ಸೋಮವಾರ, ಜೂನ್ 21, 2021
20 °C

ಸೊಪ್ಪು, ಹಣ್ಣು ದುಬಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ಬೇಸಿಗೆಯಲ್ಲಿ ದುಬಾರಿಯಾಗಿದ್ದ ಹಣ್ಣು, ಸೊಪ್ಪಿನ ಬೆಲೆ ಈಗ ಲಾಕ್‌ಡೌನ್ ಜಾರಿ ನಂತರ ಮತ್ತಷ್ಟು ಏರಿಕೆ ಕಂಡಿವೆ. ಸೇಬು, ದಾಳಿಂಬೆ ಹಣ್ಣಿನ ಬೆಲೆ ಗಗನಮುಖಿಯಾಗಿದ್ದರೆ, ಮೂಸಂಬಿ, ಕಿತ್ತಳೆ ಹಣ್ಣಿನ ಬೆಲೆ ಕಡಿಮೆಯಾಗುತ್ತಿಲ್ಲ. ಬಾಳೆಹಣ್ಣು ಬಿಟ್ಟರೆ ಉಳಿದ ಎಲ್ಲಾ ಹಣ್ಣುಗಳು ಸಾಮಾನ್ಯರ ಕೈಗೆಟಕುತ್ತಿಲ್ಲ.

ಲಾಕ್‌ಡೌನ್ ಸಮಯದಲ್ಲಿ ಮಧ್ಯಮ ವರ್ಗದವರೂ ಹಣ್ಣು ಕೊಂಡುಕೊಳ್ಳಲು ಹಿಂದೆ ಮುಂದೆ ನೋಡುವಂತಾಗಿದೆ. ಹಣವಿದ್ದವರಷ್ಟೇ ಹಣ್ಣು ತಿನ್ನಬಹುದು ಎಂಬ ಮಾತು ಮಾರುಕಟ್ಟೆಯಲ್ಲಿ ಕೇಳಿಬರುತ್ತಿದೆ. ಮಾವಿನ ಹಣ್ಣು ಸಹ ಮಾರುಕಟ್ಟೆಯಲ್ಲಿ ದುಬಾರಿಯಾಗಿದೆ.

ಬೇಸಿಗೆಯಲ್ಲಿ ಸೊಪ್ಪು ಬಿಸಿಲಿಗೆ ಬಾಡುವುದು, ನೀರಿನ ಕೊರತೆಯಿಂದಾಗಿ ಬೆಳೆಯುವುದು ಕಡಿಮೆ. ಇಂತಹ ಸಮಯದಲ್ಲಿ ಬೆಲೆ ಏರಿಕೆ ಸಹಜ. ಆದರೆ ಈ ಸಲ ಸೊಪ್ಪಿನ ಬೆಲೆ ಕೇಳಿ ಜನರು ಬೆಚ್ಚಿ ಬೀಳುತ್ತಿದ್ದಾರೆ. ಮೆಂತ್ಯ ಸೊಪ್ಪು ಕೆ.ಜಿ ₹100, ಸಬ್ಬಕ್ಕಿ ಕೆ.ಜಿ ₹80, ಕೊತ್ತಂಬರಿ ಕೆ.ಜಿ ₹40ಕ್ಕೆ ಅಂತರಸನಹಳ್ಳಿ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ. ಹೊರಗಿನ ಮಾರುಕಟ್ಟೆ, ಚಿಲ್ಲರೆ ಅಂಗಡಿಗಳಲ್ಲಿ ಸೊಪ್ಪು ಮತ್ತಷ್ಟು ದುಬಾರಿಯಾಗಿದೆ.

ಸೌತೆಕಾಯಿ 1ಕ್ಕೆ ₹5, ನಿಂಬೆ ಹಣ್ಣು 1ಕ್ಕೆ ₹2.50–₹3ಕ್ಕೆ ಮಾರಾಟವಾಗುತ್ತಿದೆ. ಬೀನ್ಸ್ ಕೆ.ಜಿ ₹10, ಆಲೂಗಡ್ಡೆ, ಮೂಲಂಗಿ, ಬೆಂಡೆಕಾಯಿ, ಬದನೆಕಾಯಿ, ಹಾಗಲಕಾಯಿ ಬೆಲೆಕೊಂಚ ಏರಿಕೆ ಕಂಡಿದೆ. ಹಸಿಮೆಣಸಿನಕಾಯಿ ಸ್ವಲ್ಪ ಅಗ್ಗವಾಗಿದೆ.‌

ಚೇತರಿಸದ ಹೂವು: ಲಾಕ್‌ಡೌನ್ ಜಾರಿಯಾದ ನಂತರ ಶುಭ ಸಮಾರಂಭಗಳು, ಧಾರ್ಮಿಕ ಕಾರ್ಯಗಳು ಸ್ಥಗಿತಗೊಂಡಿದ್ದು, ಹೂವಿನ ಬೆಲೆ ಪಾತಾಳಕ್ಕೆ ಇಳಿದಿದೆ. ಮಾರುಕಟ್ಟೆಯಲ್ಲಿ ಹೂವು ಕೇಳುವವರೇ ಇಲ್ಲ.

ಎಣ್ಣೆ ದುಬಾರಿ: ಅಡುಗೆ ಎಣ್ಣೆ ಬೆಲೆ ಕಡಿಮೆಯಾಗುತ್ತಿಲ್ಲ. ಸನ್‌ಫ್ಲವರ್ ಲೀಟರ್ ₹165, ಪಾಮಾಯಿಲ್ ಲೀಟರ್ ₹135ರಲ್ಲೇ ಸ್ಥಿರವಾಗಿದೆ. ಬೇಳೆ, ಧಾನ್ಯಗಳ ಧಾರಣೆಯಲ್ಲಿ ಯಥಾಸ್ಥಿತಿ ಮುಂದುವರಿದಿದೆ.

ಕೋಳಿ ದುಬಾರಿ: ಕೋಳಿ ಬೆಲೆ ಏರಿಕೆ ಕಂಡಿದ್ದು, ಬ್ರಾಯ್ಲರ್ ಕೋಳಿ ಕೆ.ಜಿ.ಗೆ ₹20 ಹೆಚ್ಚಳವಾಗಿದ್ದು, ₹110ಕ್ಕೆ, ರೆಡಿ ಚಿಕನ್ ಕೆ.ಜಿ ₹160ಕ್ಕೆ ಹಾಗೂ ಮೊಟ್ಟೆಕೋಳಿ ಕೆ.ಜಿ ₹80ಕ್ಕೆ ಅಂಗಡಿಗಳಲ್ಲಿ ಮಾರಾಟವಾಗುತ್ತಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.