ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು: ಮಾಗಡಿಗೆ ನೀರು ಕೊಡದಿರಲು ನಿರ್ಧಾರ, ಕೆನಾಲ್ ನಿರ್ಮಾಣಕ್ಕೆ ವಿರೋಧ

Published 4 ಮಾರ್ಚ್ 2024, 13:58 IST
Last Updated 4 ಮಾರ್ಚ್ 2024, 13:58 IST
ಅಕ್ಷರ ಗಾತ್ರ

ತುಮಕೂರು: ಜಿಲ್ಲೆಯಿಂದ ಮಾಗಡಿ ತಾಲ್ಲೂಕಿಗೆ ಹೇಮಾವತಿ ನೀರು ಹರಿಸದಿರಲು ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಕೆಡಿಪಿ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು.

ಕುಣಿಗಲ್– ಮಾಗಡಿ ಹೇಮಾವತಿ ಲಿಂಕ್ ಕೆನಾಲ್ ನಿರ್ಮಾಣಕ್ಕೂ ಸಭೆಯಲ್ಲಿ ಶಾಸಕರು ಪಕ್ಷ ಭೇದ ಮರೆತು ತೀವ್ರ ವಿರೋಧ ವ್ಯಕ್ತಪಡಿಸಿದರು. ಯಾವುದೇ ಕಾರಣಕ್ಕೂ ಜಿಲ್ಲೆಯಿಂದ ಒಂದು ತೊಟ್ಟು ನೀರು ತೆಗೆದುಕೊಂಡು ಹೋಗಲು ಅವಕಾಶ ನೀಡದಿರಲು ನಿರ್ಧರಿಸಿದರು.

ಉಪಮುಖ್ಯಮಂತ್ರಿಯೂ ಆದ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರು ಲಿಂಕ್ ಕೆನಾಲ್ ನಿರ್ಮಿಸಿ ಮಾಗಡಿ ತಾಲ್ಲೂಕಿಗೆ ಹೇಮಾವತಿ ನೀರು ತೆಗೆದುಕೊಂಡು ಹೋಗಲು ಮುಂದಾಗಿದ್ದಾರೆ. ಈ ಕಾಮಗಾರಿಗೆ ಮಾರ್ಚ್ 2ರಂದು ಕುಣಿಗಲ್‌ನಲ್ಲಿ ಡಿ.ಕೆ.ಶಿವಕುಮಾರ್ ಚಾಲನೆ ನೀಡಿದ್ದರು. ತಮ್ಮದೇ ಪಕ್ಷದ ನಾಯಕರು ಚಾಲನೆ ನೀಡಿರುವ ಯೋಜನೆಗೆ ಜಿಲ್ಲೆಯ ಕಾಂಗ್ರೆಸ್ ಶಾಸಕರು ತಡೆಯೊಡ್ಡಿದ್ದಾರೆ.

ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಶಾಸಕರು ಒಟ್ಟಾಗಿ ನೀರು ಕೊಡುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದರಿಂದ ಸಭೆಯಲ್ಲೇ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಚಿವ ಪರಮೇಶ್ವರ ಪ್ರಕಟಿಸಿದರು. ಅದಕ್ಕೆ ಸಭೆಯಲ್ಲಿದ್ದ ಎಲ್ಲಾ ಶಾಸಕರು ಸಹಮತ ವ್ಯಕ್ತಪಡಿಸಿದ್ದರಿಂದ ‘ರಾಮನಗರ ಜಿಲ್ಲೆಗೆ ಹೇಮಾವತಿ ನೀರು ಹರಿಸುವುದಿಲ್ಲ’ ಎಂಬ ನಿರ್ಣಯ ಕೈಗೊಂಡು ಸರ್ಕಾರಕ್ಕೆ ಕಳುಹಿಸಲು ನಿರ್ಧರಿಸಲಾಯಿತು. ಜಿಲ್ಲೆಗೆ ಹಂಚಿಕೆಯಾಗಿರುವುದು ಬಿಟ್ಟು ಹೆಚ್ಚುವರಿಯಾಗಿ ಹಂಚಿಕೆ ಮಾಡಿಸಿಕೊಂಡು ತೆಗೆದುಕೊಂಡು ಹೋಗಬಹುದು ಎಂಬ ನಿರ್ಧಾರಕ್ಕೆ ಬರಲಾಯಿತು.

ವಿಷಯ ಪ್ರಸ್ತಾಪಿಸಿದ ಗ್ರಾಮಾಂತರ ಕ್ಷೇತ್ರದ ಶಾಸಕ ಬಿ.ಸುರೇಶ್‌ಗೌಡ, ‘ನಮ್ಮ ಕ್ಷೇತ್ರದಲ್ಲಿ ಜನರಿಗೆ ಕುಡಿಯಲು ನೀರು ಇಲ್ಲವಾಗಿದೆ. ಜಿಲ್ಲೆಗೆ ಹಂಚಿಕೆಯಾಗಿರುವ ನೀರಿನಲ್ಲೇ ಮಾಗಡಿಗೆ ತೆಗೆದುಕೊಂಡು ಹೋಗಲಾಗುತ್ತಿದೆ. ಇದರಿಂದ ಜಿಲ್ಲೆಯ ಜನರಿಗೆ ಅನ್ಯಾಯವಾಗಲಿದೆ. ಮುಂದಿನ ದಿನಗಳಲ್ಲಿ ಕುಡಿಯಲು ನೀರು ಸಿಗದಾಗುತ್ತದೆ. ಯಾವುದೇ ಕಾರಣಕ್ಕೂ ನೀರು ಕೊಡಬಾರದು’ ಎಂದು ಒತ್ತಾಯಿಸಿದರು.

ಇದಕ್ಕೆ ಜೆಡಿಎಸ್ ಶಾಸಕ ಎಂ.ಟಿ.ಕೃಷ್ಣಪ್ಪ, ಸಿ.ಬಿ.ಸುರೇಶ್‌ಬಾಬು, ಬಿಜೆಪಿ ಶಾಸಕ ಜಿ.ಬಿ.ಜ್ಯೋತಿಗಣೇಶ್ ಧ್ವನಿಗೂಡಿಸಿದರು. ವೇದಿಕೆಯಲ್ಲಿದ್ದ ಸಚಿವ ಜಿ.ಪರಮೇಶ್ವರ, ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ, ಕೆಎಸ್‌ಆರ್‌ಟಿಸಿ ನಿಗಮದ ಅಧ್ಯಕ್ಷ ಎಸ್.ಆರ್.ಶ್ರೀನಿವಾಸ್ ಅವರನ್ನು ಶಾಸಕರು ಪ್ರಶ್ನೆ ಮಾಡಿದರು. ಆಗ ಅವರೂ ಜಿಲ್ಲೆಯಿಂದ ನೀರು ತೆಗೆದುಕೊಂಡು ಹೋಗಲು ಅವಕಾಶ ನೀಡುವುದಿಲ್ಲ ಎಂದರು. ಕೊನೆಗೆ ಸಚಿವರು ನಿರ್ಣಯ ಪ್ರಕಟಿಸಿದರು.

ಜಿಲ್ಲೆಗೆ 19.95 ಟಿಎಂಸಿ ಅಡಿಗಳಷ್ಟು ಹೇಮಾವತಿ ನೀರು ಹಂಚಿಕೆಯಾಗಿದ್ದು, ಅದರಲ್ಲಿ ಕುಣಿಗಲ್ ತಾಲ್ಲೂಕಿಗೆ 3.03 ಟಿಎಂಸಿ ಹಂಚಿಕೆಯಾಗಿದೆ. ಕುಣಿಗಲ್‌ಗೆ ಹಂಚಿಕೆಯಾಗಿರುವ ನೀರಿನಲ್ಲೇ 1 ಟಿಎಂಸಿ ನೀರನ್ನು ಮಾಗಡಿಗೆ ತೆಗೆದುಕೊಂಡು ಹೋಗಲಾಗುತ್ತಿದೆ. ಮಾಗಡಿಗೆ ಹೆಚ್ಚುವರಿಯಾಗಿ ನೀರು ಹಂಚಿಕೆಯಾಗಿಲ್ಲ ಎಂದು ಹೇಮಾವತಿ ನಾಲ ವಲಯದ ಮುಖ್ಯ ಎಂಜಿನಿಯರ್ ಫಣಿರಾಜ್ ಸಭೆಗೆ ಮಾಹಿತಿ ನೀಡಿದರು.

10 ದಿನದಲ್ಲಿ ಹೇಮೆ ನೀರು

ತುಮಕೂರು: ನಗರಕ್ಕೆ ನೀರು ಪೂರೈಸುವ ಬುಡುಗನಹಳ್ಳಿ ಕೆರೆ ಹಾಗೂ ಮಧುಗಿರಿ ಭಾಗದ ಕೆರೆ ಬರಿದಾಗಿದ್ದು ಗೊರೂರು ಜಲಾಶಯದಿಂದ ಹತ್ತು ದಿನಗಳಲ್ಲಿ ನೀರು ಹರಿಸಲಾಗುವುದು ಎಂದು ಸಚಿವ ಜಿ.ಪರಮೇಶ್ವರ ತಿಳಿಸಿದರು. ಹಾಸನ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ ಜತೆ ಚರ್ಚಿಸಲಾಗಿದ್ದು ಹೇಮಾವತಿಯಿಂದ ನೀರು ಹರಿಸುವುದಾಗಿ ಭರವಸೆ ನೀಡಿದ್ದಾರೆ. ನಗರದ ಜನರಿಗೆ ನೀರಿನ ಸಮಸ್ಯೆ ಆಗದಂತೆ ನೋಡಿಕೊಳ್ಳಲಾಗುವುದು ಎಂದು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT