ಶುಕ್ರವಾರ, ಮೇ 14, 2021
27 °C
ನೂರಾರು ಪ್ರಕರಣ ದಾಖಲು; ಎಚ್ಚರಿಕೆಗೂ ಬಗ್ಗದ ಜನತೆ

ದಂಡ ವಸೂಲಿ ಜೋರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ಕೋವಿಡ್–19 ನಿಯಮ ಉಲ್ಲಂಘಿಸುವುದು, ಮಾಸ್ಕ್ ಧರಿಸದಿರುವುದು, ವ್ಯಕ್ತಿಗತ ಅಂತರ ಕಾಯ್ದುಕೊಳ್ಳದಿರುವುದು ಹೆಚ್ಚುತ್ತಿದ್ದು, ಅಂತಹವರಿಗೆ ದಂಡ ವಿಧಿಸಲಾಗುತ್ತಿದೆ.

ಕಳೆದ ಎರಡು ದಿನಗಳಿಂದ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಂಶಿಕೃಷ್ಣ ನೇತೃತ್ವದಲ್ಲಿ ನಗರದಲ್ಲಿ ದಾಳಿ ನಡೆಸಿ ತಪಾಸಣೆ ಮಾಡಲಾಯಿತು. ಅಂತರ ಕಾಪಾಡದ ವಾಣಿಜ್ಯ ಮಳಿಗೆಗಳಿಗೂ ದಂಡ ಹಾಕಲಾಯಿತು. ಮಾಸ್ಕ್ ಧರಿಸದವರಿಗೆ ಎಚ್ಚರಿಕೆ ನೀಡಿ, ದಂಡ ವಸೂಲಿ ಮಾಡಲಾಯಿತು. ಕೆಲವರಿಗೆ ಎಚ್ಚರಿಕೆ ನೀಡಲಾಯಿತು. ದಂಡ ವಸೂಲಿಯ ಜತೆಗೆ ಮಾಸ್ಕ್‌ಗಳನ್ನು ನೀಡಲಾಯಿತು.

ಪೊಲೀಸ್, ಮಹಾನಗರ ಪಾಲಿಕೆ, ಕಂದಾಯ ಇಲಾಖೆ ಅಧಿಕಾರಿಗಳು ಮೊದಲಿಗೆ ಜಂಟಿ ಕಾರ್ಯಾಚರಣೆ ನಡೆಸಿದರು. ನಂತರ ಪ್ರತ್ಯೇಕವಾಗಿ ಈ ದಾಳಿ ಮುಂದುವರೆಯಿತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ತುಮಕೂರು ಉಪವಿಭಾಗದ ಪೊಲೀಸ್ ಅಧಿಕಾರಿಗಳು ತಂಡ ರಚಿಸಿಕೊಂಡು ತಪಾಸಣೆ ನಡೆಸಿದರು. ಸೋಮವಾರ ಕಾರ್ಯಾಚರಣೆಗೆ ಇಳಿದ ಪೊಲೀಸರು ಮಾಸ್ಕ್ ಧರಿಸದ 171 ಪ್ರಕರಣಗಳನ್ನು ದಾಖಲಿಸಿ, ₹28,250 ದಂಡ ವಸೂಲಿ ಮಾಡಿದರು. ಅಂತರ ಕಾಯ್ದುಕೊಳ್ಳದ ವಾಣಿಜ್ಯ ಮಳಿಗೆಗಳು, ಹೋಟೆಲ್, ಬಾರ್– ರೆಸ್ಟೋರೆಂಟ್‍ಗಳು, ಬಸ್ ಒಳಗೆ ಅಂತರ ಕಾಪಾದ ಬಸ್‌ಗಳ ವಿರುದ್ಧ ಪ್ರಕರಣ ದಾಖಲಿಸಿ ಒಟ್ಟು ₹1.25 ಲಕ್ಷ ದಂಡ ವಿಧಿಸಿದ್ದಾರೆ.

ನಿಯಮ ಮೀರಿ ಶೇ 50ಕ್ಕಿಂತ ಹೆಚ್ಚು ಪ್ರಯಾಣಿಕರನ್ನು ಹತ್ತಿಸಿಕೊಂಡಿದ್ದ 7 ಬಸ್‍ಗಳಿಗೆ ₹ 35 ಸಾವಿರ ದಂಡ ಹಾಕಲಾಗಿದೆ. ಅಂತರ ಕಾಯ್ದುಕೊಳ್ಳದೆ ವಾಣಿಜ್ಯ ವ್ಯವಹಾರ ನಡೆಸುತ್ತಿದ್ದ 1 ಸೀರೆ ಅಂಗಡಿ, 1 ಹೋಟೆಲ್, 2 ಕಲ್ಯಾಣ ಮಂಟಪ, 1 ಚಿನ್ನದ ಮಾರಾಟ ಮಳಿಗೆ, 2 ಬೇಕರಿ, 2 ಮೊಬೈಲ್ ಅಂಗಡಿ, 3 ಬಟ್ಟೆ ಅಂಗಡಿ, 1 ಎಲೆಕ್ಟ್ರಿಕಲ್ ಅಂಗಡಿ, 2 ಬಾರ್ ಅಂಡ್ ರೆಸ್ಟೋರೆಂಟ್‍ಗಳ ವಿರುದ್ಧ 23 ಪ್ರಕರಣ ದಾಖಲಿಸಿ ₹ 90 ಸಾವಿರ ದಂಡ ವಸೂಲಿ ಮಾಡಲಾಗಿದೆ.

ಪಾಲಿಕೆಯಿಂದಲೂ ದಂಡ: ಮಹಾನಗರ ಪಾಲಿಕೆಯು ತಪಾಸಣೆಗಾಗಿ ಸಂಚಾರಿ ಜಾಗೃತ ದಳ ರಚಿಸಿದೆ. ಜತೆಗೆ ಕಳೆದ ಎರಡು ದಿನಗಳಿಂದ ವಿಶೇಷವಾಗಿ ತಪಾಸಣೆ ಮಾಡಲಾಗುತ್ತಿದೆ. ಕೋವಿಡ್–19 ನಿಯಮ ಮೀರಿದವರಿಂದ ದಂಡ ವಸೂಲಿ ಮಾಡಲಾಗುತ್ತಿದೆ.

ಭಾನುವಾರ ₹32 ಸಾವಿರ, ಸೋಮವಾರ ₹51 ಸಾವಿರ ದಂಡ ವಸೂಲಿ ಮಾಡಲಾಗಿದೆ. ಮಾಸ್ಕ್ ಧರಿಸದಿರುವುದು, ವಾಣಿಜ್ಯ ಮಳಿಗೆಗಳಲ್ಲಿ ಅಂತರ ಕಾಯ್ದುಕೊಳ್ಳದಿರುವುದು ಮೊದಲಾದ ಪ್ರಕರಣಗಳಲ್ಲಿ ಪಾಲಿಕೆ ಸಿಬ್ಬಂದಿ ದಂಡ ಹಾಕಿ ಎಚ್ಚರಿಕೆ ನೀಡಿದ್ದಾರೆ.

ಕೋವಿಡ್–19 ನಿಯಂತ್ರಿಸಲು ಕಾರ್ಯಾಚರಣೆಯನ್ನು ಮತ್ತಷ್ಟು ಚುರುಕುಗೊಳಿಸಲು ಜಿಲ್ಲಾ ಆಡಳಿತ ನಿರ್ಧರಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು