ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಣದ ವ್ಯಾಪಾರೀಕರಣ ನಿಲ್ಲಲಿ

ಬಳುವನೆರಲು: ಹೋಬಳಿ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ
Last Updated 1 ಜನವರಿ 2023, 6:39 IST
ಅಕ್ಷರ ಗಾತ್ರ

ತಿಪಟೂರು: ಇಂದಿನ ಸಮಾಜದಲ್ಲಿ ಶಿಕ್ಷಣವೂ ವ್ಯಾಪಾರೀಕರಣವಾಗಿದ್ದು, ಆಂಗ್ಲ ಮಾಧ್ಯಮದ ವ್ಯಾಮೋಹ, ಭ್ರಮೆಯಲ್ಲಿ ಪೋಷಕರು ತಮ್ಮ ಮಕ್ಕಳಿಗೆ ಮಾತೃ ಭಾಷೆಯ ಹೊರತಾದ ಶಿಕ್ಷಣ ಕೊಡಿಸಲು ಮುಂದಾಗಿರುವುದು ದುರಂತದ ಸಂಗತಿ ಎಂದು ಲೇಖಕ ಆರ್.ಕೆ.ಶಿವಶಂಕರಪ್ಪ ಆತಂಕ ವ್ಯಕ್ತಪಡಿಸಿದರು.

ತಾಲ್ಲೂಕಿನ ಹೊನ್ನವಳ್ಳಿ ಹೋಬಳಿಯ ಬಳುವನೆರಲು ಗ್ರಾಮದಲ್ಲಿ ಶನಿವಾರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಹೊನ್ನವಳ್ಳಿ ಹೋಬಳಿ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ಎರಡನೇ ಹೋಬಳಿ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ ಉದ್ದೇಶಿಸಿ ಮಾತನಾಡಿದರು.

ಪ್ರತಿಯೊಬ್ಬ ಪೋಷಕರಲ್ಲಿಯೂ ಆಂಗ್ಲ ಮಾಧ್ಯಮದಲ್ಲಿ ಅಭ್ಯಾಸ ಮಾಡಿದರೆ ಮಾತ್ರ ಉಜ್ವಲ ಭವಿಷ್ಯವಿದೆ ಎಂಬ ಪರಿಕಲ್ಪನೆ ಮೂಡಿದ್ದು ಇದರಿಂದ ಹೊರಬರಬೇಕಿದೆ. ಮಗುವಿಗೆ ಮಾತೃಭಾಷೆಯಲ್ಲಿ ಶಿಕ್ಷಣ ನೀಡುವುದರಿಂದ ಕಲಿಕಾ ಆಸಕ್ತಿ ವೃದ್ಧಿಯಾಗುವ ಜತೆಗೆ ಕ್ರಿಯಾಶೀಲ ಕಲಿಕೆಯಲ್ಲಿ ತೊಡಗಿಸಿಕೊಳ್ಳಬಹುದು. ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಭಾಗದಲ್ಲಿ ವಿದ್ಯಾವಂತರ ಸಂಖ್ಯೆ ವೃದ್ಧಿಯಾಗಿ ನಗರ ಪ್ರದೇಶಕ್ಕೆ ವಲಸೆ ಹೋಗುವವರ ಸಂಖ್ಯೆ ವೃದ್ಧಿಸಿದೆ. ಪ್ರತಿಯೊಂದು ಗ್ರಾಮಗಳು ವಯೋವೃದ್ಧ ಕೇಂದ್ರಗಳಾಗಿ ಮಾರ್ಪಾಡಾಗುತ್ತಿದ್ದು, ಇಂದಿನ ಸಂದರ್ಭಕ್ಕೆ ಪ್ರಜ್ಞಾವಂತ ಯುವಜನತೆಯ ಅಗತ್ಯವಿದೆ ಎಂದರು.

ಪ್ರತಿಯೊಂದು ಗ್ರಾಮದಲ್ಲಿಯೂ ಕನ್ನಡ ಪರ ಚಿಂತಕರು, ಸಂಘ-ಸಂಸ್ಥೆಗಳ ರಚನೆ ಅಗತ್ಯವಾಗಿದ್ದು ಕನ್ನಡವನ್ನು ಉಳಿಸಿ ಬೆಳೆಸುವ ಮನಸ್ಥಿತಿ ಮೂಡಬೇಕಿದೆ. ಕನ್ನಡ ಹೆಸರಿಗೆ ಮಾತ್ರ ಆಡಳಿತ ಭಾಷೆಯಾಗದೆ ನಿಜಾರ್ಥದಲ್ಲಿ ಕಾರ್ಯರೂಪಕ್ಕೆ ಬರುವಂತೆ ಕಡ್ಡಾಯಗೊಳಿಸಬೇಕು ಎಂದರು.

ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಮಾತನಾಡಿ, ‘ರಾಜ್ಯದಲ್ಲಿ ಕನ್ನಡ ಶಾಲೆಗಳು ಮುಚ್ಚುತ್ತಿರುವುದು ಹಣಕಾಸಿಕ ಕೊರತೆಯಿಂದ ಅಲ್ಲ. ಬದಲಿಗೆ ಮಕ್ಕಳು ಶಾಲೆಗೆ ಬಾರದಿರುವುದರಿಂದ ಎಂಬುದು ಎಲ್ಲರಿಗೂ ತಿಳಿದಿದೆ. ರಾಜ್ಯಸರ್ಕಾರ ಸುಮಾರು 1 ಮಗು ಇರುವ 100 ಶಾಲೆಗಳನ್ನು ನಡೆಸುತ್ತಿದ್ದು 3,800ಕ್ಕೂ ಅಧಿಕ ಶಾಲೆಗಳಲ್ಲಿ 5 ಮಕ್ಕಳಿಗೂ ಕಡಿಮೆ ಇರುವ ಶಾಲೆಗಳನ್ನು, 13 ಸಾವಿರ ಶಾಲೆಗಳಲ್ಲಿ 25ಕ್ಕಿಂತ ಕಡಿಮೆ ಮಕ್ಕಳು ಇದ್ದರೂ ಇವೆಲ್ಲವನ್ನೂ ಸರ್ಕಾರ ನಡೆಸುತ್ತಾ ಬಂದಿದೆ. ಕನ್ನಡ ಉಳಿಯುವ ಸಲುವಾಗಿಯೇ ಸರ್ಕಾರಿ ಶಾಲೆಗಳನ್ನು ನಡೆಸಲಾಗುತ್ತಿದ್ದು ಮಕ್ಕಳೇ ಬರದಿದ್ದರೆ ಯಾವ ಸರ್ಕಾರಗಳು ಶಾಲೆ ನಡೆಸಲು ಸಾಧ್ಯವಾಗುವುದಿಲ್ಲ’
ಎಂದರು.

ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ಭಾಷೆಯನ್ನು ಉಳಿಸುವ ಮನಸ್ಥಿತಿಯನ್ನು ಪ್ರತಿಯೊಬ್ಬರೂ ಮೂಡಿಸಿಕೊಳ್ಳಬೇಕು. ಇಂದಿನ ಯುವಜನಾಂಗಕ್ಕೆ ಕನ್ನಡ ಸಾಹಿತ್ಯದ ಅರಿವನ್ನು ಮೂಡಿಸುವ ಪತ್ರಿಕೆ, ಪುಸ್ತಕಗಳನ್ನು ಓದುವಂತಹ ಹವ್ಯಾಸ ಬೆಳೆಸುವ ಕಾರ್ಯ ಮಾಡುವ ಅಗತ್ಯವಿದೆ. ಮಹಿಳೆಯರಲ್ಲಿ ಇರುವ ಸಾಹಿತ್ಯದ ಅಭಿರುಚಿಯನ್ನು ಹೊರತರಲು ಸೂಕ್ತ ವೇದಿಕೆ ಇದಾಗಿದ್ದು ಮುಂದಿನ ದಿನಗಳಲ್ಲಿ ಇನ್ನೂ ಉತ್ತಮ ಕಾರ್ಯಕ್ರಮಗಳಾಗಿ ಎಂದು ದೊಡ್ಡಮೇಟಿಕುರ್ಕೆ ಬೂದಾಳು ಮಠದ ಶಶಿಶೇಖರಸಿದ್ಧಬಸವ ಸ್ವಾಮೀಜಿ ಹೇಳಿದರು.

ಗ್ರಾಮದ ಗ್ರಾಮದೇವತೆ ಉಡುಸಲಮ್ಮ ದೇವಿ ದೇವಾಲಯದಿಂದ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಮ್ಮೇಳನಾಧ್ಯಕ್ಷರ ಮೆರವಣಿಗೆ ಮಾಡಲಾಯಿತು. ಮೆರವಣಿಗೆಯಲ್ಲಿ ಗ್ರಾಮೀಣ ಭಾಗದ ಜಾನಪದ ಕಲಾ ತಂಡಗಳಾದ ಕೋಲಾಟ, ಸೋಮನ ಕುಣಿತ, ವೀರಗಾಸೆ ಕುಣಿತ, ಡೊಳ್ಳು ಕುಣಿತ ಸೇರಿದಂತೆ ವಿವಿಧ ತಂಡಗಳ ಕಲಾವಿದರು ಪ್ರದರ್ಶನ ನೀಡುವ ಮೂಲಕ ಉತ್ಸವಕ್ಕೆ ಮೆರುಗು ತಂದರು.

ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎಸ್.ಸಿದ್ಧಲಿಂಗಪ್ಪ, ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಬಸವರಾಜಪ್ಪ, ಬಳುವನೆರಲು ಗ್ರಾ.ಪಂ.ಅಧ್ಯಕ್ಷೆ ಸುಶೀಲಮ್ಮ, ಉಪಾಧ್ಯಕ್ಷೆ ಭಾಗ್ಯಮ್ಮ, ಪಿಡಿಒ ಅನಂತ ಕುಮಾರ್, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ನಾಗರಾಜ ಶೆಟ್ಟರು, ಸುರಬಿ ವಿದ್ಯಾಸಂಸ್ಥೆಯ ಸಂಸ್ಥಾಪಕ ಕೆ.ಜಿ.ಕೃಷ್ಣಮೂರ್ತಿ, ಬೆಂಗಳೂರಿನ ಬಿ.ಸತ್ಯನಾರಾಯಣ, ನಿವೃತ್ತ ಶಿಕ್ಷಣಾಧಿಕಾರಿ ಎಚ್.ಡಿ.ಪರಶುರಾಮನಾಯ್ಕ, ಕಾರ್ಯದರ್ಶಿ ಎಸ್.ಶಂಕರಪ್ಪ, ಎಚ್.ಎಸ್.ಮಂಜಪ್ಪ, ಹೋಬಳಿ ಘಟಕದ ಅಧ್ಯಕ್ಷ ಎನ್.ಚನ್ನಬಸಪ್ಪ, ಶ್ರೀನಿವಾಸ್, ಸಿ.ಎಸ್.ಶಶಿಧರ್, ಸಾರ್ಥವಳ್ಳಿ ಶಿವಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT