ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಿಪಟೂರು: ಪೊಲೀಸರು ರೈತರ ಕ್ಷಮೆಯಾಚಿಸಲಿ

ಆಡಳಿತದ ವಿರುದ್ಧ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಆನಂದ್ ಪಟೇಲ್ ಆಕ್ರೋಶ
Last Updated 18 ಮಾರ್ಚ್ 2021, 4:36 IST
ಅಕ್ಷರ ಗಾತ್ರ

ತಿಪಟೂರು: ‘ತಿಪಟೂರು ಪೊಲೀಸ್‌ ಇಲಾಖೆ ಜನರ ಮುಂದೆ ಬೆತ್ತಲಾಗಿದ್ದು, ರಾಷ್ಟ್ರೀಯ ಹೆದ್ದಾರಿ 206, ಎತ್ತಿನಹೊಳೆ ಕಾಮಗಾರಿ ಗುತ್ತಿಗೆದಾರರ ನಡುವೆ ಪೊಲೀಸರಿಗೆ ಇರುವ ಸಂಬಂಧವೇನು ಎನ್ನುವುದು ಪ್ರತಿಯೊಬ್ಬರಿಗೂ ತಿಳಿಯಬೇಕಿದೆ’ ಎಂದು ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಆನಂದ್ ಪಟೇಲ್ ಆಗ್ರಹಿಸಿದ್ದಾರೆ.

ನಗರದ ಕೋಡಿ ವೃತ್ತದಿಂದ ಉಪವಿಭಾಗಾಧಿಕಾರಿ ಕಚೇರಿವರಗೆ ರೈತರು ಹಾಗೂ ವಿವಿಧ ಸಂಘಟನೆಗಳ ಸಹಯೋಗದೊಂದಿಗೆ ತಾಲ್ಲೂಕು ಆಡಳಿತದ ನಿಷ್ಕ್ರಿಯತೆ ಹಾಗೂ ಪೊಲೀಸರ ದಬ್ಬಾಳಿಕೆ ವಿರುದ್ಧ ಬುಧವಾರ ನಡೆದ ಕಾಲ್ನಡಿಗೆ ಜಾಥಾ, ಪ್ರತಿಭಟನಾ ರ‍್ಯಾಲಿಯಲ್ಲಿ ಮಾತನಾಡಿದರು.

ರೈತರು ಅಭಿವೃದ್ಧಿ, ನೀರಾವರಿ ಯೋಜನೆಗಳ ವಿರೋಧಿಗಳಲ್ಲ. ಆದರೆ ಪರಿಹಾರ ನೀಡದೇ ಕಾಮಗಾರಿ ಮಾಡಲು ಮುಂದಾಗಿರುವ ಅಧಿಕಾರಿಗಳು, ಗುತ್ತಿಗೆದಾರರೊಂದಿಗೆ ಪೊಲೀಸರು ಕೈಜೋಡಿಸಿ ರೈತರ ಜಮೀನನ್ನು ಕಿತ್ತುಕೊಳ್ಳಲು ಮುಂದಾಗುತ್ತಿದ್ದಾರೆ. ರೈತರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸುತ್ತಿರುವುದು ಖಂಡನೀಯ. ಈಗಾಗಲೇ ಹಲವಾರು ಪ್ರಕರಣಗಳನ್ನು ದಾಖಲಿಸಿ ಮಾನಸಿಕವಾಗಿ ಕಿರುಕುಳ ನೀಡುತ್ತಿರುವ ನಡೆ ಖಂಡನೀಯ ಎಂದರು.

ರೈತರ ಜಮೀನು ನೀಡುವ ವಿಚಾರವಾಗಿ ತಹಶೀಲ್ದಾರ್, ಯೋಜನಾ ಎಂಜಿನಿಯರ್‌, ಉಪವಿಭಾಗಾಧಿಕಾರಿ ಬರುವುದಿಲ್ಲ. ಬದಲಿಗೆ ಕೇವಲ ಪೊಲೀಸರನ್ನು ಇಟ್ಟುಕೊಂಡು ನೋಟಿಸ್‌ ನೀಡದೇ ಗುತ್ತಿಗೆದಾರರು, ಪೊಲೀಸರು ಸೇರಿ ರೈತರ ಜಮೀನು ಅತಿಕ್ರಿಮಿಸಿ ದಬ್ಬಾಳಿಕೆಯಿಂದ ಭೂಮಿ ಪಡೆದುಕೊಳ್ಳುತ್ತಿದ್ದಾರೆ. ಇಷ್ಟೆಲ್ಲಾ ನಡೆಯುತ್ತಿದ್ದರೂ ಜನಪ್ರತಿನಿಧಿಗಳು ಮೌನವಹಿಸಿದ್ದಾರೆ. ಕೂಡಲೇ ರೈತರ ಮೇಲಿನ ಪ್ರಕರಣಗಳಿಗೆ ‘ಬಿ’ ರಿಪೋರ್ಟ್ ಸಲ್ಲಿಸಿ ಪ್ರಕರಣಗಳನ್ನು ವಜಾ ಮಾಡಬೇಕು. ಪೊಲೀಸರು ರೈತರ ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ಹೋರಾಟದ ತೀವ್ರತೆ ಬದಲಿಸುವ ಅನಿವಾರ್ಯತೆ ಎದುರಾಗುತ್ತದೆ ಎಂದು ಎಚ್ಚರಿಸಿದರು.

ಕಾಂಗ್ರೆಸ್ ಮುಖಂಡ ಕೆ.ಟಿ.ಶಾಂತಕುಮಾರ್ ಮಾತನಾಡಿ, ಮೂರು ವರ್ಷಗಳಿಂದ ತಾಲ್ಲೂಕು ಆಡಳಿತ ವೈಫಲ್ಯ ಕಾಣುತ್ತಿದೆ. ಜನಪ್ರತಿನಿಧಿಗಳು ಮತ ಕೇಳುವಾಗ ನೀಡಿದ್ದ ಭರವಸೆ ಈಡೇರಿಸುವಲ್ಲಿ ವಿಫಲವಾಗಿದ್ದು, ನೀರಾವರಿ ವಿಚಾರವಾಗಿ ಕಿಂಚಿತ್ತು ಕಾಳಜಿ ತೋರುತ್ತಿಲ್ಲ. ವರ್ಷಗಳಿಂದ ಹೊನ್ನವಳ್ಳಿ, ಕಸಬಾ ಭಾಗದ ರೈತರು ನೀರಿಗಾಗಿ ಹಲವು ಹೋರಾಟಗಳನ್ನು ಮಾಡಿದರೂ ಯಾವುದೇ ಪ್ರಯೋಜನಗಳಾಗಿಲ್ಲ. ಹೋರಾಟಗಾರರು, ರೈತರ ಮೇಲೆ ಪೊಲೀಸರನ್ನು ಬಿಟ್ಟು ಹೆದರಿಸುವ, ಪ್ರಕರಣ ದಾಖಲಿಸುವ ತಂತ್ರ ನಾಚಿಕೆಗೇಡು. ಇದನ್ನೆಲ್ಲಾ ಬಿಟ್ಟು ಅನ್ನದಾತನ ಮೇಲೆ ಹಾಕಿರುವ ಮೊಕದ್ದಮೆಗಳನ್ನು ಕೂಡಲೇ ವಜಾಗೊಳಿಸಬೇಕು ಎಂದು ಆಗ್ರಹಿಸಿದರು.

ಜನಸ್ಪಂದನ ಟ್ರಸ್ಟ್ ಅಧ್ಯಕ್ಷ ಸಿ.ಬಿ.ಶಶಿಧರ್ ಮಾತನಾಡಿ, ತಾಲ್ಲೂಕು ಆಡಳಿತ ನಿಷ್ಕ್ರಿಯವಾಗಿ ವರ್ಷಗಳೇ ಕಳೆದಿವೆ. ರೈತರ ಜಮೀನಿಗೆ ಸರಿಯಾದ ಬೆಲೆ ನೀಡಿ ಕಾಮಗಾರಿ ಮಾಡಲು ಯೋಜನೆಯ ಗುತ್ತಿಗೆದಾರ ಮುಂದಾಗಬೇಕಿದೆ. ಅದನ್ನು ಬಿಟ್ಟು ನ್ಯಾಯಾಲಯದಲ್ಲಿ ಇತ್ಯರ್ಥವಾಗುವ ಪ್ರಕರಣಗಳನ್ನು ಪೊಲೀಸರು ಇತ್ಯರ್ಥ ಮಾಡಲು ಇವರಿಗೆ ಯಾವ ಅಧಿಕಾರ ನೀಡಲಾಗಿದೆ. ಅಲ್ಲದೇ ಹೋರಾಟಗಾರರನ್ನು ಹತ್ತಿಕ್ಕುವ, ಬಂಧಿಸುವ ಜೊತೆಗೆ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ. ಪೊಲೀಸರು ತಮ್ಮ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುವ ಬದಲು ಗುತ್ತಿಗೆದಾರರ ಏಜೆಂಟುಗಳಾದರೆ ಜನರು ಗೌರವ ನೀಡುವುದಿಲ್ಲ. ಕೂಡಲೇ ರೈತರ ಮೇಲಿನ ಪ್ರಕರಣಗಳನ್ನು ವಜಾಗೊಳಿಸಿ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು.

ಆರ್.ಕೆ.ಎಸ್. ರಾಜ್ಯ ಸಮಿತಿ ಸದಸ್ಯ ಎಸ್‌.ಎನ್. ಸ್ವಾಮಿ, ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಧನಂಜಯ ಆರಾಧ್ಯ, ರೈತ ಸಂಘದ ತಾಲ್ಲೂಕು ಅಧ್ಯಕ್ಷ ಬಸ್ತಿಹಳ್ಳಿ ರಾಜಣ್ಣ, ಹಸಿರುಸೇನೆ ದೇವರಾಜು ತಿಮ್ಲಾಪುರ, ಯೋಗಾನಂದಸ್ವಾಮಿ, ಬಿ.ಬಿ.ಸಿದ್ದಲಿಂಗಮೂರ್ತಿ, ಹೊನ್ನವಳ್ಳಿ ಚಂದ್ರೇಗೌಡ, ಮನೋಹರ್, ಶ್ರೀಕಾಂತ್, ಲೋಕೇಶ್ ಭೈರನಾಯಕನಹಳ್ಳಿ, ರತ್ನಮ್ಮ, ಪೆದ್ದಿಹಳ್ಳಿ ನರಸಿಂಹಯ್ಯ, ನಾಗತೀಹಳ್ಳಿ ಕೃಷ್ಣಮೂರ್ತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT