ಶನಿವಾರ, ಡಿಸೆಂಬರ್ 4, 2021
20 °C
ತಂಗನಹಳ್ಳಿ: ಕಲ್ಲುಗಣಿಗಾರಿಕೆಗೆ ಭೂ ಸ್ವಾಧೀನ; ರೈತರ ಆಕ್ರೋಶ

ಜೀವ ಬಿಟ್ಟೇವು, ಭೂಮಿ ಬಿಡೆವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊರಟಗೆರೆ: ‘ಪ್ರಾಣ ಬೇಕಿದ್ದರೂ ಬಿಟ್ಟೇವು, ಆದರೆ, ಅಂಗೈ ಅಗಲ ಜಮೀನು ಬಿಡೆವು. ಇರೋ ಒಂದೆಕರೆ ಜಮೀನನ್ನು ಕಿತ್ತುಕೊಳ್ಳೋದಾದ್ರೆ ನಮಗೂ, ನಮ್ಮ ಮಕ್ಕಳಿಗೂ ವಿಷ ಕೊಟ್ಬಿಡಿ. ಒಂದೇ ಸಾರಿ ಸತ್ತೋಯ್ತಿವಿ’.

ಇದು ತಾಲ್ಲೂಕಿನ ಕೋಳಾಲ ಹೋಬಳಿ ವ್ಯಾಪ್ತಿಯ ತಂಗನಹಳ್ಳಿ ರೈತರ ಅಳಲು. ತಂಗನಹಳ್ಳಿ ಗ್ರಾಮಕ್ಕೆ ಹೊಂದಿಕೊಂಡಿರುವ ಜಮೀನಿನನ್ನು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಸ್ವಾಧೀನ ಪಡಿಸಿಕೊಂಡು ಖಾಸಗಿ ಸಂಸ್ಥೆಗೆ ಕಲ್ಲುಗಣಿಗಾರಿಕೆ ಸ್ಥಾಪನೆ ಉದ್ದೇಶಕ್ಕೆ ನೀಡಲು ಮುಂದಾಗಿದೆ.

ಈ ಕಾರಣದಿಂದ ಸೋಮವಾರ ಅಧಿಕಾರಿಗಳು ನೋಟಿಸ್ ನೀಡಲು ಗ್ರಾಮಕ್ಕೆ ಹೋದಾಗ ರೈತರು ಅಳಲು ತೋಡಿಕೊಂಡರು. ಈಗಾಗಲೇ ಎರಡು ಬಾರಿ ಭೂಸ್ವಾಧೀನಕ್ಕೆ ನೋಟಿಸ್ ನೀಡಲು ಅಧಿಕಾರಿಗಳು ಮುಂದಾದಾಗ ಅದನ್ನು ವಿರೋಧಿಸಿ ಪ್ರತಿಭಟಿಸಿದ್ದರು.

ಭೂಸ್ವಾಧೀನದ ನೋಟಿಸ್ ಪಡೆಯುವಂತೆ ರೈತರನ್ನು ಒತ್ತಾಯಿಸಲು ಗ್ರಾಮಕ್ಕೆ ಬಂದ ಅಧಿಕಾರಿಗಳನ್ನು ಸುತ್ತುವರಿದ ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡರು. ಸೆ. 8ರಂದು ಗ್ರಾಮ ದಲ್ಲೆ ಅಧಿಕಾರಿಗಳ ಸಭೆ ನಡೆಸಿ ಸಮಸ್ಯೆಗೆ ಪರಿಹಾರಿಸಲಾಗುವುದು ಎಂದು ಅಧಿಕಾರಿಗಳು ಭರವಸೆ ನೀಡಿದರು.

ತಂಗನಹಳ್ಳಿ ಗ್ರಾಮಕ್ಕೆ ಹೊಂದಿ ಕೊಂಡಂತೆ ಬೆಟ್ಟ ಇದ್ದು, ಪುರಾತನ ದೇವಾಲಯ, ನೀರಿನ ಬಾವಿಗಳಿವೆ. ಈ ಜಾಗದಲ್ಲಿ ಬಹುತೇಕರು ಹಿಂದುಳಿದ ವರ್ಗದವರೇ ಇದ್ದಾರೆ.

ನೋಟಿಸ್ ಪಡೆದುಕೊಳ್ಳದಿದ್ದಲ್ಲಿ ಅಂಚೆ ಮೂಲಕ ಕಳುಹಿಸುವುದಾಗಿ, ಕಾನೂನು ಕ್ರಮ ಜರುಗಿಸುವುದಾಗಿ ಅಧಿಕಾರಿಗಳು ಬೆದರಿಸಿದ್ದಾರೆ ಎಂದು ಗ್ರಾಮಸ್ಥರು ದೂರಿದರು. ಗ್ರಾಮದ ವಿವಿಧ ಸರ್ವೆ ನಂಬರ್‌ನಲ್ಲಿ ಈಗಾಗಲೇ 49.5 ಎಕರೆ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲು 35 ರೈತರಿಗೆ ನೋಟಿಸ್ ನೀಡಲು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಮುಂದಾಗಿದೆ.

***

ಜಮೀನು ಬಿಡುವುದಿಲ್ಲ ಎಂದು ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಮನವಿ ಮಾಡಿದ್ದರೂ, ರೈತರ ಜಮೀನು ಕಬಳಿಸಲು ಸರ್ಕಾರ ಹುನ್ನಾರ ನಡೆಸಲಾಗಿದೆ.
-ಟಿ.ಎಸ್.ರಾಜಣ್ಣ, ಗ್ರಾ.ಪಂ. ಮಾಜಿ ಸದಸ್ಯ

***

ಪುರಾತನ ದೇವಾಲಯ ಸೇರಿದಂತೆ ಕರಡಿ, ಚಿರತೆ ಕಾಡು ಪ್ರಾಣಿ ವಾಸಿಸುವ ಜಾಗದಲ್ಲಿ ಕಲ್ಲು ಗಣಿಗಾರಿಕೆ ನಡೆಸಲು ಸರ್ಕಾರ ರೈತರ ಮುಂದಾಗಿದೆ. ಇದಕ್ಕೆ ಅವಕಾಶ ನೀಡುವುದಿಲ್ಲ.
-ಬೋರಣ್ಣ, ತಾಲ್ಲೂಕು ಪಂಚಾಯಿತಿ ಸದಸ್ಯ

***

ಒಂದು ಎಕರೆ ಭೂಮಿ ಮಾತ್ರ ಇದೆ. ಈಗ ಆ ಭೂಮಿ ವಶಪಡಿಸಿಕೊಳ್ಳಲು ಮುಂದಾಗಿದ್ದಾರೆ. ಜಮೀನು ಕಸಿದುಕೊಂಡರೆ ವಿಷ ಕುಡಿಬೇಕು.
-ರುದ್ರಾಂಬಿಕೆ, ತಂಗನಹಳ್ಳಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು