ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುರೇಶ್‍ಗೌಡ ವಿರುದ್ಧ ಎಫ್‍ಐಆರ್

Last Updated 13 ಮೇ 2021, 5:22 IST
ಅಕ್ಷರ ಗಾತ್ರ

ತುಮಕೂರು: ಅಕ್ರಮವಾಗಿ ಸಾಗುವಳಿ ಚೀಟಿ ನೀಡಿದ ಆರೋಪದ ಮೇಲೆ ಮಾಜಿ ಶಾಸಕ ಬಿ.ಸುರೇಶ್‌ಗೌಡ ಹಾಗೂ ಇತರರ ವಿರುದ್ಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.ಒಂದನೇ ಅಧಿಕ ಸಿವಿಲ್ ನ್ಯಾಯಾಲಯದ ಆದೇಶದಂತೆ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

ಸುರೇಶ್‍ಗೌಡ ಅವರು ಶಾಸಕರಾಗಿದ್ದ ಸಮಯದಲ್ಲಿ ಅಕ್ರಮವಾಗಿ ಸಾಗುವಳಿ ಚೀಟಿ ನೀಡಿದ್ದರು ಎಂಬ ಆರೋಪ ಕೇಳಿಬಂದಿತ್ತು. ಈ ಅಕ್ರಮದ ಬಗ್ಗೆ ಕ್ರಮಕೈಗೊಳ್ಳುವಂತೆ ಒತ್ತಾಯ ಕೇಳಿಬಂದಿದ್ದರೂ ಕ್ರಮ ಕೈಗೊಂಡಿರಲಿಲ್ಲ. ನಂತರ ಜೆಡಿಎಸ್ ಮುಖಂಡ ಬೆಳಗುಂಬ ವೆಂಕಟೇಶ್ ಎಂಬುವರು ಒಂದನೇ ಅಧಿಕ ಸಿವಿಲ್ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ತನಿಖೆ ನಡೆಸುವಂತೆ ಆದೇಶ ನೀಡಿತ್ತು. ಸುರೇಶ್‌ಗೌಡ, ಎಂ.ರೇವಣ್ಣ, ಶಂಕರಮೂರ್ತಿ, ಭಾಗ್ಯಮ್ಮ, ರಂಗೇಗೌಡ ವಿರುದ್ಧ ದೂರು ದಾಖಲಾಗಿದೆ.

ಏನಿದು ಪ್ರಕರಣ?: ಸುರೇಶ್‍ಗೌಡ ಶಾಸಕರಾಗಿದ್ದ ಸಮಯದಲ್ಲಿ ಅವರೇ ಬಗರ್‌ಹುಕುಂ ಸಮಿತಿ ಅಧ್ಯಕ್ಷರಾಗಿದ್ದರು. ತುಮಕೂರು ತಾಲ್ಲೂಕು ಬೆಳ್ಳಾವಿ ಹೋಬಳಿ ಸೋರೆಕುಂಟೆ ಗ್ರಾಮದ ಸರ್ವೇ ನಂಬರ್ 41ರಲ್ಲಿ ಸುಮಾರು 42 ಜನರಿಗೆ ಕೈಗಾರಿಕಾ ಪ್ರದೇಶಕ್ಕೆ ಭೂಸ್ವಾಧೀನವಾಗಿದ್ದ ಜಮೀನನ್ನು (ಸರ್ಕಾರಿ ಜಮೀನು) ಈಗಾಗಲೇ ಜಮೀನು ಹೊಂದಿದವರು, ಗ್ರಾಮದ ಹೊರಗಿನವರು, ಸರ್ಕಾರಿ ನೌಕರರಿಗೆ ಮಂಜೂರು ಮಾಡಲಾಗಿತ್ತು. ಜಮೀನು ಮಂಜೂರು ಮಾಡುವಲ್ಲಿ ಅಕ್ರಮ ನಡೆದಿದೆ. ಯಾವುದೇ ನಿಯಮ ಪಾಲನೆ ಆಗಿರಲಿಲ್ಲ ಎಂಬ ಆರೋಪ ಕೇಳಿಬಂದಿತ್ತು. ಲೋಕಸಭೆ ಚುನಾವಣೆ ಸಂದರ್ಭವಾಗಿದ್ದರಿಂದ ನೀತಿ ಸಂಹಿತೆ ಉಲ್ಲಂಘನೆಯೂ ಆಗಿತ್ತು ಎಂದು ದೂರಲಾಗಿತ್ತು.

ನಂತರ ನಡೆದ ತನಿಖೆಯಲ್ಲಿ ಅಕ್ರಮ ನಡೆದಿರುವುದು ದೃಢಪಟ್ಟಿತ್ತು. ಈ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿತ್ತು. ಕೊನೆಗೂ ಯಾವುದೇ ಕ್ರಮಕೈಗೊಳ್ಳದ ಹಿನ್ನೆಲೆಯಲ್ಲಿ ನ್ಯಾಯಾಲಯದ ಮೊರೆ ಹೋಗಿದ್ದರು. ಈಗ ಎಫ್‌ಐಆರ್ ದಾಖಲಾಗಿದ್ದು, ತನಿಖೆ ಆರಂಭವಾಗಿದೆ.

ತನಿಖೆ ನಡೆಯಲಿ: ಬಗರ್‌ಹುಕುಂ ಸಮಿತಿ ಅಧ್ಯಕ್ಷರಾಗಿದ್ದ ಸಮಯದಲ್ಲಿ ಬಡವರಿಗೆ ಜಮೀನು ಮಂಜೂರು ಮಾಡುವಾಗ ಯಾವುದೇ ಅಕ್ರಮ ನಡೆಸಿಲ್ಲ. ಪೊಲೀಸರು ನಿಷ್ಪಕ್ಷಪಾತವಾಗಿ ತನಿಖೆ ನಡೆಸಬೇಕು ಎಂದು ಸುರೇಶ್‌ಗೌಡ ಒತ್ತಾಯಿಸಿದ್ದಾರೆ.

ರೈತರಿಗೆ ಜಮೀನು ನೀಡಲು ಯಾವುದೇ ಹಣ ತೆಗೆದುಕೊಂಡಿಲ್ಲ. ನಮ್ಮ ಮನೆಯವರು, ಸಂಬಂಧಿಕರಿಗೆ ಭೂಮಿ ಕೊಟ್ಟಿಲ್ಲ. ಈಗಾಗಲೇ ಅಧಿಕಾರಿಗಳು ತನಿಖೆ ನಡೆಸಿದ್ದು, ಯಾವುದೇ ಅಕ್ರಮ ನಡೆದಿಲ್ಲ ಎಂದು ವರದಿ ನೀಡಿದ್ದಾರೆ. ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸಿ, ದೃಢಪಡಿಸಿದ ನಂತರ ಸಮಿತಿ ಅಧ್ಯಕ್ಷರು, ಸದಸ್ಯರು ಒಪ್ಪಿಗೆ ನೀಡುತ್ತಾರೆ. ನಾವೂ ಅದೇ ಕೆಲಸ ಮಾಡಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.

ನ್ಯಾಯಾಲಯಕ್ಕೆ ತಪ್ಪು ಮಾಹಿತಿ ನೀಡಿದ್ದರಿಂದ ತನಿಖೆಗೆ ಆದೇಶಿಸಲಾಗಿದೆ. ಪೊಲೀಸರ ತನಿಖೆಯಿಂದ ಸತ್ಯ ಹೊರಗೆ ಬರಲಿದೆ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT