ಹಾಗಲವಾಡಿ: ಕೊಬ್ಬರಿ ಬೆಳೆಗಾರರು ತಾಳ್ಮೆಯಿಂದ ಕಾದರೆ ಕೊಬ್ಬರಿ ಬೆಲೆ ಕ್ವಿಂಟಲ್‌ಗೆ ₹18 ಸಾವಿರದಿಂದ ₹20 ಸಾವಿರಕ್ಕೆ ಹೆಚ್ಚಾಗಲಿದೆ ಎಂದು ರೈತ ಮುಖಂಡ ಅ.ನ.ಲಿಂಗಪ್ಪ ಹೇಳಿದರು.
ಸೋಮಲಾಪುರದ ರೈತ ಹಿತಾಸಕ್ತಿ ಸಮಿತಿಯಿಂದ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ತಿಪಟೂರು ಮಾರುಕಟ್ಟೆಯನ್ನು ಕೆಲವೇ ಕೆಲವು ಉತ್ತರ ಭಾರತದ ವರ್ತಕರು ತಮ್ಮ ಹಿಡಿತದಲ್ಲಿ ಇಟ್ಟುಕೊಂಡಿರುವುದರಿಂದ ಕೊಬ್ಬರಿ ಬೆಲೆ ಕುಸಿದಿದೆ. ಟೆಂಡರ್ ಪಾರದರ್ಶಕವಾಗಿಲ್ಲ. 2021-22ನೇ ಸಾಲಿನಲ್ಲಿ ತೆಂಗು ಬೆಲೆ ಹೆಚ್ಚು ಇರುವುದರಿಂದ ಕೊಬ್ಬರಿ ದರ ಇಳಿಕೆಯಾಗಿತ್ತು. ಹಂತ ಹಂತವಾಗಿ ತೆಂಗು ಬೆಲೆ ಕಡಿಮೆಯಾಗುತ್ತಿದ್ದು, ಮುಂದಿನ ದಿನಗಳಲ್ಲಿ ಕೊಬ್ಬರಿ ಬೆಲೆ ಹೆಚ್ಚಾಗುವ ಸಾಧ್ಯತೆಗಳಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕೇಂದ್ರ ಸಚಿವ ವಿ.ಸೋಮಣ್ಣ ಅವರು ಅದೇಶಿಸಿದಂತೆ 10.500 ಮೆಟ್ರಿಕ್ ಟನ್ ಕೊಬ್ಬರಿಯನ್ನು ನಫೆಡ್ ನಲ್ಲಿ ಬರುವ ತಿಂಗಳು ಖರೀದಿಸಲು ಪ್ರಾರಂಭಿಸುವುದರಿಂದ ಮಂಡಿ ವರ್ತಕರು ಕೇವಲ ಒಂದೇ ವಾರದಲ್ಲಿ ಕೊಬ್ಬರಿಗೆ ಎರಡು ಸಾವಿರ ಹೆಚ್ಚಿಸಿ ರೈತರಿಂದ ಕೊಬ್ಬರಿ ಕೊಳ್ಳಲು ಮುಂದಾಗಿದ್ದಾರೆ. ಮಾರುಕಟ್ಟೆ ತಜ್ಞರ ಪ್ರಕಾರ ಕೊಬ್ಬರಿ ಬೆಲೆ ಬೆಲೆ ₹20 ಸಾವಿರಕ್ಕಿಂತ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಿದರು.