ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮದ್ಯ ಮಾರಾಟಗಾರರ ಪ್ರತಿಭಟನೆ

Last Updated 3 ಫೆಬ್ರುವರಿ 2021, 2:09 IST
ಅಕ್ಷರ ಗಾತ್ರ

ತುಮಕೂರು: ಮದ್ಯ ಮಾರಾಟಗಾರರಿಗೆ ಆಗುತ್ತಿರುವ ಕಿರುಕುಳತಡೆಯುವುದು ಸೇರಿದಂತೆ ತಮ್ಮ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜಿಲ್ಲಾ ಮದ್ಯ ಮಾರಾಟಗಾರರ ಸಂಘದ ನೇತೃತ್ವದಲ್ಲಿ ಮದ್ಯ ಮಾರಾಟಗಾರರು ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.

ಮದ್ಯ ಮಾರಾಟಗಾರರಿಗೆ ಅಬಕಾರಿ ಅಧಿಕಾರಿಗಳು, ಪೊಲೀಸರು ಕಿರುಕುಳ ನೀಡುತ್ತಿದ್ದಾರೆ. ಭ್ರಷ್ಟಾಚಾರ ಮಿತಿಮೀರಿದೆ. ವ್ಯಾಪಾರ ನಡೆಸುವುದೇ ಕಷ್ಟಕರವಾಗಿದೆ ಎಂದು ಆರೋಪಿಸಿದರು.

ಆನ್‌ಲೈನ್ ಮೂಲಕ ಮದ್ಯ ಮಾರಾಟಕ್ಕೆ ಅವಕಾಶ ನೀಡಬಾರದು. ಹಿಪ್ ಬಾರ್ ಸಂಸ್ಥೆಗೆ ಆನ್‌ಲೈನ್ ಮೂಲಕ ಮದ್ಯ ಮಾರಾಟಕ್ಕೆ ಯಾವುದೇ ಕಾರಣಕ್ಕೂ ಅನುಮತಿ ಕೊಡಬಾರದು. 2012ರ ಜನಗಣತಿ ಪ್ರಕಾಶ 5 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇರುವ ಗ್ರಾಮಗಳಲ್ಲಿ ಹಾದು ಹೋಗಿರುವ ರಾಜ್ಯ, ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಿಎಲ್–6ಎ, ಸಿಎಲ್–7 ಸನ್ನದು ಪ್ರಾರಂಭಿಸಲು ನೀಡಿರುವ ಆದೇಶ ರದ್ದುಪಡಿಸಬೇಕು. ಸುಪ್ರೀಂ ಕೋರ್ಟ್ ಆದೇಶ ಧಿಕ್ಕರಿಸಿ ಅನುಮತಿ ನೀಡಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಕಳೆದ 12 ವರ್ಷಗಳಲ್ಲಿ 968 ಸಿಎಲ್–7 ಸನ್ನದುಗಳು ಹೆಚ್ಚಾಗಿವೆ. ಗ್ರಾಮಾಂತರ ಪ್ರದೇಶದಲ್ಲಿ 20, ನಗರ ಪ್ರದೇಶದಲ್ಲಿ 30 ಕೊಠಡಿ ಇರುವ ಬೋರ್ಡಿಂಗ್‌ ಹೌಸ್‌ಗೆ ಸಿಎಲ್–7 ಸನ್ನದು ನೀಡಲು ಸರ್ಕಾರದ ಆದೇಶವಿದೆ. ಆದರೆ ಈ ಮಾನದಂಡಗಳನ್ನು ಅನುಸರಿಸದೆ ಮಂಜೂರಾತಿ ನೀಡಲಾಗುತ್ತಿದೆ ಎಂದು ದೂರಿದರು.

ಪ್ರವಾಸೋದ್ಯಮ ನೀತಿ ಪ್ರಕಾರ ಗುರುತಿಸಲ್ಪಟ್ಟಿರುವ ಪ್ರದೇಶಕ್ಕೆ ಮಾತ್ರ ಸಿಎಲ್–7 ಸನ್ನದು ನೀಡಬೇಕು. ಈಗಾಗಲೇ ನೀಡಿರುವ ಸನ್ನದುಗಳನ್ನು ಮರುಪರಿಶೀಲಿಸಿ ಮಾನದಂಡ ಅನುಸರಿಸದೆ ಅನುಮತಿಗೆ ಶಿಫಾರಸು ಮಾಡಿದವರ ಮೇಲೆ ಕ್ರಮ ಕೈಗೊಳ್ಳಬೇಕು. 2009ರಲ್ಲಿ ನವೀಕರಿಸದೆ ಸ್ಥಗಿತಗೊಂಡಿದ್ದ ಸನ್ನದುಗಳನ್ನು ಎಂಎಸ್‌ಐಎಲ್‌ಗೆ ಮಂಜೂರು ಮಾಡಲಾಗಿತ್ತು. 2016ರ ನಂತರ ಹೆಚ್ಚುವರಿಯಾಗಿ 900 ಅಂಗಡಿಗಳನ್ನು ಮಂಜೂರು ಮಾಡಲಾಗಿದೆ. ಕೋಟಾ ನಿಗದಿಪಡಿಸದೆ ಅಂಗಡಿಗಳಿಗೆ ಅನುಮತಿ ನೀಡಿದ್ದು, ಸಿಎಲ್–2 ಹಾಗೂ ಎಂಎಸ್‌ಐಎಲ್‌ಗೂ ಯಾವುದೇ ವ್ಯತ್ಯಾಸ ಇಲ್ಲವಾಗಿದೆ ಎಂದು ಆರೋಪಿಸಿದರು.

ಜಿಲ್ಲಾ ಮದ್ಯ ಮಾರಾಟಗಾರರ ಸಂಘದ ಅಧ್ಯಕ್ಷ ಡಿ.ಎಸ್.ಕುಮಾರ್,ಕಾರ್ಯದರ್ಶಿ ಎಸ್.ಆರ್.ಜಗದೀಶ್, ಉಪಾಧ್ಯಕ್ಷ ಆನಂದ್
ಕುಮಾರ್, ಮುಖಂಡರಾದಸಿದ್ದಪ್ಪ, ಸಂಜೀವ್ ಕುಮಾರ್, ಮಲ್ಲಸಂದ್ರ ಶಿವಣ್ಣ, ವೇದಮೂರ್ತಿ, ಪರಮೇಶ್, ಎಚ್‌.ಆರ್‌ ವೆಂಕಟೇಶ್,
ವೈ.ಎನ್.ನಾಗರಾಜು, ನಟರಾಜ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT