ಶುಕ್ರವಾರ, ಏಪ್ರಿಲ್ 3, 2020
19 °C

ರಂಗಯ್ಯಗೆ ಒಲಿದ ಜಾನಪದ ಗರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕುಣಿಗಲ್: ತಾಲ್ಲೂಕಿನ ಕೊಪ್ಪ ಗ್ರಾಮದ ರಂಗಯ್ಯ ಅವರ 45 ವರ್ಷಗಳ ಜಾನಪದ ಕ್ಷೇತ್ರದ ಸಾಧನೆಗೆ 2019 ಸಾಲಿನ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಒಲಿದಿದೆ.

ಕೊಪ್ಪ ಗ್ರಾಮದ ದೊಡ್ಡಮ್ಮ, ಮಾಯಣ್ಣ ದಂಪತಿಯ ಪುತ್ರರಾದ ರಂಗಯ್ಯ ಓದಿದ್ದೂ ಕೇವಲ 2ನೇ ತರಗತಿ. ತಂದೆ ಮಾಯಣ್ಣ ಕೃಷಿಕರು. ಶನೇಶ್ವರಸ್ವಾಮಿಯ ಹರಿಕಥೆ ಮಾಡುವುದರಲ್ಲಿ ಪ್ರಾವೀಣ್ಯ ಪಡೆದಿದ್ದರು. ತಂದೆಯ ಜತೆಯಲ್ಲಿ ಭಾಗವಹಿಸುತ್ತಾ ರಂಗಯ್ಯ ಅವರು ಹರಿಕಥೆಯನ್ನು ಕರಗತ ಮಾಡಿಕೊಂಡರು.

ಗ್ರಾಮೀಣ ಭಾಗದ ಜಾನಪದ ಕಲಾವಿದರ ಒಡನಾಟದಿಂದ ಜಾನಪದ, ಭಕ್ತಿ, ನಾಟಕಗಳ ಕಂದಪದ್ಯಗಳನ್ನು ಕಂಠಪಾಠ ಮಾಡುತ್ತಲೇ ನೂರಾರು ಗೀತೆಗಳನ್ನು ಸುಶ್ರಾವ್ಯವಾಗಿ ಹಾಡುತ್ತ ಕಲೆಯನ್ನು ಒಲಿಸಿಕೊಂಡರು.

1975ರಿಂದ ಬೆಂಗಳೂರಿನಲ್ಲಿ ನೆಲಸಿದ ರಂಗಯ್ಯನವರು ಕೆಇಬಿಯಲ್ಲಿ ಲೈನ್‌ಮೆನ್ ಹುದ್ದೆಯಲ್ಲಿದ್ದರು. ಆದರೂ ಜಾನಪದ ಕಲೆಯಲ್ಲಿ ಸಕ್ರಿಯರಾಗಿದ್ದರು.  ಸುಮಾರು 200 ಜಾನಪದ ಉತ್ಸವದಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸಿದ್ದಾರೆ. ಗಡಿನಾಡು, ಸೇವಾರತ್ನ, ಕೇರಳದ ಬಾಬು ಜಗಜೀವನ್ ರಾಮ್‌ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.

ವೃತ್ತಿಯಿಂದ ನಿವೃತ್ತಿಯಾದರೂ, ಪ್ರವೃತ್ತಿಯಿಂದ ನಿವೃತ್ತಿಯಾಗದೆ ಜಾನಪದ ಸೇವೆಯನ್ನು ಮುಂದುವರಿಸುತ್ತಿದ್ದಾರೆ. ರಂಗಯ್ಯನವರ ಉತ್ಸಾಹ ಇನ್ನೂ ಬತ್ತಿಲ್ಲ. ನೂರಾರು ಜನಪದ ಗೀತೆಗಳನ್ನು ತಮ್ಮ ಮಸ್ತಕದಲ್ಲಿ ಕಾಪಿಟ್ಟುಕೊಂಡಿದ್ದಾರೆ. ಇನ್ನೂರಕ್ಕೂ ಹೆಚ್ಚು ಜನಪದ ಗೀತೆಗಳನ್ನು ರಚಿಸಿ, ತಮ್ಮ ಮಕ್ಕಳ ಕೈಯಲ್ಲಿ ಬರೆದು ಭದ್ರಪಡಿಸಿದ್ದಾರೆ.

‘ನಮ್ಮ ತಂದೆ ಬರೆದಿರುವ ಗೀತೆಗಳನ್ನು ತಿದ್ದಿ ಸರಿಪಡಿಸಿ ಪುಸ್ತಕ ರೂಪದಲ್ಲಿ ಸಂಗ್ರಹಿಸಿದ್ದೇವೆ’ ಎನ್ನುವರು ಅವರ ಪುತ್ರ ರಂಗನಾಥ್ ತಿಳಿಸಿದ್ದಾರೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)