ಚಿಕ್ಕನಾಯಕನಹಳ್ಳಿ: ‘ತಾನು ಬೆಳೆದ ಬೆಳೆಗಳಿಗೆ ತಾನೇ ಬೆಲೆ ನಿಗದಿ ಮಾಡುವ ಕಾಲ ಬಾರದ ಹೊರತು ರೈತನ ಏಳಿಗೆ ಸಾಧ್ಯವಿಲ್ಲ’ ಎಂದು ವಕೀಲ ಶ್ರೀಧರ್ ಅಭಿಪ್ರಾಯಪಟ್ಟರು.
ಬ್ಯಾಂಕ್‌ಗಳ ಸಾಲ, ವಿದ್ಯುತ್ ಬಾಕಿ ಹಾಗೂ ಸರ್ಕಾರದ ವ್ಯವಸ್ಥೆಯೊಂದಿಗೆ ನಡೆಸುವ ಎಲ್ಲಾ ವ್ಯವಹಾರಗಳಿಗೆ ರೈತರು ಹಣಕ್ಕೆ ಬದಲು ಬೆಳೆ ಜಮೆ ಮಾಡುವ ವಸ್ತು ವಿನಿಮಯ ಕಾರ್ಯಕ್ರಮದ ಪ್ರಾರಂಭೋತ್ಸವಕ್ಕಾಗಿ ಸೋಮವಾರ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆಗೆ ಹೊರಟಿದ್ದ ರೈತ ಸಂಘ ಹಾಗೂ ಹಸಿರು ಸೇನೆಯ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.
ಬೆಳೆಗಳಿಗೆ ವೈಜ್ಞಾನಿಕ ಬೆಲೆ ಸಿಗದೆ ರೈತ ಕಂಗಾಲಾಗಿದ್ದಾನೆ. ಯಾಂತ್ರೀಕೃತ ಕೃಷಿಯಿಂದ ಖರ್ಚು ಹೆಚ್ಚಾಗಿ ಹಾಕಿದ ಬಂಡವಾಳವೂ ವಾಪಸಾಗುತ್ತಿಲ್ಲ. ಬೆಳೆಗಳಿಗೆ ರೈತನೇ ಬೆಲೆ ನಿಗದಿ ಮಾಡುವಂತಹ ವಾತಾವರಣ ಸೃಷ್ಟಿ ಮಾಡಲು ಹೊರಟಿರುವ ರೈತ ಸಂಘದ ಈ ಹೋರಾಟ ಪ್ರಸ್ತುತವಾಗಿದೆ ಎಂದರು.
ಪುರಸಭೆ ಮಾಜಿ ಅಧ್ಯಕ್ಷ ಸಿ.ಡಿ. ಚಂದ್ರಶೇಖರ್ ಮಾತನಾಡಿ, ರೈತರ ಬೆಳೆಗಳಿಗೆ ಉತ್ತಮ ಬೆಲೆ ಕಲ್ಪಿಸಬೇಕೆಂಬ ನಿಟ್ಟಿನಲ್ಲಿ ರೈತ ಸಂಘದ ಹೋರಾಟ ಶ್ಲಾಘನೀಯ. ಸರ್ಕಾರಗಳು ತಳೆಯುವ ರೈತ ವಿರೋಧಿ ನೀತಿಗಳಿಂದ ವಿದೇಶಿ ಉತ್ಪನ್ನಗಳು ಆಮದಾಗಿ ದೇಸಿ ಉತ್ಪನ್ನಗಳಿಗೆ ಬೆಲೆ ಇಲ್ಲದಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರೈತ ದೇಶದ ಬೆನ್ನೆಲುಬು ಎಂದು ಗಾಂಧೀಜಿ ಹೇಳಿದ್ದರು. ಆದರೆ, ರೈತನ ಬದುಕು ಸಂಕಷ್ಟದಲ್ಲಿದೆ. ತಮ್ಮ ಬೆಳೆಗಳನ್ನೇ ತೆರಿಗೆ, ಸೇವಾ ಶುಲ್ಕವಾಗಿ ಕಟ್ಟುವ ವ್ಯವಸ್ಥೆ ದೇಶದಲ್ಲಿ ಆಗಬೇಕಾಗಿದೆ ಎಂದರು.
ರೈತ ಸಂಘದ ತಾಲ್ಲೂಕು ಅಧ್ಯಕ್ಷ ಎ.ಎಂ. ಕುಮಾರಯ್ಯ ಹಾಗೂ ಪದಾಧಿಕಾರಿಗಳು ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.