ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು: ಉತ್ತಮ ಮಳೆ, ಕೆರೆಗೆ ನೀರು

Last Updated 9 ಅಕ್ಟೋಬರ್ 2021, 7:53 IST
ಅಕ್ಷರ ಗಾತ್ರ

ತುಮಕೂರು: ಜಿಲ್ಲೆಯಲ್ಲಿ ಗುರುವಾರ ರಾತ್ರಿ ಉತ್ತಮ ಮಳೆಯಾಗಿದ್ದು, ಶೇಂಗಾ ನಾಡಿನಲ್ಲಿ ಬಿರುಸು ಪಡೆದುಕೊಂಡಿದೆ. ಬರಕ್ಕೆ ಸಿಲುಕಿದ್ದ ಪ್ರದೇಶಗಳ ಇಳೆ ತೇವಗೊಂಡಿದ್ದರೆ ಕುಣಿಗಲ್, ತುರುವೇಕೆರೆ, ತಿಪಟೂರು ಭಾಗದಲ್ಲಿ ಮಳೆಯಾಗಿಲ್ಲ.

ಮಳೆ ಇಲ್ಲದೆ ಶೇಂಗಾ ಬೆಳೆ ಸಂಪೂರ್ಣ ಒಣಗಿ ಹೋಗಿತ್ತು. ಈಗ ಶೇಂಗಾ ಬಳ್ಳಿಯನ್ನಾದರೂ ಕಿತ್ತು ಮುಂದಿನ ಬೇಸಿಗೆ ಸಮಯಕ್ಕೆ ಜಾನುವಾರುಗಳಿಗೆ ಮೇವು ಸಂಗ್ರಹಿಸಿಟ್ಟುಕೊಳ್ಳುವ ಸಮಯದಲ್ಲಿ ಮಳೆ ಬಿದ್ದಿರುವುದು ಬಳ್ಳಿ ಹಾಳಾಗುವಂತೆ ಮಾಡಿದೆ. ಅಗತ್ಯವಿದ್ದಾಗ ಮಳೆ ಬಾರದೆ ಬೆಳೆ ಹಾಳಾಯಿತು. ಈಗ ಬಿಡುವು ಕೊಡದೆ ಸುರಿಯುತ್ತಿರುವುದು ರೈತರನ್ನು ಇಕಟ್ಟಿನ ಪರಿಸ್ಥಿತಿಗೆಸಿಲುಕಿಸಿದೆ.

ಕಳೆದ ಎರಡು ಮೂರು ದಿನಗಳಿಂದ ಜೋರು ಮಾಳೆಯಾಗುತ್ತಿದ್ದು, ಕೆರೆ ಕುಂಟೆಗಳಿಗೆ ನೀರು ಹರಿದು ಬಂದಿದೆ. ಆದರೆ ಕೆರೆಗಳ ತೂಬು ಮುಚ್ಚದೆ ಅಂಗಳದಲ್ಲಿ ನಿಂತ ನೀರು ನಿಧಾನವಾಗಿ ಸೋರಿ ಹೋಗುತ್ತಿದೆ. ‘ಸಕಾಲಕ್ಕೆ ತೂಬು ಮುಚ್ಚಿ, ಕೆರೆಗಳ ಏರಿಗಳನ್ನು ಭದ್ರಪಡಿಸಬೇಕು. ಬಿದ್ದ ಮಳೆ ನೀರು ಕೆರೆಗಳಲ್ಲಿ ಸಂಗ್ರಹವಾಗುವಂತೆ ನೋಡಿಕೊಳ್ಳಬೇಕು’ ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ನೀಡಿದ ಸೂಚನೆಗೂ ಅಧಿಕಾರಿಗಳು ಸ್ಪಂದಿಸಿಲ್ಲ. ಬಂದ ನೀರೆಲ್ಲ ಅಷ್ಟೇ ವೇಗದಲ್ಲಿ ಬಸಿದು ಖಾಲಿಯಾಗುತ್ತಿದೆ.

ಕೆರೆಗಳಲ್ಲಿ ಸ್ವಲ್ಪವಾದರೂ ನೀರು ಸಂಗ್ರಹವಾಗಿದ್ದರೆ ಬೇಸಿಗೆಯಲ್ಲಿ ದನ, ಕುರಿಗಳಿಗೆ ಆಸರೆಯಾಗುತಿತ್ತು. ಈಗ ಯಾವ ಕೆರೆ, ಕುಂಟೆ ಗಮನಿಸಿದರೂ ನಿಲ್ಲುತ್ತಿಲ್ಲ. ಬೇಸಿಗೆಯಲ್ಲಿ ಜಾನುವಾರುಗಳ ದಾಹ ಹಿಂಗಿಸಲು ಏನು ಮಾಡುವುದು ಎಂಬ ಆತಂಕ ಈಗಲೇ ಕಾಡಲಾರಂಭಿಸಿದೆ ಎಂದು ಮಧುಗಿರಿ ತಾಲ್ಲೂಕು ಪುರವರ ಗ್ರಾಮದ ರೈತ ರಾಮಚಂದ್ರ ಆತಂಕ ವ್ಯಕ್ತಪಡಿಸುತ್ತಾರೆ. ಇದು ಎಲ್ಲಾ ರೈತರ ಆತಂಕವೂ ಆಗಿದೆ. ಸಣ್ಣ ನೀರಾವರಿ, ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ಜಿಲ್ಲಾಧಿಕಾರಿ ಸೂಚನೆಗೆಸ್ಪಂದಿಸಿದ್ದರೆ ಕೆರೆ ಅಂಗಳದಲ್ಲಿ ಸ್ವಲ್ಪವಾದರೂ ಜೀವ ಸೆಲೆ ಉಳಿಯುತ್ತಿತ್ತು. ಇದೇ ಪರಿಸ್ಥಿತಿ ಮುಂದುವರಿದರೆ ಬೇಸಿಗೆಯಲ್ಲಿ ಒಂದು ತೊಟ್ಟು ನೀರು ಸಿಗುವುದಿಲ್ಲ ಎಂದು ರೈತರು ಚಡಪಡಿಸುತ್ತಿದ್ದಾರೆ.

ಮಳೆ ಇಲ್ಲ: ಜಿಲ್ಲೆಯ ಉತ್ತರ ಭಾಗದಲ್ಲಿ ಭೂಮಿ ತಂಪಾಗಿಸಿದ್ದರೆ ರಾಗಿ, ತೆಂಗಿನ ನಾಡಿನ ಕಡೆ ವರುಣ ಕಣ್ಣು ಬಿಟ್ಟಿಲ್ಲ. ಕುಣಿಗಲ್, ತುರುವೇಕೆರೆ, ತಿಪಟೂರು ಭಾಗದಲ್ಲಿ ಮಳೆಯಾಗಿಲ್ಲ. ಕಳೆದ ಎರಡು ದಿನಗಳ ಹಿಂದೆ ಅಲ್ಪಸ್ವಲ್ಪಬಿದ್ದಿದ್ದರಿಂದ ರಾಗಿ ಪೈರು ಉಸಿರಾಡುತ್ತಿದೆ. ಆದರೆ ತೆಂಗಿನ ಬೇರಿಗೆ ನೀರು ಇಳಿಯುತ್ತಿಲ್ಲ. ಗಟ್ಟಿ ಮಳೆ ಇಲ್ಲವಾಗಿದ್ದುಮಳೆಯನ್ನೇ ಆಶ್ರಯಿಸಿರುವ ಕಡೆಗಳಲ್ಲಿ ತೆಂಗಿನ ಸುಳಿ ಒಣಗಲಾರಂಭಿಸಿದೆ. ನವೆಂಬರ್ ಮಧ್ಯ ಭಾಗದವರೆಗೆ ಮಳೆ ಮುಂದುವರಿದು, ಡಿಸೆಂಬರ್, ಜನವರಿಯಲ್ಲಿ ವಾಯುಭಾರ ಕುಸಿತದಿಂದ ಮಳೆಯಾದರೆ ತೆಂಗು ಬದುಕುತ್ತವೆ. ಇಲ್ಲವಾದರೆ ಸುಳಿಯೂ ಉಳಿಯುವುದು ಕಷ್ಟಕರ ಎನ್ನುತ್ತಾರೆ ರೈತರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT