ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಬ್ಬರಿಗೆ ₹20 ಸಾವಿರ ಬೆಂಬಲ ನೀಡಲು ಆಗ್ರಹ

ಮಾಜಿ ಸಂಸದ ಮುದ್ದಹನುಮೇಗೌಡ ನೇತೃತ್ವದಲ್ಲಿ ರೈತ ಮುಖಂಡರ ಧರಣಿ
Last Updated 9 ಮಾರ್ಚ್ 2020, 13:52 IST
ಅಕ್ಷರ ಗಾತ್ರ

ತುಮಕೂರು: ಕ್ವಿಂಟಲ್ ಕೊಬ್ಬರಿಗೆ ₹20 ಸಾವಿರ ಬೆಂಬಲ ಬೆಲೆ ನೀಡಬೇಕು ಎಂದು ಆಗ್ರಹಿಸಿ ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ ನೇತೃತ್ವದಲ್ಲಿ ಸೋಮವಾರ ಧರಣಿ ನಡೆಸಲಾಯಿತು.

ನಗರದ ಟೌನ್‌ಹಾಲ್‌ ಬಳಿ ನಡೆದ ಧರಣಿಯಲ್ಲಿ ನೂರಾರು ರೈತರು, ರೈತ ಮುಖಂಡರು, ಕಾಂಗ್ರೆಸ್, ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಮುದ್ದಹನುಮೇಗೌಡ ಮಾತನಾಡಿ, ‘ದೇಶದ ತೆಂಗು ಉತ್ಪಾದನೆಯಲ್ಲಿ ಕರ್ನಾಟಕ ರಾಜ್ಯ ಸಿಂಹಪಾಲು ನೀಡುತ್ತಿದೆ. ರಾಜ್ಯದಲ್ಲಿ ತುಮಕೂರು ಜಿಲ್ಲೆ ಅಗ್ರ ಸ್ಥಾನದಲ್ಲಿದ್ದು, ಸುಮಾರು 1.42 ಲಕ್ಷ ಹೆಕ್ಟರ್ ಪ್ರದೇಶದಲ್ಲಿ ತೆಂಗು ಬೆಳಯಲಾಗುತ್ತಿದೆ. ಜಿಲ್ಲೆಯಲ್ಲಿ ಉತ್ಪಾದನೆಯಾಗುವ ಕೊಬ್ಬರಿ ವಿಶ್ವದೆಲ್ಲಡೆ ಪ್ರಖ್ಯಾತಿ ಪಡೆದಿದೆ’ ಎಂದರು.

ಕೃಷಿ ಬೆಲೆ ಆಯೋಗವೇ ಹೇಳುವಂತೆ ಕ್ವಿಂಟಲ್ ಕೊಬ್ಬರಿ ಉತ್ಪಾದನೆಗೆ ₹11 ಸಾವಿರ ವೆಚ್ಚ ತಗಲುತ್ತದೆ. ಆದರೆ, ₹10 ಸಾವಿರಕ್ಕಿಂತ ಕಡಿಮೆ ದರಕ್ಕೆ ಮಾರಾಟ ಮಾಡುವ ದುಸ್ಥಿತಿ ಎದುರಾಗಿದೆ. ಇಂತಹ ಪರಿಸ್ಥಿತಿಯಲ್ಲಿ ರೈತರು ತೆಂಗು ಬೆಳೆಯಬೇಕೋ, ಬೇಡವೋ ಎನ್ನುವ ಆತಂಕದಲ್ಲಿ ಇದ್ದಾರೆ. ಹಾಗಾಗಿ ಸರ್ಕಾರಗಳು ಕ್ವಿಂಟಲ್‌ ಕೊಬ್ಬರಿಗೆ ₹20 ಸಾವಿರ ನಿಗದಿಪಡಿಸುವ ಮೂಲಕ ರೈತರ ನೆರವಿಗೆ ಧಾವಿಸಬೇಕು ಎಂದು ಆಗ್ರಹಿಸಿದರು.

ತೆಂಗು ಬೆಳೆಗಾರರ ಸಂರಕ್ಷಣೆಗಾಗಿ ಕಡ್ಡಾಯ ಆನ್‍ಲೈನ್ ಮಾರುಕಟ್ಟೆ ವ್ಯವಸ್ಥೆ, ತೆಂಗು ಉತ್ಪಾದನೆಗಳ ಮೌಲ್ಯ ವರ್ಧನೆ ಮತ್ತು ಸಂಶೋಧನೆಗೆ ಪ್ರಾಮುಖ್ಯತೆ ನೀಡಬೇಕು. ಜಗತ್ತಿನಲ್ಲಿ ಪ್ರಸಿದ್ಧಿ ಪಡೆದಿರುವ ಅತ್ಯುನ್ನತ ಗುಣಮಟ್ಟ ಹೊಂದಿರುವ ನಮ್ಮ ಹೆಮ್ಮೆಯ ಉತ್ಪನ್ನವನ್ನು ರಕ್ಷಿಸಲು ಕೇಂದ್ರ ಸರ್ಕಾರ ತುರ್ತು ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.

ರಾಜ್ಯ ಸರ್ಕಾರ ಸಹ ತೆಂಗು ಬೆಳೆಗಾರರ ಸಂರಕ್ಷಣೆಯ ಹಿತದೃಷ್ಟಿಯಿಂದ ಪ್ರತಿ ಕ್ವಿಂಟಲ್‌ಗೆ ₹20 ಸಾವಿರ ಬೆಂಬಲ ಬೆಲೆ ನಿಗದಿಪಡಿಸುವಂತೆ ಒತ್ತಾಯಿಸಿ ಕೇಂದ್ರಕ್ಕೆ ಶಿಫಾರಸು ಮಾಡಿ, ಒತ್ತಡ ಹೇರಬೇಕು ಎಂದರು.

ಮನವಿ ಸ್ವೀಕಾರ

ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‌ ಕುಮಾರ್ ಪ್ರತಿಭಟನಾ ಸ್ಥಳಕ್ಕೆ ಬಂದು ಮನವಿ ಸ್ವೀಕರಿಸಿ, ‘ಕಲ್ಪತರು ನಾಡಿನಲ್ಲಿ ತೆಂಗು ಬೆಳೆಗಾರರ ಹಿತಕಾಯಲು ಜಿಲ್ಲಾಡಳಿತ ಬದ್ಧವಾಗಿದೆ. ತಮ್ಮ ಮನವಿಯನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ತಲುಪಿಸಲಾಗುವುದು’ ಎಂದು ಹೇಳಿದರು.

ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ, ಮೇಯರ್ ಫರೀದಾ ಬೇಗಂ, ಎಐಸಿಸಿ ಸದಸ್ಯ ಸುಬ್ರಮಣಿ ಶ್ರೀಕಂಠೇಗೌಡ, ಮಾಜಿ ಶಾಸಕ ರಫೀಕ್ ಅಹಮ್ಮದ್, ಪ್ರಮುಖರಾದ ಕಲ್ಲಹಳ್ಳಿ ದೇವರಾಜು, ಗಂಗಾಧರಪ್ಪ, ಜಯರಾಮ್, ಚೌದರಿ ರಂಗಪ್ಪ, ತೂಬಿ ಮಲ್ಲೇಶ್, ರಾಯಸಂದ್ರ ರವಿಕುಮಾರ್, ರಾಜೇಶ್ ದೊಡ್ಡಮನಿ, ಮಹೇಶ್, ಆಟೋರಾಜ್ ಮತ್ತಿತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT