ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು: ಮೊಳಗಿದ ಕನ್ನಡ ಡಿಂಡಿಮ

ರಾರಾಜಿಸಿದ ಕನ್ನಡದ ಬಾವುಟ: ಎಲ್ಲೆಡೆ ಕನ್ನಡದ ಕಂಪು
Last Updated 2 ನವೆಂಬರ್ 2022, 6:34 IST
ಅಕ್ಷರ ಗಾತ್ರ

ತುಮಕೂರು: ನಗರ ಸೇರಿದಂತೆ ಜಿಲ್ಲೆಯಾದ್ಯಂತ ಮಂಗಳವಾರ ಕನ್ನಡ ಗೀತೆಗಳು ಮೊಳಗಿದವು. ಎಲ್ಲೆಡೆ ಕನ್ನಡ ಬಾವುಟಗಳು ರಾರಾಜಿಸಿದವು.

ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಜಿಲ್ಲಾ ಆಡಳಿತದಿಂದ ನಗರದ ಜೂನಿಯರ್‌ ಕಾಲೇಜು ಮೈದಾನದಲ್ಲಿ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕನ್ನಡ ಗೀತೆಗಳು ಸದ್ದು ಮಾಡಿದವು. ನೂರಾರು ಮಕ್ಕಳು ಬಣ್ಣ ಬಣ್ಣದ ವೇಷದಲ್ಲಿ ನೋಡುಗರನ್ನು ತಮ್ಮತ್ತ ಸೆಳೆದರು. ನೃತ್ಯ ಪ್ರದರ್ಶನದ ಮೂಲಕ ನೆರೆದವರ ಸಿಳ್ಳೆ, ಚಪ್ಪಾಳೆ ಗಿಟ್ಟಿಸಿಕೊಂಡರು.

ಬಾಲಕಿಯರು ತಾಯಿ ಭುವನೇಶ್ವರಿ ವೇಷ ತೊಟ್ಟಿದ್ದರು. ವಿದ್ಯಾರ್ಥಿಗಳು ಬಿಳಿ ಪಂಚೆ ಧರಿಸಿ, ಕೈಯಲ್ಲಿ ಕನ್ನಡ ಬಾವುಟ ಹಿಡಿದು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ‘ಈ ಕನ್ನಡ ಮಣ್ಣನು ಮರೀಬೇಡ ಓ ಅಭಿಮಾನಿ’ ಗೀತೆಗೆ ನಗರದ ಡಾನ್ ಬೋಸ್ಕೊ ಶಾಲೆಯ ಮಕ್ಕಳು ಹೆಜ್ಜೆ ಹಾಕಿದರು. ವಿವಿಧ ಹೂವುಗಳಿಂದ ಅಲಂಕೃತವಾದ ಬೆಳ್ಳಿ ರಥದಲ್ಲಿ ಕನ್ನಡ ನಾಡು ನುಡಿಗೆಶ್ರಮಿಸಿದ ಮಹಾನ್ ನಾಯಕರ ವೇಷ, ಭೂಷಣದಲ್ಲಿ ವಿದ್ಯಾರ್ಥಿಗಳು ಮಿಂಚಿದರು.

ನಗರದ ವಿದ್ಯಾನಿಕೇತನ, ಬಟವಾಡಿಯ ಸೇಂಟ್ ಮೇರಿಸ್ ಶಾಲೆ, ಎಸ್‌ಜಿಆರ್‌ ಶಾಲೆ, ಬಿಷಪ್‌ ಸಾರ್ಜೆಂಟ್‌ ಶಾಲೆಯ ವಿದ್ಯಾರ್ಥಿಗಳು ವಿವಿಧ ಕನ್ನಡ ಗೀತೆಗಳಿಗೆ ನೃತ್ಯ ಪ್ರದರ್ಶಿಸಿದರು. ವಿಭಿನ್ನ, ವಿಶೇಷ ಹಾಡುಗಳ ಮೂಲಕ ವೀಕ್ಷಕರನ್ನು ರಂಜಿಸಿದರು. ನೃತ್ಯ ಪ್ರದರ್ಶನದಿಂದ ನೋಡುಗರಲ್ಲಿ ಕನ್ನಡಾಭಿಮಾನ ಹೆಚ್ಚಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಆರಗ ಜ್ಞಾನೇಂದ್ರ ಧ್ವಜಾರೋಹಣ ನೆರವೇರಿಸಿದರು. ಶಾಸಕರಾದ ಜಿ.ಬಿ.ಜ್ಯೋತಿಗಣೇಶ್‌, ಆರ್.ರಾಜೇಂದ್ರ, ಪಾಲಿಕೆ ಮೇಯರ್‌ ಎಂ.ಪ್ರಭಾವತಿ ಇತರರು ಇದ್ದರು.

ಮೆರವಣಿಗೆ: ಕನ್ನಡ ರಾಜ್ಯೋತ್ಸವದ ಪ್ರಯುಕ್ತ ನಡೆದ ತಾಯಿ ಭುವನೇಶ್ವರಿ ದೇವಿಯ ಮೂರ್ತಿ, ಸ್ತಬ್ಧಚಿತ್ರಗಳ ಮೆರವಣಿಗೆ ಗಮನ ಸೆಳೆಯಿತು. ಜಿಲ್ಲಾಧಿಕಾರಿ ಕಚೇರಿಯ ಬಳಿ ವಿವಿಧ ಹೂವುಗಳಿಂದ ಅಲಂಕೃತಗೊಂಡ ಬೆಳ್ಳಿ ರಥದ ಮೆರವಣಿಗೆಗೆ ಚಾಲನೆ ನೀಡಲಾಯಿತು. ಪಟ ಕುಣಿತ, ತಮಟೆ ನಾದ ಒಳಗೊಂಡಂತೆ ವಿವಿಧ ಜಾನಪದ ಕಲಾ ತಂಡಗಳು
ಭಾಗವಹಿಸಿದ್ದವು.

ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಮೆರವಣಿಗೆಗೆ ಚಾಲನೆ ನೀಡಿದರು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಆರ್‌.ಕೆ.ಶಹಪೂರವಾಡ್‌, ಜಿ.ಪಂ ಸಿಇಒ ಕೆ.ವಿದ್ಯಾಕುಮಾರಿ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಸ್‌.ಸಿದ್ದಲಿಂಗಪ್ಪ ಇದ್ದರು. ಉಪವಿಭಾಗಾಧಿಕಾರಿ ವಿ.ಅಜಯ್‌, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ರಘು, ಕೃಷಿ ಇಲಾಖೆ ಜಂಟಿ ನಿರ್ದೇಶಕಿ ರಾಜ ಸುಲೋಚನಾ, ಪಾಲಿಕೆ ಆಯುಕ್ತ ಸಿ.ಯೋಗಾನಂದ ಇತರರು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT