ಬುಧವಾರ, ಜನವರಿ 20, 2021
27 °C

ರ‍್ಯಾಸ್ಕಲ್...ಜಾಡಿಸಿ ಒದ್ದರೆ...: ಅಧಿಕಾರಿಗಳಿಗೆ ಸಚಿವ ಮಾಧುಸ್ವಾಮಿ ತರಾಟೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ‘ರ‍್ಯಾಸ್ಕಲ್... ಜಾಡಿಸಿ ಒದ್ದರೆ ನೋಡು... ಕತ್ತೆ ಕಾಯಲು ಇಲ್ಲಿಗೆ ಬಂದಿದ್ದೀರಾ... ನಿಮ್ಮಿಂದ ಜಿಲ್ಲೆಗೆ ಗ್ರಹಣ ಹಿಡಿದಿದೆ... ಅಭಿವೃದ್ಧಿ ಹಾಳಾಗಿ ಹೋಯಿತು... ಎಂಜಿನಿಯರುಗಳು ಜಿಲ್ಲೆ ನಿರ್ನಾಮ ಮಾಡಲು ಸೇರಿಕೊಂಡಿದ್ದಾರೆ’....

–ಹೀಗೆ ಗ್ರಾಮೀಣ ಅಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯ ಎಂಜಿನಿಯರುಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಗುರುವಾರ ನಡೆದ ಕೆಡಿಪಿ ಸಭೆಯಲ್ಲಿ ತರಾಟೆಗೆ ತೆಗೆದುಕೊಂಡರು.

ಜಿಲ್ಲಾ ಉಸ್ತುವಾರಿ ಸಚಿವರಾದ ನಂತರ ನಡೆದ ಕೆಡಿಪಿ, ಜಿಲ್ಲಾ ಪಂಚಾಯಿತಿ ಸಭೆಗಳಲ್ಲಿ ಎಂದೂ ಅಧಿಕಾರಿಗಳನ್ನು ಗದರಿಸಿರಲಿಲ್ಲ. ಜೋರಾಗಿಯೂ ಮಾತನಾಡಿರಲಿಲ್ಲ. ಆದರೆ ‘ಜಿಲ್ಲೆಯ ಆಡಳಿತ ಯಂತ್ರ ಹಳಿತಪ್ಪಿದೆ, ಅಧಿಕಾರಿಗಳು ಯಾರ ಮಾತನ್ನೂ ಕೇಳುತ್ತಿಲ್ಲ, ಅಭಿವೃದ್ಧಿ ಕುಂಠಿತಗೊಂಡಿದೆ. ಜಿಲ್ಲಾ ಉಸ್ತುವಾರಿ ಸಚಿವರು ಏನು ಮಾಡುತ್ತಿದ್ದಾರೆ’ ಎಂಬ ಆರೋಪ, ಟೀಕೆಗಳು ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದ್ದವು. ಇದರಿಂದ ಸಿಟ್ಟಿಗೆದ್ದ ಸಚಿವರು ಸಭೆಯಲ್ಲೇ ಅಧಿಕಾರಿಗಳಿಗೆ ಚುರುಕು ಮುಟ್ಟಿಸಿದರು.

ಪಂಚಾಯತ್‌ರಾಜ್ ಎಂಜಿನಿಯರಿಂಗ್ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಹರೀಶ್ ಬಾಬು ಅವರಿಂದ ಪ್ರಗತಿಯ ಮಾಹಿತಿ ಕೇಳಿದರು. ‘ಆರ್ಥಿಕ ವರ್ಷದ ಅಂತ್ಯಕ್ಕೆ ಬಂದಿದ್ದರೂ ಇನ್ನೂ ಯಾವುದೇ ಕಾಮಗಾರಿ ಆರಂಭವಾಗಿಲ್ಲ. ಇದೇ ರೀತಿಯಾದರೆ ಬಂದಿರುವ ಹಣ ಸರ್ಕಾರಕ್ಕೆ ವಾಪಾಸಗಲಿದೆ’ ಎಂದು ಸಿಟ್ಟುಗೊಂಡರು. ‘ನಿಮ್ಮಂತಹವರಿಂದ ಏನು ಕೆಲಸ ಮಾಡಿಸುವುದು’ ಎಂದು ಚುಚ್ಚಿದರು.

ನಂತರ ತಾಲ್ಲೂಕುಗಳ ಸಹಾಯಕ ಕಾರ್ಯನಿರ್ವಾಹಕ ಎಂನಿಯರುಗಳಿಂದ ಮಾಹಿತಿ ಪಡೆದುಕೊಂಡರು. ಗುಬ್ಬಿ ಎಂಜಿನಿಯರ್ ವಿವರ ನೀಡುವ ಸಮಯದಲ್ಲಿ ಈವರೆಗೂ ಯಾವುದೇ ಕೆಲಸಕ್ಕೂ ಕಾರ್ಯಾದೇಶ ನೀಡದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಆ ಸಮಯದಲ್ಲಿ ಒಟ್ಟಾರೆಯಾಗಿ ಜಿ.ಪಂ ಎಂಜಿನಿಯರುಗಳನ್ನು ತರಾಟೆಗೆ ತೆಗೆದುಕೊಂಡರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು