನೋವು ತೋಡಿಕೊಂಡರು.

ಬಾಡಿಗೆ ಕಟ್ಟಡದಲ್ಲಿ 250 ಮಕ್ಕಳ ಪ್ರವೇಶಾತಿ ಸಾಧ್ಯವಾಗುವುದಿಲ್ಲ. ಇದರಿಂದ ಸೀಟುಗಳು ಬಾಕಿ ಉಳಿಯುತ್ತಿವೆ. ಸ್ವಂತ ಕಟ್ಟಡ ನಿರ್ಮಾಣಕ್ಕೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ
–ಕೃಷ್ಣಪ್ಪ ಜಂಟಿ ನಿರ್ದೆಶಕರು ಸಮಾಜ ಕಲ್ಯಾಣ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT