ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರಿಗೂ ಸಿಗಲಿದೆ ಪ್ರತ್ಯೇಕ ಗುರುತಿನ ಸಂಖ್ಯೆ

‘ಫೋನ್‌– ಇನ್‌’ ಕಾರ್ಯಕ್ರಮದಲ್ಲಿ ಕೃಷಿ ಇಲಾಖೆ ಜಂಟಿ ನಿರ್ದೇಶಕಿ ರಾಜ ಸುಲೋಚನಾ
Last Updated 19 ಜೂನ್ 2020, 8:15 IST
ಅಕ್ಷರ ಗಾತ್ರ

ತುಮಕೂರು: ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ್‌ ಯೋಜನೆಯ ಹಣ ಬಂದಿಲ್ಲ; ಕಳಪೆ ಬಿತ್ತನೆ ಬೀಜ ನೀಡುತ್ತಿದ್ದಾರೆ; ಕೃಷಿ ಹೊಂಡಕ್ಕೆ ಟಾರ್ಪಲ್‌ ನೀಡುತ್ತಿಲ್ಲ; ಮಿನಿ ಟ್ರಾಕ್ಟರ್‌ ಇನ್ನೂ ಕೊಟ್ಟಿಲ್ಲ; ಸಾವಯವ ಗೊಬ್ಬರದ ಹೆಸರಿನಲ್ಲಿ ಮಣ್ಣು ನೀಡಲಾಗುತ್ತಿದೆ; ಬಾಳೆ– ಹೂ ಬೆಳೆಗಾರರಿಗೆ ಪರಿಹಾರ ಧನ ಯಾವಾಗ ಬರುತ್ತೆ...

ಇದು ‘ಪ್ರಜಾವಾಣಿ’ ಕಚೇರಿಯಲ್ಲಿ ಗುರುವಾರ ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ರಾಜ ಸುಲೋಚನಾ ಅವರೊಂದಿಗೆ ನಡೆಸಿದ ‘ಫೋನ್‌– ಇನ್‌’ ಕಾರ್ಯಕ್ರಮದಲ್ಲಿ ರೈತರಿಂದ ಕೇಳಿಬಂದ ದೂರುಗಳು.

ಕೃಷಿ ಪರಿಕರ, ಯಂತ್ರೋಪಕರಣ, ಬಿತ್ತನೆ ಬೀಜ, ರಸಗೊಬ್ಬರ, ಕೃಷಿ ಇಲಾಖೆಯ ಸವಲತ್ತುಗಳು, ಕೃಷಿ ಅಧಿಕಾರಿಗಳು ಸರಿಯಾಗಿ ರೈತರಿಗೆ ಸ್ಪಂದಿಸುತ್ತಿಲ್ಲ ಎಂಬ ಪ್ರಶ್ನೆಗಳೇ ಹೆಚ್ಚಾಗಿ ಕೇಳಿ ಬಂದವು. ರೈತರ ಪ್ರಶ್ನೆಗಳಿಗೆ ತಾಳ್ಮೆಯಿಂದಲೇ ಅವರು ಸ್ಪಂದಿಸಿದರು.

ವಿವಿಧೆಡೆಯಿಂದ ರೈತರು ಕರೆ ಮಾಡಿದ್ದು, ಅವುಗಳಲ್ಲಿ ಆಯ್ದ ಪ್ರಶ್ನೆ ಮತ್ತು ಉತ್ತರಗಳನ್ನು ಇಲ್ಲಿ ಪ್ರಕಟಿಸಲಾಗಿದೆ.

* ಇಂದ್ರ, ಬೇಗೂರು, ಕುಣಿಗಲ್‌

ಪ್ರ: ಕೃಷಿ ಇಲಾಖೆಯಿಂದ ಕಳಪೆ ರಾಗಿ ಬಿತ್ತನೆ ಬೀಜ ನೀಡಿದ್ದಾರೆ.

ಉ: ಹೀಗಾಗದಂತೆ ಎಚ್ಚರ ವಹಿಸಲಾಗುವುದು. ಮಾದರಿ (ಸ್ಯಾಂಪಲ್) ಪರಿಶೀಲಿಸಿ ವಿತರಣೆಗೆ ಕ್ರಮ ತೆಗೆದುಕೊಳ್ಳಲಾಗುವುದು.

* ಧನಂಜಯ, ಗೋವಿಂದಪುರ, ಗುಬ್ಬಿ ತಾ; ಶಿವಕುಮಾರ್, ಕುಣಿಗಲ್‌

ಪ್ರ: ಮಿನಿ ಟ್ರಾಕ್ಟರ್‌ಗೆ ಅರ್ಜಿ ಸಲ್ಲಿಸಿ ವರ್ಷಗಳೇ ಕಳೆದಿದ್ದು, ಈವರೆಗೆ ಕೈ ಸೇರಿಲ್ಲ.

ಉ: ಲಾಕ್‌ಡೌನ್‌ನಿಂದಾಗಿ ಪ್ರಕ್ರಿಯೆ ತಡವಾಗಿದೆ.ಜ್ಯೇಷ್ಠತೆ ಆಧಾರದ ಮೇಲೆ ವಿತರಣೆಗೆ ಕ್ರಮ ವಹಿಸಲಾಗುವುದು. ಈ ವರ್ಷದ ಅನುದಾನದಲ್ಲಿ ಅವಕಾಶ ಕಲ್ಪಿಸಲಾಗುವುದು.

*ವಿನೋದ್‌, ಕೊಟಗಾನಹಳ್ಳಿ, ಕುಣಿಗಲ್‌

ಪ್ರ: ಕೃಷಿ ಇಲಾಖೆ ಸೌಲಭ್ಯಗಳು ರೈತರಿಗೆ ನೇರವಾಗಿ ತಲುಪುತ್ತಿಲ್ಲ. ಏಜೆಂಟರ ಮೂಲಕವೇ ಹೋಗಬೇಕು. ಗೊಬ್ಬರದ ಅಂಗಡಿಗಳಲ್ಲಿ ಬೆಲೆಗಳ ಪಟ್ಟಿ ಪ್ರದರ್ಶಿಸುತ್ತಿಲ್ಲ.

ಉ: ನೇರವಾಗಿ ರೈತ ಸಂಪರ್ಕ ಕೇಂದ್ರಗಳನ್ನು ಭೇಟಿಮಾಡಿ. ಏಜೆಂಟ್‌ ಸಂಪರ್ಕಿಸಬೇಡಿ. ಎಲ್ಲ ಗೊಬ್ಬರದ ಅಂಗಡಿಗಳಲ್ಲೂ ಬೆಲೆ ಪಟ್ಟಿಯನ್ನು ಕಡ್ಡಾಯವಾಗಿ ಪ್ರದರ್ಶಿಸಬೇಕು. ಚೀಲದ ಮೇಲಿರುವ ಬೆಲೆಯನ್ನೇ ರೈತರಿಂದ ಪಡೆಯಬೇಕು. ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು.

* ಗಂಗಪ್ಪ, ಶಿರಾ

ಪ್ರ: ಸಾವಯವ ಗೊಬ್ಬರ ಸಿಗುತ್ತಿಲ್ಲ?

ಉ: ಲಾಕ್‌ಡೌನ್‌ ಪರಿಣಾಮ ಸಾವಯವ ಗೊಬ್ಬರ ಬರುವುದು ತಡವಾಗಿದೆ. ಕಳೆದ ವಾರ ಬಂದಿದೆ. ರೈತ ಸಂಪರ್ಕ ಕೇಂದ್ರವನ್ನು ಸಂಪರ್ಕಿಸಿ. ಒಬ್ಬರು 10 ಟನ್‌ವರೆಗೆ ಸಾವಯವ ಗೊಬ್ಬರ ಪಡೆಯಬಹುದು. ಸಾವಯವ ಗೊಬ್ಬರ ಅಭಿವೃದ್ಧಿ ನಿಗಮದಿಂದಲೂ (ಕೆಸಿಡಿಸಿ) ಖರೀದಿಸಬಹುದು.

* ಗಂಗಾಧರ್, ಕೊಡಿಗೇನಹಳ್ಳಿ

ಪ್ರ: ಕಿಸಾನ್‌ ಸಮ್ಮಾನ್‌ ಯೋಜನೆಯ ಹಣ ಕೈ ಸೇರಿಲ್ಲ.

ಉ: ನಿಮ್ಮ ಬ್ಯಾಂಕ್‌ ಖಾತೆಯಲ್ಲಿನ ಹೆಸರು, ಆಧಾರ್‌ನಲ್ಲಿ ಹೆಸರು ಹೊಂದಾಣಿಕೆ ಆಗದಿದ್ದಾಗ ಹಣ ಸಂದಾಯ ಆಗುವುದಿಲ್ಲ. ಬ್ಯಾಂಕ್‌ಗೆ ಆಧಾರ್‌ ಲಿಂಕ್‌ ಆಗದಿದ್ದರೂ ಈ ಸಮಸ್ಯೆ ತಲೆದೋರುತ್ತದೆ. ಈ ರೀತಿ ಆಗಿದ್ದರೆ, ಮನವಿಕೊಟ್ಟರೆ ಸಮಸ್ಯೆ ಬಗೆಹರಿಸುತ್ತೇವೆ.

* ಪದ್ಮರಾಜ್, ತೋವಿನಕೆರೆ

ಪ್ರ: ತೋವಿನಕೆರೆ ಭಾಗದಲ್ಲಿ ಎಸ್‌ಬಿಐ, ಕಾವೇರಿ ಗ್ರಾಮೀಣ ಬ್ಯಾಂಕ್‌ ಇದೆ. 200 ಹಳ್ಳಿಯ ರೈತರಿಗೆ ಬೆಳೆವಿಮೆ ಕಟ್ಟಲು ಕಷ್ಟವಾಗುತ್ತಿದೆ.

ಉ: ಲೀಡ್‌ ಬ್ಯಾಂಕ್ ವ್ಯವಸ್ಥಾಪಕರ ಜತೆ ಮಾತನಾಡುತ್ತೇನೆ. ಫ್ಯೂಚರ್ ಜನರಲ್ ಇಂಡಿಯಾಇನ್ಶುರೆನ್ಸ್ ಕಂಪನಿಯ ನೋಡೆಲ್ ಸಂಸ್ಥೆಯ ಪ್ರತಿನಿಧಿಗಳ ಬಳಿಯೂ ಬೆಳೆ ವಿಮೆ ಕಂತು ಪಾವತಿಸಿ ರಸೀದಿ ಪಡೆಯಬೇಕು. ಬೆಳೆವಿಮೆ ಪಾವತಿಗೆ ಇನ್ನೂ ಕಾಲಾವಕಾಶವಿದೆ.

ಪ್ರಶ್ನೆ ಕೇಳಿದವರು: ಜಯರಾಮ್, ಯತೀಶ್, ಕಲ್ಯಾಣಮ್ಮ, ವಿನೋದ್, ಉಮೇಶ್, ಮಂಜಪ್ಪ, ಲಕ್ಷ್ಮಣ್‌, ಅರುಣ್‌, ಶಿರಾದ ರುದ್ರಾಚಾರ್‌, ಪಾವಗಡದ ಪದ್ಮಯ್ಯ, ಕುಣಿಗಲ್‌ನ ರಾಮನಾಥ್‌.

ಕೃಷಿ ಇಲಾಖೆಯ ಜಂಟಿ ನಿರ್ದೇಶಕರ ಸಂಪರ್ಕ ಸಂಖ್ಯೆ: 0816– 2278474, 8277932800

***

ರೈತ ಗುರುತಿನ ಸಂಖ್ಯೆ ಪಡೆಯಿರಿ
ಕೆ– ಕಿಸಾನ್‌ ಯೋಜನೆಯಡಿ ಪ್ರತಿಯೊಬ್ಬ ರೈತರು ಹೆಸರು ನೋಂದಾಯಿಸಿಕೊಳ್ಳುವ ಮೂಲಕ ರೈತರ ಗುರುತಿನ ಸಂಖ್ಯೆ (ಫಾರ್ಮರ್ಸ್‌ ಐಡೆಂಟಿಟಿ ನಂಬರ್‌) ಪಡೆಯಬೇಕು. ಈ ನೋಂದಣಿ ಸಂಖ್ಯೆಯಡಿ ರೈತರು ಕೃಷಿ ಹಾಗೂ ತೋಟಗಾರಿಕೆ ಇಲಾಖೆಯ ಸೌಲಭ್ಯಗಳನ್ನು ಪಡೆದುಕೊಳ್ಳಬಹುದು. ಇದರಿಂದ ಸೌಲಭ್ಯಗಳನ್ನು ಪಡೆಯಲು ಪ್ರತಿಬಾರಿ ಹೊಸದಾಗಿ ಪಹಣಿ ನೀಡುವುದು, ನೋಂದಣಿ ಮಾಡಿಸುವುದು ತಪ್ಪುತ್ತದೆ.

ನೋಂದಣಿಗೆ ಏನೇನು ಬೇಕು: ಪಹಣಿ, ಆಧಾರ್‌ ಸಂಖ್ಯೆ, ರೈತರ ಬ್ಯಾಂಕ್‌ ಖಾತೆ ಸಂಖ್ಯೆಯ ಪೂರ್ಣ ವಿವರ ನೀಡಿ ಹೆಸರು ನೋಂದಾಯಿಸಿಕೊಳ್ಳಬೇಕು.

‘ಜಿಲ್ಲೆಯಲ್ಲಿ ಈಗಾಗಲೇ 3.14 ಲಕ್ಷ ರೈತರು ಈ ಗುರುತಿನ ಸಂಖ್ಯೆ ಪಡೆದಿದ್ದಾರೆ. ಶೇ 20ರಷ್ಟು ರೈತರು ಮಾತ್ರ ನೋಂದಣಿ ಮಾಡಿಸಿಕೊಂಡಿಲ್ಲ. ಉಳಿದ ರೈತರನ್ನೂ ಇದರ ವ್ಯಾಪ್ತಿಗೆ ಒಳಪಡಿಸಲು ಕ್ರಮ ಕೈಗೊಳ್ಳಲಾಗಿದೆ. ಬಿತ್ತನೆ ಬೀಜ, ಮತ್ತಿತರ ಸೌಲಭ್ಯ ಪಡೆಯಲು ರೈತ ಸಂಪರ್ಕ ಕೇಂದ್ರಕ್ಕೆ ಬರುವವರಲ್ಲಿ ಇನ್ನೂ ನೋಂದಣಿ ಮಾಡಿಕೊಳ್ಳದ ರೈತರನ್ನು ಗುರುತಿಸಿ ಹೆಸರು ನೋಂದಾಯಿಸಲಾಗುತ್ತಿದೆ’ ಎಂದು ಜಂಟಿ ನಿರ್ದೇಶಕಿ ಮಾಹಿತಿ ನೀಡಿದರು.

ಸಮಯಕ್ಕೆ ಸರಿಯಾಗಿ ಟಾರ್ಪಲ್‌ ನೀಡಿ
ಕೃಷಿ ಹೊಂಡ ನಿರ್ಮಿಸಿ ವರ್ಷವಾಗಿದೆ. ಟಾರ್ಪಲ್‌ ನೀಡದೆ ಮಣ್ಣು ಕುಸಿದು ಹೊಂಡ ಮುಚ್ಚುತ್ತಿದೆ. ಕೃಷಿ ಹೊಂಡ ತೆಗೆದ ತಕ್ಷಣ ಟಾರ್ಪಲ್‌ ನೀಡಲು ಕ್ರಮ ವಹಿಸಿ. ಇಲ್ಲವಾದರೆ ಹೊಂಡ ಸುಸ್ಥಿರವಾಗಿಡಲು ಆಗುವುದಿಲ್ಲ ಎಂದು ಚಿಕ್ಕನಾಯಕನಹಳ್ಳಿ ತಾಲ್ಲೂಕು ಭಟ್ಟರಹಳ್ಳಿ ಮಲ್ಲಿಕಾರ್ಜುನ್‌ ಒತ್ತಾಯಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜಂಟಿ ನಿರ್ದೇಶಕರು ‘ಕಳೆದ ವರ್ಷ ಅನುದಾನ ಮುಗಿದಿದ್ದರಿಂದ ಕೃಷಿ ಭಾಗ್ಯ ಯೋಜನೆಯಡಿ ಟಾರ್ಪಲ್‌ ನೀಡಲು ಆಗಲಿಲ್ಲ. ಈ ಮೊದಲು ಅರ್ಜಿ ಸಲ್ಲಿಸಿದ್ದವರಿಗೆ ಟಾರ್ಪಲ್‌ ದೊರಕಿಸಿಕೊಡಲು ಕ್ರಮ ವಹಿಸಲಾಗುವುದು’ ಎಂದರು.

2 ವರ್ಷ ಬಿತ್ತನೆ ಬೀಜ ಸಿಗಲ್ಲ
ರೈತ ಸಂಪರ್ಕ ಕೇಂದ್ರದಲ್ಲಿ ರಿಯಾಯಿತಿ ದರದಲ್ಲಿ ಒಮ್ಮೆ ಬಿತ್ತನೆ ಬೀಜ ಪಡೆದ ರೈತರಿಗೆ ಇನ್ನು ಮುಂದೆ 2 ವರ್ಷ ಬಿತ್ತನೆ ಬೀಜ ಸಿಗುವುದಿಲ್ಲ. ಈ ಪ್ರಕ್ರಿಯೆ ಈ ವರ್ಷದಿಂದಲೇ ಜಾರಿಯಾಗಿದೆ. ಈ ಬೀಜಗಳಿಂದ ಬೆಳೆ ಬೆಳೆದು, ಆ ಬೆಳೆಯಲ್ಲಿ ಗುಣಮಟ್ಟದ ಬೀಜ ತೆಗೆದಿಟ್ಟುಕೊಂಡು ಮುಂದಿನ ವರ್ಷದ ಬಿತ್ತನೆಗೆ ಸಂಗ್ರಹಿಸಿಟ್ಟುಕೊಳ್ಳಬೇಕು.

ಹೆಚ್ಚು ಇಳುವರಿ ನೀಡುವ ಬೆಳೆಗಳಿಗೆ ಇದು ಅನ್ವಯಿಸಲಿದೆ. ಹೈಬ್ರಿಡ್‌ ಬಿತ್ತನೆ ಬೀಜಗಳನ್ನು ಪ್ರತಿವರ್ಷವೂ ನೀಡಲಾಗುವುದು. ಇನ್ನು ಸಣ್ಣ ರೈತರಿಗೆ ಅನುಕೂಲವಾಗುವ ಸಲುವಾಗಿ 5 ಕೆ.ಜಿ ಬಿತ್ತನೆ ಬೀಜದ ಪ್ಯಾಕೆಟ್‌ ಜತೆಗೆ 2 ಕೆ.ಜಿ ಪ್ಯಾಕೆಟ್‌ ನೀಡಲು ಕ್ರಮ ವಹಿಸಲಾಗುವುದು ಎಂದು ಜಂಟಿ ನಿರ್ದೇಶಕರು ತಿಳಿಸಿದರು.

ಸಿ.ಎಂ ಹಣ ಕೈ ಸೇರಿಲ್ಲ
ತುಮಕೂರು ಜಿಲ್ಲೆಯಲ್ಲಿ ಒಟ್ಟು 3,52,178 ಫಲಾನುಭವಿಗಳ ಪೈಕಿ 3,14,135 ಮಂದಿಗೆ ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ್‌ ಯೋಜನೆಯ ಹಣ ಹಾಕಲಾಗಿದೆ. ರೈತರು ಇತ್ತೀಚೆಗೆ ತೆರೆದ ಖಾತೆ ಗಮನಿಸಬೇಕು. ಕೆಲವರಿಗೆ ತಾಂತ್ರಿಕ ಸಮಸ್ಯೆಯಿಂದಾಗಿ ತಡವಾಗಿದೆ. ದೂರು ಸಲ್ಲಿಸಿದರೆ ಪರಿಹರಿಸಲಾಗುವುದು ಎಂದು ಅಧಿಕಾರಿ ತಿಳಿಸಿದರು.

ರಾಗಿ ಮಧ್ಯೆ ದ್ವಿದಳ ಧಾನ್ಯ ಬೆಳೆಯಿರಿ
ರಾಗಿ ಮಧ್ಯೆ ದ್ವಿದಳ ಧಾನ್ಯ, ಸಿರಿಧಾನ್ಯ ಬೆಳೆಯುತ್ತಿದ್ದರು. ಈಗ ಈ ಪ್ರಮಾಣ ಕಡಿಮೆಯಾಗಿದೆ. ಜಿಲ್ಲೆಯ ರೈತರು ಪುನಃ ರಾಗಿ ಮಧ್ಯೆ ದ್ವಿದಳ ಧಾನ್ಯ ಬೆಳೆಯಲು ಮುಂದಾಗಬೇಕು. ಪ್ರತಿ 6 ಸಾಲಿನ ರಾಗಿ ಮಧ್ಯೆ ತೊಗರಿ, ನವಣೆ, ಸಾಸಿವೆ, ಹುಚ್ಚೆಳ್ಳು, ಬೇಳೆಕಾಳು, ದ್ವಿದಳ ಧಾನ್ಯ ಬೆಳೆಯಬೇಕು. ಇದರಿಂದ ಹವಾಮಾನ ವೈಪರೀತ್ಯ, ಮಳೆ ಕೊರತೆಯಿಂದಾಗಿ ರಾಗಿ ಬೆಳೆ ಕೈಕೊಟ್ಟರೂ ದ್ವಿದಳ ಧಾನ್ಯ ಕೈ ಹಿಡಿಯುತ್ತದೆ ಎಂದು ರಾಜ ಸುಲೋಚನಾ ರೈತರಿಗೆ ಸಲಹೆ ನೀಡಿದರು.

ಎರೆಹುಳು ಗೊಬ್ಬರದಲ್ಲಿ ಮಣ್ಣು‌
ಎರೆಹುಳು ಗೊಬ್ಬರದ ಹೆಸರಿನಲ್ಲಿ ಮಣ್ಣು ತುಂಬಿ ಮಾರಾಟ ಮಾಡುತ್ತಿದ್ದಾರೆ ಎಂದು ಹೆಬ್ಬೂರಿನ ಯತೀಶ್ ಆರೋಪಿಸಿದರು. ಅಂಗಡಿಯ ಬಗ್ಗೆ ಮಾಹಿತಿ ಪಡೆದ ಜಂಟಿ ನಿರ್ದೇಶಕಿ, ಶೀಘ್ರವೇ ಆ ಅಂಗಡಿಯ ಮೇಲೆ ದಾಳಿ ನಡೆಸಿ, ತಪ್ಪು ಕಂಡು ಬಂದರೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಜಿ.ಪಂ ಸದಸ್ಯರ ಕರೆ
ಬೆಳಗುಂಬ ಕ್ಷೇತ್ರದ ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ನರಸಿಂಹಮೂರ್ತಿ ಕರೆ ಮಾಡಿ ಹೋಬಳಿ ಮಟ್ಟದ ರೈತ ಸಂಪರ್ಕ ಕೇಂದ್ರದಲ್ಲಿ ಬಿತ್ತನೆ ಬೀಜ ಸಿಗುತ್ತಿಲ್ಲ ಏಕೆ ಎಂದು ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿ, ‘ಎಲ್ಲ ರೈತ ಸಂಪರ್ಕ ಕೇಂದ್ರಗಳಿಗೂ ಬಿತ್ತನೆ ಬೀಜದ ಇಂಡೆಂಟ್‌ ಹಾಕಿ ಕಳಿಸಿದ್ದೇವೆ. ಬಿತ್ತನೆ ಬೀಜ ತಲುಪಿಲ್ಲದ ಬಗ್ಗೆ ಮಾಹಿತಿ ಪಡೆದು ಕ್ರಮ ತೆಗೆದುಕೊಳ್ಳುತ್ತೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT