ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2 ವರ್ಷಗಳಲ್ಲಿ ಎತ್ತಿನಹೊಳೆ ಕಾಮಗಾರಿ ಪೂರ್ಣ: ಸಚಿವ ಜೆ.ಸಿ.ಮಾಧುಸ್ವಾಮಿ

ನೀರು ನೀಡುವ ಭರವಸೆ 
Last Updated 8 ಜನವರಿ 2020, 12:34 IST
ಅಕ್ಷರ ಗಾತ್ರ

ತಿಪಟೂರು: ಎತ್ತಿನಹೊಳೆ ಯೋಜನೆಯಲ್ಲಿ 1.5 ಟಿಎಂಸಿಯಿಂದ 1.7 ಟಿಎಂಸಿ ನೀರನ್ನು ತಿಪಟೂರು, ಚಿಕ್ಕನಾಯಕನಹಳ್ಳಿ, ಗುಬ್ಬಿಗೆ ನೀಡುವ ಭರವಸೆ ನೀಡಿದ ನಂತರ ಕಾಮಗಾರಿಗೆ ಭೂಮಿಪೂಜೆ ಮಾಡಲು ಮುಂದಾಗಿರುವುದಾಗಿದ್ದು, 2 ವರ್ಷದಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.

ತಾಲ್ಲೂಕಿನ ಬಿದರೆಗುಡಿ (ಕೊನೆಹಳ್ಳಿ) ಕಾವಲಿನ ವೆಟನೆರಿ ಕಾಲೇಜಿನ ಹಿಂಭಾಗದಲ್ಲಿ ಎತ್ತಿನಹೊಳೆ ಕಾಮಗಾರಿಗೆ ಭೂಮಿ ಪೂಜೆಯನ್ನು ನೆರವೇರಿಸಿ ಮಾತನಾಡಿದರು.

ಎತ್ತಿನಹೊಳೆ ಯೋಜನೆಯಲ್ಲಿ ತಾಲ್ಲೂಕುಗಳಿಗೆ ನೀರನ್ನು ನೀಡಬೇಕೆಂಬ ಹೋರಾಟದಲ್ಲಿ ಪ್ರಮುಖ ಪಾತ್ರಧಾರಿಗಳು ನಾವಾಗಿದ್ದೆವು. ತಾಲ್ಲೂಕಿಗೆ ನೀರನ್ನು ನೀಡದೆ ಇದ್ದಿದ್ದರಿಂದ ಯೋಜನೆಗೆ ಅವಕಾಶ ನೀಡಿರಲಿಲ್ಲ. ಮುಖ್ಯಮಂತ್ರಿಯೊಂದಿಗೆ ಮಾತುಕತೆ ನಡೆಸಿದ ನಂತರದಲ್ಲಿಯೇ ಕಾಮಗಾರಿಗೆ ಚಾಲನೆ ನೀಡಲು ನಿರ್ಧಾರಿಸಲಾಗಿದೆ ಎಂದು ಹೇಳಿದರು.

ಈ ಯೋಜನೆ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಜನತೆಗಾಗಿಯೇ ರೂಪಿತವಾಗಿದ್ದು, ಬೆಂಗಳೂರಿನ ಒಳಚರಂಡಿ ನೀರನ್ನು ಶುದ್ಧೀಕರಿಸಿ ಈ ಜಿಲ್ಲೆಗಳಿಗೆ ಹರಿಸುವ ಯೋಜನೆಗೆ ಚಿಂತನೆ ನಡೆಸಿದ್ದರಿಂದ ಯೋಜನೆಯ ಅಲ್ಪ ಭಾಗದ ನೀರನ್ನು ಸ್ಥಳೀಯವಾಗಿ ಬಳಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.

ಆದರೆ, ಕೆಲವರು ಅನವಶ್ಯಕವಾಗಿ ಉತ್ತಮ ಕಾಮಗಾರಿಗೆ ತಡೆ ಒಡ್ಡಲು ರೈತರಿಗೆ ಇಲ್ಲದ ಮಾಹಿತಿಯನ್ನು ನೀಡಿ ಹೋರಾಟ ಮಾಡಲು ಮುಂದಾಗುತ್ತಾರೆ. ರೈತರು ತಮ್ಮ ಜಮೀನಿನಲ್ಲಿ ಹಾದು ಹೋಗುವ ಜಾಗವನ್ನು ತಾವಾಗಿಯೇ ಬರೆದುಕೊಟ್ಟರೆ ಪರಿಹಾರಕ್ಕಿಂತಲೂ ಸ್ವಲ್ಪ ಹೆಚ್ಚಿನ ಹಣವನ್ನು ನೀಡಿ ರೈತರ ಹಿತ ಕಾಪಾಡಲು ಮುಂದಾಗುತ್ತೇವೆ. ಇಲ್ಲವಾದರೆ ಕಾನೂನಾತ್ಮಕವಾಗಿ ಭೂಮಿಯನ್ನು ಪಡೆದುಕೊಳ್ಳುತ್ತಾರೆ. ರೈತರು ಸಹಕಾರ ನೀಡದರೆ ಮಾತ್ರವೇ ಯೋಜನೆ ಯಶಸ್ವಿಯಾಗಿ ತಾಲ್ಲೂಕಿನ ಕೆರೆಗಳಿಗೂ ನೀರು ಹರಿಯಲು ಸಾಧ್ಯವಾಗುತ್ತದೆ ಎಂದರು.

ಶಾಸಕ ಬಿ.ಸಿ.ನಾಗೇಶ್ ಮಾತನಾಡಿದರು. ಸಣ್ಣ ನೀರಾವರಿ ವಿಭಾಗದ ಕಾರ್ಯದರ್ಶಿ ಪೇಶ್ವೆ, ಜಂಟಿ ನಿರ್ದೇಶಕ ಅನಿಲ್ ಕುಮಾರ್, ಉಪವಿಭಾಗಾಧಿಕಾರಿ ಕೆ.ಆರ್.ನಂದಿನಿ, ತಹಶೀಲ್ದಾರ್ ಬಿ.ಆರತಿ, ಡಿವೈಎಸ್‍ಪಿ ಕಲ್ಯಾಣ್ ಕುಮಾರ್ ಮತ್ತಿತರರಿದ್ದರು.

ಬಿಗಿ ಬಂದೋಬಸ್ತ್: ತಾಲ್ಲೂಕಿನಲ್ಲಿ ಎತ್ತಿನಹೊಳೆಯ ನೀರಾವರಿ ಹೋರಾಟದ ಕಾವು ಹೆಚ್ಚಿದ್ದರಿಂದ ಹೆಚ್ಚಿನ ಪೊಲೀಸ್‌ ರಕ್ಷಣೆ ಒದಗಿಸಲಾಗಿತ್ತು. ಭೂಮಿ ಪೂಜಾ ಕಾರ್ಯಕ್ರಮಕ್ಕೆ ಬರುವ ರೈತರನ್ನು, ಕಾರ್ಯಕರ್ತರನ್ನು ಪೊಲೀಸರು ಪ್ರಶ್ನಿಸಿ ವಿಚಾರಣೆ ನಡೆಸಿ ಸ್ಥಳಕ್ಕೆ ಕಳುಹಿಸುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT