ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈಗಾರಿಕೆಗಳ ಉಳಿವು; ಸಿಐಟಿಯು ಆಶಯ

ಕಾರ್ಮಿಕ ದಿನಾಚರಣೆಯಲ್ಲಿ ಸಿಐಟಿಯು ಜಿಲ್ಲಾ ಘಟಕ ಅಧ್ಯಕ್ಷ ಸೈಯದ್‌ ಮುಜೀಬ್ ಅಭಿಮತ
Last Updated 4 ಮೇ 2019, 20:09 IST
ಅಕ್ಷರ ಗಾತ್ರ

ತುಮಕೂರು: ತಮ್ಮ ಹಕ್ಕುಗಳನ್ನು ಪಡೆಯಲು ತ್ಯಾಗ ಬಲಿದಾನಗೈದು ಕಾರ್ಮಿಕ ವರ್ಗದ ಏಕತೆಯನ್ನು ಸಾರಿದ ಕಾರ್ಮಿಕ ವರ್ಗ ಸಂಭ್ರಮದಿಂದ ಆಚರಿಸುವ ದಿನವೇ ಕಾರ್ಮಿಕ ದಿನಾಚರಣೆ ಎಂದು ಸಿಐಟಿಯು ಜಿಲ್ಲಾ ಘಟಕ ಅಧ್ಯಕ್ಷ ಸೈಯದ್‌ ಮುಜೀಬ್ ತಿಳಿಸಿದರು.

ಅಂತರಸನಹಳ್ಳಿ ಫಿಟ್ ವೆಲ್ ಪೋರ್ಜಿಂಗ್ ಕಾರ್ಮಿಕರ ಸಂಘವುವಿಶ್ವ ಕಾರ್ಮಿಕರ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಮಿಕ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

‘ಚಳವಳಿಗೆ ಮಾನ್ಯತೆ ನೀಡದಿರುವ ಬಂಡವಾಳಶಾಹಿಗಳ ವಿರುದ್ಧ ತಮ್ಮ ಹಕ್ಕುಗಳಿಗಾಗಿ ಕಾರ್ಮಿಕರು ಸಿಡಿದು ನಿಲ್ಲುವರು. ಕಾರ್ಮಿಕ ಸಂಘವನ್ನು ಮಾನ್ಯತೆ ಮಾಡಿರುವ ಆಡಳಿತ ಮಂಡಳಿಗಳು ಅಭಿನಂದನಾರ್ಹ. ಕಾರ್ಮಿಕರಿಗೆ ಸಿಗಬೇಕಾದ ಸವಲತ್ತುಗಳನ್ನು ಆಡಳಿತ ಮಂಡಳಿಗಳು ನೀಡಬೇಕು’ ಎಂದು ತಿಳಿಸಿದರು.

‘ಸಿಐಟಿಯು ಸಂಘಟನೆಯು ಕೈಗಾರಿಕೆಗಳು ಉಳಿಯಬೇಕು ಎಂಬ ದೃಷ್ಟಿಕೋನ ಹೊಂದಿದೆ. ಆಡಳಿತ ಮಂಡಳಿಯು ಕಾರ್ಮಿಕರ ಸಮಸ್ಯೆಗಳನ್ನು ಆಲಿಸಬೇಕು’ ಎಂದು ಹೇಳಿದರು.

ಫಿಟ್ ವೆಲ್ ಕಾರ್ಮಿಕ ಸಂಘದ ಪ್ರಧಾನ ಕಾರ್ಯದರ್ಶಿ ಟಿ.ಆರ್.ಸುಜಿತ್ ಮಾತನಾಡಿ, ‘ತುಮಕೂರು ನಗರ ದಿನೇ ದಿನೇ ಬೆಳೆಯುತ್ತಿದೆ. ಕೈಗಾರಿಕೆಗಳೂ ಹೆಚ್ಚು ಮುಖ ಮಾಡುತ್ತಿವೆ. ಇಲ್ಲಿ ಉದ್ಯೋಗ ಸೃಷ್ಟಿ ಹೆಚ್ಚುತ್ತಿದೆ. ಐಟಿಐ, ಡಿಪ್ಲೊಮಾ, ತಾಂತ್ರಿಕ ಶಿಕ್ಷಣ ಪಡೆದಿರುವ ಗ್ರಾಮೀಣ ಯುವಕರು ಕೈಗಾರಿಕೆಗಳಲ್ಲಿ ದುಡಿಯುತ್ತಿದ್ದಾರೆ’ ಎಂದರು.

ಸಿಐಟಿಯು ತಾಲ್ಲೂಕು ಘಟಕದ ಅಧ್ಯಕ್ಷ ಬಿ.ಷಣ್ಮುಖಪ್ಪ, ‘ಕಾರ್ಮಿಕರ ಶ್ರಮವೇ ಮಾಲೀಕರ ಏಳಿಗೆಯಾಗಲು ಸಹಕಾರಿಯಾಗಿದೆ’ ಎಂದು ಹೇಳಿದರು.

ಫಿಟ್ ವೆಲ್ ಕಾರ್ಮಿಕ ಸಂಘದ ಅಧ್ಯಕ್ಷ ಸಿ.ಎಸ್.ಶಿವಮೂರ್ತಿ, ‘ಶ್ರಮವಹಿಸಿ ದುಡಿದ ಕೆಲಸಕ್ಕೆ ತಕ್ಕ ಕೂಲಿ ಸಿಗಬೇಕು. ಕಾರ್ಮಿಕರ ತ್ಯಾಗ ಬಲಿದಾನಗಳನ್ನು ನೆನೆಯಬೇಕಾಗಿದೆ. ಹೋರಾಟದ ಫಲವಾಗಿ ಇಂದು ಕಾರ್ಮಿಕರು ಸುಖ ಜೀವನ ನಡೆಸುವಂತಾಗಿದೆ’ ಎಂದರು.

ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಎನ್.ಕೆ.ಸುಬ್ರಮಣ್ಯ ಇದ್ದರು. ಆರ್.ಎಸ್.ರಘುಸ್ವಾಮಿ ಸ್ವಾಗತಿಸಿದರು. ಪ್ರಭುಸ್ವಾಮಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT