ಶಾಂತರಾಜು ಎಚ್.ಜಿ.
ಗುಬ್ಬಿ: ತಾಲ್ಲೂಕಿನಲ್ಲಿ ಈ ಬಾರಿ ನಿರೀಕ್ಷಿತ ಮಳೆಯಾಗದೆ, ಹೆಸರು, ಉದ್ದು, ಎಳ್ಳು, ಹರಳು, ಅಲಸಂದೆ ಬಿತ್ತನೆ ಕುಂಠಿತವಾಗಿದೆ.
ಹಿಂಗಾರು ಮಳೆಯ ನಿರೀಕ್ಷೆ ಇಟ್ಟುಕೊಂಡು ರಾಗಿ, ತೊಗರಿ, ಅವರೆ, ಹುರುಳಿಯನ್ನಾದರೂ ಬಿತ್ತುವ ಖುಷಿಯಲ್ಲಿದ್ದ ರೈತರು ಆಕಾಶ ದಿಟ್ಟಿಸುತ್ತಿದ್ದಾರೆ.
ಕೃಷಿ ಇಲಾಖೆಯ ಅಂದಾಜು ಪ್ರಕಾರ ತಾಲ್ಲೂಕಿನಲ್ಲಿ ಈ ವೇಳೆಗೆ 13,088 ಹೆಕ್ಟೇರ್ ಬಿತ್ತನೆ ಆಗಬೇಕಾಗಿತ್ತು. ಆದರೆ ಈವರೆಗೆ 4,510 ಹೇಕ್ಟೇರ್ ಅಂದರೆ ಶೇ 36.46 ರಷ್ಟು ಬಿತ್ತನೆಯಷ್ಟೇ ಆಗಿದೆ.
ಮಳೆ ಬಂದರೆ ರಾಗಿ ಬಿತ್ತನೆಗೆ ಇನ್ನೂ ಅವಕಾಶವಿದ್ದು ರೈತರು ಆತಂಕ ಪಡಬೇಕಿಲ್ಲ. ಮಳೆ ಬಾರದಿದ್ದರೆ ಆಹಾರ ಧಾನ್ಯಗಳ ಬಿತ್ತನೆಯಲ್ಲಿ ನಿಗದಿತ ಗುರಿ ತಲುಪಲು ಸಾಧ್ಯವಾಗದೆ ಕೊರತೆ ಎದುರಿಸಬೇಕಾಗುತ್ತದೆ.ಜಗನ್ನಾಥ ಗೌಡ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ
ಈವರೆಗೆ ಬಿದ್ದ ಅಲ್ಪಸ್ವಲ್ಪ ಮಳೆಗೆ ಬಿತ್ತನೆ ಮಾಡಿದ್ದ ರಾಗಿಯು ಹುಟ್ಟಿ ಭೂಮಿಯ ಮಟ್ಟಕ್ಕೆ ಬಂದಿದ್ದು ಮಳೆ ಇಲ್ಲದೆ ಬಾಡುತ್ತಿದೆ. ಇನ್ನು ಕೆಲವು ದಿನ ಮಳೆಯಾಗದಿದ್ದರೆ ಸಂಪೂರ್ಣವಾಗಿ ಒಣಗಿ ಹೋಗುವ ಆತಂಕ ಎದುರಾಗಿದೆ.
ರಾಗಿ ಬಿತ್ತಿರುವ ಕೆಲವು ರೈತರು ಬೆಳೆಗೆ ಸಣ್ಣ ಪೈಪ್ ಹಾಕಿ ನೀರು ಹಾಯಿಸಿ ಬೆಳೆ ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಹೇಮಾವತಿ ನಾಲೆ ನೀರನ್ನು ಹರಿಸಿ ಕೃಷಿಗೆ ಅನುವು ಮಾಡಿಕೊಟ್ಟರೆ ಅನುಕೂಲವಾಗುತಿತ್ತು. ಆದರೆ ಸರ್ಕಾರ ನಾಲೆ ನೀರನ್ನು ಕೃಷಿಗೆ ಬಳಸದಂತೆ ಆದೇಶ ಹೊರಡಿಸಿರುವುದು ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿದೆ.
ಕಳೆದ ವರ್ಷ ಮಳೆ ಹೆಚ್ಚಾಗಿ ಬೆಳೆ ಇಲ್ಲದಂತಾಗಿತ್ತು. ಈ ಬಾರಿ ಮಳೆ ಇಲ್ಲದೆ ಬೆಳೆ ಇಲ್ಲವಾಗುತ್ತಿದೆ. ಇದರಿಂದ ತಾಲ್ಲೂಕಿನಲ್ಲಿ ಆಹಾರ ಧಾನ್ಯಗಳ ಕೊರತೆ ಉಂಟಾಗುವ ಸಾಧ್ಯತೆ ಇದೆ ಎಂದು ಸಾರ್ವಜನಿಕರು ಆತಂಕ ತೋಡಿಕೊಳ್ಳುತ್ತಿದ್ದಾರೆ.‘
ಕೊಳವೆ ಬಾವಿಗಳಲ್ಲಿ ಸ್ವಲ್ಪ ನೀರು ಬರುತ್ತಿದ್ದರೂ ಅಸಮರ್ಪಕ ವಿದ್ಯುತ್ ಸರಬರಾಜಿನಿಂದಾಗಿ ತೊಂದರೆಯಾಗಿದೆ. ಯಾವಾಗ ವಿದ್ಯುತ್ ತೆಗೆಯುವರೊ ತಿಳಿಯುತ್ತಿಲ್ಲ. ದೂರದ ಹೊಲಗಳ ಬಳಿ ರಾತ್ರಿ ಹೋಗಲು ಕಾಡುಪ್ರಾಣಿ ಭಯವಿದೆ.ಗಂಗಾಧರ್, ರೈತ
ರಸಗೊಬ್ಬರ, ಉಳುಮೆ, ಕೂಲಿ ದರ ದುಬಾರಿಯಾಗಿದ್ದು ಎಕರೆಗೆ ಸುಮಾರು ₹4 ಸಾವಿರ ವೆಚ್ಚವಾಗಲಿದೆ. ಈಗ ಮಳೆ ಬಾರದೆ ಹೋದರೆ ಆರ್ಥಿಕ ಸಂಕಷ್ಟ ಎದುರಿಸಬೇಕಾಗುತ್ತದೆ ಎನ್ನುತ್ತಾರೆ ರೈತ ಕುಮಾರಸ್ವಾಮಿ
ಸದ್ಯ ಹೇಮಾವತಿ ನಾಲೆಯಲ್ಲಿ ನೀರು ಬಿಡುತ್ತಿರುವುದರಿಂದ ಕೆರೆ- ಕಟ್ಟೆಗಳನ್ನು ತುಂಬಿಸುವ ಜೊತೆಗೆ ಆದ್ಯತೆ ಮೇರೆಗೆ ರೈತರು ರಾಗಿ ಬೆಳೆಯನ್ನಾದರೂ ಬೆಳೆದುಕೊಳ್ಳಲು ಅವಕಾಶ ಮಾಡಿಕೊಡಬೇಕಿದೆ. ಸರ್ಕಾರ ರಾಗಿ ಬೆಳೆಗೆ ತಕ್ಷಣವೇ ವಿಮೆ ಮಾಡಿಸಲು ಅವಕಾಶ ನೀಡಿ ನಷ್ಟ ಪರಿಹಾರ ಕಟ್ಟಿಕೊಡಬೇಕಿದೆ ಎನ್ನುವುದು ರೈತರ ಒತ್ತಾಸೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.