ಭಾನುವಾರ, ಸೆಪ್ಟೆಂಬರ್ 26, 2021
21 °C
ಕುಂದುಕೊರತೆ ಸಭೆ ಬಹಿಷ್ಕಾರ

ತುರುವೇಕೆರೆ ತಾಲ್ಲೂಕು ಆಡಳಿತ ವಿಫಲ: ಪರಿಶಿಷ್ಟರ ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುರುವೇಕೆರೆ: ಪರಿಶಿಷ್ಟರ ಸಮಸ್ಯೆ ಆಲಿಸುವಲ್ಲಿ ತಾಲ್ಲೂಕು ಆಡಳಿತ ಸಂಪೂರ್ಣ ವಿಫಲವಾಗಿದೆ. ತಾಲ್ಲೂಕು ಮಟ್ಟದ ಅಧಿಕಾರಿಗಳು ಪರಿಶಿಷ್ಟರ ಬಗ್ಗೆ ತಾತ್ಸಾರ ಧೋರಣೆ ಹೊಂದಿದ್ದಾರೆ ಎಂದು ಆರೋಪಿಸಿದ ಮುಖಂಡರು ಕುಂದುಕೊರತೆ ಸಭೆಯನ್ನು ಬಹಿಷ್ಕರಿಸಿದರು.

ಪಟ್ಟಣದಲ್ಲಿ ಗುರುವಾರ ಸಮಾಜ ಕಲ್ಯಾಣ ಇಲಾಖೆ ಆಯೋಜಿಸಿದ್ದ ಕುಂದು ಕೊರತೆ ಸಭೆ ನಡೆಸಿ ವರ್ಷವಾಗಿದೆ. 2017ರಲ್ಲಿ ನಡೆದಿದ್ದು ಸಭೆಯ ನಡಾವಳಿಗಳನ್ನೇ ಸದರಿ ಸಭೆಗೆ ನೀಡಿದಾಗ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದರು. ಕಳೆದ ವರ್ಷ ಸಭೆಯಲ್ಲಿ ಮಾಡಲಾದ ನಡಾವಳಿಗಳು ಏನಾದವು. ಸಭೆಯಲ್ಲಿ ಚರ್ಚಿತವಾದ ಯಾವ ಕೆಲಸಗಳೂ ಚಾಲನೆಯಾಗಿಲ್ಲ. ಹಳೆಯ ನಡಾವಳಿಗಳನ್ನು ಈ ಸಭೆಯಲ್ಲಿ ಕೊಟ್ಟು ದಿಕ್ಕು ತಪ್ಪಿಸಲು ತಾಲ್ಲೂಕು ಆಡಳಿತ ಮುಂದಾಗಿದೆ. ಕಾಟಾಚಾರದ ಸಭೆ ನಡೆಸುವುದು ಬೇಡ. ಜಿಲ್ಲಾಧಿಕಾರಿ ಮತ್ತು ಎ.ಸಿ ಬಂದಾಗ ಸಭೆಯಲ್ಲಿ ಭಾಗವಹಿಸುತ್ತೇವೆ. ಅಲ್ಲಿಯವರೆವಿಗೂ ಸಭೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಹೇಳಿ ಹೊರ ನಡೆದರು.

ಎಪಿಎಂಸಿ ಸದಸ್ಯ ವಿ.ಟಿ.ವೆಂಕಟರಾಂ ಮಾತನಾಡಿ, ಪ್ರತಿ ಸಭೆಯಲ್ಲಿ ತೆಗೆದುಕೊಳ್ಳುವ ಕ್ರಮಗಳು ಕಡತಗಳಲ್ಲೇ ದೂಳು ಹಿಡಿಯುತ್ತವೆ. ತಾಲ್ಲೂಕಿನಲ್ಲಿ ಅಂಬೇಡ್ಕರ್ ಭವನಗಳು ಮಂಜೂರಾಗಿ ಹಲವು ವರ್ಷಗಳೇ ಕಳೆದರೂ ಅದರ ಬಗ್ಗೆ ದಾಖಲೆಯಿಲ್ಲ. ಹೆಣ್ಣು ಮಕ್ಕಳ ಹಾಸ್ಟೆಲ್‌ಗೆ ಸುವ್ಯವಸ್ಥಿತ ಕಟ್ಟಡ ಹಾಗೂ ಮೂಲಸೌಕರ್ಯಗಳಿಲ್ಲ. ಇಲ್ಲಿನ ಅಕ್ರಮಗಳ ಬಗ್ಗೆ ಧ್ವನಿ ಎತ್ತಿದರೆ ಕಟ್ಟಡ ಕಾಮಗಾರಿಯ ಕಡತಗಳೆ ಕಾಣೆಯಾಗುತ್ತವೆ ಎಂದು ಆರೋಪಿಸಿದರು.

ತಾಲ್ಲೂಕಿನ ಯಾವುದೇ ಇಲಾಖೆಯ ಅಧಿಕಾರಿಗಳು ‍ಪರಿಶಿಷ್ಟರ ಸಮಸ್ಯೆಗಳಿಗೆ ಸ್ಪಂದಿಸದೆ ಶ್ರೀಮಂತರ, ಪ್ರಭಾವಿಗಳ ಪರ ಕೆಲಸ ಮಾಡುತ್ತಾರೆ. ಈ ಬಗ್ಗೆ ತಾಲ್ಲೂಕು ದಸಂಸದಿಂದ ಪ್ರತಿಭಟನೆ ಹಮ್ಮಿಕೊಂಡು ಅಧಿಕಾರಿಗಳ ಅಕ್ರಮ ಹಾಗೂ ಪರಿಶಿಷ್ಟ ವಿರೋಧಿ ಧೊರಣೆಯನ್ನು ಬಯಲಿಗೆಳೆಯಲಾಗುವುದು ಎಂದು ಎಚ್ಚರಿಸಿದರು.

ಸಮಾಜ ಕಲ್ಯಾಣ ಇಲಾಖೆಯ ಎದುರು ಅಧಿಕಾರಿಗಳಿಗೆ ದಿಕ್ಕಾರ ಕೂಗಿ, ಅಂಬೇಡ್ಕರ್ ಪರ ಘೋಷಣೆ ಕೂಗಿದರು.

ಪಟ್ಟಣ ಪಂಚಾಯಿತಿ ಸದಸ್ಯ ಚಿದಾನಂದ್, ಎಪಿಎಂಸಿ ಸದಸ್ಯರಾದ, ನರಸಿಂಹಣ್ಣ, ವಿ.ಟಿ.ವೆಂಕಟರಾಂ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಹನುಮಂತಯ್ಯ, ಮುಖಂಡರಾದ ದಂಡಿನಶಿವರ ಕುಮಾರ್, ಬಾಬು ಕೊಂಡಜ್ಜಿ, ಡಾ.ಚಂದ್ರಣ್ಣ, ತಿಮ್ಮೇಶ್, ಮಧು ಸಿದ್ದಾಪುರ, ಜಗದೀಶ್ ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು