ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾರ್‌ ಕ್ಯಾಷಿಯರ್‌ ಖಾತೆಗೆ ಸರ್ಕಾರಿ ಹಣ

Last Updated 1 ಅಕ್ಟೋಬರ್ 2021, 5:09 IST
ಅಕ್ಷರ ಗಾತ್ರ

ಕುಣಿಗಲ್: ಪಟ್ಟಣದ ಮದ್ಯದ ಅಂಗಡಿಯೊಂದರ ಕ್ಯಾಷಿಯರ್‌ನ ಬ್ಯಾಂಕ್ ಖಾತೆಗೆ ವಿವಿಧ ತಾಲ್ಲೂಕಿನ ಸಮಾಜ ಕಲ್ಯಾಣ ಇಲಾಖೆಯಿಂದ ₹ 12 ಲಕ್ಷ ವರ್ಗಾವಣೆಯಾಗಿರುವುದು ಚರ್ಚೆಗೆ ಗ್ರಾಸವಾಗಿದೆ.

ಪಟ್ಟಣದ ದಿವ್ಯಾ ಬಾರ್‌ನಲ್ಲಿ ಕ್ಯಾಷಿಯರ್ ಆಗಿರುವ ಕೀರ್ತಿ ಅವರ ಖಾತೆಗೆ ಹಣ ಜಮೆಯಾಗಿದೆ. ಅವರದು ಮಂಡ್ಯ ಜಿಲ್ಲೆಯ ಹಳೆಬೂದನೂರು ಗ್ರಾಮ. ಮಂಡ್ಯದ ಕೆನರಾ ಬ್ಯಾಂಕ್‌ನಲ್ಲಿರುವ ಅವರ ಖಾತೆಗೆ ಕುಣಿಗಲ್ ಸಮಾಜ ಕಲ್ಯಾಣ ಇಲಾಖೆಯಿಂದ ಉಪ ಖಜಾನೆ ಮತ್ತು ರಾಜ್ಯದ ವಿವಿಧ ಉಪ ಖಜಾನೆಗಳಿಂದ ಕಳೆದ ಫೆಬ್ರುವರಿಯಿಂದ ಒಟ್ಟು ₹ 11,17,270 ವರ್ಗಾವಣೆ
ಯಾಗಿದೆ.

ಹಣ ಜಮಾವಣೆಯಾಗಿರುವುದನ್ನು ಕಂಡ ಕೀರ್ತಿ ಬ್ಯಾಂಕ್ ವ್ಯವಸ್ಥಾಪಕರನ್ನು ಸಂಪರ್ಕಿಸಿದ್ದಾರೆ. ಅದು ಸರ್ಕಾರಿ ಹಣ. ಯಾವತ್ತಿದ್ದರೂ ಹಿಂತಿರುಗಿಸಬೇಕು. ಬಳಕೆ ಮಾಡದಂತೆ ತಿಳಿಹೇಳಿದ್ದರಿಂದ ಖಾತೆಯಲ್ಲಿರಿಸಲು ಸೂಚನೆ ನೀಡಿದ್ದಾರೆ. ಹಣವನ್ನು ಖಾತೆಯಲ್ಲಿಯೇ ಇಡಲಾಗಿದೆ.

ಹಣ ವರ್ಗಾವಣೆಯಾಗಿರುವ ಮಾಹಿತಿ ಪಡೆದ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರ ಕಚೇರಿಯಿಂದ ಕೀರ್ತಿ ಅವರಿಗೆ ಆಗಸ್ಟ್‌ ತಿಂಗಳಲ್ಲಿ ನೋಟಿಸ್ ಜಾರಿ ಮಾಡಲಾಗಿದೆ. ಚಿಕ್ಕಬಳ್ಳಾಪುರದ ಶಿರಡಿ ಸಾಯಿ ಪ್ರಾವಿಷನ್ ಸ್ಟೋರ್ ಖಾತೆಗೆ ವರ್ಗಾವಣೆಯಾಗಬೇಕಾದ ಹಣ ನಿಮ್ಮ ಖಾತೆಗೆ ವರ್ಗಾವಣೆಯಾಗಿದೆ. ಹಣವನ್ನು ಮರುಪಾವತಿ ಮಾಡಲು ಕೋರಿದ್ದಾರೆ.

ಕುಣಿಗಲ್ ತಾಲ್ಲೂಕಿನಿಂದ ₹ 71 ಸಾವಿರ ಚಿಕ್ಕಬಳ್ಳಾಪುರದ ಎಸ್‌ಬಿಐ ಖಾತೆಗೆ ವರ್ಗಾವಣೆಯಾಗುವ ಬದಲು ಮಂಡ್ಯ ಕೆನರಾ ಬ್ಯಾಂಕ್‌ಗೆ ವರ್ಗವಾಗಿದೆ. ಜತೆಗೆ ವಿವಿಧ ತಾಲ್ಲೂಕಿನ ಹಣ ಸಹ ವರ್ಗಾವಣೆಗೆ ತಾನೆ ನೇರ ಹೊಣೆಗಾರ ಎಂದು ಲಿಖಿತವಾಗಿ ಜಂಟಿ ನಿರ್ದೇಶಕರಿಗೆ ಕುಣಿಗಲ್ ಸಮಾಜ ಕಲ್ಯಾಣ ಇಲಾಖೆಯ ಪ್ರಥಮದರ್ಜೆ ಸಹಾಯಕರು ಹೇಳಿಕೆ ನೀಡಿದ್ದಾರೆ.

ಜಿಲ್ಲೆ ಸೇರಿದಂತೆ ವಿವಿಧ ತಾಲ್ಲೂಕುಗಳಿಂದ ಖಜಾನೆ 2 ಹಣ ಪಾವತಿಗೆ ರೆಸಿಪೆಂಟ್ ಐ.ಡಿ ನಂಬರ್ ಮತ್ತು ಖಾತೆ ಸಂಖ್ಯೆಗಳನ್ನು ಐಎಫ್ಎಸ್‌ಸಿ ಕೋಡ್ ದಾಖಲಿಸಬೇಕಿದೆ. ಆದರೆ, ಕೀರ್ತಿ ಅವರ ಹೆಸರಿನಲ್ಲಿ ಯಾವುದೇ ರೆಸಿಪೆಂಟ್ ಐ.ಡಿ ಸಂಖ್ಯೆ ಇಲ್ಲದಿದ್ದರೂ ಹಣ ಚಿಕ್ಕಬಳ್ಳಾಪುರ ಶಿರಡಿ ಪ್ರಾವಿಷನ್ ಸ್ಟೋರ್ ಅವರ ಎಸ್‌ಬಿಐ ಖಾತೆಗೆ ಬದಲಾಗಿ ಇವರ ಖಾತೆಗೆ ಬಂದಿರುವುದು ಅನುಮಾನಕ್ಕೆ ಕಾರಣವಾಗಿದೆ.

ವರ್ಗಾವಣೆಯಾಗಿ ಬಂದಿರುವ ಹಣವನ್ನು ಮರು ಪಾವತಿಸುವಂತೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಒತ್ತಡ ಹೇರುತ್ತಿದ್ದಾರೆ. ಇದರಿಂದ ವಿಚಲಿತನಾದ ಕೀರ್ತಿ ಹಣವನ್ನು ಯಾವ ಖಾತೆಯಿಂದ ಬಂದಿದೆಯೋ ಅವರ ಖಾತೆಗೆ ವರ್ಗಾವಣೆ ಮಾಡಲು ಬ್ಯಾಂಕ್‌ ಅಧಿಕಾರಿಗಳಿಗೆ ಕೋರಿದ್ದಾರೆ. ಸ್ಥಳೀಯ ಪೊಲೀಸ್ ಅಧಿಕಾರಿಗಳಿಗೂ ಮೌಖಿಕವಾಗಿ ಮನವಿ ಮಾಡಿದ ಮೇರೆಗೆ ಸ್ಥಳೀಯ ಪೊಲೀಸರು ವಿಚಾರಣೆ ಮಾಡಿದ್ದಾರೆ.

ಹಣವನ್ನು ಶಿರಡಿ ಪ್ರಾವಿಷನ್ ಸ್ಟೋರ್ ಖಾತೆಗೆ ವರ್ಗಾವಣೆ ಮಾಡುವಂತೆ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಒತ್ತಡ ಹೇರುತ್ತಿದ್ದಾರೆ. ಅಧಿಕಾರಶಾಹಿಯ ಈ ವರ್ತನೆ ಹಿಂದೆ ಹಣ ಲಪಟಾಯಿಸುವ ತಂತ್ರ ಅಡಗಿದೆಯೇ ಎಂಬ ಅನುಮಾನ ನಾಗರಿಕರಿಗೆ ಕಾಡುತ್ತಿದೆ.

‘ಹಣವನ್ನು ಯಾವುದೇ ಕಾರಣಕ್ಕೂ ಪ್ರಾವಿಷನ್ ಸ್ಟೋರ್ ಖಾತೆಗೆ ಹಣ ವರ್ಗಾವಣೆ ಮಾಡುವುದಿಲ್ಲ. ಸರ್ಕಾರಕ್ಕೆ ನಿಯಮಾವಳಿಗಳ ಪ್ರಕಾರ ಹಿಂತಿರುಗಿಸುತ್ತೇನೆ. ಮೂರನೇ ವ್ಯಕ್ತಿ ಮತ್ತು ತನಗೆ ಪರಿಚಿತನಲ್ಲದ ವ್ಯಕ್ತಿಯ ಖಾತೆಗೆ ಹಣ ವರ್ಗಾವಣೆ ಮಾಡುವುದಿಲ್ಲ’ ಎಂದು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಿಗೆ ಅವರು ಲಿಖಿತ ಹೇಳಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT