ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು: ದಸಂಸದಿಂದ ಕುಂದೂರು ಹೊರಕ್ಕೆ

ಹೊಸದಾಗಿ ಬೆಲ್ಲದಮಡು ಕೃಷ್ಣಪ್ಪ ನೇಮಕ
Published 24 ಏಪ್ರಿಲ್ 2024, 5:47 IST
Last Updated 24 ಏಪ್ರಿಲ್ 2024, 5:47 IST
ಅಕ್ಷರ ಗಾತ್ರ

ತುಮಕೂರು: ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ ದಲಿತ ಸಂಘರ್ಷ ಸಮಿತಿ (ಡಿಎಸ್‌ಎಸ್) ಜಿಲ್ಲಾ ಸಂಚಾಲಕ ಕುಂದೂರು ತಿಮ್ಮಯ್ಯ ಹಾಗೂ ಅವರ ಪುತ್ರ, ಜಿಲ್ಲಾ ಸಂಘಟನಾ ಸಂಚಾಲಕ ಕುಂದೂರು ಮುರಳಿ ಅವರನ್ನು ಸಂಘಟನೆಯಿಂದ ಹೊರ ಹಾಕಲಾಗಿದೆ.

ಕೆಲವು ಗುರುತರ ಆರೋಪಗಳು ಕೇಳಿಬಂದ ನಂತರ ಸಂಘನೆಯ ಜವಾಬ್ದಾರಿಯಿಂದ ಕೈಬಿಟ್ಟು ಸಮಿತಿ ರಾಜ್ಯ ಸಂಚಾಲಕ ಎಂ.ಗುರುಮೂರ್ತಿ ಆದೇಶಿಸಿದ್ದಾರೆ. ಹೊಸದಾಗಿ ಮಧುಗಿರಿ ತಾಲ್ಲೂಕು ದೊಡ್ಡೇರಿ ಹೋಬಳಿಯ ಬೆಲ್ಲದಮಡು ಕೃಷ್ಣಪ್ಪ ಅವರನ್ನು ಜಿಲ್ಲಾ ಉಸ್ತುವಾರಿಯನ್ನಾಗಿ ನೇಮಕ ಮಾಡಲಾಗಿದೆ.

ಸಂಘಟನೆ ರಾಜ್ಯ ನಾಯಕರನ್ನು ಅವಹೇಳನ ಮಾಡುತ್ತಿರುವುದು, ತುರುವೇಕೆರೆ ತಾಲ್ಲೂಕು ಪದಾಧಿಕಾರಿಗಳ ಆಯ್ಕೆ ಸಮಯದಲ್ಲಿ ಗಲಾಟೆ ಮತ್ತಿತರರ ವಿಚಾರಗಳನ್ನು ಮುಂದಿಟ್ಟುಕೊಂಡು ಕುಂದೂರು ತಿಮ್ಮಯ್ಯ, ಮುರಳಿ ಅವರಿಗೆ ನೋಟಿಸ್ ಜಾರಿ ಮಾಡಲಾಗಿತ್ತು. ಈ ನೋಟಿಸ್‌ಗೆ ವಿವರ ನೀಡಿರಲಿಲ್ಲ. ಮಾರ್ಚ್ 24ರಂದು ನಡೆದ ಡಿಎಸ್‌ಎಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಚರ್ಚಿಸಿದ್ದು, ಸಂಘಟನೆಯ ಜವಾಬ್ದಾರಿಯಿಂದ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ.

ಕಳೆದ ನಾಲ್ಕು ದಶಕಗಳಿಂದ ಜಿಲ್ಲೆಯಲ್ಲಿ ದಲಿತ ಸಂಘರ್ಷ ಸಮಿತಿಯನ್ನು ಕುಂದೂರು ತಿಮ್ಮಯ್ಯ ಮುನ್ನಡೆಸಿಕೊಂಡು ಬಂದಿದ್ದರು. ಸಂಘಟನೆಯನ್ನು ಸಾಕಷ್ಟು ಬಲಪಡಿಸಿ, ಹಲವಾರು ದಲಿತರ ಪರವಾದ ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದರು. ಕಳೆದ ವರ್ಷ ಅವರ ಆತ್ಮ ಕಥನ ‘ಅಂಗುಲಿಮಾಲ’ ಕೃತಿ ಬಿಡುಗಡೆ ಮಾಡಲಾಗಿತ್ತು.

ನಗರದ ಜನ ಚಳವಳಿ ಕೇಂದ್ರದಲ್ಲಿ ಆಯೋಜಿಸಿದ್ದ ದಲಿತ ಮುಖಂಡರ ಸಭೆಯಲ್ಲಿ ತಿಮ್ಮಯ್ಯ ಅವರನ್ನು ಸಂಘನೆಯಿಂದ ಹೊರಗಿಟ್ಟಿರುವುದನ್ನು ಖಂಡಿಸಲಾಯಿತು. ಅವರ ನೇತೃತ್ವದಲ್ಲೇ ಮತ್ತೆ ಸಂಘಟನೆ ಬಲಪಡಿಸುವ ಬಗ್ಗೆ ಚರ್ಚಿಸಲಾಯಿತು. ಲೋಕಸಭೆ ಚುನಾವಣೆ ಮುಗಿದ ನಂತರ ಸಂಘಟನೆಗೆ ಒತ್ತುಕೊಡಲು ನಿರ್ಧರಿಸಲಾಯಿತು.

ಮುಖಂಡರಾದ ಡ್ಯಾಗೇರಹಳ್ಳಿ ವಿರೂಪಾಕ್ಷ, ಚೇಳೂರು ಶಿವನಂಜಪ್ಪ, ಕೆಂಟಲಗೆರೆ ಕೆ.ಎಚ್.ರಂಗನಾಥ್, ನೊಣವಿನಕೆರೆ ರಾಜಣ್ಣ, ಕುಪ್ಪೂರು ಶ್ರೀಧರನಾಯಕ್, ಲೋಕೇಶ್‍ ಸ್ವಾಮಿ ಮೊದಲಾದವರು ಸಭೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT