ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪರ್ಕ ರಸ್ತೆ ನಿರ್ಮಾಣಕ್ಕೆ ಒತ್ತಾಯ

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಸ್ಥಳಕ್ಕೆ ಬರುವಂತೆ ಪಟ್ಟು
Last Updated 31 ಜನವರಿ 2021, 2:19 IST
ಅಕ್ಷರ ಗಾತ್ರ

ತಿಪಟೂರು: ನಗರದ ಕೆಂಚರಾಯನಗರ, ಹಳೇಪಾಳ್ಯ ಮಧ್ಯದಲ್ಲಿ ಹಾದು ಹೋಗುವ ರಸ್ತೆಯಲ್ಲಿ ಕೆಂಚರಾಯ ನಗರ, ಕಲ್ಕೆಳೆ ಗ್ರಾಮದ ನಿವಾಸಿಗಳು ಸಂಪರ್ಕ ರಸ್ತೆ ನಿರ್ಮಿಸುವಂತೆ ಆಗ್ರಹಿಸಿ ಅನಿರ್ದಿಷ್ಟಾವಧಿ ಧರಣಿಗೆ ಮುಂದಾಗಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳು ಸ್ಥಳಕ್ಕೆ ಬರುವಂತೆ ಪಟ್ಟು ಹಿಡಿದಿದ್ದಾರೆ.

ಆರ್‌ಕೆಎಸ್ ರಾಜ್ಯ ಸಮಿತಿ ಸದಸ್ಯ ಎಸ್.ಎನ್. ಸ್ವಾಮಿ ಮಾತನಾಡಿ, ‘ರಾಷ್ಟ್ರೀಯ ಹೆದ್ದಾರಿ 206ರ ರಸ್ತೆ ಯೋಜನೆಯಲ್ಲಿ ಸಂಪರ್ಕ ರಸ್ತೆ, ಕೆಳ ಸೇತುವೆ ರಸ್ತೆಗಳನ್ನು ಕಲ್ಪಿಸದೇ ಜನರಿಗೆ ತೊಂದರೆ ನೀಡುತ್ತಿದ್ದಾರೆ. ಕಾಮಗಾರಿ ಮಾಡುವ ಮುಂಚೆ ಯಾವುದೇ ಮಾಹಿತಿ ನೀಡದೇ ಪ್ರಾಧಿಕಾರದ ನಿಯಮಗಳನ್ನು ಗಾಳಿಗೆ ತೂರಿದ್ದಾರೆ. ಸಂಪರ್ಕ ರಸ್ತೆಗಳನ್ನು ಮಾಡುವುದೇ ಸಂಪರ್ಕ ಕಲ್ಪಿಸುವ ಸಲುವಾಗಿ ಆದರೆ ಈ ಕಾಮಗಾರಿಯಲ್ಲಿ ಗ್ರಾಮಗಳು, ಜಮೀನು, ಕಾರ್ಯನಿರ್ವಹಿಸುವ ಸ್ಥಳ, ಹಳೆಯ ರಸ್ತೆಗಳ ನಡುವೆ ಸಂಪರ್ಕ ಕಡಿತಗೊಳಿಸಿ ಅತಂತ್ರ ಸ್ಥಿತಿ ನಿರ್ಮಿಸಲು ಮುಂದಾಗಿದ್ದಾರೆ. ಇಲ್ಲಿನ ಜನರು ಈಗಾಗಲೇ ಹಲವು ಮೂಲ ಸೌಕರ್ಯಗಳಿಂದ ವಂಚಿತರಾಗಿದ್ದಾರೆ. ನಿತ್ಯವೂ ಕೂಲಿ ಮಾಡಲು ತೆರಳುತ್ತಿದ್ದ ರಸ್ತೆ ಇಲ್ಲ ಅಂದರೆ ಇವರ ಸ್ಥಿತಿ ಏನಾಗುತ್ತದೆ ಎನ್ನುವುದು ಊಹಿಸಲು ಅಸಾಧ್ಯ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಬಂದು ಸಮಸ್ಯೆ ಬಗೆಹರಿಸಬೇಕು ಎಂದು ಒತ್ತಾಯಿಸಿದರು.

ಕೆಂಚರಾಯನಗರ ನಿವಾಸಿ ರಂಜಿತಾ ಮಾತನಾಡಿ, ಕಳೆದ ಹಲವು ವರ್ಷಗಳಿಂದ ವಾಸ ಮಾಡುತ್ತಿದ್ದರೂ, ಸರಿಯಾದ ಮೂಲ ಸೌಕರ್ಯಗಳಿಲ್ಲದೇ ನರಳುತ್ತಿದ್ದೇವೆ. ಕೆಂಚರಾಯ ನಗರಕ್ಕೆ ನಗರದ ಸಂಪೂರ್ಣ ತ್ಯಾಜ್ಯವನ್ನು ತಂದು ಹಾಕುತ್ತಿದ್ದಾರೆ. ಅದನ್ನು ಸಹಿಸಿಕೊಂಡಿದ್ದೇವೆ. ಈ ಭಾಗದ ಜನರು ಬೆಳಿಗ್ಗೆಯಿಂದ ಸಂಜೆವರಗೆ ಕೂಲಿ ಮಾಡಿಕೊಂಡೆ ಜೀವನ ಸಾಗಿಸಬೇಕು. ಅದರ ಮಧ್ಯೆ ಲಾಕ್‍ಡೌನ್‌ನಿಂದ ಜೀವನ ಅಸ್ಥವ್ಯಸ್ಥವಾಗಿದೆ. ಇದೀಗ ಹಳೇಪಾಳ್ಯ ಮತ್ತು ಕೆಂಚರಾಯನಗರದ ಮಧ್ಯೆದಲ್ಲಿ ರಸ್ತೆ ಹೋದರೆ ಓಡಾಡಲು ತೊಂದರೆಯಾಗುತ್ತದೆ. ಸಂಪರ್ಕ ರಸ್ತೆ, ಕೆಳ ಸೇತುವೆ ನಿರ್ಮಾಣ ಮಾಡುವವರೆಗೂ ಪ್ರತಿಭಟನೆಯಿಂದ ಹಿಂದೆ ಸರಿಯುವ ಮಾತೇ ಇಲ್ಲ ಎಂದರು.

ಪ್ರತಿಭಟನಾ ಸ್ಥಳಕ್ಕೆ ಪೊಲೀಸ್ ಉಪ ಅಧೀಕ್ಷಕ ಚಂದನ್ ಕುಮಾರ್.ಎನ್. ಭೇಟಿ ನೀಡಿ ಪ್ರತಿಭಟನಾಕಾರರ ಮನವೊಲಿಸಲು ಪ್ರಯತ್ನಿಸಿದರು. ಪ್ರತಿಭಟನಾಕಾರರು ಸ್ಥಳಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಬರಬೇಕು ಎಂದು ಆಗ್ರಹಿಸಿದರು.

ರಂಗಧಾಮಯ್ಯ, ನಾರಾಯಣ, ಶ್ರೀನಿವಾಸ್, ಗಂಗಾಧರ್, ನಟರಾಜು, ಗುರುಮೂರ್ತಿ, ಗಂಗಮ್ಮ, ಗಾಯಿತ್ರಮ್ಮ, ಧನಲಕ್ಷ್ಮಿ, ಉಮಾದೇವಿ, ಆರ್‌ಕೆಎಸ್‌ನ ಭೈರನಾಯಕನಹಳ್ಳಿ ಲೋಕೇಶ್, ಶ್ರೀಕಾಂತ್ ಕೆಳಹಟ್ಟಿ, ಮನೋಹರ್ ಪಟೇಲ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT