ತೋವಿನಕೆರೆ: ಯುವಕರು ಕೃಷಿಯಿಂದ ದೂರ ಸರಿಯುತ್ತಿದ್ದಾರೆ ಎನ್ನುವ ಮಾತನ್ನು ಸುಳ್ಳು ಮಾಡಿರುವ ಯುವಕರ ಗುಂಪೊಂದು ಗುತ್ತಿಗೆ ಮತ್ತು ಗಂಟೆ ಲೆಕ್ಕದಲ್ಲಿ ವ್ಯವಸಾಯ ಚಟುವಟಿಕೆಗಳನ್ನು ಮಾಡಿಕೊಟ್ಟು ಸಾವಿರಾರು ರೂಪಾಯಿ ಆದಾಯ ಪಡೆಯುತ್ತಿದ್ದಾರೆ.
ಗ್ರಾಮದ ಸಮೀಪದ ಜೋನಿಗರಹಳ್ಳಿ ಮತ್ತು ಮಾವಕೆರೆ ಗ್ರಾಮಗಳ 28 ವಯಸ್ಸಿನ ಒಳಗಿನ ಏಳು ಮಂದಿ ಯುವಕರು ಅಡಿಕೆ ಕೀಳುವುದು, ಅಡಿಕೆ ಬೇಯಿಸುವುದು, ಯಂತ್ರದ ಮೂಲಕ ಕಳೆ ತೆಗೆಯುವುದು, ಗುಂಡಿ ತೆಗೆದು ಗಿಡಗಳನ್ನು ಇಡುವುದು ಸೇರಿದಂತೆ ಹಲವು ಕೃಷಿ ಕೆಲಸಗಳನ್ನು ಮಾಡುತ್ತಿದ್ದಾರೆ.
ಕರೆ ಮಾಡಿ ‘ನಮಗೆ ಇಂತಹ ಕೆಲಸ ಮಾಡಬೇಕು’ ಎಂದು ತಿಳಿಸಿದರೆ ಉಪಕರಣಗಳ ಜೊತೆ ಬರುವ ಯುವಕರು ಕೆಲಸ ಮುಗಿಸುತ್ತಾರೆ. ಯುವಕರ ತಿಂಗಳ ದುಡಿಮೆ ಗಮನ ಸೆಳೆಯುವಂತಿದೆ. ಸಿದ್ಧೇಶ, ಮಧು, ಅನಿಲ್ ಕುಮಾರ್, ಕಾಂತರಾಜು, ನಾಗರಾಜು, ಪ್ರದೀಪ್ ತಂಡದಲ್ಲಿದ್ದಾರೆ.
ತೋವಿನಕೆರೆ ಪಕ್ಕದ ನಂದಿಹಳ್ಳಿ ಮತ್ತು ಹೊಲ್ತಾಳು ಗ್ರಾಮಗಳಲ್ಲಿ ಇದೇ ರೀತಿ ಕೃಷಿ ಕಾರ್ಮಿಕರ ತಂಡಗಳಿವೆ.
‘ತಿಂಗಳಲ್ಲಿ ಕೆಲವು ಸಲ ಯಾವ ದಿನವೂ ಬಿಡುವು ಸಿಗುವುದಿಲ್ಲ. ಬೆಳಿಗ್ಗೆ 9ರಿಂದ ಸಂಜೆ 6ರವರೆಗೆ ಕೆಲಸ ಇರುತ್ತದೆ. ನಾವು ಅಡಿಕೆ ತೋಟಗಳ ಬೆಳೆಯನ್ನು ಗುತ್ತಿಗೆ ಪಡೆಯುತ್ತೇವೆ. ನಮ್ಮಲ್ಲಿ ಮುಯ್ಯಾಳು ಪದ್ಧತಿ ಅನುಸರಿಸಿ ಕೆಲಸ ಮಾಡಿಕೊಳ್ಳುತ್ತೇವೆ’ ಎನ್ನುತ್ತಾರೆ ಜೋನಿಗರಹಳ್ಳಿ ಪ್ರದೀಪ್ ಬಿ.