ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಾವಾಗಿ ಕಳುಹಿಸುತ್ತಿಲ್ಲ, ಅವರಾಗಿ ಹೋಗುತ್ತಿದ್ದಾರೆ’

ಜೆಡಿಎಸ್ ಕಾರ್ಯಕರ್ತರ ಸಮಾವೇಶದಲ್ಲಿ ಎಚ್.ಡಿ. ಕುಮಾರಸ್ವಾಮಿ ಸ್ಪಷ್ಟನೆ
Last Updated 26 ಅಕ್ಟೋಬರ್ 2021, 4:47 IST
ಅಕ್ಷರ ಗಾತ್ರ

ತುಮಕೂರು: ‘ನಾವಾಗಿ ಅವರನ್ನು ಪಕ್ಷದಿಂದ ಹೊರಗೆ ಕಳುಹಿಸುತ್ತಿಲ್ಲ. ಅವರೇ ಹೊರಗೆ ಹೋಗುತ್ತಿದ್ದಾರೆ. ಪಕ್ಷದ ವರ್ಚಸ್ಸು ಕಡಿಮೆಯಾಗಿದ್ದು, ಈಗ ಉಪಯೋಗ ಇಲ್ಲವಂತೆ’ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರು ಶಾಸಕ ಎಸ್‌.ಆರ್. ಶ್ರೀನಿವಾಸ್ ಅವರನ್ನು ಮಾತಿನಲ್ಲೇ ಚುಚ್ಚಿದರು.

ಗುಬ್ಬಿಯಲ್ಲಿ ಶನಿವಾರ ನಡೆದ ಬಿ.ಎಸ್. ನಾಗರಾಜ್, ಇತರ ಮುಖಂಡರ ಪಕ್ಷ ಸೇರ್ಪಡೆ ಹಾಗೂ ಜೆಡಿಎಸ್ ಕಾರ್ಯಕರ್ತರಸಮಾವೇಶದಲ್ಲಿ ಮಾತನಾಡಿದರು.

‘ಯಾರ ವಿರುದ್ಧವೂ ಪೈಪೋಟಿ ನೀಡಲು ಕಾರ್ಯಕ್ರಮ ಮಾಡುತ್ತಿಲ್ಲ. ಕೆಲ ನಾಯಕರು ಎರಡು ವರ್ಷದಿಂದ ನನ್ನ ಹಾಗೂ ಪಕ್ಷದ ವಿರುದ್ಧ ಮಾತನಾಡುತ್ತಿದ್ದಾರೆ. 123 ಸ್ಥಾನಕ್ಕಲ್ಲ, 23 ಸ್ಥಾನಕ್ಕೆ ಪೈಪೋಟಿ ನೀಡುತ್ತಿದ್ದಾರೆ ಮೊದಲಾದ ರೀತಿಯಲ್ಲಿ ಟೀಕಿಸಿ ಮುಜುಗರ ಉಂಟು ಮಾಡಿದ್ದಾರೆ. ಅನಗತ್ಯವಾಗಿ ಗೊಂದಲ ಸೃಷ್ಟಿ ಮಾಡಿದ್ದಾರೆ’ ಎಂದರು.

‘ಏನೇ ರಾಜಕಾರಣ ಮಾಡುವುದಿದ್ದರೆ ನೇರವಾಗಿ ಮಾಡಲಿ. ಕಾರ್ಯಕ್ರಮಕ್ಕೆ ಮುಂಚೆ ಸಮಸ್ಯೆ ಬಗೆಹರಿಸಲು ಹೇಳಿದ್ದರೂ ಅದಕ್ಕೂ ಸ್ಪಂದಿಸಲಿಲ್ಲ. ಮನೆಯಲ್ಲಿ ನಡೆದ ಸೀಮಂತ ಕಾರ್ಯಕ್ರಮಕ್ಕೂ ಆಹ್ವಾನ ಕೊಟ್ಟಿರಲಿಲ್ಲ. ಅವರೇ ಬಂದಿದ್ದರು. ಎರಡು ವರ್ಷಗಳಿಂದ ನನ್ನ ಸಂಪರ್ಕದಲ್ಲಿ ಇಲ್ಲ. ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿಲ್ಲ. ನಾವಂತೂ ಹೊರಗೆ ಕಳುಹಿಸುತ್ತಿಲ್ಲ. ಪಕ್ಷ ಸರಿ ಇಲ್ಲ ಎಂದು ಅವರೇ ಹೊರಗೆ ಹೋಗುತ್ತಿದ್ದಾರೆ’ ಎಂದು ಕುಟುಕಿದರು.

‘ನಾನು ಕಾರ್ಯಕ್ರಮಕ್ಕೆ ಬರುವ ಮುನ್ನ ಗುಬ್ಬಿ ಗ್ರಾಮ ದೇವತೆ ದೇವಸ್ಥಾನಕ್ಕೆ ಹೋಗಿ ಬಂದಿದ್ದೇನೆ. ನನ್ನಿಂದ ಯಾವುದೇ ಅಪಚಾರವಾಗಿಲ್ಲ. ನನ್ನ ಜತೆ ಬಹಳ ಅನ್ಯೋನ್ಯವಾಗಿದ್ದರು. ಉತ್ತಮ ಒಡನಾಟ ಇಟ್ಟುಕೊಂಡಿದ್ದರು. ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ ಕಾಯಬೇಕಿರಲಿಲ್ಲ. ಅವರು ಹೇಳಿದ ಎಲ್ಲಾ ಕೆಲಸ ಮಾಡಿಕೊಟ್ಟಿದ್ದೇನೆ. ಆದರೆ, ಇಂದಿನ ಸಭೆ ವಿಫಲಗೊಳಿಸಲು ಹಳ್ಳಿ ಹಳ್ಳಿಯಲ್ಲಿ ಡಂಗೂರ ಸಾರಿಕೊಂಡು ಬಂದರು. ಜಿಲ್ಲೆಯಲ್ಲಿ ಏನೋ ಆಗಿಹೋಗಿದೆ. ಜೆಡಿಎಸ್ ಮುಗಿದೇ ಹೋಯಿತು. ಅವರೇ ಆಚೆ ಕಳುಹಿಸುತ್ತಿದ್ದಾರೆ ಎಂದು ಹೇಳುತ್ತಿದ್ದಾರೆ. ಅದಕ್ಕೆ ಜನರೇ ಉತ್ತರ ಕೊಡುತ್ತಾರೆ’ ಎಂದು ಹೇಳಿದರು.

‘1999ರಲ್ಲಿ ಗುಬ್ಬಿಯಲ್ಲಿ ವೀರಣ್ಣಗೌಡ ಶಾಸಕರಾಗಿದ್ದರು. 10 ಶಾಸಕರಲ್ಲಿ 6 ಮಂದಿ ಜನತಾ ಪಕ್ಷದಿಂದ ಕಾಂಗ್ರೆಸ್ ಸೇರ್ಪಡೆಯಾದರು. 2004ರಲ್ಲಿ ಶಿವನಂಜಪ್ಪ ಅವರನ್ನು ಗೌಡರು ಪಕ್ಷಕ್ಕೆ ಸೇರಿಸಿಕೊಂಡಿದ್ದರು. ಅಂದೇ ಅವರಿಗೆ ಟಿಕೆಟ್ ನೀಡುವ ಭರವಸೆ ಕೊಟ್ಟಿದ್ದರು. ಬಳಿಕ ಶ್ರೀನಿವಾಸ್ ಟಿಕೆಟ್ ಕೇಳಿದರು. ಆಗ ಹಿರಿಯ ನಾಯಕರು ಪಕ್ಷದಲ್ಲಿ ಇದ್ದರು. ನಾನು ಟಿಕೆಟ್ ಕೊಡುವ ಸ್ಥಿತಿಯಲ್ಲಿ ಇರಲಿಲ್ಲ. ಪಕ್ಷೇತರರಾಗಿ ನಿಲ್ಲುವಂತೆ ಸಲಹೆ ಮಾಡಿದೆ. ಜನರು ಆಶೀರ್ವಾದ ಮಾಡಿದರು. ಅಲ್ಲಿಂದ ಈವರೆಗೂ ಅದೇ ರೀತಿಯ ಸಹಕಾರ ಕೊಟ್ಟಿದ್ದೇವೆ. ಹಿರಿಯರಾಗಿದ್ದ ಸತ್ಯನಾರಾಯಣ ಬದಲಿಗೆ ಇವರನ್ನು ಸಚಿವರನ್ನಾಗಿ ಮಾಡಿದೆ. ಆದರೂ ಪಕ್ಷ ಬಿಟ್ಟು ಹೋಗುತ್ತಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮುಂದಿನ ವಿಧಾನಸಭೆ ಚುನಾವಣೆ ಯಲ್ಲಿ ‘ಪಂಚರತ್ನ’ ಕಾರ್ಯಕ್ರಮದ ಮೂಲಕ ಜನರಿಗೆ ಸ್ಪಂದಿಸುವ ಕೆಲಸ ಮಾಡಲಾಗುವುದು ಎಂದು
ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT