ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿ.ಮುನಿರೆಡ್ಡಿಗೆ ಅಕಾಡೆಮಿ ಪ್ರಶಸ್ತಿಯ ಗರಿ

ಕರ್ನಾಟಕ ಜಾನಪದ ಅಕಾಡೆಮಿಯ ವಾರ್ಷಿಕ ‘ಜಾನಪದ ಗಾಯಕ’ ಪ್ರಶಸ್ತಿಗೆ ಆಯ್ಕೆ
Last Updated 26 ಫೆಬ್ರುವರಿ 2020, 15:31 IST
ಅಕ್ಷರ ಗಾತ್ರ

ಚಿಂತಾಮಣಿ: ತಾಲ್ಲೂಕಿನ ನಾರಮಾಕಲಹಳ್ಳಿ ಗ್ರಾಮದ ಜಾನಪದ ಕಲಾವಿದ ಜಿ.ಮುನಿರೆಡ್ಡಿ ಅವರು ಕರ್ನಾಟಕ ಜಾನಪದ ಅಕಾಡೆಮಿಯ 2019ನೇ ಸಾಲಿನ ವಾರ್ಷಿಕ ‘ಜಾನಪದ ಗಾಯಕ’ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಕಳೆದ ವಾರವಷ್ಟೇ ಕರ್ನಾಟಕ ಜಾನಪದ ಪರಿಷತ್ತಿನಿಂದ ‘ಜಾನಪದಲೋಕ’ ಪ್ರಶಸ್ತಿಯನ್ನು ಸ್ವೀಕರಿಸಿದ್ದರು. ಒಂದೇ ವಾರದಲ್ಲಿ ಎರಡು ಪ್ರಶಸ್ತಿಗಳನ್ನು ಗಳಿಸಿ ತಾಲ್ಲೂಕು ಹಾಗೂ ಜಿಲ್ಲೆಗೆ ಕೀರ್ತಿಯನ್ನು ತಂದಿದ್ದಾರೆ.

ಮುರುಗಮಲ್ಲ ಹೋಬಳಿ ನಾರಮಾಕಲಹಳ್ಳಿ ಗ್ರಾಮದ ಮುನಿಯಮ್ಮ ಮತ್ತು ಗುಜ್ಜಾರಪ್ಪ ದಂಪತಿಯ ನಾಲ್ಕನೇ ಮಗನಾದ ಜಿ.ಮುನಿರೆಡ್ಡಿ 1968 ನೇ ಆಗಸ್ಟ್ 10 ರಂದು ಜನಿಸಿದ್ದಾರೆ. ಅವರದು ಸಾಮಾನ್ಯ ಕೃಷಿಕ ಕುಟುಂಬವಾಗಿದ್ದು ಪದವಿವರೆಗೂ ವ್ಯಾಸಂಗ ಮಾಡಿದ್ದಾರೆ.

ಪ್ರಗತಿಪರ ಹೋರಾಟಗಳ ಸಂಪರ್ಕದಿಂದ 1985ರಿಂದಲೂ ಸಮಾಜದ ಒಳಿತು ಕೆಡುಕುಗಳ ಬಗ್ಗೆ ಗಮನಹರಿಸಿ, ಉತ್ತಮ ಸಮಾಜದ ನಿರ್ಮಿಸುವ ಪ್ರಯತ್ನವಾಗಿ ಎಲ್ಲ ಕಾರ್ಯಕ್ರಮಗಳಲ್ಲಿ ಜನಪದ ಹಾಡುಗಳ ಗಾಯನದಲ್ಲಿ ತೊಡಗಿಸಿಕೊಂಡಿದ್ದಾರೆ. ಸಮಾಜಕ್ಕೆ ಉಪಯೋಗವಾಗುವಂತಹ ಬೀದಿ ನಾಟಕ, ಸಂಪೂರ್ಣ ಸಾಕ್ಷರತಾ ಆಂದೋಲನ, ಶಾಶ್ವತ ನೀರಾವರಿ ಹೋರಾಟ, ಕನ್ನಡ ಮತ್ತುಸಂಸ್ಕೃತಿ ಇಲಾಖೆಯ ಜಿಲ್ಲಾ ಸಾಂಸ್ಕೃತಿಕ ಸಂಚಾಲಕರಾಗಿ ಹಲವಾರು ಕಾರ್ಯಕ್ರಮಗಳ ಮೂಲಕ ಸಮಾಜದ ಅಂಕು-ಡೊಂಕುಗಳ ಬದಲಾವಣೆಗಾಗಿ ಶ್ರಮಿಸುತ್ತಿರುವುದು ಅವರ ಹೆಗ್ಗಳಿಕೆಯಾಗಿದೆ.

ಪರಿಸರಗೀತೆಗಳು, ಜಾನಪದಗೀತೆಗಳು, ಬೀದಿ ಪದಗಳು, ಲಾವಣಿ, ಬುಡಬುಡಿಕೆ ಪದಗಳು, ಕೊಂಡಮಾಮ ಹಾಡುಗಳು ಹೀಗೆ ಹಲವಾರು ರೀತಿಯ ಜಾನಪದದ ಶೈಲಿಯಲ್ಲಿ ಹಾಡುವುದು ಅವರ ವಿಶೇಷವಾಗಿದೆ. ಇವರ ಸೇವೆಯನ್ನು ಗುರುತಿಸಿ ಹಲವಾರು ಸಂಘಸಂಸ್ಥೆಗಳು ಜಾನಪದ ಹುಂಜ, ಜಿಲ್ಲಾ ಯುವ ಪ್ರಶಸ್ತಿ, ಅಂಕ ಪ್ರಶಸ್ತಿ, ಸಂಕ್ರಾಂತಿ ಪ್ರಶಸ್ತಿ, ರಂಗ ಗೌರವ ಪ್ರಶಸ್ತಿಗಳನ್ನು ನೀಡಿ ಗೌರವಿಸಿ ಸನ್ಮಾನಿಸಿವೆ.

ಚಲನಚಿತ್ರಗಳಲ್ಲೂ ಗಾಯನ

ಕನ್ನಡದ ಕಳವು ಚಲನಚಿತ್ರದಲ್ಲಿ ಹೆಸರಾದಂತಹ ಕಲಾವಿದೆ ಉಮಾಶ್ರೀ ಅವರಿಗೆ ಕೊರವಂಜಿ ವೇಷದಲ್ಲಿ(ಕೊಂಡಮಾಮ) ಶಾಸ್ತ್ರವನ್ನು ಹೇಳುವ ದೃಶ್ಯದಲ್ಲಿ ನಟಿಸಿದ್ದಾರೆ. ಕೆಲವು ತೆಲುಗು ಚಲನಚಿತ್ರಗಳಿಗೆ ಜಾನಪದ ಶೈಲಿಯ ಕ್ರಾಂತಿಕಾರಿ ಹಾಗೂ ಹೋರಾಟದ ಹಾಡುಗಳನ್ನು ಹಾಡಿದ್ದಾರೆ.

ಜಾನಪದ ಕಲಾವಿದ ಮುನಿರೆಡ್ಡಿಗೆ ಒಂದೇ ವಾರದಲ್ಲಿ ಎರಡು ಪ್ರಶಸ್ತಿ ಗಳಿಸಿರುವುದು ಸಂತಸವಾಗಿದೆ. ಇಂತಹ ಕಲಾವಿದರಿಗೆ ಪ್ರಶಸ್ತಿ ನೀಡಿದರೆ ಪ್ರಶಸ್ತಿಯ ಗೌರವ ಹೆಚ್ಚಾಗುತ್ತದೆ ಎಂದು ಹಿರಿಯ ಪ್ರವಚನಕಾರ ತಳಗವಾರ ಟಿ.ಎಲ್.ಆನಂದ್ ಅಭಿನಂದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT