ಸೋಮವಾರ, ಡಿಸೆಂಬರ್ 5, 2022
24 °C

ಪರೀಕ್ಷೆಗೆ ವಿದ್ಯಾರ್ಥಿಗಳು ಗೈರು ಹಾಜರಾದರೆ ಮುಖ್ಯ ಶಿಕ್ಷಕರೇ ಹೊಣೆ: ಮಾಧುಸ್ವಾಮಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ವಿದ್ಯಾರ್ಥಿಗಳು ಗೈರು ಹಾಜರಾದರೆ ಮುಖ್ಯ ಶಿಕ್ಷಕರನ್ನೇ ಹೊಣೆಗಾರರನ್ನಾಗಿ ಮಾಡಲಾಗುತ್ತದೆ. ಹಾಗಾಗಿ ಮಕ್ಕಳನ್ನು ಪರೀಕ್ಷಾ ಕೇಂದ್ರಕ್ಕೆ ಕರೆ ತರುವ ಜವಾಬ್ದಾರಿ ಈಗ ಮುಖ್ಯ ಶಿಕ್ಷಕರು, ಶಿಕ್ಷಕರ ಹೆಗಲಿಗೇರಿದೆ.

ಎಸ್ಸೆಸ್ಸೆಲ್ಸಿ ಪರೀಕ್ಷೆ ಪೂರ್ವಸಿದ್ಧತೆ ಬಗ್ಗೆ ಬುಧವಾರ ನಡೆದ ಪ್ರೌಢಶಾಲೆ ಮುಖ್ಯೋಪಾಧ್ಯಾಯರ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಈ ಸೂಚನೆ ನೀಡಿದ್ದಾರೆ.

ಗೈರು ಹಾಜರಾಗಲು ಸಕಾರಣ ಇದ್ದರೆ ಅಂತಹ ಮಕ್ಕಳ ಪಟ್ಟಿಯನ್ನು ಡಿಡಿಪಿಐ ಅಥವಾ ಬಿಇಒಗಳಿಗೆ ನೀಡಬೇಕು. ಇಂತಹ ಮಕ್ಕಳು, ಪೋಷಕರಿಗೆ ಮನವರಿಕೆ ಮಾಡಿ ಪರೀಕ್ಷೆ ಬರೆಯಲು ಕರೆತರಬೇಕು. ಯಾರೊಬ್ಬರೂ ಗೈರು ಹಾಜರಾಗದಂತೆ ವ್ಯವಸ್ಥೆ ಮಾಡಬೇಕು. ಹೊಸ ಪರೀಕ್ಷಾ ವಿಧಾನದ ಬಗ್ಗೆ ಅರ್ಥ ಮಾಡಿಸಿ, ಭಯವಿಲ್ಲದೆ ಪರೀಕ್ಷೆ ಬರೆಯುವಂತೆ ಮಾರ್ಗದರ್ಶನ ನೀಡಬೇಕು ಎಂದು ನಿರ್ದೇಶನ ನೀಡಿದರು.

ಎಲ್ಲಾ ವಿದ್ಯಾರ್ಥಿಗಳು ಬೆಳಿಗ್ಗೆ 8 ಗಂಟೆಯೊಳಗೆ ಪರೀಕ್ಷಾ ಕೇಂದ್ರಕ್ಕೆ ಹಾಜರಾಗುವಂತೆ ನೋಡಿಕೊಳ್ಳಬೇಕು. ನಿಗದಿತ ಸಮಯಕ್ಕೆ ಸರಿಯಾಗಿ ಕರೆದೊಯ್ಯಲು ಸಾರಿಗೆ ವ್ಯವಸ್ಥೆ ಕಲ್ಪಿಸಬೇಕು. ತಡವಾಗಿ ಆಗಮಿಸಿದರೆ ಅವಕಾಶ ಕಲ್ಪಿಸಬೇಕು. ಯಾರನ್ನೂ ಪರೀಕ್ಷೆಯಿಂದ ವಂಚಿತರನ್ನಾಗಿ ಮಾಡಬಾರದು. ಸುರಕ್ಷತಾ ವಾತಾವರಣ ನಿರ್ಮಿಸಬೇಕು. ಕೊರೊನಾ ಸೋಂಕು ಅಥವಾ ಲಕ್ಷಣಗಳಿದ್ದರೆ ಪ್ರತ್ಯೇಕವಾಗಿ ಪರೀಕ್ಷೆ ಬರೆಯುವ ವ್ಯವಸ್ಥೆ ಮಾಡಬೇಕು. ಲಕ್ಷಣ ಕಂಡು ಬಂದರೆ ಪರೀಕ್ಷೆಗೆ ಒಳಪಡಿಸಬೇಕು ಎಂದು ಹೇಳಿದರು.

ಅಗತ್ಯವಿರುವ ವಿದ್ಯಾರ್ಥಿಗಳಿಗೆ ಸಮೀಪದ ಹಾಸ್ಟೆಲ್‍ನಲ್ಲಿ ಉಪಾಹಾರ ತಯಾರಿಸಿ ನೀಡಬೇಕು. ಯಾವುದೇ ಕಾರಣಕ್ಕೂ ಹೊರಗಡೆಯಿಂದ ಉಪಾಹಾರ ತರಬಾರದು. ಕುಡಿಯಲು ಕಡ್ಡಾಯವಾಗಿ ಬಿಸಿ ನೀರು ಕೊಡಬೇಕು. ಪರೀಕ್ಷೆಯ ಹಿಂದಿನ ದಿನ ಸ್ಯಾನಿಟೈಸ್ ಮಾಡಬೇಕು. ಶೌಚಾಲಯಗಳನ್ನು ಸ್ವಚ್ಛಗೊಳಿಸಿ ಬಳಕೆಗೆ ಯೋಗ್ಯವಾಗಿರುವಂತೆ ನೋಡಿಕೊಳ್ಳಬೇಕು. ಸರ್ಕಾರವೇ ಮಾಸ್ಕ್ ನೀಡುತ್ತಿದ್ದು, ದಾನಿಗಳಿಂದ ನೆರವು ಪಡೆಯುವ ಅವಶ್ಯಕತೆಯಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.

ಪ್ರತಿ ಪರೀಕ್ಷಾ ಕೇಂದ್ರಕ್ಕೂ ಇಬ್ಬರು ಆರೋಗ್ಯ ಕಾರ್ಯಕರ್ತರನ್ನು ನೇಮಿಸಬೇಕು. ಮಕ್ಕಳನ್ನು ಥರ್ಮಲ್ ಸ್ಕ್ಯಾನಿಂಗ್, ಆಕ್ಸಿಮೀಟರ್‌ನಿಂದ ತಪಾಸಣೆ ಮಾಡಬೇಕು. ತುರ್ತು ಸೇವೆಗಾಗಿ ಆಂಬುಲೆನ್ಸ್ ಸಿದ್ಧವಾಗಿಟ್ಟುಕೊಳ್ಳಬೇಕು ಎಂದರು.

ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ, ‘ಪರೀಕ್ಷಾ ಕೇಂದ್ರಗಳ 200 ಮೀಟರ್ ವ್ಯಾಪ್ತಿಯಲ್ಲಿ ಸೆಕ್ಷನ್ 144ರ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗುವುದು. ಪ್ರತಿ ಪರೀಕ್ಷಾ ಕೇಂದ್ರಕ್ಕೆ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದ್ದು, ಯಾವುದೇ ಸಮಸ್ಯೆ ಇದ್ದರೆ ಅವರನ್ನು ಸಂಪರ್ಕಿಸಬೇಕು’ ಎಂದು ತಿಳಿಸಿದರು.

ಶಾಸಕ ಜಿ.ಬಿ.ಜ್ಯೋತಿಗಣೇಶ್ ಸಲಹೆ ನೀಡಿದರು. ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಸಿ.ನಂಜಯ್ಯ, ತುಮಕೂರು ಕ್ಷೇತ್ರ ಶಿಕ್ಷಣಾಧಿಕಾರಿ ಹನುಮನಾಯಕ, ಮಂಜುನಾಥ್ ಇತರರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು