ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಶಿರಾ | ಸೌಕರ್ಯ ವಂಚಿತ ಖಾಸಗಿ ಬಸ್‌ ನಿಲ್ದಾಣ: ಅಭಿವೃದ್ಧಿಗೆ ನಿರ್ಲಕ್ಷ್ಯ

ಹರಾಜಿನಿಂದ ಪ್ರತಿವರ್ಷ ₹2ರಿಂದ ₹3 ಲಕ್ಷ ಆದಾಯ
Published : 9 ಸೆಪ್ಟೆಂಬರ್ 2024, 5:51 IST
Last Updated : 9 ಸೆಪ್ಟೆಂಬರ್ 2024, 5:51 IST
ಫಾಲೋ ಮಾಡಿ
Comments

ಶಿರಾ: ನಗರದ ಖಾಸಗಿ ಬಸ್ ನಿಲ್ದಾಣದಲ್ಲಿ ಮೂಲ ಸೌಕರ್ಯಗಳ ಕೊರತೆಯಿಂದಾಗಿ ಪ್ರಯಾಣಿಕರು ಸಂಕಷ್ಟ ಅನುಭವಿಸುವಂತಾಗಿದೆ.

ನಗರಸಭೆ ಇಲ್ಲಿಂದ ಕೇವಲ ಅದಾಯ ನಿರೀಕ್ಷಿಸುತ್ತಿದ್ದು, ಹರಾಜಿನಿಂದ ಪ್ರತಿವರ್ಷ ₹2ರಿಂದ ₹3 ಲಕ್ಷ ಆದಾಯ ಬರುತ್ತಿದೆ. ಅಲ್ಲಿರುವ ಮಳಿಗೆಯಿಂದ ಲಕ್ಷಾಂತರ ರೂಪಾಯಿ ಆದಾಯ ಬರುತ್ತಿದೆ ಆದರೂ ಅಭಿವೃದ್ಧಿಪಡಿಸಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರತಿನಿತ್ಯ ಖಾಸಗಿ‌ ಬಸ್‌ ನಿಲ್ದಾಣಕ್ಕೆ‌ 120 ಬಸ್‌ಗಳು ಬರುತ್ತವೆ. ಕೆಲವು ಬಸ್‌ಗಳು ನಿಲ್ದಾಣಕ್ಕೆ 4ರಿಂದ 5 ಬಾರಿ ಬಂದು ಹೋಗುತ್ತವೆ. ಗ್ರಾಮೀಣ ಪ್ರದೇಶಗಳಿಗೆ ಹೋಗುವವರು ಬಹುತೇಕ ಖಾಸಗಿ ಬಸ್‌ಗಳನ್ನು ಆಶ್ರಯಿಸಿದ್ದರೂ ಮೂಲಸೌಕರ್ಯ ಒದಗಿಸಲು ಕಾಳಜಿ ತೋರುತ್ತಿಲ್ಲ ಎನ್ನುವುದು ಸಾರ್ವಜನಿಕರ ದೂರು.

ಬಸ್ ನಿಲ್ದಾಣದಲ್ಲಿ ಶೀಟ್ ಹಾಕಿ ನೆರಳಿನ ವ್ಯವಸ್ಥೆ ಮಾಡಲಾಗಿದೆ. ಆದರೆ ಕುಳಿತುಕೊಳ್ಳಲು ಆಸನಗಳ ವ್ಯವಸ್ಥೆ ಮಾಡಿಲ್ಲ. ನೆರಳಿದ್ದರೂ ಪ್ರಯಾಣಿಕರಿಗೆ ಪ್ರಯೋಜನ ಇಲ್ಲದಂತಾಗಿದೆ.

ನೆಲಕ್ಕೆ ಗ್ರೈನೇಟ್‌ ಹಾಕಿದ್ದು, ನೆಲ ನುಣುಪಾಗಿರುವುದರಿಂದ ಮಕ್ಕಳು ಮತ್ತು ಹಿರಿಯರು ಬಿದ್ದು ಗಾಯಗೊಂಡಿದ್ದಾರೆ. ರಂಗನಾಥ ಚಿತ್ರ ಮಂದಿರದ ಕಡೆ ಶೀಟ್ ಆಳವಡಿಸಿರುವುದು ಅವೈಜ್ಞಾನಿಕ. ಮಳೆ ಬಂದರೆ ಶೀಟ್‌ಗಳಿಂದ ಸುತ್ತಮುತ್ತಲಿನ ಅಂಗಡಿಗಳಿಗೆ ನೀರು ಸುರಿಯುತ್ತಿದೆ ಎಂದು ವರ್ತಕರು ಆರೋಪಿಸುತ್ತಾರೆ. ದ್ವಿಚಕ್ರ ವಾಹನಗಳ ಪಾರ್ಕಿಂಗ್ ತಾಣವಾಗಿ ಇದು ಬದಲಾಗಿದೆ.

ಗುಂಡಿಮಯ: ಬಸ್‌ ನಿಲ್ದಾಣದಲ್ಲಿ ಎಲ್ಲಿ ನೋಡಿದರೂ ಗುಂಡಿಗಳೇ ಕಾಣುತ್ತವೆ. ಮಳೆ ಬಂದರೆ ನಿಲ್ದಾಣ ಕೆಸರು ಗದ್ದೆಯಾಗಿದ್ದು ಒಡಾಡಲು ಕಷ್ಟವಾಗಿರುತ್ತದೆ. ಗುಂಡಿ ಮುಚ್ಚಲು ನಗರಸಭೆ ಲಕ್ಷಾಂತರ ರೂಪಾಯಿ ಖರ್ಚು ಮಾಡುತ್ತಿದ್ದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಮಳೆ ಬಂದಾಗ ಒಂದು ಬಾರಿ ಕಾರು ಬಿಟ್ಟು ಬಸ್‌ ನಿಲ್ದಾಣದಲ್ಲಿ ಓಡಾಡಿದರೆ ಸಾಮಾನ್ಯ ಜನರ ಕಷ್ಟ ತಿಳಿಯುತ್ತದೆ ಎಂದು ಪ್ರಯಾಣಿಕ ಹನುಮಂತರಾಯಪ್ಪ ಹೇಳುತ್ತಾರೆ.

ಬಸ್‌ ನಿಲ್ದಾಣದ ಅಭಿವೃದ್ಧಿ ಹಾಗೂ ಪುಡ್‌ಕೋರ್ಟ್ ನಿರ್ಮಾಣಕ್ಕಾಗಿ ಹಿಂದೆ ಡಾ.ಸಿ.ಎಂ.ರಾಜೇಶ್ ಗೌಡ ಅವರು ಶಾಸಕರಾಗಿ‌ದ್ದಾಗ ₹2 ಕೋಟಿ ಅನುದಾನ ಮೀಸಲಿರಿಸಿದ್ದರು. ಆದರೆ ಬದಲಾದ ಸನ್ನಿವೇಶದಲ್ಲಿ ಅದನ್ನು 14ನೇ ವಾರ್ಡ್‌ನಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಬದಲಾವಣೆ ಮಾಡಲಾಯಿತು. ನಗರರೋತ್ಥಾನದಲ್ಲಿ ಅಭಿವೃದ್ಧಿ ಪಡಿಸುವುದಾಗಿ ಹೇಳಿದರೂ ಯಾವುದೇ ಪ್ರಯೋಜನವಾಗಿಲ್ಲ. ನಗರಸಭೆ ಸಾಮಾನ್ಯ ಸಭೆಯಲ್ಲಿ ಕೆಲವು ಸದಸ್ಯರು ಈ ಬಗ್ಗೆ ಪ್ರಸ್ತಾಪ ಮಾಡಿದರೂ ಅಧಿಕಾರಿಗಳು ಹಾರಿಕೆ ಉತ್ತರ ನೀಡುತ್ತಿದ್ದಾರೆ.

ಕುಡಿಯಲು ನೀರಿಲ್ಲ: ಬಸ್‌ ನಿಲ್ದಾಣಕ್ಕೆ ನಿತ್ಯ ಸಾವಿರಾರು ಮಂದಿ ಪ್ರಯಾಣಿಕರ ಬರುತ್ತಿದ್ದರೂ ನೀರು ಸಿಗದೆ ಪರದಾಡುತ್ತಿದ್ದಾರೆ. ಹಿಂದೆ ಮಾಜಿ ಸಚಿವ ಬಿ.ಸತ್ಯನಾರಾಯಣ ಅವರ ಹುಟ್ಟುಹಬ್ಬದ ಪ್ರಯುಕ್ತ ಅವರ ಅಭಿಮಾನಿ ಬಳಗದಿಂದ ಶುದ್ಧ ಕುಡಿಯುವ ನೀರಿನ ಘಟಕ ಪ್ರಾರಂಭಿಸಲಾಗಿತ್ತು. ಅದನ್ನು ಖಾಸಗಿ ಅವರಿಗೆ ನೀಡಿರುವುದರಿಂದ ಹಣ ನೀಡಿ ಬಾಟಲ್ ನೀರು ಖರೀದಿ ಮಾಡಿ ಕುಡಿಯುವಂತಾಗಿದೆ.

ಸಂಚಾರ ನಿಯಮ ಉಲ್ಲಂಘನೆ: ಬಸ್ ನಿಲ್ದಾಣದಲ್ಲಿ ಸಂಚಾರ ನಿಯಮವನ್ನು ಸಂಪೂರ್ಣವಾಗಿ ಉಲ್ಲಂಘಿಸಲಾಗುತ್ತಿದೆ. ದ್ವಿಚಕ್ರ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಇಲ್ಲದಿರುವುದರಿಂದ ಎಲ್ಲೆಂದರಲ್ಲಿ ನಿಲ್ಲಿಸಲಾಗುತ್ತಿದೆ. ಎಲ್ಲಿ ನೋಡಿದರೂ ಹಣ್ಣಿನ ಗಾಡಿಗಳನ್ನು ನಿಲ್ಲಿಸಿಕೊಂಡು ವ್ಯಾಪಾರ ಮಾಡುತ್ತಿರುವುದರಿಂದ ಸಂಚಾರಕ್ಕೆ ತೊಂದರೆಯಾಗುತ್ತಿದೆ.

ಖಾಸಗಿ ಬಸ್‌ ನಿಲ್ದಾಣಕ್ಕೆ ಕನಿಷ್ಠ ನಾಮಫಲಕ ಹಾಕಲು ನಗರಸಭೆಯವರಿಗೆ ಸಾಧ್ಯವಾಗಿಲ್ಲ. ಎಲ್ಲಿ ನೋಡಿದರೂ ಕಸದ ರಾಶಿ ಬಿದ್ದಿದ್ದು, ಸ್ವಚ್ಛತೆ ಮರಿಚಿಕೆಯಾಗಿದೆ. ಬಸ್‌ ನಿಲ್ದಾಣದ ಅಭಿವೃದ್ಧಿಯನ್ನು ಮರೆತಿರುವ ನಗರಸಭೆ ಆಡಳಿತಕ್ಕೆ ಚುರುಕು ಮೂಡಿಸುವ ಕೆಲಸವನ್ನು ಶಾಸಕರು ಮಾಡಬೇಕಿದೆ.

ಟಿ.ಬಿ.ಜಯಚಂದ್ರ ಅವರು ಮೂರನೇ ಬಾರಿ ಶಾಸಕರಾಗಿದ್ದು, ಕಳೆದ ಬಾರಿ ಬಸ್ ನಿಲ್ದಾಣವನ್ನು ನವೀಕರಿಸುವುದಾಗಿ ಹೇಳುತ್ತಿದ್ದು, ಈ ಬಾರಿಯಾದರೂ ಕಾಯಕಲ್ಪ ನೀಡುವರೆ ಎನ್ನುವುದು ಸಾರ್ವಜನಿಕರ ನಿರೀಕ್ಷೆ.

ಸತತ ಪ್ರಯತ್ನ

ಖಾಸಗಿ ಬಸ್‌ ನಿಲ್ದಾಣವನ್ನು ನವೀಕರಿಸುವಂತೆ ನಗರಸಭೆ ಸಾಮಾನ್ಯ ಸಭೆಯಲ್ಲಿ ಹಲವು ಬಾರಿ ಒತ್ತಡ ತರಲಾಗಿದೆ. ಸತತ ಪ್ರಯತ್ನದಿಂದಾಗಿ ಮುನ್ಸಿಪಲ್ ಅನುದಾನದಲ್ಲಿ ಕಾಮಗಾರಿ ನಡೆಸಲು ನಗರಸಭೆ ಪೌರಾಯುಕ್ತರು ಒಪ್ಪಿಗೆ ನೀಡಿದ್ದಾರೆ. ಮುಂದಿನ ಸಭೆಯಲ್ಲಿ ಅನುಮೋದನೆ ಪಡೆದು ಕಾಮಗಾರಿ ಕೈಗೊಳ್ಳಲಾಗುವುದು.

ಆರ್.ರಾಮು, ನಗರಸಭೆ ಸದಸ್ಯ

ಬಸ್‌ ನಿಲ್ದಾಣದ ಅಭಿವೃದ್ಧಿ ಬೇಕಿಲ್ಲ

ಡಾ.ಸಿ.ಎಂ.ರಾಜೇಶ್ ಗೌಡ ಅವರು ಶಾಸಕರಾಗಿದ್ದಾಗ ₹4 ಕೋಟಿ ಅನುದಾನವನ್ನು ಬಸ್ ನಿಲ್ದಾಣ ಕಾಮಗಾರಿಗೆ ತೆಗೆದಿರಿಸಿದ್ದರು. ಡೆಲ್ಟಾ ಕಂಪನಿ ಜೊತೆ ಒಡಂಬಡಿಕೆ ಮಾಡಕೊಂಡು ₹9 ಕೋಟಿ ವೆಚ್ಚದಲ್ಲಿ ಕಾಮಗಾರಿ ಮಾಡಲು ನೀಲ‌ನಕ್ಷೆ ತಯಾರಿಸಲಾಗಿತ್ತು. ಆದರೆ ಟಿ.ಬಿ.ಜಯಚಂದ್ರ ಶಾಸಕರಾದ ನಂತರ ಯೋಜನೆ ಕೈಬಿಡಲಾಯಿತು. ಈ ಬಗ್ಗೆ ನಗರಸಭೆ ಸಭೆಯಲ್ಲಿ‌ ಹಲವು ಬಾರಿ ಪ್ರಸ್ತಾಪಿಸಿದ್ದರೂ ಪ್ರಯೋಜನವಾಗಿಲ್ಲ.

ಉಮಾ ವಿಜಯರಾಜು, ನಗರಸಭೆ ಸದಸ್ಯ

ಅವ್ಯವಸ್ಥೆಯ ತಾಣ

ನಗರಸಭೆ ಮಳಿಗೆಯಲ್ಲಿ ನಾವು ವ್ಯಾಪಾರ ಮಾಡುತ್ತಿದ್ದರೂ, ಯಾವುದೇ ಪ್ರಯೋಜನವಾಗಿಲ್ಲ. ಬಸ್‌ ನಿಲ್ದಾಣದಲ್ಲಿ ಸ್ವಚ್ಛತೆ ಮರೀಚಕೆಯಾಗಿದೆ. ಬೆಳಿಗ್ಗೆ ಸ್ವಚ್ಛ ಮಾಡಿದರೆ ಮತ್ತೆ ಬರುವುದು ಮಾರನೇ ದಿನ. ನಿಲ್ದಾಣದ ಸ್ವಚ್ಛತೆಗೆ ಒಬ್ಬರನ್ನು ನೇಮಕ ಮಾಡುವುದು ಅತ್ಯವಶ್ಯಕ. ನಿಲ್ದಾಣದಲ್ಲಿ ಎಲ್ಲಿ ನೋಡಿದರೂ ಹಣ್ಣಿನ ಗಾಡಿಗಳು ನಿಂತಿದ್ದು, ಸಂಚಾರಕ್ಕೆ‌ ತೊಂದರೆಯಾಗುತ್ತಿದೆ. ದ್ವಿಚಕ್ರ ವಾಹನ, ಆಟೊಗಳನ್ನು ಎಲ್ಲೆಂದರಲ್ಲಿ ನಿಲ್ಲಿಸುವುದರಿಂದ ನಿಲ್ದಾಣ ಅವ್ಯವಸ್ಥೆಯ ಆಗರವಾಗಿದೆ.

ರಮೇಶ್, ವರ್ತಕ

ಮಳೆ ಬಂದರೆ ಕೆಸರು ಗದ್ದೆ

ಬಸ್‌ ನಿಲ್ದಾಣ ಮಳೆ ಬಂದರೆ ಕೆಸರು ಗದ್ದೆಯಾಗುತ್ತದೆ. ಬಸ್‌ಗಳು ವೇಗವಾಗಿ ಬಂದರೆ ಕೆಸರು ಹೂವು ಮತ್ತು ಮೈಮೇಲೆ ಸಿಡಿದು ಹೂವು ಹಾಳಾಗಿ ನಷ್ಟ ಅನುಭವಿಸುವಂತಾಗಿದೆ. ಈ ಬಗ್ಗೆ ಯಾರೂ ಗಮನಹರಿಸಿಲ್ಲ.

ಗಂಗಣ್ಣ, ಹೂವಿನ ವ್ಯಾಪಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT