ಬುಧವಾರ, ಜನವರಿ 27, 2021
16 °C
ಚಿಕ್ಕನಾಯಕನಹಳ್ಳಿ ತಾಲ್ಲೂಕಿನಲ್ಲಿ ಹರಿಯುತ್ತಿರುವ ಹೇಮಾವತಿ ನೀರು

ಚಿಕ್ಕನಾಯಕನಹಳ್ಳಿಗೆ ಹೇಮೆ ಹರಿಸಿದ ಕೀರ್ತಿ ಯಾರಿಗೆ? ತೀವ್ರ ಚರ್ಚೆ

ಆರ್.ಸಿ.ಮಹೇಶ್ Updated:

ಅಕ್ಷರ ಗಾತ್ರ : | |

ಹುಳಿಯಾರು: ದಶಕಗಳ ಹೋರಾಟದ ಫಲವಾಗಿ ಹೇಮಾವತಿ ನೀರು ಮೂರು ತಿಂಗಳಿನಿಂದ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ವಿವಿಧ ಕೆರೆಗಳಿಗೆ ಹರಿಯುತ್ತಿದೆ. ಈ ಹಿಂದೆ ರಾಜಕೀಯ ದಾಳವಾಗಿ ಬಳಕೆಯಾಗಿದ್ದ ಹೇಮಾವತಿ ನೀರಾವರಿ ಯೋಜನೆ ಅನುಷ್ಠಾನದ ನಂತರ ನೀರು ಹರಿಸಿದ ಶ್ರಮದ ಫಲ ಯಾರಿಗೆ? ಎನ್ನುವುದು ಚರ್ಚೆಗೆ ಕಾರಣವಾಗಿದೆ.

ಬೋರನಕಣಿವೆ ಜಲಾಶಯದ ಬಳಿ ಸ್ವಾಮೀಜಿ ಹಾಗೂ ಕೆಲವೇ ಕೆಲವು ಹೋರಾಟಗಾರರ ಸಭೆಯಲ್ಲಿ ಚರ್ಚಿಸಿದ ನೀರಾವರಿ ಹೋರಾಟ ಪ್ರಸ್ತಾಪವಾಯಿತು. ಕೆಲವೇ ದಿನಗಳಲ್ಲಿ ಹೋರಾಟ ಹುಳಿಯಾರು ಪಟ್ಟಣಕ್ಕೆ ಸ್ಥಳಾಂತರಗೊಂಡು 2009ರ ಜುಲೈ 13ರಂದು ನಾಡಕಚೇರಿ ಮುಂದೆ ಬರಪೀಡಿತ ಚಿಕ್ಕನಾಯಕನಹಳ್ಳಿ ತಾಲ್ಲೂಕಿಗೆ ನೀರು ಹರಿಸಿ ಎಂಬ ಘೋಷಣೆಯೊಂದಿಗೆ ರೈತಸಂಘ ಘಟಕ 48ಕ್ಕೂ ಹೆಚ್ಚು ಸಂಘಸಂಸ್ಥೆಗಳ ಆಶ್ರಯದಲ್ಲಿ ಹೋರಾಟ ಆರಂಭಿವಾಯಿತು.

ಹೋರಾಟ ಸುಮಾರು 64 ದಿನಗಳ ಕಾಲ ನಿರಂತರವಾಗಿ ನಡೆದಿತ್ತು. ರೈತಸಂಘ ಹಾಗೂ ಸಂಘಸಂಸ್ಥೆಗಳ ಜತೆ ವಿವಿಧ ಮಠಾಧೀಶರು ಕೈ ಜೋಡಿಸಿ ಹೋರಾಟಕ್ಕೆ ಬಲ ತುಂಬಿದ್ದರು. ಆಗ ಶಾಸಕರಾಗಿದ್ದ ಸಿ.ಬಿ.ಸುರೇಶ್‌ಬಾಬು ಹಾಗೂ ಮಾಜಿ ಶಾಸಕ ಕೆ.ಎಸ್.ಕಿರಣ್‌ಕುಮಾರ್‌ ಹೋರಾಟದ ಭಾಗವಾದರು. ಅಂದು ಬಿ.ಎಸ್.ಯಡಿಯೂರಪ್ಪ ಅವರ ಬಿಜೆಪಿ ಸರ್ಕಾರದಲ್ಲಿ ಮುಖ್ಯಮಂತ್ರಿಗಳಿಗೆ ತೀರಾ ಆಪ್ತರಾಗಿದ್ದ ಕಿರಣ್‌ಕುಮಾರ್‌ ನೀರಾವರಿ ಯೋಜನೆ ಸಕಾರಗೊಳಿಸುವಂತೆ ಒತ್ತಡ ಹೇರಿದ್ದರು. ಶಾಸಕರಾಗಿದ್ದ ಸುರೇಶ್‌ಬಾಬು ಸಹ ಸ್ವಾಮೀಜಿಗಳು, ಸಂಘಸಂಸ್ಥೆಗಳ ಪದಾಧಿಕಾರಿಗಳನ್ನು ಕರೆದೊಯ್ದು ಮುಖ್ಯಮಂತ್ರಿಗಳಲ್ಲಿ ಒತ್ತಡ ಹೇರಿದ್ದರು.

ನಿರಂತರ ಹೋರಾಟದ ಫಲವಾಗಿ ₹120 ಕೋಟಿಯ ನೀರಾವರಿ ಯೋಜನೆಗೆ ಸರ್ಕಾರ ಅಸ್ತು ಎಂದಿತ್ತು. ಅದರ ಬೆನ್ನಲ್ಲೆ ಶೆಟ್ಟಿಕೆರೆ ಹೋಬಳಿಯಲ್ಲಿ ಯೋಜನೆಗೆ ಶಂಕುಸ್ಥಾಪನೆ ನೆರವೇರಿತ್ತು. ಆದರೆ ಯೋಜನೆ ಮಂಜೂರಾತಿ ಪಡೆದು ದಶಕಗಳೇ ಕಳೆದರೂ ಕಾರ್ಯರೂಪಕ್ಕೆ ಬಾರದೆ ಕಾಮಗಾರಿ ನನೆಗುದಿಗೆ ಬಿದ್ದಿತ್ತು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಚಿಕ್ಕನಾಯಕನಹಳ್ಳಿ ಕ್ಷೇತ್ರದಿಂದ ಆಯ್ಕೆಯಾದ ಜೆ.ಸಿ.ಮಾಧುಸ್ವಾಮಿ ರಾಜ್ಯದ ಮಂತ್ರಿಯಾದರು. ಮಂತ್ರಿಯಾದ ದಿನದಿಂದಲೇ ನೀರಾವರಿ ಯೋಜನೆ ಬಗ್ಗೆ ಗಮನ ಹರಿಸಿದ ಸಚಿವರು ಕಾಮಗಾರಿಗೆ ಮತ್ತೆ ಜೀವ ತುಂಬಿದರು.

ಹೇಮಾವತಿ ನೀರು ಹರಿಸಿದ ಫಲ ಯಾರಿಗೆ ಸಲ್ಲಬೇಕು ಎಂಬುದೇ ತಾಲ್ಲೂಕಿನಲ್ಲಿ ಚರ್ಚೆಯ ವಿಷಯವಾಗಿದೆ. ಸ್ವಾಮೀಜಿಗಳು, ಮುಖಂಡರು ಯೋಜನೆಯಡಿ ನೀರು ಹರಿದ ಸಾಸಲು ಕೆರೆಗೆ ಬಾಗಿನವನ್ನು ಅರ್ಪಿಸಿದ್ದಾರೆ. ಇನ್ನೂ ಜೆ.ಸಿ.ಮಾಧುಸ್ವಾಮಿ ಅಭಿಮಾನಿಗಳು ಶೆಟ್ಟಿಕೆರೆಯಲ್ಲಿ ಮಂತ್ರಿಗಳಿಗೆ ಅಭಿನಂದನಾ ಕಾರ್ಯಕ್ರಮನು ಏರ್ಪಡಿಸಿದ್ದಾರೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ಅವರವರ ನಾಯಕರ ಹಿಂಬಾಲಕರು ಶ್ರಮದ ಫಲ ನಮ್ಮ ನಾಯಕರಿಗೆ ಸೇರಬೇಕು ಎಂಬ ಪೋಸ್ಟರ್‌ಗಳನ್ನು ಹಾಕುತ್ತಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು