ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಸಲ್ಮಾನರು ಅತಿಥಿಗಳಾಗೇ ಇರಲಿ: ಕಲ್ಲಡ್ಕ ಪ್ರಭಾಕರ್‌ ಭಟ್‌

ಪೌರತ್ವ(ತಿದ್ದುಪಡಿ) ಕಾಯ್ದೆ ಬೆಂಬಲಿಸಿ ತುಮಕೂರಿನಲ್ಲಿ ಜಾಗೃತಿ ಜಾಥಾ
Last Updated 7 ಜನವರಿ 2020, 13:01 IST
ಅಕ್ಷರ ಗಾತ್ರ

ತುಮಕೂರು: ‘ನಮ್ಮ ಹಿಂದೂ ದೇಶಕ್ಕೆ ಅತಿಥಿಗಳಾಗಿ ಬಂದ ಮುಸಲ್ಮಾನರು ಅತಿಥಿಗಳಾಗೆ ಇರಬೇಕು’ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ದಕ್ಷಿಣ ಭಾರತ ಕ್ಷೇತ್ರಿಯ ಕಾರ್ಯಕಾರಿಣಿ ಸಮಿತಿ ಸದಸ್ಯ ಕಲ್ಲಡ್ಕ ಪ್ರಭಾಕರ್‌ ಭಟ್‌ ಹೇಳಿದರು.

ರಾಷ್ಟ್ರೀಯ ನಾಗರಿಕ ವೇದಿಕೆಯ ತುಮಕೂರು ಜಿಲ್ಲಾ ಘಟಕದಿಂದ ಮಂಗಳವಾರ ಹಮ್ಮಿಕೊಂಡಿದ್ದ ‘ಪೌರತ್ವ(ತಿದ್ದುಪಡಿ) ಕಾಯ್ದೆ ಬೆಂಬಲಿಸಿ ಜಾಗೃತಿ ಜಾಥಾ’ದಲ್ಲಿ ಅವರು ಮಾತನಾಡಿದರು.

‘ಹೊರಗಿನಿಂದ ಬಂದವರಿಗೆ ಲಕ್ಷ–ಲಕ್ಷ ಮಸೀದಿಗಳನ್ನು ಕಟ್ಟಿಕೊಳ್ಳಲು ಜಾಗ ಕೊಟ್ಟವರು ಯಾರು. ಅವರೇನೂ ಮಸೀದಿಯ ಜಾಗವನ್ನು ಇರಾನ್‌–ಇರಾಕ್‌ನಿಂದ ಹೊತ್ತುಕೊಂಡು ಬಂದಿದ್ದರೆ’ ಎಂದು ಅವರು ಪ್ರಶ್ನಿಸಿದರು.

‘ಮುಸಲ್ಮಾನರು ಲವ್‌ ಜಿಹಾದ್‌ ಹೆಸರಿನಲ್ಲಿ ನಮ್ಮ ಹೆಣ್ಣು ಮಕ್ಕಳನ್ನು ಹೊತ್ತುಕೊಂಡು ಹೋಗುತ್ತಿದ್ದಾರೆ. ಭೂ ಜಿಹಾದ್‌ ಕೂಡ ಈಗ ಆರಂಭವಾಗಿದೆ’ ಎಂದರು.

‘ಕಾಂಗ್ರೆಸ್‌ ಅಕ್ರಮ ವಸಲಿಗರಿಗೆ ಗುರುತಿನ ಚೀಟಿ ನೀಡಿ, ಸರ್ಕಾರಿ ಸೌಲಭ್ಯಗಳನ್ನು ನೀಡಿ, ವೋಟ್‌ ಬ್ಯಾಂಕ್‌ ರಾಜಕೀಯ ಮಾಡುತ್ತಿತ್ತು. ಈ ಕಾಯ್ದೆಯಿಂದ ನೆರೆಯ ದೇಶಗಳಲ್ಲಿ ದೌರ್ಜನ್ಯಕ್ಕೆ ಒಳಗಾಗಿರುವ ನಮ್ಮ ಸಹೋದರ–ಸಹೋದರಿಯರಿಗೆ ದೇಶದಲ್ಲಿ ಆಶ್ರಯ ಸಿಗಲಿದೆ’ ಎಂದರು.

‘ಈ ಕಾಯ್ದೆ ವಿರುದ್ಧ ನಡೆಯುತ್ತಿರುವ ಚಿಲ್ಲರೆ ಗಲಾಟೆಗಳಿಗೆ ನಮ್ಮ ವೀರತ್ವದ ಮೋದಿ ಮತ್ತು ಅಮಿತ್‌ ಶಾ ನಾಯಕತ್ವ ಹೆದರುವುದಿಲ್ಲ. ಈ ಕಾಯ್ದೆಯೂ ಅನುಷ್ಠಾನಗೊಳ್ಳುತ್ತದೆ. ರಾಷ್ಟ್ರೀಯ ಪೌರತ್ವ ನೋಂದಣಿಯೂ(ಎನ್‌.ಆರ್‌.ಸಿ.) ಜಾರಿಯಾಗುತ್ತದೆ, ಕಾದುನೋಡಿ’ ಎಂದು ಹೇಳಿದರು.

ಜೆಎನ್‌ಯುನಲ್ಲಿ ವಿದ್ಯಾರ್ಥಿಗಳ ಮೇಲೆ ನಡೆದ ಹಲ್ಲೆ ಕುರಿತು ಸುದ್ದಿಗಾರರು ಕೇಳಿದಾಗ,‘ಬಹುತೇಕ ವಿಶ್ವವಿದ್ಯಾನಿಲಯಗಳಲ್ಲಿ ಈವರೆಗೂ ಕಮ್ಯುನಿಸ್ಟರೆ ತುಂಬಿಕೊಂಡಿದ್ದರು, ಅವರೇ ನುಗ್ಗುತ್ತಿದ್ದರು. ಈಗ ನಾವು ಬರುತ್ತಿದ್ದೇವೆ’ ಎಂದು ಪ್ರತಿಕ್ರಿಯಿಸಿದರು.

ತುಮಕೂರಿನ ಹಿರೇಮಠದ ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ‘ಜಿನೇ ದೋ(ಬದುಕಲಿ ಬಿಡು), ಜಾನೇ ದೋ(ಹೋಗಲಿ ಬಿಡು) ಎಂದು ಈವರೆಗೂ ಆಡಳಿತ ನಡೆಸಿದ ಸರ್ಕಾರಗಳು ಸುಮ್ಮನಿದ್ದವು.ಸಮಸ್ಯೆಗಳನ್ನು ಮಲಗಿಸಿದ್ದವು. ಈಗ ಕಾವಿ ಧರಿಸದ ಸನ್ಯಾಸಿಯಾದ ನರೇಂದ್ರ ಮೋದಿ ಅವರು ಬದಲಾವಣೆ ತರುತ್ತಿದ್ದಾರೆ. ಅದರ ವಿರುದ್ಧ ಪ್ರಾಯೋಜಿತ ದೊಂಬಿಗಳನ್ನು ನಡೆಯುತ್ತಿವೆ. ಈಗ ಕಟುವಾದ ನಿರ್ಧಾರ ತೆಗೆದುಕೊಳ್ಳಬೇಕಿದೆ’ ಎಂದರು ಹೇಳಿದರು.

***

ಮನೆಯಿಂದ ನಾವು ಕಸವನ್ನು ಹೊರಗೆ ಚೆಲ್ಲಿದಂತೆ, ನಮಗೆ ಸಾಥ್‌ ಕೊಡದವರನ್ನು ಸಹ ಹೊರಹಾಕಬೇಕು.

-ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ಹಿರೇಮಠ, ತುಮಕೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT