ಬುಧವಾರ, ಮಾರ್ಚ್ 3, 2021
30 °C
ತುಮಕೂರು ಮಹಾನಗರ ಪಾಲಿಕೆ: ಎದ್ದು ಕಾಣುತ್ತಿದೆ ಕಾಗುಣಿತ ದೋಷ, ವಾಕ್ಯ ರಚನೆಯಲ್ಲಿ ಲೋಪ

ತುಮಕೂರು ಪಾಲಿಕೆಯ ನಡವಳಿ ಪ್ರತಿಯಲ್ಲಿ ಕನ್ನಡ ಅಯೋಮಯ

ಡಿ.ಎಂ.ಕುರ್ಕೆ ಪ್ರಶಾಂತ್ Updated:

ಅಕ್ಷರ ಗಾತ್ರ : | |

ತುಮಕೂರು: ನವೆಂಬರ್ 1ರಂದು ಕನ್ನಡ ರಾಜ್ಯೋತ್ಸವವನ್ನು ಅದ್ಧೂರಿಯಾಗಿ ಆಚರಿಸಿದ್ದೇವೆ. ಅಷ್ಟೇ ಏಕೆ ಇಡೀ ತಿಂಗಳ ಪೂರ್ತಿ ರಾಜ್ಯೋತ್ಸವವನ್ನು ಉತ್ಸವದಂತೆಯೇ ಆಚರಿಸುತ್ತೇವೆ. ನಾಡು, ನುಡಿ, ನೆಲದ ಬಗ್ಗೆ ಅಭಿಮಾನ ಸುರಿಮಳೆ ಸುರಿಸುತ್ತೇವೆ. 

ಆದರೆ ತುಮಕೂರು ಮಹಾನಗರ ಪಾಲಿಕೆಯ ‘ನಡವಳಿ ಪ್ರತಿ’ಯಲ್ಲಿ ಕನ್ನಡದ ಸ್ಥಿತಿ ಅಯೋಮಯ ಎನ್ನುವಂತಿದೆ. ಪಾಲಿಕೆ ಮೇಯರ್ ಲಲಿತಾ ರವೀಶ್ ಅವರ ಅಧ್ಯಕ್ಷತೆಯಲ್ಲಿ ಸೆಪ್ಟೆಂಬರ್‌ನಲ್ಲಿ ನಡೆದ ಪಾಲಿಕೆಯ ಸಾಮಾನ್ಯ ಸಭೆಯ ‘ನಡವಳಿ ಪ್ರತಿ’ಯಲ್ಲಿ ಕನ್ನಡದ ಸ್ಥಿತಿ ಅಧ್ವಾನ ಎನ್ನುವಂತಿದೆ.

ಪ್ರತಿ ಪುಟಗಳಲ್ಲಿಯೂ ಕಾಗುಣಿತದ ತಪ್ಪುಗಳು ಕಣ್ಣಿಗೆ ರಾಚುತ್ತವೆ. ಇನ್ನೂ ವಾಕ್ಯ ರಚನೆಯ ಬಗ್ಗೆ ಕೇಳುವುದೇ ಬೇಡ. ಪದಗಳನ್ನು ತಿಣುಕಾಡಿಯೇ ಅರ್ಥ ಮಾಡಿಕೊಳ್ಳಬೇಕು. ಅಲ್ಪ ವಿರಾಮ, ಪೂರ್ಣ ವಿರಾಮ... ಹೀಗೆ ಚಿಹ್ನೆಗಳ ಬಳಕೆ ಮತ್ತಷ್ಟು ಗೊಂದಲವನ್ನು ಮೂಡಿಸುತ್ತದೆ.

ನಾಲ್ಕು ಲಕ್ಷ ಜನಸಂಖ್ಯೆ ಹೊಂದಿರುವ ಮಹಾನಗರ ಪಾಲಿಕೆ ಕೈಗೊಳ್ಳುವ ನಿರ್ಣಯಗಳು ಮಹತ್ವವಾದವು. ನಡವಳಿ ‍ಪ್ರತಿ ಎಂದೆಂದಿಗೂ ಪಾಲಿಕೆಯ ಒಂದು ಮಹತ್ವದ ದಾಖಲೆಯಾಗಿಯೇ ಉಳಿಯುತ್ತದೆ. ಮುಂದಿನ ದಿನಗಳಲ್ಲಿ ಯಾವುದೇ ವಿವಾದಗಳು ಸೃಷ್ಟಿ ಆದಾಗ ಈ ನಡವಳಿ ಪುಸ್ತಕವನ್ನು ಅವಲೋಕಿಸುವ ಸಾಧ್ಯತೆಯೂ ಇದೆ. ಈ ಎಲ್ಲ ದೃಷ್ಟಿಯಿಂದ ‘ನಡವಳಿ ಪ್ರತಿ’ ಮಹತ್ವದ್ದು. ಆದ್ದರಿಂದ ಇಲ್ಲಿನ ಮಾಹಿತಿ ನಿಖರವಾಗಿರಬೇಕು. ಗೊಂದಲಕ್ಕೆ ಅವಕಾಶ ಇಲ್ಲದಂತೆ ಸ್ಪಷ್ಟವಾಗಿರಬೇಕು. ಆದರೆ ‘ನಡವಳಿ ಪ್ರತಿ’ಯಲ್ಲಿ ಇವು ಗೌಣವಾಗಿವೆ.

ಸುಮ್ಮನೆ ಕಣ್ಣಾಡಿಸಿದರೂ ತಪ್ಪುಗಳ ಸರಮಾಲೆಯೇ ಎದ್ದು ಕಾಣುತ್ತದೆ.

ಪದವಿದಾರ, ನ್ಯಾಯಲದಲ್ಲಿ, ಬೀಮಸಂದ್ರ, ಸೇರ್ವೇ ನಂಬರ್, ದುರಸ್ಥಿತಿ, ತಾತ್ಕಲಿಕ, ವಿರುದ್ದ, ಸರಭರಾಜು, ಜವಬ್ದಾರಿ, ನಿಗಧಿಮಾಡು, ಬೇಟಿ...ಇವು ಬೆರಳೆಣಿಕೆಯ ತಪ್ಪುಗಳಷ್ಟೇ. ಇಂತಹವುಗಳ ಸರಮಾಲೆಯೇ ಪ್ರತಿಯಲ್ಲಿ ಸಾಕಷ್ಟು ಸಿಗುತ್ತವೆ.

ನಡವಳಿ ಪ್ರತಿಯಲ್ಲಿ ಒಂದು ಪದ ಎರಡು ರೀತಿಯಲ್ಲಿ ಬಳಕೆಯೂ ಆಗಿದೆ. ಉದಾಹರಣೆಗೆ; ಅನುಷ್ಟಾನ; ಅನುಷ್ಠಾನ, ಕುಪ್ಪುರು;‌ ಕುಪ್ಪೂರು, ಕಚೇರಿ; ಕಛೇರಿ. ಇಂತಹವುಗಳೂ ಹತ್ತು ಹಲವು ಇವೆ.  

‘ತುಮಕೂರು ನಗರದಲ್ಲಿ ಸ್ಮಾರ್ಟ್‌ಸಿಟಿ ಡಸ್ಟ್‌ಬಿನ್ ಎಷ್ಟು ಇದೆ ಎಂದು ಡಸ್ಟ್‌ಬಿನ್ 12 ಸಾವಿರ ಇದೆ ರೈಲ್ವೆ ಇಲಾಖೆಯಲ್ಲಿ 3000 ಸಾವಿರ ಇದೆ ಇದರ ವ್ಯತ್ಯಾಸಕ್ಕೆ ಕಾರಣವೇನು? 48 ಕಡೆ ಡಸ್ಟ್‌ಬಿನ್ ಇರುತ್ತದೆ. ರಶ್ಮಿಯವರು ಕಳ್ಳತನ ಆಗಿರುವ ಡಸ್ಟ್‌ಬಿನ್‌ಗಳ ಜಾಗದಲ್ಲಿ ಹೊಸ ಡಸ್ಟ್‌ಬಿನ್ ಹಾಕಿಸಿಕೊಡಲಾಗುವುದು...’ ಹೀಗೆ ಮುಂದುವರಿಯುತ್ತವೆ ಇಲ್ಲಿನ ಸಾಲುಗಳು. ಇಲ್ಲಿ ನಗರದಲ್ಲಿ ಎಷ್ಟು ಡಸ್ಟ್‌ಬಿನ್ ಇವೆ ಎಂದೋ ಅಥವಾ ದರ ಎಷ್ಟು ಇದೆ ಎಂದೋ ಒಂದೂ ಸ್ಪಷ್ಟವಿಲ್ಲ. ಇದು ಒಂದು ಉದಾಹರಣೆ ಮಾತ್ರ. 

ಸುದೀರ್ಘವಾದ ವಾಕ್ಯಗಳಿಗೆ ಅಲ್ಪವಿರಾಮವೂ ಇಲ್ಲ. ಪೂರ್ಣವಿರಾಮವೂ ಇಲ್ಲ. ಸುಮ್ಮನೆ ಅರ್ಥವಾಗುವಷ್ಟು ಓದಿಕೊಂಡು ಹೋಗಬೇಕಷ್ಟೆ!

ನಡವಳಿ ಪ್ರತಿ ರೂಪುಗೊಳ್ಳುವಾಗ ಹಲವು ವಿದ್ಯಾವಂತ ಅಧಿಕಾರಿಗಳು, ಬುದ್ಧಿವಂತ ಸದಸ್ಯರು ಸಾಕ್ಷಿ ಆಗಿರುತ್ತಾರೆ. ಆದರೆ ಕನ್ನಡ ಭಾಷೆಯ ಬಳಕೆ ಮಾತ್ರ ‘ಅಯ್ಯೋ...’ ಎನಿಸುತ್ತದೆ.

ದಾಖಲೆಗಳಲ್ಲಿನ ತಪ್ಪು ಅಕ್ಷಮ್ಯ

‘ಮಾತನಾಡುವಾಗ ತಪ್ಪುಗಳಾದರೆ ಅದನ್ನು ಒಪ್ಪಬಹುದು. ಆದರೆ ನಡವಳಿಯಂತಹ ಶಾಶ್ವತ ದಾಖಲೆಗಳಲ್ಲಿ ತಪ್ಪುಗಳನ್ನು ಒಪ್ಪಲು ಸಾಧ್ಯವಿಲ್ಲ. ಇದು ಅಕ್ಷಮ್ಯ’ ಎನ್ನುವರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಬಾ.ಹ.ರಮಾಕುಮಾರಿ.

‘ಇವು ಶಾಶ್ವತವಾದ ದಾಖಲೆಗಳಾದ ಕಾರಣ ಮೇಯರ್ ಮತ್ತು ಪಾಲಿಕೆ ಆಯುಕ್ತರು ಬಹಳ ಎಚ್ಚರದಿಂದ ಇವುಗಳನ್ನು ಗಮನಿಸಬೇಕು. ಇದು ಇಲ್ಲಿ ಮಾತ್ರ ಆಗುತ್ತಿದೆ ಎಂದಲ್ಲ. ಕೆಲವು ತೀರ್ಪುಗಳಲ್ಲಿಯೂ ಭಾಷೆ ಬಳಕೆಯ ದೋಷಗಳನ್ನು ನೋಡಿದ್ದೇವೆ. ಕನ್ನಡಿಗರೇ ಭಾಷೆ ಶುದ್ಧತೆಯ ಬಗ್ಗೆ ಗಮನ ಕೊಡುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ನಡವಳಿ ಪ್ರತಿಗಳನ್ನು ರೂಪಿಸುವಾಗ ಭಾಷೆಯ ಬಗ್ಗೆ ಹಿಡಿತ ಇರುವ ಒಬ್ಬರನ್ನು ಕೂರಿಸಿಕೊಳ್ಳುವುದು ಉತ್ತಮ. ಈ ಬಗ್ಗೆ ಮೇಲಧಿಕಾರಿಗಳು ನಿಗಾವಹಿಸಬೇಕು. ಮೇಯರ್ ಮತ್ತು ಆಯುಕ್ತರು ಇನ್ನಾದರೂ ಈ ಬಗ್ಗೆ ನಿಗಾವಹಿಸಬೇಕು’ ಎಂದು ಆಗ್ರಹಿಸಿದರು.

ಮಹಾಪೌರರ ಬೇಸರ

‘ನನಗೂ ಇದು ಗಮನಕ್ಕೆ ಬಂದಿದೆ. ಸಭಾ ಕಾರ್ಯದರ್ಶಿ ಬಳಿ ನಾನೂ ಈ ಬಗ್ಗೆ ಬೇಸರ ವ್ಯಕ್ತಪಡಿಸಿದೆ. ನಾವು ಎಷ್ಟು ತಾನೇ ಹೇಳುವುದು. ಕಾರ್ಯದರ್ಶಿಯೂ ತಿದ್ದಿಕೊಳ್ಳುತ್ತಿಲ್ಲ’ ಎಂದು ಮಹಾಪೌರರಾದ ಲಲಿತಾ ರವೀಶ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು. 

‘ಕಾಗುಣಿತ ದೋಷಗಳು ಇವೆ. ಸಭಾ ಕಾರ್ಯದರ್ಶಿ ಈ ಹಿಂದೆ ಹಣಕಾಸು ವಿಭಾಗದಲ್ಲಿ ಕೆಲಸ ಮಾಡಿದ್ದವರು. ಈ ಹಿಂದೆ ಇದ್ದವರು ಇವುಗಳನ್ನು ಸರಿಯಾಗಿ ಗಮನಿಸಿ ನಡವಳಿಗಳನ್ನು ಸಿದ್ಧ ಮಾಡುತ್ತಿದ್ದರು. ಮುಂದೆಯಾದರೂ ಈ ಬಗ್ಗೆ ಅವರಿಗೆ ತಿಳಿ ಹೇಳಲಾಗುವುದು’ ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು