ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಡ್ಡೇನಹಳ್ಳಿ: ಪ್ರತಿಭಟನೆ ಮೊಟುಕುಗೊಳಿಸಿದ ಎಚ್‌ಡಿಕೆ

ರೈತರ ಜಮೀನಿನಲ್ಲಿ ತೆಂಗಿನ ಸಸಿ ಕಿತ್ತ ಪ್ರಕರಣ; ಜೆಡಿಎಸ್‌ ಮುಖಂಡ ಎಂ.ಟಿ.ಕೃಷ್ಣಪ್ಪ ನೇತೃತ್ವದಲ್ಲಿ ಹೋರಾಟ
Last Updated 1 ಸೆಪ್ಟೆಂಬರ್ 2020, 8:15 IST
ಅಕ್ಷರ ಗಾತ್ರ

ತುರುವೇಕೆರೆ: ತಾಲ್ಲೂಕಿನ ಗುಡ್ಡೇನಹಳ್ಳಿ ರೈತರ ತೆಂಗಿನ ಸಸಿ ಕೀಳಿಸಲು ಶಾಸಕರು ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಆರೋಪಿಸಿ ಜೆಡಿಎಸ್‌ ಮುಖಂಡ ಎಂ.ಟಿ.ಕೃಷ್ಣಪ್ಪ ನೇತೃತ್ವದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪ್ರತಿಭಟನೆ ಕಾರಣ ಪಟ್ಟಣದಲ್ಲಿ ಪೊಲೀಸ್ ಬಿಗಿ ಭದ್ರತೆ ಇತ್ತು.

ಇಲ್ಲಿನ ಪ್ರವಾಸಿ ಮಂದಿರದ ಆಸುಪಾಸು ಪೊಲೀಸರು ಹೆಚ್ಚಿನ ಸಂಖ್ಯೆಯ ಬ್ಯಾರಿಕೇಡ್‌ಗಳನ್ನು ಹಾಕಿದ್ದರು. ನಿಷೇಧಾಜ್ಞೆ ಜಾರಿಯಲ್ಲಿದ್ದ ಕಾರಣ ಜೆಡಿಎಸ್ ಕಾರ್ಯಕರ್ತರು ಒಂದೆಡೆ ಸೇರಲು ಆಗದೆ ಮಾಯಸಂದ್ರ ರಸ್ತೆಯ ಗಲ್ಲಿಗಲ್ಲಿಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇದ್ದರು. ಇನ್ನೊಂದಿಷ್ಟು ಕಾರ್ಯಕರ್ತರು ಚಂದ್ರೇಶ್ ಅವರ ಮನೆ ಮುಂಭಾಗ ನಿಂತಿದ್ದರು.

ಕೃಷ್ಣಪ್ಪ ಪ್ರತಿಭಟನೆ ಆರಂಭಿಸುವ ಮುನ್ನ ಬೇಟೆರಾಯ ಸ್ವಾಮಿ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು. ನಂತರ ಮಾತನಾಡಿದ ಅವರು, ‘ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರು ಕೋವಿಡ್–19 ಹಾಗೂ ತಾಲ್ಲೂಕಿನಲ್ಲಿ ನಿಷೇಧಾಜ್ಞೆ ಜಾರಿಯಲ್ಲಿ ಇರುವುದರಿಂದ ಸಾಂಕೇತಿಕ ಪ್ರತಿಭಟನೆ ಮಾಡುವುದು ಬೇಡ ಎಂದಿದ್ದಾರೆ. ಹಾಗಾಗಿ ಅವರು ಬರುವವರೆಗೂ ಕಾದು ಮುಂದಿನ ನಡೆ ಏನು ಎನ್ನುವ ಬಗ್ಗೆ ನೋಡೋಣ’ ಎಂದು ಹೇಳಿದರು.

ಇತ್ತ ಬಿಜೆಪಿ ಕಾರ್ಯಕರ್ತರೂ ಕಚೇರಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ಮಾಡಿದರೆ ತಾವೂ ಪ್ರತಿಭಟನೆ ನಡೆಸುತ್ತೇವೆ ಎಂದು ಹೇಳಿದರು.

ಎಚ್‌.ಡಿ.ಕುಮಾರಸ್ವಾಮಿ ಅವರು ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಗುಡ್ಡೇನಹಳ್ಳಿ ರೈತರಿಗೆ ಸಾಗುವಳಿ ಭೂಮಿ ಮಂಜೂರು ಮಾಡಿಕೊಡುವಂತೆ ತಹಶೀಲ್ದಾರ್ ಆರ್.ನಯಿಂಉನ್ನೀಸಾ ಅವರಿಗೆ ಮನವಿ ಸಲ್ಲಿಸಿದರು. ನಂತರ ಪಟ್ಟಣದ ಕಾರ್ಯಕರ್ತರ ಮನೆಗೆ ತೆರಳಿದರು.

ಕೊಳಾಲ ಗಂಗಾಧರ್, ವೆಂಕಟಾಪುರ ಯೋಗೀಶ್, ದೊಡ್ಡಾಘಟ್ಟ ಚಂದ್ರೇಶ್, ರಾಜೀವ್ ಕೃಷ್ಣಪ್ಪ, ವೆಂಕಟೇಶ್‌ ಮೂರ್ತಿ, ಕುಶಾಲ್‌ಕುಮಾರ್ ಇದ್ದರು.

***

ನಿಷೇಧಾಜ್ಞೆ ಹೇರಿ ಆತಂಕ ಸೃಷ್ಟಿಸಿದ ಅಧಿಕಾರಿಗಳು’

ತುರುವೇಕೆರೆ: ‘ತಾಲ್ಲೂಕಿನ ಗುಡ್ಡೇನಹಳ್ಳಿ ಸಾಗುವಳಿ ಭೂಮಿಗೆ ಸಂಬಂಧಿಸಿದ ಸಮಸ್ಯೆಗೆ ನಿಷೇಧಾಜ್ಞೆ ಜಾರಿಗೊಳಿಸಿ ಜನರು, ರೈತರಲ್ಲಿ ಆಂತಕ ಸೃಷ್ಟಿಸಿದ್ದೀರಿ’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಾತನಾಡಿದ ಅವರು, ‘ಗುಡ್ಡೇನಹಳ್ಳಿ ರೈತರ ತೆಂಗಿನ ಸಸಿಗಳನ್ನು ಅಧಿಕಾರಿಗಳು ಕಿತ್ತಾಗ ರೈತರ ಸಮಸ್ಯೆಯನ್ನು ತಾಳ್ಮೆಯಿಂದ ಶಾಸಕರು ಕೇಳಿದ್ದರೆ ಇಂತಹ ಘಟನೆ ನಡೆಯುತ್ತಿರಲಿಲ್ಲ’ ಎಂದು ಹೇಳಿದರು.

‘ಅಧಿಕಾರಿಗಳು ಯಾವುದೇ ಪಕ್ಷದ ಮುಖಂಡರ ಅಣತಿಯಂತೆ ನಡೆಯದೆ ಕಾನೂನಿನ ಚೌಕಟ್ಟಿನಲ್ಲಿ ಕೆಲಸ ಮಾಡಬೇಕು. ವಿನಾಕಾರಣ ನಿಷೇಧಾಜ್ಞೆ
ಜಾರಿಗೆ ಕಾರಣಕರ್ತರಾದ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲು ಗೃಹ ಸಚಿವರು ಮತ್ತು ಮುಖ್ಯಮಂತ್ರಿ ಬಳಿ ಚರ್ಚಿಸುವೆ’ ಎಂದು ತಿಳಿಸಿದರು.

...

ಮುಂದಿನ ಚುನಾವಣೆಯಲ್ಲಿ ಕೃಷ್ಣಪ್ಪ ಅಭ್ಯರ್ಥಿ

‘ತಾಲ್ಲೂಕಿನ ರೈತರ, ಜನಪರ ಹೋರಾಟಗಳಿಗೆ ಹಾಗೂ ಕಾರ್ಯಕರ್ತರಿಗೆ ಸಕಾರಾತ್ಮಕವಾಗಿ ಸ್ಪಂದಿಸುವ ಜೆಡಿಎಸ್‌ ಮುಖಂಡ ಎಂ.ಟಿ.ಕೃಷ್ಣಪ್ಪ ಮುಂದಿನ ವಿಧಾನಸಭಾ ಚುನಾವಣೆಯ ಅಭ್ಯರ್ಥಿ. ಮತ್ತೆ ಯಾರನ್ನೂ ನಿಲ್ಲಿಸುವುದಿಲ್ಲ’ ಎಂದು ಕುಮಾರಸ್ವಾಮಿ ಹೇಳಿದರು.

...

ಮೈತ್ರಿ ಸರ್ಕಾರ ಬೀಳಿಸಿದ ‘ಡ್ರಗ್ಸ್‌’

ಡ್ರಗ್ಸ್‌ಮಾಫಿಯಾ ಕುರಿತ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಕುಮಾರಸ್ವಾಮಿ, ‘ಬಿಜೆಪಿ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿದ ವ್ಯಕ್ತಿಗಳಿಂದ ಪಡೆದ ಹಣದಿಂದ ಜೆಡಿಎಸ್- ಕಾಂಗ್ರೆಸ್ ಮೈತ್ರಿ ಸರ್ಕಾರವನ್ನು ಬೀಳಿಸಲು ಹುನ್ನಾರ ನಡೆಸಿತು’ ಎಂದು ಹೇಳಿದರು.

ಬಿಜೆಪಿ ಸರ್ಕಾರದಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ. ಅದರ ಬಗ್ಗೆ ಚರ್ಚೆ ಮಾಡುವುದೇ ನಿರರ್ಥಕ. ಈಚೆಗೆ ನಡೆದ ಅತಿವೃಷ್ಟಿ ನಷ್ಟ ತುಂಬಿಕೊಡಲು ಸರ್ಕಾರಕ್ಕೆ ಬದ್ಧತೆ ಇಲ್ಲವಾಗಿದೆ ಎಂದು ಹೇಳಿದರು.

***

ಸ್ವಾರ್ಥ ರಾಜಕಾರಣ: ಶಾಸಕ

ತುರುವೇಕೆರೆ: ‘ಎಂ.ಟಿ.ಕೃಷ್ಣಪ್ಪ, ಗುಡ್ಡೇನಹಳ್ಳಿ ರೈತರಿಗೆ ನ್ಯಾಯ ಕೊಡಿಸುವ ಸೋಗಿನಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಪಟ್ಟಣಕ್ಕೆ ಕರೆಯಿಸಿ ಮುಂದಿನ ವಿಧಾಸಭಾ ಚುನಾವಣೆಯ ಅಭ್ಯರ್ಥಿ ಎಂದು ಘೋಷಿಸಿಕೊಳ್ಳುವ ಮೂಲಕ ಸ್ವಾರ್ಥ ರಾಜಕಾರಣ ಮಾಡಿದ್ದಾರೆ’ ಎಂದು ಶಾಸಕ ಮಸಾಲ ಜಯರಾಮ್ ಟೀಕಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಗುಡ್ಡೇನಹಳ್ಳಿಯಲ್ಲಿ ಕಂದಾಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ನಡೆಸಿದ ಕಾರ್ಯಾಚರಣೆ ಬಗ್ಗೆ ತಿಳಿದ ಮರುದಿನವೇ ರೈತರ ಹಿತ ಕಾಯುವ ದೃಷ್ಟಿಯಿಂದ ಖುದ್ದು ಗ್ರಾಮಕ್ಕೆ ತೆರಳಿ ರೈತ ಸಂಘದ ಅಧ್ಯಕ್ಷ ಆನಂದ್ ಪಟೇಲ್ ನೇತೃತ್ವದಲ್ಲಿ ತೆಂಗಿನ ಸಸಿ ನೆಟ್ಟು ರೈತರಿಗೆ ಧೈರ್ಯ ತುಂಬಿದ್ದೇನೆ’ ಎಂದರು.

ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಚೌದ್ರಿ ನಾಗೇಶ್, ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಹೆಡಗಿಹಳ್ಳಿ ವಿಶ್ವನಾಥ್, ಕೊಂಡಜ್ಜಿ ವಿಶ್ವನಾಥ್, ವಿ.ಟಿ.ವೆಂಕಟರಾಮಯ್ಯ ಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT