ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈತ್ರಿ ಸರ್ಕಾರ ಬಿದ್ದರೆ ಮತ್ತೆ ಅಧ್ಯಕ್ಷ: ಕೆ.ಎನ್.ರಾಜಣ್ಣ

ಡಿಸಿಸಿ ಬ್ಯಾಂಕ್ ಸೂಪರ್ ಸೀಡ್–ದೇವೇಗೌಡರ ಸೋಲಿಗೆ ಪ್ರತೀಕಾರದ ಆರೋಪ
Last Updated 21 ಜುಲೈ 2019, 15:43 IST
ಅಕ್ಷರ ಗಾತ್ರ

ತುಮಕೂರು: ‘ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ಸೋತಿದ್ದರಿಂದ ಅವರ ಕುಟುಂಬ ನನ್ನ ವಿರುದ್ಧ ರಾಜಕೀಯ ಹಗೆತನ ಸಾಧಿಸುತ್ತಿದೆ. ಈ ಕಾರಣಕ್ಕೆ ರಾಜ್ಯ ಸರ್ಕಾರವು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ (ಡಿಸಿಸಿ) ಅನ್ನು ಸೂಪರ್ ಸೀಡ್ ಮಾಡಿದೆ’ ಎಂದು ಮಾಜಿ ಶಾಸಕ ಕೆ.ಎನ್.ರಾಜಣ್ಣ ಆರೋಪಿಸಿದರು.

ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಇಂತಹ ರಾಜಕೀಯ ಕ್ರಮಗಳನ್ನು ರಾಜಕೀಯವಾಗಿಯೇ ಎದುರಿಸುತ್ತೇನೆ. ಬ್ಯಾಂಕಿನಲ್ಲಿ ನಾನು ಅವ್ಯವಹಾರ ಮಾಡಿಲ್ಲ. ರೈತರಿಗೆ, ಬಡವರಿಗೆ, ಸ್ವಸಹಾಯ ಸಂಘಗಳು, ವ್ಯವಸಾಯ ಸೇವಾ ಸಹಕಾರ ಸಂಸ್ಥೆಗಳಿಗೆ ಸಹಾಯ ಮಾಡಲು ಸ್ವಲ್ಪ ನಿಯಮ ಮೀರಿರಬಹುದು. ಅದನ್ನು ಬಿಟ್ಟರೆ ಬೇರೇನಿಲ್ಲ’ ಎಂದು ಹೇಳಿದರು.

‘2003ರಲ್ಲಿ ನಾನು ಮೊದಲ ಬಾರಿ ಬ್ಯಾಂಕ್ ಅಧ್ಯಕ್ಷನಾದಾಗ ₹ 3 ಕೋಟಿ ಠೇವಣಿ ಇತ್ತು. ಅಂದಿನಿಂದ ಇಲ್ಲಿಯವರೆಗೂ ಅಧ್ಯಕ್ಷನಾಗಿ ಬ್ಯಾಂಕ್ ಅಭಿವೃದ್ಧಿಗೊಳಿಸಿದ್ದೇನೆ. ಈಗ ₹ 1 ಸಾವಿರ ಕೋಟಿ ಠೇವಣಿ ಇದೆ’ ಎಂದರು.

‘ಬ್ಯಾಂಕಿಂಗ್ ನಿಯಮಾವಳಿ ಪ್ರಕಾರ ಡಿಸಿಸಿ ಬ್ಯಾಂಕ್ ಸೂಪರ್ ಸೀಡ್ ಮಾಡಲು ಅವಕಾಶ ಇಲ್ಲ. ನನಗಾಗಲಿ, ನಿರ್ದೇಶಕರಿಗಾಗಲಿ ಯಾವುದೇ ನೋಟಿಸ್ ನೀಡಿಲ್ಲ. ಬಡಪಾಯಿ ಅಧಿಕಾರಿಗಳಿಂದ ಆದೇಶ ಮಾಡಿಸಿದ್ದಾರೆ’ ಎಂದು ಸರ್ಕಾರದ ವಿರುದ್ಧ ಹರಿಹಾಯ್ದರು.

‘ಜಿಲ್ಲಾಧಿಕಾರಿಗೆ ಎಲ್ಲ ರೀತಿಯ ಸಹಕಾರ ನೀಡಲು ಬ್ಯಾಂಕಿನ ನೌಕರರಿಗೆ ಹೇಳಿದ್ದೇನೆ. ಸೋಮವಾರ (ಜು.22) ರಾಜ್ಯ ಸರ್ಕಾರ ಬಿದ್ದು ಹೋದರೆ ಗುರುವಾರ (ಜು.25) ಮತ್ತೊಂದು ಆದೇಶ ತಂದು ನಾನೇ ಅಧ್ಯಕ್ಷನಾಗುತ್ತೇನೆ’ ಎಂದರು.

ಅಕ್ರಮ ಬಯಲು: ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಕೆಎಂಎಫ್ ಅಧ್ಯಕ್ಷನಾಗಿದ್ದಾಗ ನೇಮಕಾತಿಯಲ್ಲಿ ಅಕ್ರಮ ಮಾಡಿದ್ದಾನೆ ಎಂದು ಏಕವಚನದಲ್ಲಿ ಹರಿಹಾಯ್ದರು.

ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ನೆಲಮಂಗಲ ಸಮೀಪದ ಬೇಗೂರಿನಲ್ಲಿ ಆಸ್ಪತ್ರೆ ನಿರ್ಮಾಣದ ಉದ್ದೇಶದಿಂದ ಸರ್ಕಾರದಿಂದ ಜಮೀನು ಪಡೆದು ಹೋಟೆಲ್, ವಾಣಿಜ್ಯ ಸಂಕೀರ್ಣ ನಿರ್ಮಿಸಿದ್ದಾರೆ. ತುಮಕೂರಿನ ಹೆಗ್ಗೆರೆಯ ಸಿದ್ಧಾರ್ಥ ಮೆಡಿಕಲ್ ಕಾಲೇಜು, ಮರಳೂರು ಸಮೀಪ ವರ್ತುಲ ರಸ್ತೆ ಒತ್ತುವರಿ ಮಾಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.

‘ಪರಮೇಶ್ವರ ಮತ್ತೆ ಕೊರಟಗೆರೆ ಕ್ಷೇತ್ರದಲ್ಲಿ ಕಣಕ್ಕಿಳಿದು ಗೆಲ್ಲಲಿ ನೋಡೋಣ’ ಎಂದು ಸವಾಲು ಹಾಕಿದರು.

‘ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದಿಲ್ಲ. ನನಗೀಗ 69 ವರ್ಷ. ಜನರ ಕೆಲಸಗಳನ್ನು ಓಡಾಡಿ ಮಾಡುವ ಶಕ್ತಿ ಕಡಿಮೆ ಆಗುತ್ತಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT