ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಧನ ಬೆಲೆ ಏರಿಕೆ: ಜೆಡಿಎಸ್ ಪ್ರತಿಭಟನೆ

ಕೋವಿಡ್‌ನಿಂದ ಸಂತ್ರಸ್ತ ಕುಟುಂಬಗಳಿಗೆ ₹ 5 ಲಕ್ಷ ಪರಿಹಾರ ಬೇಡಿಕೆ
Last Updated 29 ಜೂನ್ 2021, 4:40 IST
ಅಕ್ಷರ ಗಾತ್ರ

ತುಮಕೂರು: ಇಂಧನ ಬೆಲೆ ಏರಿಕೆ ವಿರೋಧಿಸಿ, ಕೋವಿಡ್‌ನಿಂದ ಮೃತಪಟ್ಟ ಕುಟುಂಬಕ್ಕೆ ₹ 5 ಲಕ್ಷ ಪರಿಹಾರ ನೀಡುವಂತೆ ಆಗ್ರಹಿಸಿ ಜೆಡಿಎಸ್ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು.

ಜೆಡಿಎಸ್ ಕಚೇರಿಯಿಂದ ತೆರಳಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಧೋರಣೆಗಳನ್ನು ಖಂಡಿಸಿ ಘೋಷಣೆ ಕೂಗಿದರು.

ಕೋವಿಡ್ ಸಮಯದಲ್ಲಿ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಸಿಲಿಂಡರ್‌ ಬೆಲೆಯನ್ನು ಸತತವಾಗಿ ಹೆಚ್ಚಳ ಮಾಡುತ್ತಲೇ ಸಾಗಿದೆ. ಬೆಲೆ ಹೆಚ್ಚಳದಿಂದ ಜನಸಾಮಾನ್ಯರು ಬದುಕುವುದೇ ದುಸ್ತರವಾಗಿದೆ. ತಕ್ಷಣ ಇಂಧನ ಬೆಲೆ ಇಳಿಕೆ ಮಾಡಬೇಕು ಎಂದು ಒತ್ತಾಯಿಸಿದರು.

ಕೋವಿಡ್‌ನಿಂದ ಮೃತಪಟ್ಟ ಬಿಪಿಎಲ್ ಕುಟುಂಬಕ್ಕೆ ₹ 1 ಲಕ್ಷ ಪರಿಹಾರ ಘೋಷಿಸಿದ್ದು, ಇದು ಏನೇನೂ ಸಾಲದಾಗಿದೆ. ಕೂಡಲೇ ₹ 5 ಲಕ್ಷ ನೀಡಬೇಕು ಎಂದು ಆಗ್ರಹಿಸಿದರು.

ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಸಿ. ಅಂಜಿನಪ್ಪ, ‘ಸರ್ಕಾರ ವಿಧಿಸಿದ ಅವೈಜ್ಞಾನಿಕ ಲಾಕ್‌ಡೌನ್‌ನಿಂದಾಗಿ ಲಕ್ಷಾಂತರ ಜನರು ಕೆಲಸ ಕಳೆದುಕೊಂಡು ಬೀದಿಪಾಲಾಗಿದ್ದಾರೆ. ಇಂತಹ ಸಂಕಷ್ಟದ ಸಮಯದಲ್ಲಿ ನಿರಂತರವಾಗಿ ಇಂಧನ ಬೆಲೆ ಹೆಚ್ಚಳ ಮಾಡಿದ್ದು, ಬಡ, ಮಧ್ಯಮ ವರ್ಗದ ಜನರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಮೇ 4ರಿಂದ ಇಲ್ಲಿಯವರೆಗೆ 24 ಬಾರಿ ತೈಲ ಬೆಲೆ ಹೆಚ್ಚಳ ಮಾಡಿದ್ದು, ಲೀಟರ್ ಪೆಟ್ರೋಲ್ ಬೆಲೆ ₹ 100 ದಾಟಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕೋವಿಡ್ ಸಂಕಷ್ಟದಿಂದ ರೈತರು ನಲುಗಿದ್ದು, ಗಾಯದ ಮೇಲೆ ಬರೆ ಎಳೆದಂತೆ ರಸಗೊಬ್ಬರ ಬೆಲೆ ಏರಿಕೆ ಮಾಡಲಾಗಿದೆ. ಜತೆಗೆ ಬಿತ್ತನೆ ಬೀಜದ ಬೆಲೆಯನ್ನೂ ಏರಿಕೆ ಮಾಡಲಾಗಿದೆ. 50 ಕೆ.ಜಿ ಗೊಬ್ಬರದ ಚೀಲಕ್ಕೆ ₹ 500 ಹೆಚ್ಚುವರಿ ನೆರವು ನೀಡಬೇಕು ಎಂದು ಒತ್ತಾಯಿಸಿದರು.

ಜೆಡಿಎಸ್ ಕಾರ್ಯಾಧ್ಯಕ್ಷ ಟಿ.ಆರ್. ನಾಗರಾಜು, ‘ಕೋವಿಡ್‌ನಿಂದ ಮೃತಪಟ್ಟವರಿಗೆ ಪರಿಹಾರ ನೀಡುವಂತೆ ಮನವಿ ಮಾಡಿದರೆ ಸರ್ಕಾರದಲ್ಲಿ ಹಣವಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳುತ್ತಾರೆ. ಆದರೆ, ಶಾಸಕರ ಖರೀದಿಸಲು ಮಾತ್ರ ಹಣವಿದೆ. ಇಂಧನ ಮೇಲೆ ಹತ್ತಾರು ಬಾರಿ ತೆರಿಗೆ ವಿಧಿಸಿದರೂ ಯಾವೊಬ್ಬ ಸಚಿವರೂ ಮಾತನಾಡುತ್ತಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ’ ಎಂದು ಟೀಕಿಸಿದರು.

ಜೆಡಿಎಸ್ ನಗರ ಘಟಕದ ಅಧ್ಯಕ್ಷ ಬೆಳ್ಳಿ ಲೋಕೇಶ್, ‘ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಪಕ್ಷ ಅಧಿಕಾರದಲ್ಲಿದ್ದರೆ ಸ್ವರ್ಗ ಸೃಷ್ಟಿಸಬಹುದು ಎನ್ನುತ್ತಿದ್ದರು. ಜಿಎಸ್‌ಟಿ ಪಾಲು ಹಂಚಿಕೆ, ಪ್ರಾದೇಶಿಕವಾಗಿ ಹಲವಾರು ರೀತಿಯಲ್ಲಿ ತಾರತಮ್ಯ ಮಾಡುತ್ತಿದ್ದರೂ ರಾಜ್ಯದಿಂದ ಆಯ್ಕೆ ಆಗಿರುವ 25 ಸಂಸದರು ಬಾಯಿ ಬಿಡುತ್ತಿಲ್ಲ. ಮೌನಕ್ಕೆ ಶರಣಾಗಿ ರಾಜ್ಯಕ್ಕೆ ಮೋಸ ಮಾಡಿದ್ದಾರೆ. ಯಡಿಯೂರಪ್ಪ ನೇತೃತ್ವದ ಸರ್ಕಾರ ತಜ್ಞರ ಎಚ್ಚರಿಕೆಯನ್ನು ನಿರ್ಲಕ್ಷಿಸಿದ ಪರಿಣಾಮ ಲಕ್ಷಾಂತರ ಜನರು ಸಾವನ್ನಪ್ಪಿದರು. ಇಂತಹ ಸರ್ಕಾರದ ನಡೆಗೆ ಜೆಡಿಎಸ್ ಪಕ್ಷದ ಧಿಕ್ಕಾರವಿದೆ’ ಎಂದುತಿಳಿಸಿದರು.

ಮುಖಂಡರಾದ ಗಂಗಣ್ಣ, ಚಲುವರಾಜು, ತಾಹಿರಾ ಕುಲ್ಸಂ, ಕೃಷ್ಣಮೂರ್ತಿ, ಗೋವಿಂದರಾಜು, ಕೆಂಪರಾಜು, ಮಂಜುಣ್ಣ, ಲೋಕೇಶ್, ಸಿ.ಡಿ. ಜಯಶ್ರೀ, ಮೋಸಿನ್, ಪುಷ್ಪಾ, ಮಮತಾ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT