ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

DCC ಬ್ಯಾಂಕ್ ಅನ್ನು ಅಪ್ಪನ ಮನೆ ಆಸ್ತಿಯನ್ನಾಗಿ ಮಾಡಿಕೊಂಡ ರಾಜಣ್ಣ: HDK ವಾಗ್ದಾಳಿ

Published 19 ಏಪ್ರಿಲ್ 2024, 15:03 IST
Last Updated 19 ಏಪ್ರಿಲ್ 2024, 15:03 IST
ಅಕ್ಷರ ಗಾತ್ರ

ತುಮಕೂರು: ‘ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ (ಡಿಸಿಸಿ) ಅನ್ನು ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರು ಅಪ್ಪನ ಮನೆ ಆಸ್ತಿ ಮಾಡಿಕೊಂಡು ಜನರನ್ನು ಹೆದರಿಸಿಕೊಂಡು ರಾಜಕಾರಣ ಮಾಡುತ್ತಿದ್ದಾರೆ’ ಎಂದು ಮಂಡ್ಯ ಲೋಕಸಭಾ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಎಚ್‌.ಡಿ. ಕುಮಾರಸ್ವಾಮಿ ಆರೋಪಿಸಿದರು.

ಮಧುಗಿಯ ಲಾಲ್ ಬಹಾದ್ದೂರ್ ಶಾಸ್ತ್ರಿ ಮೈದಾನದಲ್ಲಿ ಶುಕ್ರವಾರ ನಡೆದ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಪರ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

‘ಡಿಸಿಸಿ ಬ್ಯಾಂಕ್‌ನಲ್ಲಿ ರಾಜಣ್ಣ ಅವರಿಗೆ ಬೇಕಾದವರಿಗೆ ಸಾಲ ಕೊಡುತ್ತಾರೆ. ಇಷ್ಟು ದಿನ ರಾಜಣ್ಣ ನಡೆಸಿದ ದೌರ್ಜನ್ಯವನ್ನು ಈಗ ಅವರ ಮಗ ಕೂಡ ಮುಂದುವರೆಸುತ್ತಿದ್ದಾರೆ’ ಎಂದು ದೂರಿದರು.

‘ನಮ್ಮ ಕಾರ್ಯಕರ್ತರಿಗೆ ಪೊಲೀಸರನ್ನು ಬಳಸಿಕೊಂಡು ತೊಂದರೆ ನೀಡಿದರೆ, ಮುಂದಿನ ದಿನಗಳಲ್ಲಿ ಜನರು ತಕ್ಕ ಪಾಠ ಕಲಿಸುತ್ತಾರೆ’ ಎಂದು ಎಚ್ಚರಿಸಿದರು.

‘ಗ್ಯಾರಂಟಿ ಯೋಜನೆಗಳಿಂದಾಗಿ ಕಾಂಗ್ರೆಸ್ ಸರ್ಕಾರ ದಿವಾಳಿಯಾಗಿದೆ.  ರಾಜ್ಯದಲ್ಲಿ ಬರದಿಂದಾಗಿ ₹36 ಸಾವಿರ ಕೋಟಿ ನಷ್ಟ ಉಂಟಾಗಿದೆ. ರೈತರಿಗೆ ಎಕರೆಗೆ ₹750 ಪರಿಹಾರ ನೀಡಲಾಗಿದೆ. ದನ, ಕರುಗಳಿಗೆ ಕುಡಿಯುವ ನೀರಿಲ್ಲ. ಮೇವಿನ ಸಮಸ್ಯೆ ಇದೆ. ನನ್ನ ಅವಧಿಯಲ್ಲಿ ₹5 ಸಾವಿರಕ್ಕೆ ವಿದ್ಯುತ್‌ ಪರಿವರ್ತಕ (ಟಿಸಿ) ಹಾಕಲಾಗುತಿತ್ತು. ಈಗ ಒಂದು ಟಿಸಿಗೆ ₹2 ಲಕ್ಷ ದಾಟಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ದೇವೇಗೌಡರಿಗೆ ಒಕ್ಕಲಿಗರು ಶಕ್ತಿ ನೀಡಿದ್ದು, ಅದನ್ನು ಇತರೆ ಸಮುದಾಯಗಳ ಅಭಿವೃದ್ಧಿಗೆ ಧಾರೆ ಎರೆದಿದ್ದಾರೆ. ಎಸ್.ಟಿ ಸಮುದಾಯಕ್ಕೆ ಮೀಸಲಾತಿ ಸಿಗಲು ದೇವೇಗೌಡರ ಶ್ರಮ ಕಾರಣ ಎಂದರು.

ಎನ್‌ಡಿಎ ಅಭ್ಯರ್ಥಿ ವಿ. ಸೋಮಣ್ಣ ಮಾತನಾಡಿ, ‘ಯಾವುದೇ ಆಮಿಷಗಳಿಗೆ ಬಲಿಯಾಗದೆ, ದೇಶದ ಭದ್ರತೆ ಕಾಪಾಡುವ ಪಕ್ಷಕ್ಕೆ ಮತ ನೀಡಿ’ ಎಂದು ಕೋರಿದರು.

ಮಾಜಿ ಶಾಸಕ ಎಂ.ವಿ. ವೀರಭದ್ರಯ್ಯ ಮಾತನಾಡಿ, ಸ್ವಜನ ಪಕ್ಷಪಾತ, ದ್ವೇಷದ ರಾಜಕಾರಣಕ್ಕೆ ಇತಿಶ್ರೀ ಹಾಡಬೇಕಿದೆ. ಕಾಂಗ್ರೆಸ್‌ನಲ್ಲಿ ಪ್ರಧಾನಿ ಅಭ್ಯರ್ಥಿಗಳಿಲ್ಲ. ಅವರಿಗೆ ಮತ ಹಾಕಿದರೆ ವ್ಯರ್ಥ. ವಿ. ಸೋಮಣ್ಣ ರಾಜಕೀಯ ಅನುಭವಿ. ಅವರ ಅಭಿವೃದ್ಧಿ ಯೋಜನೆಗಳನ್ನು ಅವರ ಸ್ವ ಕ್ಷೇತ್ರಗಳಿಗೆ ತೆರಳಿ ನೋಡಬೇಕು ಎಂದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ಹನುಮಂತೇಗೌಡ, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಸಿ. ಅಂಜಿನಪ್ಪ, ವಿಧಾನ ಪರಿಷತ್ ಸದಸ್ಯರಾದ ತಿಪ್ಪೇಸ್ವಾಮಿ, ಚಿದಾನಂದ ಗೌಡ, ಮಾಜಿ ಶಾಸಕ ಸುಧಾಕರ್ ಲಾಲ್, ತುಮುಲ್ ಮಾಜಿ ಅಧ್ಯಕ್ಷ ಕೊಂಡವಾಡಿ ಚಂದ್ರಶೇಖರ, ಪುರಸಭೆ ಸದಸ್ಯರಾದ ತಿಮ್ಮರಾಜು, ಎಂ.ಆರ್ ಜಗನ್ನಾಥ್, ಎಂ.ಎಸ್.ಚಂದ್ರಶೇಖರ್ ಬಾಬು, ಎಂ.ಎಲ್ ಗಂಗರಾಜು, ನಾರಾಯಣ್, ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಉಮಾ ವಿಜಯರಾಜ, ತಾಲ್ಲೂಕು ಅಧ್ಯಕ್ಷ ನಾಗೇಂದ್ರ, ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಬಸವರಾಜು ಪಾಲ್ಗೊಂಡಿದ್ದರು.

ಪರಮೇಶ್ವರ ಅವರನ್ನು ಸೋಲಿಸಿದ್ದ ಸಿದ್ದರಾಮಯ್ಯ
‘2018ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಬಹುಮತ ಬರದಿದ್ದಾಗ ಕಾಂಗ್ರೆಸ್‌ನವರು ಮೈತ್ರಿ ಸರ್ಕಾರ ರಚಿಸಲು ದೇವೇಗೌಡರ ಮನೆ ಬಾಗಿಲಿಗೆ ಬಂದಿದ್ದರು. ಆಗ ದೇವೇಗೌಡರು ನನ್ನ ಮಗನಿಗೆ ಸಿಎಂ ಪಟ್ಟ ಬೇಡ ದಲಿತ ನಾಯಕ ಮಲ್ಲಿಕಾರ್ಜುನ ಖರ್ಗೆಯವರಿಗೆ ನೀಡಿ ಎಂದು ಹೇಳಿದ್ದರು. ಇದು ದೇವೇಗೌಡರಿಗೆ ಇದ್ದ ದಲಿತಪರ ಕಾಳಜಿ. ಆದರೆ ಸಿದ್ದರಾಮಯ್ಯ 2013ರ ಚುನಾವಣೆಯಲ್ಲಿ ಸಿಎಂ ಸ್ಥಾನಕ್ಕೆ ಅಡ್ಡಿಯಾಗಬಹುದು ಎಂದು ಕೊರಟಗೆರೆಯಲ್ಲಿ ಜಿ.ಪರಮೇಶ್ವರ ಅವರನ್ನು ಸೋಲಿಸಿದರು’ ಎಂದು ಟೀಕಿಸಿದರು.
ಗೆದ್ದರೆ ಕೃಷಿ ಸಚಿವ: ಎಚ್‌ಡಿಕೆ ಸುಳಿವು
ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಇಚ್ಛೆ ಇರಲಿಲ್ಲ. ಕಾರ್ಯಕರ್ತರು ಒತ್ತಡ ಹಾಕಿ ಮಂಡ್ಯ ಕ್ಷೇತ್ರದಿಂದ ನಿಲ್ಲಿಸಿದ್ದಾರೆ. ಗೆದ್ದರೆ ಕೃಷಿ ಸಚಿವನಾಗಿ ಗ್ರಾಮೀಣ ಭಾಗದಲ್ಲಿ ಶಾಶ್ವತ ನೀರಾವರಿ ಯೋಜನೆ ಜಾರಿಗೆ ತರಲಾಗುವುದು. ಇನ್ನೊಂದು ವರ್ಷದಲ್ಲಿ ಕುಂಚಿಟಿಗ ಮತ್ತು ಕಾಡುಗೊಲ್ಲರಿಗೆ ಮೀಸಲಾತಿ ಸೌಲಭ್ಯ ಕಲ್ಪಿಸಲಾಗುವುದು ಎಂದು ಮಂಡ್ಯ ಲೋಕಸಭಾ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಎಚ್‌.ಡಿ. ಕುಮಾರಸ್ವಾಮಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT