ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮದಲೂರಿಗೆ ನೀರು ಬಿಟ್ಟರೆ ಜೈಲು

ನಾಳೆಯಿಂದ ನಾಲೆಗೆ ಹೇಮಾವತಿ ನೀರು ಬಿಡುಗಡೆ
Last Updated 23 ಜುಲೈ 2021, 19:54 IST
ಅಕ್ಷರ ಗಾತ್ರ

ತುಮಕೂರು: ಶಿರಾ ವಿಧಾನಸಭೆ ಉಪಚುನಾವಣೆ ಸಮಯದಲ್ಲಿ ಪ್ರಮುಖ ವಿಷಯವಾಗಿದ್ದ ಮದಲೂರು ಕೆರೆಗೆ ನೀರು ಹರಿಸುವ ವಿಚಾರ ಈಗ ಮತ್ತೊಮ್ಮೆ ಮುನ್ನೆಲೆಗೆ ಬಂದಿದ್ದು, ವಿವಾದದ ಸ್ವರೂಪ ಪಡೆದುಕೊಂಡಿದೆ.

ಹೇಮಾವತಿಯಿಂದ ಹರಿಸುವ ನೀರನ್ನು ಕಳ್ಳಂಬೆಳ್ಳ, ಶಿರಾ ಕೆರೆಗೆ ತುಂಬಿಸಬಹುದು. ಶಿರಾದಿಂದ ಮುಂದಕ್ಕೆ ನೀರು ಹರಿಸುವಂತಿಲ್ಲ. ಮದಲೂರು ಕೆರೆಗೆ ನೀರು ಬಿಟ್ಟರೆ ಜೈಲಿಗೆ ಕಳುಹಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರು ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿರುವುದು ವಿವಾದಕ್ಕೆ ಕಾರಣವಾಗಿದೆ.

ಶಿರಾ ವಿಧಾನಸಭೆ ಚುನಾವಣೆ ಸಮಯದಲ್ಲಿ ಮದಲೂರು ಕೆರೆಗೆ ನೀರು ಹರಿಸಬೇಕು ಎಂದು ಪ್ರಮುಖವಾಗಿ ತಾಲ್ಲೂಕಿನ ಜನರು ಒತ್ತಾಯಿಸಿದ್ದರು. ಚುನಾವಣೆಗೆ ಸ್ಪರ್ಧಿಸಿದ್ದ ಪ್ರಮುಖ ಮೂರು ರಾಜಕೀಯ ಪಕ್ಷಗಳು ಇದೇ ವಿಚಾರವನ್ನು ಪ್ರಸ್ತಾಪ ಮಾಡಿದ್ದವು. ‘ಬಿಜೆಪಿ ಮುಖಂಡರು ನೀರು ಹರಿಸುವುದಕ್ಕೆ ಈ ಹಿಂದೆಯೇ ವಿರೋಧ ವ್ಯಕ್ತಪಡಿಸಿದ್ದಾರೆ. ಈಗಲೂ ಭರವಸೆ ನೀಡುತ್ತಾರೆ. ಮುಂದೆ ನೀರು ಬಿಡುವುದಿಲ್ಲ’ ಎಂದು ಕಾಂಗ್ರೆಸ್ ಮುಖಂಡರು ಆರೋಪಿಸಿ ಪ್ರಚಾರ ನಡೆಸಿದ್ದರು.

ಪ್ರಚಾರಕ್ಕೆ ಬಂದಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮದಲೂರು ಕೆರೆಗೆ ನೀರು ಹರಿಸಲಾಗುವುದು ಎಂದು ಭರವಸೆ ನೀಡಿದರು. ಅದರಂತೆ ಆದೇಶವೂ ಹೊರ ಬಿತ್ತು. ಚುನಾವಣೆ ಸಮಯದಲ್ಲಿ ಒಂದೆರಡು ದಿನಗಳ ಕಾಲ ಶಾಸ್ತ್ರಕ್ಕೆ ಎಂಬಂತೆ ಕೆರೆಗೆ ನೀರು ಬಂದಿತ್ತು. ನಂತರ ನೀರು ಹರಿಸುವುದನ್ನು ಸ್ಥಗಿತಗೊಳಿಸಲಾಯಿತು. ನೀರು ಬಿಡದಿರುವುದಕ್ಕೆ ಶಿರಾ ತಾಲ್ಲೂಕಿನಲ್ಲಿ ಆಕ್ರೋಶವೂ ವ್ಯಕ್ತವಾಗಿತ್ತು.

ಶುಕ್ರವಾರ ನಡೆದ ಕೆಡಿಪಿ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಮಾಧುಸ್ವಾಮಿ, ‘ಗೊರೂರು ಜಲಾಶಯದಿಂದ ಒಂದೆರಡು ದಿನಗಳಲ್ಲಿ ನಾಲೆಗೆ ನೀರು ಹರಿಸಲಾಗುವುದು. ಅಷ್ಟರಲ್ಲಿ ನಾಲೆಗಳ ಸ್ಥಿತಿಗತಿ ಬಗ್ಗೆ ತಿಳಿಸಬೇಕು. ಈ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ’ ಎಂದು ಹೇಳಿದರು. ಇದಕ್ಕೆ ಜಲಸಂಪನ್ಮೂಲ ಇಲಾಖೆ ಎಂಜಿನಿಯರ್ ಸ್ವಲ್ಪ ಕಾಲಾವಕಾಶ ಬೇಕಾಗುತ್ತದೆ ಎಂದರು.

ಈಗಾಗಲೇ ನೀರು ಸಂಗ್ರಹ ಆಗಿರುವುದರಿಂದ ಭಾನುವಾರದಿಂದ ನೀರು ಹರಿಸಲಾಗುವುದು. ತಕ್ಷಣ ನಾಲೆ ಸರಿಪಡಿಸಿ ಇಟ್ಟುಕೊಳ್ಳಬೇಕು ಎಂದು ಸಚಿವರು ಸಲಹೆ ಮಾಡಿದರು. ಆಗ ಮದಲೂರು ಕೆರೆಗೆ ನೀರು ಹರಿಸದಂತೆ ಸೂಚಿಸಿದರು. ಒಂದು ವೇಳೆ ನೀರು ಬಿಟ್ಟರೆ ಸಂಬಂಧಿಸಿದವರನ್ನು ಜೈಲಿಗೆ ಕಳುಹಿಸುವುದಾಗಿ ಎಚ್ಚರಿಸಿದರು.

ಸಿದ್ಧತೆಯೇ ನಡೆದಿಲ್ಲ: ಗೊರೂರು ಜಲಾಶಯಲ್ಲಿ ನೀರಿನ ಮಟ್ಟ ಹೆಚ್ಚುತ್ತಿದ್ದು, ಯಾವ ಕ್ಷಣದಲ್ಲಾದರೂ ನೀರು ಬಿಡಬಹುದು ಎಂಬುದು ಗೊತ್ತಿದ್ದರೂ ಜಿಲ್ಲೆಯಲ್ಲಿ ನಾಲೆಗಳನ್ನು ಸುಸ್ಥಿಯಲ್ಲಿ ಇಟ್ಟುಕೊಂಡಿಲ್ಲ. ನೀರು ಹರಿಸಲು ಇನ್ನೂ ಸಾಕಷ್ಟು ಸಿದ್ಧತೆಗಳನ್ನೇ ಮಾಡಿಕೊಂಡಿಲ್ಲ. ನಾಲೆಗಳನ್ನು ಪರಿಶೀಲಿಸಲು ಮತ್ತಷ್ಟು ಸಮಯಾವಕಾಶ ಬೇಕು ಎಂದು ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಕೇಳಿದರು. ಆದರೆ ಇಷ್ಟು ದಿನಗಳು ಏನು ಮಾಡುತ್ತಿದ್ದರು. ಜುಲೈ ಮೊದಲ ವಾರದಲ್ಲೇ ಸಿದ್ಧತೆಗಳು ಮುಗಿಯಬೇಕಿತ್ತಲ್ಲವೆ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT