ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕಾರಿಪುರಕ್ಕೆ ಸೋಮಣ್ಣ ಕಳುಹಿಸೋಣ: ಪರಮೇಶ್ವರ

Published 14 ಏಪ್ರಿಲ್ 2024, 4:52 IST
Last Updated 14 ಏಪ್ರಿಲ್ 2024, 4:52 IST
ಅಕ್ಷರ ಗಾತ್ರ

ತುಮಕೂರು: ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಅವರನ್ನು ಮುಂದಿನ ದಿನಗಳಲ್ಲಿ ಶಿಕಾರಿಪುರ ಕ್ಷೇತ್ರಕ್ಕೆ ಕಳುಹಿಸೋಣ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ವ್ಯಂಗ್ಯವಾಡಿದರು.

ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕುರುಬ ಸಮುದಾಯದ ಮುಖಂಡರ ಸಭೆಯಲ್ಲಿ ಮಾತನಾಡಿದರು.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ವರುಣ ಕ್ಷೇತ್ರದಲ್ಲಿ ಸಿದ್ದರಾಮಯ್ಯ ವಿರುದ್ಧ ಸ್ಪರ್ಧಿಸಿ ಸೋತಿದ್ದಾರೆ. ಗೋವಿಂದರಾಜನಗರ ಬಿಟ್ಟು ಈಗ ಇಲ್ಲಿಗೆ ಬಂದು ನಿಂತಿದ್ದಾರೆ. ಇಲ್ಲಿಯೂ ಸೋಲಿಸಿ ಕಳುಹಿಸೋಣ. ಮುಂದಿನ ಬಾರಿ ಶಿಕಾರಿಪುರದಲ್ಲಿ ಬಿ.ವೈ.ವಿಜಯೇಂದ್ರ ವಿರುದ್ಧ ಸ್ಪರ್ಧಿಸಬಹುದು. ಅವರನ್ನು ಅಲ್ಲಿಗೆ ಕಳುಹಿಸೋಣ ಎಂದು ಕುಟುಕಿದರು.

ಹಿಂದುಳಿದ ವರ್ಗದ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಜನಪರ ಆಡಳಿತ ನಡೆಸುತ್ತಿರುವುದನ್ನು ಬಹುತೇಕರಿಗೆ ಸಹಿಸಲಾಗುತ್ತಿಲ್ಲ. 15 ಬಾರಿ ಬಜೆಟ್ ಮಂಡಿಸಿದ್ದಾರೆ. ಯಾವ ಸಮುದಾಯಕ್ಕೆ ಎಷ್ಟು ಹಣ ಕೊಡಬೇಕು ಎಂಬ ಬುದ್ಧಿವಂತಿಕೆ ಇದೆ. ಗ್ಯಾರಂಟಿ ಯೋಜನೆಗಳಿಗೆ ವರ್ಷಕ್ಕೆ ₹52 ಸಾವಿರ ಕೋಟಿ ಹಣ ಕೊಟ್ಟಿದ್ದಾರೆ. ಬುದ್ಧಿವಂತರು ಆಡಳಿತ ನಡೆಸುವುದನ್ನು ಸಹಿಸಲಾಗದೆ ಟೀಕಿಸುತ್ತಿದ್ದಾರೆ ಎಂದು ಹೇಳಿದರು.

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಮುಂದುವರಿಯಬೇಕೆ? ಬೇಡವೆ? ಎಂಬ ಪ್ರಶ್ನೆ ಈಗ ಅಪ್ರಸ್ತುತ. ಮುಂದಿನ ನಾಲ್ಕು ವರ್ಷಗಳ ಕಾಲ ಅವರು ಆಡಳಿತ ನಡೆಸಬೇಕಾದರೆ ರಾಜ್ಯದಲ್ಲಿ ಹೆಚ್ಚು ಸಂಸದರನ್ನು ಆಯ್ಕೆ ಮಾಡುವ ಮೂಲಕ ದೆಹಲಿ ನಾಯಕರಿಗೆ ಸಂದೇಶ ಕಳುಹಿಸಬೇಕಿದೆ. ಹಾಗಾಗಿ ಪಕ್ಷದ ಅಭ್ಯರ್ಥಿ ಎಸ್.ಪಿ.ಮುದ್ದಹನುಮೇಗೌಡ ಅವರನ್ನು ಗೆಲ್ಲಿಸಿಕೊಡಬೇಕು ಎಂದು ಮನವಿ ಮಾಡಿದರು.

ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾರೆ ಎಂಬ ಕಾರಣಕ್ಕೆ ಜಿಲ್ಲೆಯಲ್ಲಿ ಕುರುಬ ಸಮುದಾಯದ ಮುಖಂಡರಿಗೆ ಅಧಿಕಾರ ನಿರಾಕರಿಸಲಾಗದು. ಯಾವುದಾದರೂ ಒಂದು ವಿಧಾನಸಭೆ ಕ್ಷೇತ್ರದಲ್ಲಿ ಟಿಕೆಟ್ ನೀಡುವ ಬಗ್ಗೆ ಚಿಂತಿಸಲಾಗಿತ್ತು. ಅದು ಸಾಧ್ಯವಾಗಿಲ್ಲ. ಮುಂದಿನ ಬಾರಿ ಅವಕಾಶ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.

ಕೆಎಸ್‌ಆರ್‌ಟಿಸಿ ನಿಗಮದ ಅಧ್ಯಕ್ಷ ಎಸ್.ಅರ್.ಶ್ರೀನಿವಾಸ್, ‘ನೇತ್ರಾವತಿ ಯೋಜನೆಯ ಹೆಸರಿನಲ್ಲೇ ಕಾಲ ಕಳೆದ ಜಿ.ಎಸ್.ಬಸವರಾಜು ಮಾತು ಕೇಳಿ ಬಿಜೆಪಿಗೆ ಮತ ನೀಡಿದರೆ, ಮೋದಿ ಹೇಳುವ ಸುಳ್ಳಿನ ರೈಲಿಗೆ ಮತ್ತೊಂದು ಬೋಗಿ ಸೇರ್ಪಡೆಯಾಗಲಿದೆ’ ಎಂದು ತಿಳಿಸಿದರು.

ಮುಖಂಡ ರಾಮಚಂದ್ರಪ್ಪ, ‘ದೇಶದಲ್ಲಿ ಕಾಂಗ್ರೆಸ್‌ನಿಂದ ಮಾತ್ರ ಸಾಮಾಜಿಕ ನ್ಯಾಯ ಉಳಿದಿದೆ. ಆರ್‌ಎಸ್ಎಸ್ ಅಜೆಂಡಾ ಜಾರಿ ಮಾಡಲಷ್ಟೇ ಬಿಜೆಪಿ ಸೀಮಿತವಾಗಿದೆ’ ಎಂದು ಆರೋಪಿಸಿದರು.

ಜಿಲ್ಲಾ ಕುರುಬ ಸಂಘದ ಅಧ್ಯಕ್ಷ ಸುರೇಶ್, ಮುಖಂಡ ಅನಿಲ್‍ಕುಮಾರ್, ಕಾಂಗ್ರೆಸ್ ಮುಖಂಡರಾದ ರಫೀಕ್ ಅಹ್ಮದ್, ನಿಕೇತ್ ರಾಜ್ ಮೌರ್ಯ, ಮುರಳೀಧರ್ ಹಾಲಪ್ಪ, ಆರ್‌.ರಾಮಕೃಷ್ಣ, ಇಕ್ಬಾಲ್ ಅಹಮದ್, ಸೋಮಶೇಖರ್, ರುದ್ರಪ್ಪ, ಸೋಮಣ್ಣ, ಎಸ್.ನಾಗಣ್ಣ ಇತರರು ಉಪಸ್ಥಿತರಿದ್ದರು.

ಹಿಂದುಳಿದವರ ಬೆಂಬಲ

2014ರ ಲೋಕಸಭೆ ಚುನಾವಣೆಯಲ್ಲಿ ಕುರುಬ ಸಮಾಜ ಸೇರಿದಂತೆ ಅನೇಕ ಅಹಿಂದ ಸಮುದಾಯಗಳು ನನ್ನ ಗೆಲುವಿಗೆ ಕಾರಣವಾಗಿವೆ ಎಂದು ಅಭ್ಯರ್ಥಿ ಎಸ್.ಪಿ.ಮುದ್ದಹನುಮೇಗೌಡ ನೆನಪು ಮಾಡಿಕೊಂಡರು. ಸಂಸತ್‌ನಲ್ಲಿ ಜಿಲ್ಲೆ ರಾಜ್ಯವನ್ನು ಸಮರ್ಥವಾಗಿ ಪ್ರತಿನಿಧಿಸಿದ್ದೇನೆ. ಸಂಸದರಾಗಿದ್ದ ಸಮಯದಲ್ಲಿ ಒಮ್ಮೆಯೂ ಮಾತನಾಡದ ಜಿ.ಎಸ್.ಬಸವರಾಜು ಮಾತು ಕೇಳಿ ಹೊರಗಿನವರಿಗೆ ಮತ ಹಾಕಿದರೆ ಜಿಲ್ಲೆಯ ಜನರ ಸ್ವಾಭಿಮಾನಕ್ಕೆ ಧಕ್ಕೆಯಾಗಲಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT