ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು: ಬಾಗಿಲು ಮುಚ್ಚಿದ ಹಾಪ್‌ಕಾಮ್ಸ್‌ ಮಳಿಗೆ

ನಗರದ ವಿವಿಧೆಡೆ ಮಳಿಗೆಗಳು ಬಂದ್‌
Published 14 ಅಕ್ಟೋಬರ್ 2023, 6:23 IST
Last Updated 14 ಅಕ್ಟೋಬರ್ 2023, 6:23 IST
ಅಕ್ಷರ ಗಾತ್ರ

–ಮೈಲಾರಿ ಲಿಂಗಪ್ಪ

ತುಮಕೂರು: ಮಧ್ಯವರ್ತಿಗಳ ಹಾವಳಿ ತಪ್ಪಿಸಿ, ರೈತರು ಬೆಳೆದ ಉತ್ಪನ್ನಗಳನ್ನು ನೇರವಾಗಿ ಗ್ರಾಹಕರಿಗೆ ತಲುಪಿಸುವ ಉದ್ದೇಶದಿಂದ ತೋಟಗಾರಿಕೆ ಇಲಾಖೆ ಆರಂಭಿಸಿದ್ದ ಹಾಪ್‌ಕಾಮ್ಸ್‌ ಮಳಿಗೆಗಳು ಹಳಿ ತಪ್ಪಿವೆ.

ತಾಜಾ ಹಣ್ಣು, ತರಕಾರಿ ಸುಲಭವಾಗಿ ಗ್ರಾಹಕರಿಗೆ ಕಡಿಮೆ ಬೆಲೆಗೆ ಸಿಗುವಂತೆ ಮಾಡಲು ಹಾಪ್‌ಕಾಮ್ಸ್‌ ಮಳಿಗೆಗಳನ್ನು ಆರಂಭಿಸಲಾಗಿತ್ತು. ನಗರದಲ್ಲಿ 10, ಶಿರಾ ಮತ್ತು ಮಧುಗಿರಿಯಲ್ಲಿ ತಲಾ 2 ಹಾಪ್‌ಕಾಮ್ಸ್‌ ಮಳಿಗೆ ತೆರೆಯಲಾಗಿತ್ತು. ನಗರದಲ್ಲಿರುವ 6 ಮಳಿಗೆಗಳು ಕಳೆದ ಹಲವು ದಿನಗಳಿಂದ ಮುಚ್ಚಿವೆ. ಜಿಲ್ಲಾಧಿಕಾರಿ ಕಚೇರಿ, ಉಪನೋಂದಣಾಧಿಕಾರಿ ಕಚೇರಿ, ಜಿಲ್ಲಾ ಆಸ್ಪತ್ರೆ ಮತ್ತು ಬನಶಂಕರಿ ಬಳಿ ಇರುವ ಮಳಿಗೆಗಳು ಮಾತ್ರ ಉಸಿರಾಡುತ್ತಿವೆ. ಉಳಿದಂತೆ ಇತರೆಡೆಗಳಲ್ಲಿ ತೆರೆದಿದ್ದ ಮಳಿಗೆಗಳನ್ನು ಮುಚ್ಚಲಾಗಿದೆ.

ತೋಟಗಾರಿಕೆ ಇಲಾಖೆ ಕಚೇರಿಯ ಪಕ್ಕದಲ್ಲಿಯೇ ಬಿ.ಎಚ್‌.ರಸ್ತೆಯಲ್ಲಿರುವ ಹಾಪ್‌ಕಾಮ್ಸ್‌ ಮಳಿಗೆ ಮುಚ್ಚಿ ಹಲವು ತಿಂಗಳು ಕಳೆದಿದೆ. ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸದಿರುವುದು ವಿಪರ್ಯಾಸವೇ ಸರಿ. ಸಮಸ್ಯೆ ಸರಿಪಡಿಸಿ, ವ್ಯಾಪಾರಕ್ಕೆ ಅನುವು ಮಾಡಿಕೊಟ್ಟಿದ್ದರೆ ತುಂಬಾ ಜನರಿಗೆ ಸಹಾಯಕವಾಗುತ್ತಿತ್ತು. ನಮಗೂ ಇದಕ್ಕೂ ಸಂಬಂಧವೇ ಇಲ್ಲವೆಂಬಂತೆ ಅಧಿಕಾರಿಗಳು, ಜನಪ್ರತಿನಿಧಿಗಳು ನಡೆದುಕೊಳ್ಳುತ್ತಿದ್ದಾರೆ.

ಹನುಮಂತಪುರದ ಕೊಲ್ಲಾಪುರದಮ್ಮ ದೇವಸ್ಥಾನದ ಹಿಂಬದಿ ಇದ್ದ ಮಳಿಗೆಯನ್ನು ಗುಬ್ಬಿಗೆ ಸ್ಥಳಾಂತರಿಸಲಾಗಿತ್ತು. ಗುಬ್ಬಿಯಲ್ಲಿ ಈ ಮಳಿಗೆಗೆ ಇನ್ನೂ ಚಾಲನೆ ಸಿಕ್ಕಿಲ್ಲ. ಗೋಕುಲ ಬಡಾವಣೆಯಲ್ಲಿರುವ ಹಾಪ್‌ಕಾಮ್ಸ್‌ ಮಳಿಗೆ ಅಮಾವಾಸ್ಯೆ, ಹುಣ್ಣಿಮೆಗೊಮ್ಮೆ ತೆರೆಯುತ್ತದೆ. ರೈತರು ಮತ್ತು ಸಾರ್ವಜನಿಕರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ತೆರೆದಿದ್ದ ಮಳಿಗೆಗಳು ಮೂಲ ಉದ್ದೇಶವನ್ನೇ ಮರೆತಿವೆ.

ಉಪನೋಂದಣಾಧಿಕಾರಿ ಕಚೇರಿ ಬಳಿಯ ಹಾಪ್‌ಕಾಮ್ಸ್‌ ಮಳಿಗೆ ಯಾವಾಗಲೂ ಜನರಿಂದ ತುಂಬಿರುತ್ತದೆ. ಇದನ್ನು ಹೊರೆತು ಪಡಿಸಿದರೆ ಉಳಿದ ಎಲ್ಲ ಕಡೆಗಳಲ್ಲಿ ಜನರು ಬರುತ್ತಿಲ್ಲ.

‘ಹಲವು ಕಡೆಗಳಲ್ಲಿ ರಸ್ತೆ ವಿಸ್ತರಣೆಯಾಗಿದ್ದು, ಮಳಿಗೆಗಳು ದಾರಿಯಲ್ಲಿ ಹೋಗುವವರಿಗೆ ಕಾಣುವುದಿಲ್ಲ. ಸರಿಯಾಗಿ ವ್ಯಾಪಾರವೂ ಆಗುವುದಿಲ್ಲ. ಹಾಗಾಗಿ ಅನಿವಾರ್ಯವಾಗಿ ಮುಚ್ಚಿದ್ದೇವೆ’ ಎಂಬುವುದು ಅಧಿಕಾರಿಗಳ ಸಮರ್ಥನೆ.

ಸರಿಯಾದ ರೀತಿಯಲ್ಲಿ ವ್ಯಾಪಾರ ವಹಿವಾಟು ಇದ್ದರೆ ಪ್ರತಿ ಮಳಿಗೆಯಲ್ಲಿ ಒಂದು ತಿಂಗಳಿಗೆ ಸುಮಾರು ₹60 ಸಾವಿರ ವಹಿವಾಟು ನಡೆಯುತ್ತದೆ. ಅಧಿಕಾರಿಗಳ ನಿರ್ಲಕ್ಷ್ಯ, ತಾತ್ಸಾರ ಭಾವನೆ, ಇಚ್ಛಾಶಕ್ತಿಯ ಕಾರಣದಿಂದ ಮಳಿಗೆಗಳು ಮುಚ್ಚಲ್ಪಟ್ಟಿವೆ. ಜವಾಬ್ದಾರಿಯಿಂದ ನುಣುಚಿಕೊಳ್ಳುವ ಕೆಲಸವನ್ನು ಅಧಿಕಾರಿಗಳು ತುಂಬಾ ಅಚ್ಚುಕಟ್ಟಾಗಿ ಮಾಡುತ್ತಿದ್ದಾರೆ ಎಂಬ ಮಾತುಗಳು ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ.

ತೋಟಗಾರಿಕೆ ಬೆಳೆ ಬೆಳೆಯುವ ರೈತರಿಗೆ ನೆರವಾಗುವುದು, ಗ್ರಾಹಕರಿಗೆ ಮಾರುಕಟ್ಟೆಗಿಂತ ಕಡಿಮೆ ಬೆಲೆಗೆ ತಾಜಾ ಹಣ್ಣು, ತರಕಾರಿಗಳು ಲಭ್ಯವಾಗುವಂತೆ ಮಾಡುವ ಉದ್ದೇಶದಿಂದ ಹಾಪ್‌ಕಾಮ್ಸ್ ಮಳಿಗೆಗಳನ್ನು ಆರಂಭಿಸಲಾಯಿತು. ಹಾಪ್‌ಕಾಮ್ಸ್ ಅಧಿಕಾರಿಗಳು ರೈತರಿಂದ ನೇರವಾಗಿ ಹಣ್ಣು, ತರಕಾರಿ ಖರೀದಿಸಿ, ಮಳಿಗೆಗಳಿಗೆ ಸರಬರಾಜು ಮಾಡುವ ವ್ಯವಸ್ಥೆ ಕಲ್ಪಿಸಲಾಗಿತ್ತು. ಈಗ ಈ ವ್ಯವಸ್ಥೆ ಇಲ್ಲವಾಗಿದ್ದು, ಹಾಪ್‌ಕಾಮ್ಸ್ ಮಳಿಗೆಯವರೇ ಮಾರುಕಟ್ಟೆಗೆ ಹೋಗಿ ಪದಾರ್ಥಗಳನ್ನು ಖರೀದಿಸಿ ತಂದು ಮಾರಾಟ ಮಾಡುತ್ತಿದ್ದಾರೆ. ಇದರಿಂದಾಗಿ ಇತರೆಡೆಗೆ ಹೋಲಿಸಿದರೆ ಬೆಲೆಯಲ್ಲಿ ಹೆಚ್ಚಿನ ವ್ಯತ್ಯಾಸ ಇರುವುದಿಲ್ಲ. ಗುಣಮಟ್ಟವೂ ಅಷ್ಟಕಷ್ಟೇ. ಹಾಗಾಗಿ ಜನರು ಹಾಪ್‌ಕಾಮ್ಸ್ ಮಳಿಗೆ ಕಡೆಗೆ ಬರುವುದು ಕಡಿಮೆಯಾಗಿದ್ದು, ವ್ಯಾಪಾರ ಇಲ್ಲದೆ ಒಂದೊಂದೇ ಮಳಿಗೆಯನ್ನು ಮುಚ್ಚಲಾಗುತ್ತಿದೆ.

‘ಪ್ರಮುಖವಾಗಿ ಆಸಕ್ತಿ ವಹಿಸಬೇಕಿದ್ದ ಜನಪ್ರತಿನಿಧಿಗಳು ಇತ್ತ ಗಮನ ಹರಿಸುತ್ತಿಲ್ಲ. ಕಮಿಷನ್ ಬರುವ ಕಾಮಗಾರಿಯಾದರೆ ಮುಂದೆ ನಿಂತು ಮಾಡಿಸುತ್ತಾರೆ. ಇದರಿಂದ ಯಾವುದೇ ಉಪಯೋಗವಿಲ್ಲ ಎಂದು ಜನಪ್ರತಿನಿಧಿಗಳು ಇತ್ತ ಗಮನ ಹರಿಸುತ್ತಿಲ್ಲ. ಇದನ್ನೇ ನೆಪ ಮಾಡಿಕೊಂಡ ಅಧಿಕಾರಿಗಳು ಸಂಪೂರ್ಣ ನಿರ್ಲಕ್ಷ್ಯಿಸಿ ಮಳಿಗೆ ಮುಚ್ಚುವಂತೆ ಮಾಡಿದ್ದಾರೆ’ ಎಂದು ಹಾಪ್‌ಕಾಮ್ಸ್ ಸಿಬ್ಬಂದಿಯೊಬ್ಬರು ಹೇಳುತ್ತಾರೆ.

ಗುಬ್ಬಿ ತಲುಪಿದ ಗೋದಾಮು

ರೈತರಿಂದ ಖರೀದಿಸಿದ ಉತ್ಪನ್ನಗಳನ್ನು ಸಂಗ್ರಹಿಸಿಡಲು ನಗರದಲ್ಲಿ ಜಾಗದ ಸಮಸ್ಯೆ ಎದುರಾಗಿದೆ. ಕೆಲ ವರ್ಷಗಳ ಕಾಲ ತೋಟಗಾರಿಕಾ ಇಲಾಖೆಯಲ್ಲಿ ಹಳೆಯ ವಾಹನಗಳನ್ನು ನಿಲ್ಲಿಸುತ್ತಿದ್ದ ಶೆಡ್‌ನಲ್ಲಿ ಉತ್ಪನ್ನಗಳನ್ನು ಸಂಗ್ರಹಿಸಲಾಗುತ್ತಿತ್ತು. ಈಗ ಗುಬ್ಬಿಯಲ್ಲಿ ಉತ್ಪನ್ನಗಳನ್ನು ಸಂಗ್ರಹಿಸಲು ಹೊಸ ಗೋದಾಮು ತೆರೆಯಲಾಗಿದೆ. ರೈತರು ಗುಬ್ಬಿಗೆ ತಾವು ಬೆಳೆದ ಉತ್ಪನ್ನಗಳನ್ನು ತೆಗೆದುಕೊಂಡು ಹೋಗಿ ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲ. ನಗರದ ಬಟವಾಡಿಯ ಎಪಿಎಂಸಿ ಯಾರ್ಡ್‌ ಅಂತರಸನಹಳ್ಳಿಯಲ್ಲಿ ಉತ್ಪನ್ನಗಳ ಸಂಗ್ರಹಕ್ಕೆ ಅವಕಾಶ ಕಲ್ಪಿಸಬೇಕು. ತೋಟಗಾರಿಕಾ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳಬೇಕು. ಈ ಎರಡರಲ್ಲಿ ಒಂದು ಕಡೆ ಜಾಗ ಸಿಕ್ಕರೆ ರೈತರಿಗೆ ಸಹಾಯವಾಗಲಿದೆ ಎಂದು ರೈತ ಶಂಕರಪ್ಪ ಒತ್ತಾಯಿಸಿದರು.

25 ಕಡೆಗಳಲ್ಲಿ ಪ್ರಾರಂಭ

ಜಿಲ್ಲೆಯಲ್ಲಿ ಹೊಸದಾಗಿ ಇನ್ನೂ 25 ಹಾಪ್‌ಕಾಮ್ಸ್‌ ಮಳಿಗೆ ತೆರೆಯಲು ಅನುಮತಿ ಕೋರಿ ಮಹಾನಗರ ಪಾಲಿಕೆ ಸೇರಿದಂತೆ ಸ್ಥಳೀಯ ಸಂಸ್ಥೆಗಳಿಗೆ ತೋಟಗಾರಿಕಾ ಇಲಾಖೆಯಿಂದ ಮನವಿ ಸಲ್ಲಿಸಲಾಗಿದೆ. ನಗರದಲ್ಲಿ ಮಳಿಗೆ ಪ್ರಾರಂಭಿಸಲು ಜಾಗದ ಸಮಸ್ಯೆ ಎದುರಾಗುತ್ತಿದೆ. ಅಧಿಕಾರಿಗಳು ಈಗಿರುವ ಮಳಿಗೆಗಳನ್ನು ಉಳಿಸಿ ಮುನ್ನಡೆಸಿಕೊಂಡು ಹೋಗಬೇಕಾದ ಅನಿವಾರ್ಯತೆ ಇದೆ.

ಕೆಲವು ಸಲ ರೈತರು ಉತ್ಪನ್ನಗಳನ್ನು ಹಾಪ್‌ಕಾಮ್ಸ್‌ ಮಳಿಗೆಗೆ ತರಲು ಆಸಕ್ತಿ ತೋರುವುದಿಲ್ಲ. ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇದ್ದರೆ ಅಲ್ಲಿಯೇ ಮಾರಾಟ ಮಾಡುತ್ತಾರೆ. ಬೇಡಿಕೆ ಇಲ್ಲದ ಸಮಯದಲ್ಲಿ ಮಳಿಗೆಗೆ ತರುತ್ತಾರೆ. ಇದರಿಂದ ಕೆಲವು ಕಡೆಗಳಲ್ಲಿ ಸಮಸ್ಯೆಯಾಗುತ್ತಿದೆ. ಎಲ್ಲ ಮಳಿಗೆಗಳನ್ನು ಯಾವುದೇ ತೊಂದರೆಯಾಗದಂತೆ ನಡೆಸಿಕೊಂಡು ಹೋಗಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
-ರಾಘವೇಂದ್ರ, ವ್ಯವಸ್ಥಾಪಕ ತೋಟಗಾರಿಕಾ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT