ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋ ರಕ್ಷಣೆ ಹೆಸರಿನಲ್ಲಿ ಹಿಂಸೆ : ರೈತರ ಆಕ್ರೋಶ

ಗೋ ಸಂರಕ್ಷಣಾ ಕಾಯ್ದೆ ವಾಪಸ್ ಪಡೆಯಲು ಆಗ್ರಹ
Last Updated 20 ಮಾರ್ಚ್ 2023, 16:08 IST
ಅಕ್ಷರ ಗಾತ್ರ

ತುಮಕೂರು: ಗೋವುಗಳ ರಕ್ಷಣಾ ಕಾಯ್ದೆ ಹೆಸರಿನಲ್ಲಿ ಪೊಲೀಸರು ಹಿಂಸೆ ನೀಡಿ, ಎಫ್‌ಐಆರ್ ದಾಖಲಿಸುತ್ತಿರುವುದನ್ನು ವಿರೋಧಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ರೈತರು ಸೋಮವಾರ ಬೃಹತ್ ಪ್ರತಿಭಟನೆ ನಡೆಸಿದರು.

ರೈತರಿಗೆ ಮಾರಕವಾಗಿರುವ ‘ಜಾನುವಾರು ಹತ್ಯೆ ಪ್ರತಿಬಂಧಕ ಹಾಗೂ ಜಾನುವಾರು ಸಂರಕ್ಷಣೆ ಕಾಯ್ದೆ’ಯನ್ನು ವಾಪಸ್ ಪಡೆಯಬೇಕು ಎಂದು ರೈತರು ಆಗ್ರಹಿಸಿದರು.

ಸಾಕುವ ಸಲುವಾಗಿ ಜಾನುವಾರುಗಳನ್ನು ತೆಗೆದುಕೊಂಡು ಹೋಗುವ ಸಮಯದಲ್ಲಿ ಜಾಸ್ ಟೋಲ್, ಶಿರಾ ತಾಲ್ಲೂಕಿನ ಕಳ್ಳಂಬೆಳ್ಳ ಸಮೀಪದ ಟೋಲ್‌ಗಳಲ್ಲಿ ಪೊಲೀಸರು ತಡೆದು ವಶಕ್ಕೆ ಪಡೆದುಕೊಳ್ಳುತ್ತಿದ್ದಾರೆ. ನಂತರ ನ್ಯಾಯಾಲಯದ ಮೊರೆ ಹೋಗಿ, ಹಸುಗಳನ್ನು ಬಿಡಿಸಿಕೊಳ್ಳಲು ಬಂದರೆ ಅವು ಸಾವನ್ನಪ್ಪಿವೆ ಎಂದು ಹೇಳಿ ವಾಪಸ್ ಕೊಡುತ್ತಿಲ್ಲ. ಇದರಿಂದ ರೈತರು ನಷ್ಟ ಅನುಭವಿಸುವುದರ ಜತೆಗೆ ಆತಂಕಕ್ಕೆ ಒಳಗಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮೊದಲಿಗೆ ನಗರದ ಹೊರ ವಲಯದ ಜಾಸ್ ಟೋಲ್ ಬಳಿ ರೈತರು ಪ್ರತಿಭಟನೆ ನಡೆಸಿದರು. ಅಲ್ಲಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಮೆರವಣಿಗೆ ನಡೆಸಿದರು. ಎಸ್.ಎಸ್.ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ಈ ಸಮಯದಲ್ಲಿ ಕೆಲ ಕಾಲ ಪೊಲೀಸರು, ರೈತರ ನಡುವೆ ವಾಗ್ವಾದ ನಡೆಯಿತು. ನಂತರ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ರೈತರನ್ನು ಪೊಲೀಸರು ತಡೆದರು.

ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್, ‘ಗೋ ರಕ್ಷಣೆ ಹೆಸರಿನಲ್ಲಿ ಹಸುಗಳನ್ನು ವಶಪಡಿಸಿಕೊಂಡು ಗೋ ಶಾಲೆಗೆ ಕಳುಹಿಸಲಾಗುತ್ತಿದೆ. ನಂತರ ಅಲ್ಲಿ ಸಾವನ್ನಪ್ಪುವಂತೆ ಮಾಡುವ ಮೂಲಕ ಗೋ ಸಂರಕ್ಷಣೆ ಬದಲು ಕಸಾಯಿ ಖಾನೆಗೆ ಸಾಗಿಸುವ ಕೆಲಸವನ್ನು ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಮಾಡುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಗೋ ಸಂರಕ್ಷಣಾ ಕಾಯ್ದೆ ಜಾರಿಗೆ ಬಂದ ನಂತರ ಟೋಲ್‍ಗಳಲ್ಲಿ ಕೆಲವು ಗೋ ರಕ್ಷಕರ ಹೆಸರಿನ ಸಂಘಟನೆಗಳು ಸಾಕಲು ತೆಗೆದುಕೊಂಡು ಹೋಗುವ ಹಸುಗಳನ್ನು ವಶಕ್ಕೆ ಪಡೆಯುತ್ತಿವೆ. ಪೊಲೀಸರ ಮೂಲಕ ಪ್ರಕರಣ ದಾಖಲಿಸುತ್ತಾರೆ. ಸಾಲ ಮಾಡಿ ಹಸುಗಳನ್ನು ಕೊಂಡು ಪೊಲೀಸ್ ಠಾಣೆಗೆ ತಿರುಗಿದ್ದಲ್ಲದೆ, ಕೊನೆಗೆ ಹಸುಗಳು ಇಲ್ಲದೆ ಬರಿಗೈಲಿ ನಿಲ್ಲುತ್ತಿದ್ದಾರೆ. ಕೆಲವು ಟೋಲ್‍ಗಳಲ್ಲಿ ಪೊಲೀಸರೇ ಏಜೆಂಟರನ್ನು ನೇಮಕ ಮಾಡಿಕೊಂಡು ಈ ರೀತಿಯ ದಂಧೆ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.

ಇತ್ತೀಚೆಗೆ ಚಿಕ್ಕೋಡಿಯಿಂದ ತರುತ್ತಿದ್ದ 11 ಲೋಡ್ ಹಸುಗಳನ್ನು ವಶಪಡಿಸಿಕೊಂಡಿದ್ದು, ಅವುಗಳಲ್ಲಿ 18 ಹಸುಗಳು ಸಾವನ್ನಪ್ಪಿವೆ. ಈ ನಷ್ಟವನ್ನು ರೈತರಿಗೆ ಕಟ್ಟಿಕೊಡುವವರು ಯಾರು? ಇದರಲ್ಲಿ ಜಿಲ್ಲಾಡಳಿತ, ಜಿಲ್ಲಾ ಪೊಲೀಸರು ನೇರವಾಗಿ ಭಾಗಿಯಾಗಿದ್ದಾರೆ. ಕೂಡಲೇ ಇಂತಹ ದಂಧೆ ನಿಲ್ಲಿಸಬೇಕು ಎಂದು ಎಚ್ಚರಿಸಿದರು.

ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಆನಂದ ಪಟೇಲ್, ‘ಈಚೆಗೆ ವಶಪಡಿಸಿಕೊಂಡ 25 ಲೀಟರ್ ಹಾಲು ನೀಡುವ ಸಾಮರ್ಥ್ಯದ ಹಸುಗಳು ಗೋಶಾಲೆಯಲ್ಲಿ ಬಡಕಲಾಗಿ ಸಾಯುವ ಹಂತಕ್ಕೆ ಬಂದಿವೆ. ಗೋವುಗಳ ಮೇಲೆ ಕಾಳಜಿ ಇದ್ದರೆ, ವಶಪಡಿಸಿಕೊಂಡ ಸ್ಥಳದಲ್ಲೇ ಬೆಲೆ ನಿಗದಿಪಡಿಸಿ ರೈತನ ಖಾತೆಗೆ ಹಣ ಜಮೆ ಮಾಡಿ ತೆಗೆದುಕೊಂಡು ಹೋಗಬೇಕು’ ಎಂದು ಆಗ್ರಹಿಸಿದರು.

ಮುಖಂಡರಾದ ಭಕ್ತರಹಳ್ಳಿ ಭೈರೇಗೌಡ, ಧನಂಜಯ್ ಆರಾಧ್ಯ, ಮಂಚನಹಳ್ಳಿ ಭೈರೇಗೌಡ, ಅನಿಲ್ ಕುಮಾರ್, ರಾಮನಗರ ಜಿಲ್ಲಾ ಘಟದ ಅಧ್ಯಕ್ಷ ಭೈರೇಗೌಡ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT