ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ತುಮಕೂರು: ಬಾಗಿಲು ಮುಚ್ಚಿದ ಸ್ಮಾರ್ಟ್ ಸಿಟಿಯಡಿ ನಿರ್ಮಿಸಿದ ಹೈಟೆಕ್‌ ಜಿಮ್‌

Published 26 ಮೇ 2024, 14:04 IST
Last Updated 26 ಮೇ 2024, 14:04 IST
ಅಕ್ಷರ ಗಾತ್ರ

ತುಮಕೂರು: ನಗರದ ಜೂನಿಯರ್‌ ಕಾಲೇಜು ಮೈದಾನದಲ್ಲಿ ಸ್ಮಾರ್ಟ್‌ ಸಿಟಿ ಯೋಜನೆಯಡಿ ನಿರ್ಮಿಸಿದ ವ್ಯಾಯಾಮ ಶಾಲೆ ಕೇವಲ ಉದ್ಘಾಟನೆಗೆ ಸೀಮಿತವಾಗಿದ್ದು, ಇದೀಗ ಜಿಮ್‌ಗೆ ಬೀಗ ಜಡಿಯಲಾಗಿದೆ.

ಉದ್ಘಾಟನೆಯ ನಂತರ ವ್ಯಾಯಾಮ ಶಾಲೆಯನ್ನು ಶಾಲಾ ಶಿಕ್ಷಣ ಇಲಾಖೆಗೆ ಹಸ್ತಾಂತರಿಸಲಾಗಿದೆ. ಸರ್ಕಾರಿ ಜೂನಿಯರ್‌ ಕಾಲೇಜಿನ ಆಡಳಿತ ಮಂಡಳಿ ಜಿಮ್‌ ನಿರ್ವಹಣೆ ಜವಾಬ್ದಾರಿ ವಹಿಸಿಕೊಂಡಿದೆ. ಜಿಮ್‌ಗೆ ಚಾಲನೆ ನೀಡಿದ್ದು ಬಿಟ್ಟರೆ ಇದುವರೆಗೆ ಸಮರ್ಪಕವಾಗಿ ಬಳಕೆ ಮಾಡಲು ಸಾಧ್ಯವಾಗಿಲ್ಲ. ಇದರಿಂದ ಜಿಮ್‌ನ ಉಪಕರಣಗಳು ಧೂಳು ಹಿಡಿಯುತ್ತಿವೆ.

₹37.93 ಲಕ್ಷ ವೆಚ್ಚದಲ್ಲಿ ವ್ಯಾಯಾಮ ಶಾಲೆಯ ಕಟ್ಟಡ ನಿರ್ಮಿಸಲಾಗಿದೆ. ಇದಕ್ಕೆ ₹44.60 ಲಕ್ಷ ಖರ್ಚು ಮಾಡಿ ಅಗತ್ಯ ಉಪಕರಣಗಳ ಖರೀದಿಸಲಾಗಿದೆ. ವ್ಯಾಯಾಮ ಶಾಲೆಯಲ್ಲಿ ಹೊರಗಿನವರಿಗೆ ನಿರ್ಬಂಧ ವಿಧಿಸಿದ್ದು, ಕೇವಲ ವಿದ್ಯಾರ್ಥಿಗಳ ಪ್ರವೇಶಕ್ಕೆ ಮಾತ್ರ ಅನುವು ಮಾಡಿಕೊಡಲಾಗಿದೆ. ಉದ್ಘಾಟನೆಯಾದ ಸಮಯದಲ್ಲಿ ಕೆಲವು ದಿನ ಬಳಕೆ ಮಾಡಲಾಯಿತು. ನಂತರ ಇದಕ್ಕೆ ಬೀಗ ಹಾಕಲಾಗಿದೆ.

ಜೂನಿಯರ್‌ ಕಾಲೇಜು ಮೈದಾನದ ಸುತ್ತಮುತ್ತಲಿನ ಹಾಸ್ಟೆಲ್‌ ವಿದ್ಯಾರ್ಥಿಗಳು ಇಲ್ಲಿಗೆ ಬರುತ್ತಿದ್ದರು. ಅವರನ್ನು ಹೊರೆತು ಪಡಿಸಿದರೆ ಬೇರೆಯವರಿಗೆ ಪ್ರವೇಶ ನೀಡಿರಲಿಲ್ಲ. ಹಲವು ದಿನಗಳಿಂದ ಜಿಮ್‌ ಮುಚ್ಚಿದ್ದು, ಇದರ ಬಗ್ಗೆ ಯಾರೂ ಧ್ವನಿ ಎತ್ತುತ್ತಿಲ್ಲ. ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ ಜಿಮ್‌ ಇದ್ದೂ ಇಲ್ಲದಂತಾಗಿದೆ.

‘ಜೂನಿಯರ್‌ ಕಾಲೇಜಿನ ಆಡಳಿತ ಮಂಡಳಿಯವರು ಬೇಕಾಬಿಟ್ಟಿಯಾಗಿ ಜಿಮ್‌ ತೆರೆಯುತ್ತಾರೆ. ತಮಗೆ ಇಷ್ಟ ಬಂದಾಗ ಬಂದ್‌ ಮಾಡುತ್ತಾರೆ. ಎಲ್ಲರ ಬಳಕೆಯ ಉದ್ದೇಶದಿಂದ ಜಿಮ್‌ ಪ್ರಾರಂಭಿಸಲಾಗಿತ್ತು. ಆದರೆ ಕ್ರೀಡಾಪಟುಗಳು, ಸಾರ್ವಜನಿಕರಿಗೆ ಪ್ರವೇಶ ನೀಡುತ್ತಿಲ್ಲ. ನಿರ್ವಹಣೆ ಮಾಡಲು ಆಗದೆ ಬಾಗಿಲು ಹಾಕಿದ್ದಾರೆ’ ಎಂದು ಕ್ರೀಡಾಪಟುಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಜೂನಿಯರ್‌ ಕಾಲೇಜು ಮೈದಾನಕ್ಕೆ ಪ್ರತಿ ದಿನ ನೂರಾರು ಜನ ಭೇಟಿ ನೀಡುತ್ತಾರೆ. ಜಿಲ್ಲಾ ಕ್ರೀಡಾಂಗಣ ಹೊರೆತು ಪಡಿಸಿದರೆ ಹೆಚ್ಚಿನ ಕ್ರೀಡಾಪಟುಗಳು ತಮ್ಮ ಅಭ್ಯಾಸಕ್ಕೆ ಕಾಲೇಜು ಮೈದಾನವನ್ನೇ ಅವಲಂಬಿಸಿದ್ದಾರೆ. ವ್ಯಾಯಾಮ ಶಾಲೆಯನ್ನು ಎಲ್ಲರ ಬಳಕೆಗೆ ನೀಡಿದರೆ ತುಂಬಾ ಜನರಿಗೆ ಪ್ರಯೋಜನವಾಗಲಿದೆ. ಆದರೆ ಸಂಬಂಧಪಟ್ಟ ಅಧಿಕಾರಿಗಳು ಇದಕ್ಕೆ ಇಚ್ಛಾಶಕ್ತಿ ತೋರುತ್ತಿಲ್ಲ.

‘ದೈಹಿಕ ಕಸರತ್ತು ನಡೆಸಲು ಜಿಲ್ಲಾ ಕ್ರೀಡಾಂಗಣದಲ್ಲಿರುವ ವ್ಯಾಯಾಮ ಶಾಲೆಗೆ ಹೋಗುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಕಾಲೇಜು ಮೈದಾನದಲ್ಲಿರುವ ಜಿಮ್‌ನ ಬಳಕೆಗೆ ಅವಕಾಶ ನೀಡಿದರೆ ಇದರ ಮೇಲಿನ ಒತ್ತಡ ಕಡಿಮೆಯಾಗಲಿದೆ. ಜಿಲ್ಲಾಧಿಕಾರಿ, ಆಯುಕ್ತರು ಇತ್ತ ಗಮನ ಹರಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು’ ಎಂದು ನಗರದ ಚಂದ್ರಕಾಂತ್‌ ಮನವಿ ಮಾಡಿದರು.

‘ಹೊರಗಿನವರಿಗೆ ಅವಕಾಶ ಕೊಟ್ಟರೆ ವ್ಯಾಯಾಮ ಶಾಲೆಯ ಉಪಕರಣ ಹಾಳಾಗುತ್ತವೆ. ಇದರಿಂದ ಕೇವಲ ವಿದ್ಯಾರ್ಥಿಗಳಿಗೆ ಸೀಮಿತಗೊಳಿಸಿದ್ದೇವೆ’ ಎಂಬುವುದು ಜೂನಿಯರ್‌ ಕಾಲೇಜಿನ ಆಡಳಿತ ಮಂಡಳಿಯವರ ವಿವರಣೆ.

₹44.60 ಲಕ್ಷ ವೆಚ್ಚದ ಉಪಕರಣ ಖರೀದಿ ಧೂಳು ಹಿಡಿಯುತ್ತಿರುವ ಉಪಕರಣ ನಿರ್ವಹಣೆಗೆ ಇಚ್ಛಾಶಕ್ತಿಯ ಕೊರತೆ
ಮುಂದಿನ ವಾರ ಆರಂಭ
ಜೂನಿಯರ್‌ ಕಾಲೇಜು ಹಾಗೂ ಹೈಸ್ಕೂಲ್‌ ವಿದ್ಯಾರ್ಥಿಗಳ ಅಭ್ಯಾಸಕ್ಕಾಗಿ ವ್ಯಾಯಾಮ ಶಾಲೆ ನಿರ್ಮಿಸಲಾಗಿತ್ತು. ಕಾಲೇಜುಗಳಿಗೆ ರಜೆ ಇದ್ದಿದ್ದರಿಂದ ಇಷ್ಟು ದಿನ ಜಿಮ್‌ ಮುಚ್ಚಲಾಗಿತ್ತು. ಮುಂದಿನ ವಾರದಿಂದ ಮತ್ತೆ ಶುರು ಮಾಡಲಾಗುವುದು. ಪ್ರತಿ ದಿನ 20ರಿಂದ 30 ವಿದ್ಯಾರ್ಥಿಗಳು ಇಲ್ಲಿ ಅಭ್ಯಾಸಕ್ಕೆ ಬರುತ್ತಾರೆ. ಎಸ್.ರಾಜಕುಮಾರ ಪ್ರಾಂಶುಪಾಲರು ಸರ್ಕಾರಿ ಜೂನಿಯರ್‌ ಕಾಲೇಜು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT