ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾವೇನು ಹೈಕಮಾಂಡ್ ಗುಲಾಮರಾ?: ಸಚಿವ ಕೆ.ಎನ್. ರಾಜಣ್ಣ ಕಿಡಿ

ಲಾಟರಿ ಟಿಕೆಟ್ ಹಂಚಿದಂತೆ ನಿಗಮ, ಮಂಡಳಿಗೆ ನೇಮಕ
Published 25 ಜನವರಿ 2024, 10:24 IST
Last Updated 25 ಜನವರಿ 2024, 10:24 IST
ಅಕ್ಷರ ಗಾತ್ರ

ತುಮಕೂರು: ನಿಗಮ, ಮಂಡಳಿ ನೇಮಕ ವಿಚಾರದಲ್ಲಿ ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದಿರುವುದಕ್ಕೆ ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ತೀವ್ರ ಆಕ್ರೋಶ ಹೊರ ಹಾಕಿರುವ ಸಹಕಾರ ಸಚಿವ ಕೆ.ಎನ್.ರಾಜಣ್ಣ, ‘ನಾವೇನು ಹೈ ಕಮಾಂಡ್ ಗುಲಾಮರಾ? ಈ ರೀತಿ ಸವಾರಿ ಮಾಡುವುದನ್ನು ಸಹಿಸುವುದಿಲ್ಲ’ ಎಂದು ಎಚ್ಚರಿಕೆ ನೀಡಿದರು.

ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ನಮ್ಮ ಜತೆ ಮಾತುಕತೆ ನಡೆಸಿ, ವಿಶ್ವಾಸಕ್ಕೆ ತೆಗೆದುಕೊಂಡು ನಿಗಮ, ಮಂಡಳಿಗೆ ನೇಮಕ ಮಾಡಬೇಕಾ? ಇಲ್ಲ, ದೆಹಲಿಯಲ್ಲಿ ಕುಳಿತು ಪಟ್ಟಿ ಮಾಡಿ ಲಾಟರಿ ಟಿಕೆಟ್ ಹಂಚಿದಂತೆ ಹಂಚಿದರೆ ಹೇಗೆ? ನಮ್ಮನ್ನು ಒಂದು ಮಾತು ಕೇಳಬೇಕಲ್ಲ?’ ಎಂದು ತರಾಟೆಗೆ ತೆಗೆದುಕೊಂಡರು.

‘ಸ್ಥಳೀಯವಾಗಿ ಯಾವ ಕಾರ್ಯಕರ್ತರು, ಮುಖಂಡರು ಪಕ್ಷಕ್ಕಾಗಿ ಕೆಲಸ ಮಾಡಿದ್ದಾರೆ ಎಂಬುದು ನಮಗೆ ಗೊತ್ತಿರುತ್ತದೆ. ನಾವು ಕೊಟ್ಟ ಹೆಸರುಗಳನ್ನು ಸೇರಿಸಬೇಕು. ಅದು ಬಿಟ್ಟು, ದೆಹಲಿಯಲ್ಲಿ ಕುಳಿತು ತಮಗೆ ಬೇಕಾದವರ ಹೆಸರುಗಳನ್ನು ಸೇರಿಸುವುದನ್ನು ಸಹಿಸುವುದಿಲ್ಲ. ಹಿಂದೆ ಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷರಿಗೆ ಜವಾಬ್ದಾರಿ ಕೊಟ್ಟು, ಸಲಹೆ ನೀಡುತ್ತಿದ್ದರು. ಈಗ ಅವರೇ ಪಟ್ಟಿ ಸಿದ್ಧಪಡಿಸಿ ಕಳುಹಿಸಿದ್ದಾರೆ. ಇದು ಹೊಸ ಹೈಕಮಾಂಡ್‌ನ, ಹೊಸ ವರಸೆ’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೆಸರು ಹೇಳದೆ ಗುಡುಗಿದರು.

‘ಈ ವಿಚಾರದಲ್ಲಿ ಹೈ ಕಮಾಂಡ್‌ನ ಯಾವ ನಾಯಕರ ಹೆಸರನ್ನೂ ಹೇಳಲು ಬಯಸುವುದಿಲ್ಲ. ಆದರೆ ಲೋಕಸಭೆ ಚುನಾವಣೆಗೆ ಅಭ್ಯರ್ಥಿ ಆಯ್ಕೆ ವಿಚಾರದಲ್ಲೂ ಇದೇ ರೀತಿ ನಡೆದುಕೊಂಡರೆ ಅವರೇ ಇಲ್ಲಿಗೆ ಬಂದು ಗೆಲ್ಲಿಸಬೇಕಾಗುತ್ತದೆ. ನಮ್ಮನ್ನು ಏನೂ ಕೇಳುವಂತಿಲ್ಲ. ಎಲ್ಲಾ ಅವರೇ ಮಾಡುವುದಾದರೆ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಲಿ’ ಎಂದು ಸವಾಲು ಹಾಕಿದರು.

‘ರಾಜೀನಾಮೆಗೆ ಸಿದ್ಧ’

‘ತುಮಕೂರು ಲೋಕಸಭಾ ಕ್ಷೇತ್ರದಿಂದ ಎಸ್.ಪಿ.ಮುದ್ದಹನುಮೇಗೌಡ ಸ್ಪರ್ಧಿಸಲಿದ್ದಾರೆ. ಅಭ್ಯರ್ಥಿ ಆಗುವುದನ್ನು ಯಾರಿಂದಲೂ ಬದಲಿಸಲು ಸಾಧ್ಯವಿಲ್ಲ. ಲೋಕಸಭೆ ಚುನಾವಣೆಯಲ್ಲಿ ತಮ್ಮ ವ್ಯಾಪ್ತಿಯ ಅಭ್ಯರ್ಥಿಯನ್ನು ಗೆಲ್ಲಿಸದಿದ್ದರೆ ಸಚಿವರ ತಲೆದಂಡ ಮಾಡುವುದಾದರೆ ಮಾಡಲಿ. ಯಾರು ಗೆಲ್ಲಿಸುವುದಿಲ್ಲ ಅವರ ತಲೆದಂಡವಾಗುತ್ತದೆ. ಗೆಲ್ಲಿಸದೇ ಇದ್ದರೆ ನನ್ನದೂ ತಲೆತಂಡವಾಗಲಿ. ನಾನು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧನಿದ್ದೇನೆ’ ಎಂದು ಕೆ.ಎನ್.ರಾಜಣ್ಣ ಹೇಳಿದರು.

ಜಗದೀಶ್ ಶೆಟ್ಟರ್ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದಕ್ಕೆ ಪ್ರತಿಕ್ರಿಯಿಸಿ, ‘ವಾಪಸ್ ಹೋಗಿದ್ದರಿಂದ ಬಿಜೆಪಿಗೆ ಲಾಭವಾಯಿತು. ಶೆಟ್ಟರ್ ಅವರಿಗೆ ಅವಮಾನವಾಯಿತು. ಸ್ವಾರ್ಥಕ್ಕಾಗಿ ಪಕ್ಷ ಬಿಟ್ಟಿದ್ದಾರೆ. ಇನ್ನು ಮುಂದೆಯೂ ಅಲ್ಲೇ ಇರುತ್ತಾರೆ ಎಂಬ ಗ್ಯಾರಂಟಿ ಏನಿದೆ’ ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT