ಅಕ್ರಮ ಗಣಿಗಾರಿಕೆ: ಜಂಟಿ ಸರ್ವೆಗೆ ಆದೇಶ

ಶುಕ್ರವಾರ, ಜೂಲೈ 19, 2019
23 °C
ಪ್ರಗತಿ ಪರಿಶೀಲನಾ ಸಭೆಯಲ್ಲಿ ಗಣಿ ಮತ್ತು ಭೂ ವಿಜ್ಞಾನ ಸಚಿವ ರಾಜಶೇಖರ್ ಪಾಟೀಲ್

ಅಕ್ರಮ ಗಣಿಗಾರಿಕೆ: ಜಂಟಿ ಸರ್ವೆಗೆ ಆದೇಶ

Published:
Updated:
Prajavani

ತುಮಕೂರು: ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆಗೆ ಹಾಗೂ ಮರಳು ದಂಧೆಗೆ ಸಂಬಂಧಿಸಿದಂತೆ ಸಾರ್ವಜನಿಕ ಹಾಗೂ ಜನಪ್ರತಿನಿಧಿಗಳಿಂದ ಹಲವಾರು ದೂರುಗಳು ಬರುತ್ತಿವೆ. ಕಂದಾಯ, ಅರಣ್ಯ ಇಲಾಖೆಗಳಿಗೆ ಸೇರಿದ ಭೂ ಪ್ರದೇಶದ ಬಗ್ಗೆ ಕೂಡಲೇ ಜಂಟಿ ಸರ್ವೆ ಮಾಡಿ ವರದಿ ಕೊಡಬೇಕು ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ರಾಜಶೇಖರ್ ಪಾಟೀಲ್ ಆದೇಶಿಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ‘ಕೇವಲ ಕಾಟಾಚಾರಕ್ಕೆ ತಿಂಗಳಲ್ಲಿ ಒಂದೆರೆಡು ಪ್ರಕರಣ ದಾಖಲಿಸಿ ಕೈಕಟ್ಟಿ ಕೂಡಬಾರದು. ನಿರ್ದಾಕ್ಷಿಣ್ಯವಾಗಿ ಕ್ರಮಗಳನ್ನು ಜರುಗಿಸಬೇಕು ಎಂದು ಸೂಚಿಸಿದರು.

‘ಅಕ್ರಮ ಗಣಿಗಾರಿಕೆ, ಪರವಾನಗಿ ಪಡೆದಿರುವುದಕ್ಕಿಂತ ಹೆಚ್ಚಿನ ಪ್ರದೇಶದಲ್ಲಿ ಕ್ರಷರ್ ಚಟುವಟಿಕೆ, ನಿಗದಿಪಡಿಸಿದ್ದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಸಾಗಿಸುವ ವಾಹನಗಳ ಮೇಲೆ (ಓವರ್ ಲೋಡ್‌) ಕಣ್ಣಿಟ್ಟು ಕ್ರಮ ಜರುಗಿಸಬೇಕು. ಕ್ರಷರ್‌ ಚಟುವಟಿಕೆಗಳಿಂದ ಸುತ್ತಮುತ್ತಲಿನ ಪ್ರದೇಶದ ನಿವಾಸಿಗಳ ಮನೆ, ಅವರ ಆರೋಗ್ಯದ ಮೇಲೆ ದುಷ್ಪರಿಣಾಮ ಆಗುತ್ತಿರುವುದು, ಪರಿಸರಕ್ಕೆ ಧಕ್ಕೆಯಾಗುತ್ತಿರುವ ಬಗ್ಗೆ ದೂರುಗಳಿವೆ. ಈ ಕುರಿತು ಕಟ್ಟಿನ ಕ್ರಮ ಕೈಗೊಳ್ಳಬೇಕು. ಚೆಕ್‌ ಪೋಸ್ಟ್ ಹಾಕಿ ಓವರ್ ಲೋಡ್‌ ಮಾಡುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು’ ಎಂದು ಹೇಳಿದರು.

ಪರವಾನಗಿ ಇಲ್ಲದೆ ಅನಧಿಕೃತವಾಗಿ ನಡೆಸುವ ಕ್ರಷರ್‌ಗಳ ವಿರುದ್ಧ, ಗುತ್ತಿಗೆ ಪಡೆದ ಕ್ವಾರಿಗಳು ಸ್ಥಳಾಂತರಗೊಂಡಿದ್ದಲ್ಲಿ ಕಾನೂನು ಪ್ರಕಾರ ಕ್ರಮಗಳನ್ನು ಜರುಗಿಸಬೇಕು. ವಾಹನಗಳಲ್ಲಿ ಜಲ್ಲಿ, ಮರಳು, ಅಲಂಕಾರಿಕ ಶಿಲೆ ಮತ್ತಿತರ ಖನಿಜ ಹಾಗೂ ಗಣಿಗಾರಿಕೆ ಸರಕುಗಳನ್ನು ನಿಗದಿತ ಭಾರಕ್ಕಿಂತ ಅತಿಯಾಗಿ ಹೇರಿಕೊಂಡು ಸಾಗಿಸುವಂತಿಲ್ಲ ಎಂದು ಹೇಳಿದರು.

‘ಗಣಿಬಾಧಿತ ಪ್ರದೇಶಗಳಿಗೆ ಸರ್ಕಾರ ಮೀಸಲಿಟ್ಟಿರುವ ಜಿಲ್ಲಾ ಗಣಿಗಾರಿಕೆ ನಿಧಿ (ಡಿಎಂಎಫ್) ಅನುದಾನವನ್ನು ಖರ್ಚು ಮಾಡಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಶಾಸಕ ಗೌರಿಶಂಕರ್ ಮಾತನಾಡಿ, ‘ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ, ಮರಳು ದಂಧೆ ಬಗ್ಗೆ ಅಧಿಕಾರಿಗಳಿಗೆ ಮಾಹಿತಿಯೇ ಇಲ್ಲ. ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ದೂರವಾಣಿ ಕರೆಗೆ ಸ್ಪಂದಿಸದೆ ಬೇಜವಾಬ್ದಾರಿ ತೋರುತ್ತಿದ್ದಾರೆ. ಎಷ್ಟು ಬಾರಿ ದೂರು ನೀಡಿದರೂ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ’ ಎಂದು ಆರೋಪಿಸಿದರು.

ಆಗ ಸಚಿವರು ಮಾತನಾಡಿ, ‘ಸಾರ್ವಜನಿಕರಿಂದ ಹಾಗೂ ಜನಪ್ರತಿನಿಧಿಗಳಿಂದ ಬರುವ ದೂರಿನ ಕರೆಗಳಿಗೆ ಕೂಡಲೇ ಸ್ಪಂದಿಸಬೇಕು ಎಂದು ಈಗಾಗಲೇ ರಾಜ್ಯ ಮಟ್ಟದ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಆದರೂ ಸುಧಾರಣೆ ಕಾಣದಿರುವುದು ಬೇಸರ ತಂದಿದೆ ಎಂದರು.

ಜಿಲ್ಲಾಧಿಕಾರಿ ಡಾ.ಕೆ ರಾಕೇಶ್‌ಕುಮಾರ್ ಮಾತನಾಡಿ, ‘ಇನ್ನೊಂದು ವಾರದೊಳಗಾಗಿ ಕಂದಾಯ ಹಾಗೂ ಅರಣ್ಯ ಇಲಾಖೆ ವ್ಯಾಪ್ತಿಯ ಪ್ರದೇಶವನ್ನು ಸರ್ವೆ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು’ ಎಂದು ಹೇಳಿದರು.

ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಉಪನಿರ್ದೇಶಕಿ ಪಂಕಜಾ ಮಾತನಾಡಿ, ‘ಜಿಲ್ಲೆಯಲ್ಲಿ ಒಟ್ಟು 64 ಕ್ರಷರ್‌ಗಳಿದ್ದು, ಎಲ್ಲಾ ಕ್ರಷರ್‌ಗಳು ಪರವಾನಗಿ ಪಡೆದು ಅಧಿಕೃತವಾಗಿ ಕಾರ್ಯನಿರ್ವಹಿಸುತ್ತಿವೆ. ಮರಳಿಗೆ ಬೇಡಿಕೆಯಿದ್ದರೂ ಇದಕ್ಕೆ ಪರ್ಯಾಯವಾಗಿರುವ ಎಂ-ಸ್ಯಾಂಡ್ ಬಳಕೆ ಹೆಚ್ಚಾಗಿರುವುದರಿಂದ ಯಾವುದೇ ತೊಂದರೆ ಆಗುತ್ತಿಲ್ಲ’ ಎಂದು ಸಭೆಗೆ ಮಾಹಿತಿ ನೀಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ವಂಶಿಕೃಷ್ಣ, ಉಪವಿಭಾಗಾಧಿಕಾರಿ ಶಿವಕುಮಾರ್ ಹಾಗೂ ಪೂವಿತಾ, ಭೂವಿಜ್ಞಾನಿ ರೂಪಾ, ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಎಂಜಿನಿಯರ್ ವಿನಯ್‌ಕುಮಾರ್, ಅರಣ್ಯ ಇಲಾಖೆಯ ಗಿರೀಶ್ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !