ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮರ್ಪಕ ಪರಿಹಾರ ನೀಡದಿದ್ದರೆ ಯೋಜನೆಗೆ ತಡೆ: ರೈತರ ಆಕ್ರೋಶ

ಎತ್ತಿನಹೊಳೆ ಯೋಜನೆ; ತಿಪಟೂರು ತಾಲ್ಲೂಕಿನ ರೈತರ ಆಕ್ರೋಶ
Last Updated 4 ನವೆಂಬರ್ 2020, 3:32 IST
ಅಕ್ಷರ ಗಾತ್ರ

ತಿಪಟೂರು: ಎತ್ತಿನಹೊಳೆ ಯೋಜನೆಯಲ್ಲಿ ತಾಲ್ಲೂಕಿಗೆ ಪ್ರತ್ಯೇಕ ನೀರು ಹಂಚಿಕೆ ಹಾಗೂ ಸಮರ್ಪಕ ಪರಿಹಾರ ನೀಡುವವರೆಗೆ ಕಾಮಗಾರಿ ನಡೆಸಲು ಬಿಡುವುದಿಲ್ಲ ಎಂಬ ನಿರ್ಣಯವನ್ನು ರೈತರು ಅಧಿಕಾರಿಗಳಿಗೆ ತಿಳಿಸಿದರು.

ತಾಲ್ಲೂಕು ಕಚೇರಿಯ ಸಭಾಂಗಣದಲ್ಲಿ ಎತ್ತಿನಹೊಳೆ ನೀರು ಹಂಚಿಕೆ ವಿಚಾರವಾಗಿ ತಹಶೀಲ್ದಾರ್ ಚಂದ್ರಶೇಖರ್ ಅಧ್ಯಕ್ಷತೆಯಲ್ಲಿ ಅಧಿಕಾರಿಗಳೊಂದಿಗೆ ರೈತರ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು.

ಸಣ್ಣ ನೀರಾವರಿ ಇಲಾಖೆಯ ಅಧಿಕಾರಿ ದೊಡ್ಡಯ್ಯ ಮಾತನಾಡಿ, ‘ಎತ್ತಿನಹೊಳೆ ಯೋಜನೆ ಸರ್ವೆ ಮಾಡಿದ್ದು, ಅದರ ಡಿಪಿಆರ್ ಸಿದ್ಧಪಡಿಸಲಾಗಿದೆ. ಪೂರ್ಣ ಮಂಜೂರಾತಿ ದೊರೆಯುವವರೆಗೆ ನೀರಿನ ಹಂಚಿಕೆ ತಿಳಿಸಲು ಸಾಧ್ಯವಿಲ್ಲ. ಹೇಮಾವತಿ ನಾಲೆಯಿಂದ ನೀರು ಪಡೆದುಕೊಂಡಿರುವ ಭಾಗಗಳನ್ನು ಬಿಟ್ಟು, ಉಳಿದ ಭಾಗಗಳಿಗೆ ನೀರು ಹರಿಸಲಾಗುವುದು. ತುಮಕೂರು ಜಿಲ್ಲೆಗೆ ಒಟ್ಟು 1.575 ಟಿಎಂಸಿ ಅಡಿ ನೀರು ನಿಗದಿ ಮಾಡಲಾಗಿದೆ’ ಎಂದರು.

ಎತ್ತಿನಹೊಳೆ ನೀರಾವರಿ ಹೋರಾಟ ಸಮಿತಿಯ ಮನೋಹರ್ ಪಟೇಲ್ ಮಾತನಾಡಿ, ‘ಭೈರನಾಯಕಹಳ್ಳಿ, ಮಾರ್ಗೊಂಡನಹಳ್ಳಿಯಲ್ಲಿ ಜಮೀನು ಕಳೆದುಕೊಳ್ಳುತ್ತಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಸಮುದಾಯದ ಮಹಿಳೆಯರು ಹೆಚ್ಚಾಗಿದ್ದಾರೆ. ಅವರೆಲ್ಲರೂ ಜಮೀನನ್ನೇ ನಂಬಿ ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ಸ್ಥಳೀಯ ಕೆರೆಗಳಿಗೆ ನೀರು ನೀಡದಿದ್ದರೆ ಗುಳೆ ಹೋಗಬೇಕಾಗುತ್ತದೆ. ಅಮೃತ ಮಹಲ್ ಕಾವಲಿನಲ್ಲಿ ಸುಮಾರು 2.3 ಕಿ.ಮೀ. ಜಮೀನು ಯೋಜನೆಗೆ ಸೇರಿಕೊಳ್ಳುತ್ತಿದ್ದು, ಅಲ್ಲಿನ ಪ್ರಾಣಿ, ಪಕ್ಷಿಗಳಿಗೆ ಅಗತ್ಯವಿರುವ ನೀರು ಒದಗಿಸಬೇಕು’ ಎಂದು ಒತ್ತಾಯಿಸಿದರು.

ರೈತ ಕೃಷಿ ಕಾರ್ಮಿಕ ಸಂಘಟನೆ ಸದಸ್ಯ ಎಸ್.ಎನ್.ಸ್ವಾಮಿ ಮಾತನಾಡಿ, ‘ಎರಡು ವರ್ಷಗಳಿಂದ ಯೋಜನೆ ಬಗ್ಗೆ ಮಾಹಿತಿಯನ್ನೇ ನೀಡಿರಲಿಲ್ಲ. ಅತಿ ಹೆಚ್ಚು ಭೂಮಿ ಕಳೆದುಕೊಳ್ಳುತ್ತಿರುವ ತಿಪಟೂರು ತಾಲ್ಲೂಕಿಗೆ ನೀರಿನ ಹಂಚಿಕೆ ‍ಪ್ರಮಾಣವೂ ಹೆಚ್ಚಾಗಬೇಕು’ ಎಂದು ಒತ್ತಾಯಿಸಿದರು.

ಹಸಿರುಸೇನೆ ತಾಲ್ಲೂಕು ಘಟಕದ ಅಧ್ಯಕ್ಷ ತಿಮ್ಲಾಪುರ ದೇವರಾಜು ಮಾತನಾಡಿ, ‘ತಾಲ್ಲೂಕಿನಲ್ಲಿ ಸಿದ್ಧಪಡಿಸಿರುವ ಯೋಜನೆಯ ಡಿಪಿಆರ್‌ ರಾಜಕೀಯ ಪ್ರೇರಿತವಾಗಿದೆ. ಹೊನ್ನವಳ್ಳಿ ಭಾಗಕ್ಕೆ ನೀರನ್ನು ನೀಡುವ ವಿಚಾರವೇ ಪ್ರಾಸ್ತಾಪವಾಗಿಲ್ಲ. ಕೇವಲ ಗುಂಡಪ್ಪನ ಕಾವಲಿನ ಸುತ್ತಮುತ್ತ ಮಾತ್ರವೇ ಜಾಕ್‍ವೆಲ್‍ಗಳನ್ನು ಹೆಚ್ಚಾಗಿ ನಿರ್ಮಾಣ ಮಾಡಲು ಯೋಜನೆ ಸಿದ್ಧಪಡಿಸಲಾಗಿದೆ. ಅಲ್ಲದೇ ಅನೇಕ ಕೆರೆಗಳಿಗೆ ನೀರು ಬಿಡದಿರುವುದು ವರದಿಯಲ್ಲಿದೆ. ಕೂಡಲೇ ಎಲ್ಲ ಕೆರೆಗಳಿಗೂ ನೀರು ಹರಿಸಿದರೆ ಮಾತ್ರ ಕಾಮಗಾರಿಗೆ ಅವಕಾಶ ನೀಡಲಾಗುವುದು’ ಎಂದರು.

ಎತ್ತಿನಹೊಳೆ ಹೋರಾಟ ಸಮಿತಿಯ ಬಿ.ಬಿ.ಸಿದ್ದಲಿಂಗಮೂರ್ತಿ, ಶ್ರೀಕಾಂತ್ ಕೆಳಹಟ್ಟಿ, ಬೆನ್ನಾಯಕನಹಳ್ಳಿ ಶಿವಣ್ಣ, ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ವಿಜಯ ಕುಮಾರ್, ಹೊನ್ನವಳ್ಳಿ ಸುರೇಶ್, ನಾಗತೀಹಳ್ಳಿ ಕೃಷ್ಣಮೂರ್ತಿ, ಯಗಚಿಕಟ್ಟೆ ರಾಘು, ಸಚಿನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT