ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾಖಲೆಗಷ್ಟೇ ಸೀಮಿತ: ಅಭಿವೃದ್ಧಿ ಶೂನ್ಯ

ಕೊರಟಗೆರೆ ತಾಲ್ಲೂಕಿನ 17 ಗ್ರಾಮಗಳಲ್ಲಿ ‘ಜಿಲ್ಲಾಧಿಕಾರಿ ನಡೆ, ಹಳ್ಳಿ ಕಡೆ’ ಕಾರ್ಯಕ್ರಮ
Published 3 ನವೆಂಬರ್ 2023, 5:12 IST
Last Updated 3 ನವೆಂಬರ್ 2023, 5:12 IST
ಅಕ್ಷರ ಗಾತ್ರ

ಕೊರಟಗೆರೆ: ಗ್ರಾಮೀಣಾಭಿವೃದ್ಧಿ ದೃಷ್ಟಿಯಿಂದ ಜಾರಿಗೆ ತಂದ ‘ಜಿಲ್ಲಾಧಿಕಾರಿ ನಡೆ, ಹಳ್ಳಿ ಕಡೆ’ ಕಾರ್ಯಕ್ರಮ ಕೇವಲ ದಾಖಲೆಗಳಲ್ಲಿ ಯಶಸ್ವಿಯಾಗಿದೆ. ಆದರೆ ಗ್ರಾಮದ ಅಭಿವೃದ್ಧಿ ನಿರೀಕ್ಷಿತ ಮಟ್ಟದಲ್ಲಿ ಆಗಿಲ್ಲ.

ತಾಲ್ಲೂಕಿನಲ್ಲಿ 2021ರ ಫೆಬ್ರುವರಿಯಲ್ಲಿ ಕೋಡ್ಲಹಳ್ಳಿಯಿಂದ ಪ್ರಾರಂಭವಾದ ಕಾರ್ಯಕ್ರಮ 2013ರ ಮಾರ್ಚ್ 18ರಂದು ಕೋಳಾಲ ಹೋಬಳಿ ದುಡ್ಡನಹಳ್ಳಿಯಲ್ಲಿ ಕೊನೆಗೊಂಡಿದೆ. ಒಟ್ಟು 17 ಗ್ರಾಮಗಳಲ್ಲಿ ಕಾರ್ಯಕ್ರಮ ನಡೆದಿದೆ. 584 ವಿವಿಧ ಸಮಸ್ಯೆಗಳ ಅರ್ಜಿ ಸಲ್ಲಿಕೆಯಾಗಿವೆ.  ಕೋಡ್ಲಹಳ್ಳಿ-38, ಚನ್ನರಾಯನದುರ್ಗಾ-37, ನರಸಾಪುರ-23, ಕಾಶಾಪುರ-36, ಚಿಕ್ಕಪಾಳ್ಯ-53, ದೊಡ್ಡಪಾಲನಹಳ್ಳಿ-29, ಹೊಲತಾಳು-61, ಕುಡುಗಾನಹಳ್ಳಿ-17, ಬೈಚೇನಹಳ್ಳಿ-27, ಮಾದೇನಹಳ್ಳಿ(ಅರಸಾಪುರ)-27, ನವಿಲುಕುರಿಕೆ-25, ದಿನ್ನೇಪಾಳ್ಯ-35, ವೀರಾಪುರ-62, ಮಣುವಿನಕುರಿಕೆ-40, ಮಿಣಸಂದ್ರ-16, ಹುಲಿಕುಂಟೆ-25 ದುಡ್ಡನಹಳ್ಳಿ-33 ಅರ್ಜಿ ಸಲ್ಲಿಕೆಯಾಗಿವೆ. ಎಲ್ಲ ಅರ್ಜಿಗಳು ದಾಖಲೆಗಳಲ್ಲಿ ಮಾತ್ರ ವಿಲೇವಾರಿ ಮಾಡಲಾಗಿದೆ.

ಪ್ರತಿ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲೂ ಕಂದಾಯ ಇಲಾಖೆಗೆ ಸಂಬಂಧಿಸಿದ ಅರ್ಜಿಗಳೇ ಹೆಚ್ಚು ಸ್ವೀಕೃತವಾಗಿವೆ. ನಕಾಶೆ ರಸ್ತೆ ತೆರವು ಮಾಡುವುದು, ಸಾಗುವಳಿದಾರರಿಗೆ ಹಕ್ಕುಪತ್ರ, ಸಾಗುವಳಿ ನೀಡಿದವರಿಗೆ ಖಾತೆ, ಪಹಣಿ ನೀಡುವುದು, ಶಾಲೆ ಕೊಠಡಿ ದುರಸ್ತಿ, ರಸ್ತೆ, ಚರಂಡಿ ಅಭಿವೃದ್ಧಿಗೆ ಸಂಬಂಧಿಸಿದ ಅರ್ಜಿಗಳು ಹೆಚ್ಚು.

ವಿವಿಧ ಸಾಮಾಜಿಕ ಭದ್ರತೆಗೆ ಸಂಬಂಧಿಸಿದ ವೇತನ ಅರ್ಜಿಗಳಿಗೆ ಪರಿಹಾರ ದೊರೆತಿದೆ. ಉಳಿದೆಲ್ಲ ಸಮಸ್ಯೆಗಳ ಅರ್ಜಿಗಳು ಕಡತಗಳಿಗೆ ಸೀಮಿತವಾಗಿವೆ.

ತಾಲ್ಲೂಕಿನ ಬಹುತೇಕ ಕಡೆಗಳಲ್ಲಿ ಅನೇಕ ವರ್ಷಗಳಿಂದ ಸಾಗುವಳಿ ಮಾಡಿಕೊಂಡು ಬಂದಿರುವ ರೈತರಿಗೆ ಸಾಗುವಳಿ ಹಕ್ಕುಪತ್ರ ನೀಡಿಲ್ಲ. ಕೆಲವೆಡೆ ಹಕ್ಕುಪತ್ರ ನೀಡಿದ್ದರೂ ಖಾತೆ ಮಾಡಿಲ್ಲ.

ದೊಡ್ಡಪಾಲಹಳ್ಳಿಯಲ್ಲಿ ಜಿಲ್ಲಾಧಿಕಾರಿ ಭಾಗವಹಿಸಿ 29 ಅರ್ಜಿ ಸ್ವೀಕರಿಸಿದ್ದರು. ಅದರಲ್ಲಿ ಗ್ರಾಮದ ಸರ್ಕಾರಿ ಶಾಲಾ ಕಟ್ಟಡ ದುರಸ್ತಿಗೆ ಸಂಬಂಧಿಸಿದ ಅರ್ಜಿಯನ್ನು ಗ್ರಾಮಸ್ಥರು ನೀಡಿದ್ದರು. ಅರ್ಜಿ ನೀಡಿ ಒಂದೂವರೆ ವರ್ಷ ಕಳೆದರೂ ಶಾಲಾ ಕಟ್ಟಡ ಅಭಿವೃದ್ಧಿಗೆ ಕ್ರಮ ವಹಿಸಿಲ್ಲ.
ಚಿಕ್ಕಪಾಳ್ಯದಲ್ಲಿ ನಕಾಶೆ ದಾರಿ ಒತ್ತುವರಿ ತೆರವು ಸೇರಿದಂತೆ ಚಿಕ್ಕಪಾಳ್ಯ ಗ್ರಾಮದಿಂದ ಹೊಸಪಾಳ್ಯ ಗ್ರಾಮ ಹಾಗೂ ಕೆರೆವರೆಗೆ ರಸ್ತೆ ಅಭಿವೃದ್ಧಿಗೆ ಅರ್ಜಿ ನೀಡಿದ್ದರೂ ಯಾವುದೇ ಕ್ರಮ ಜರುಗಿಸಿಲ್ಲ. 

ಪ್ರಾರಂಭದಲ್ಲಿ ಮಾತ್ರ ಕಾರ್ಯಕ್ರಮಗಳು ಅಚ್ಚುಕಟ್ಟಾಗಿ ನಡೆದವು. ಪ್ರತಿ ಇಲಾಖೆ ಅಧಿಕಾರಿಗಳು ಆಯಾ ಇಲಾಖೆಗೆ ಸಂಬಂಧಿಸಿದಂತೆ ಹೆಚ್ಚು ಗಮನಹರಿಸಿ ಕೆಲಸ ಮಾಡುತ್ತಿದ್ದರು. ಸ್ವಚ್ಛತೆಗೆ ಆದ್ಯತೆ ನೀಡಲಾಗುತ್ತಿತ್ತು. ಅಧಿಕಾರಿಗಳು ಹಳ್ಳಿಗಳಿಗೆ ಭೇಟಿ ನೀಡಿ ಸಮಸ್ಯೆ ಆಲಿಸುತ್ತಿದ್ದರು. ಆದರೆ ದಿನ ಕಳೆದಂತೆ ನೆಪಮಾತ್ರಕ್ಕೆ ಮಾಡಲಾಯಿತು. ಕೇವಲ ಅರ್ಜಿ ಸ್ವೀಕಾರಕ್ಕಷ್ಟೆ ಕಾರ್ಯಕ್ರಮ ಸೀಮಿತವಾಯಿತು ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ತೆರವಾಗದ ರಸ್ತೆ
ತೆರವಾಗದ ರಸ್ತೆ
ಚಿಕ್ಕಪಾಳ್ಯ ಗ್ರಾಮದಲ್ಲಿನ ಸರ್ಕಾರಿ ಶಾಲೆ ಕೊಠಡಿಗಳು ಹಾಳಾಗಿವೆ
ಚಿಕ್ಕಪಾಳ್ಯ ಗ್ರಾಮದಲ್ಲಿನ ಸರ್ಕಾರಿ ಶಾಲೆ ಕೊಠಡಿಗಳು ಹಾಳಾಗಿವೆ
ನಾಗರಾಜು
ನಾಗರಾಜು
ಸುರೇಶ್
ಸುರೇಶ್
ಜಯರಾಮ
ಜಯರಾಮ
ಸಿದ್ದರಾಜು
ಸಿದ್ದರಾಜು
ರಮೇಶ
ರಮೇಶ

ಜಿಲ್ಲಾಧಿಕಾರಿ ಭೇಟಿ ನೀಡಿದ್ದ ದೊಡ್ಡಪಾಲಹಳ್ಳಿ ಗ್ರಾಮದ ಶಾಲಾ ಕಟ್ಟಡ ದುರಸ್ತಿಯಲ್ಲಿದೆ. ಪಕ್ಕದ ಸಿಗೇಪಾಳ್ಯ ದೊಡ್ಡಪಾಲನಹಳ್ಳಿ ಶಾಲಾ ಕಟ್ಟಡ ದುರಸ್ತಿಗೆ ಮನವಿ ಮಾಡಿದ್ದರೂ ಕ್ರಮವಹಿಸಿಲ್ಲ.

–ನಾಗರಾಜು ಗ್ರಾ.ಪಂ ಸದಸ್ಯ ನೀಲಗೊಂಡನಹಳ್ಳಿ

ಸ್ಥಳೀಯರ ಜಮೀನುಗಳನ್ನು ಅಧಿಕಾರಿಗಳು ನಕಲಿ ದಾಖಲೆ ಸೃಷ್ಟಿಸಿ ಮಾರಾಟ ಮಾಡುತ್ತಿದ್ದಾರೆ. ಇದರಿಂದ ಅನ್ಯಾಯವಾಗುತ್ತಿದೆ ಎಂದು ನೂರಾರು ರೈತರು ಮನವಿ ಮಾಡಿದ್ದೆವು. ನಮ್ಮ ಮನವಿಗೆ ಈವರೆಗೆ ಸ್ಪಂದನೆ ಇಲ್ಲ

–ಸುರೇಶ್ ಬಿಡಿ ಪುರ

ಮನೆ ಮುಂದಿನ ನಕಾಶೆ ದಾರಿ ಒತ್ತುವರಿಯಾಗಿದ್ದು ನಮ್ಮ ಅಜ್ಜ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆಗೆ ಕಾರ್ಯಕ್ರಮದಲ್ಲಿ ಅರ್ಜಿ ಕೊಟ್ಟು ಸ್ಥಳಕ್ಕೆ ಎಲ್ಲ ಅಧಿಕಾರಿಗಳನ್ನು ಕರೆದುಕೊಂಡು ಹೋಗಿ ತೋರಿಸಿದ್ದರು. ಒಂದೂವರೆ ವರ್ಷವಾದರೂ ದಾರಿ ತೆರುವಾಗಲೇ ಇಲ್ಲ. ನಮ್ಮಜ್ಜನೇ ತೀರಿ ಹೋದರು.

–ಜಯರಾಮ ಅವದಾರನಹಳ್ಳಿ

ಯಾವುದೇ ಗ್ರಾಮದಲ್ಲೂ ನಿರೀಕ್ಷಿತ ಮಟ್ಟದಲ್ಲಿ ಕೆಲಸ ಆಗಿಲ್ಲ. ಕೊಟ್ಟ ಅರ್ಜಿಗಳಿಗೂ ಕೆಲಸ ಮಾಡಿಲ್ಲ. ರೈತರು ಸಾರ್ವಜನಿಕರು ಕಚೇರಿಗೆ ಅಲೆಯುವುದು ತಪ್ಪಿಲ್ಲ. ಇದು ಜನರ ನಿರೀಕ್ಷೆ ಹುಸಿ ಮಾಡಿದೆ.

–ಸಿದ್ದರಾಜು ರೈತ ಸಂಘದ ಅಧ್ಯಕ್ಷ ಬಿಡಿ ಪುರ

ಗ್ರಾಮಕ್ಕೆ ಪ್ರಾಥಮಿಕ ಆರೋಗ್ಯ ಕೇಂದ್ರದ ಅಗತ್ಯ ಇದೆ. ಇಲ್ಲಿದ್ದ ಆರೋಗ್ಯ ಸಹಾಯಕಿ ಕಚೇರಿ ಹಾಳಾಗಿದೆ. ಹಾಗಾಗಿ ಇಲ್ಲಿಗೆ ಯಾವುದೇ ಆರೋಗ್ಯ ಇಲಾಖೆ ಸಿಬ್ಬಂದಿ ಬರುವುದಿಲ್ಲ. ಈ ಭಾಗದ ಜನ ಹತ್ತಾರು ಕಿ.ಮೀ ದೂರ ಆರೋಗ್ಯ ತಪಾಸಣೆಗೆ ಹೋಗಬೇಕಾದ ಅನಿವಾರ್ಯತೆ ಇದೆ. ಈ ಬಗ್ಗೆ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ.

–ರಮೇಶ ಬೊಮ್ಮಲದೇವಿಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT