ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು | ಲಾಕ್‌ಡೌನ್ ಸಮಯದಲ್ಲಿ ₹9.69 ಕೋಟಿ ಕೆಲಸ

ಕೊರೊನಾ ಸಂಕಷ್ಟದಲ್ಲಿ ಕಾರ್ಮಿಕರ ಕೈಹಿಡಿದ ನರೇಗಾ
Last Updated 17 ಮೇ 2020, 20:00 IST
ಅಕ್ಷರ ಗಾತ್ರ

ತುಮಕೂರು: ಲಾಕ್‌ಡೌನ್ ಘೋಷಣೆಯಾದಾಗಿನಿಂದ ಸಂಕಷ್ಟಕ್ಕೆ ಸಿಲುಕಿದ್ದ ಗ್ರಾಮೀಣ ಕಾರ್ಮಿಕರಿಗೆ ಆಸರೆಯಾಗಿದ್ದು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ (ನರೇಗಾ) ಕಾಮಗಾರಿಗಳು. ಕೆಲಸ ಕಳೆದುಕೊಂಡು ನಗರಗಳಿಂದ ಹಳ್ಳಿಗಳಿಗೆ ಮರಳಿದವರೂ ಈಗ ಖಾತ್ರಿ ಕೆಲಸಗಳನ್ನು ಅವಲಂಬಿಸಿದ್ದಾರೆ.

ಜಿಲ್ಲೆಯಲ್ಲಿ ನರೇಗಾದಡಿ ಉದ್ಯೋಗಕ್ಕೆ ನೋಂದಣಿ ಮಾಡಿಕೊಂಡವರ ಸಂಖ್ಯೆ 3.88 ಲಕ್ಷ. ಈ ಪೈಕಿ 1.61 ಲಕ್ಷ ಮಂದಿ ಸಕ್ರಿಯವಾಗಿ ಖಾತ್ರಿ ಉದ್ಯೋಗದಲ್ಲಿ ತೊಡಗಿದ್ದಾರೆ. ಫಲಾನುಭವಿಗಳ ಖಾತೆಗೆ ಮಾರ್ಚ್‌ನಿಂದ ಈವರೆಗೆ ₹9.69 ಕೋಟಿ ಕೂಲಿ ಹಣ ಪಾವತಿಸಲಾಗಿದೆ. ಕಾರ್ಮಿಕರ ವೈಯಕ್ತಿಕ ಬ್ಯಾಂಕ್ ಖಾತೆಗೆ ವಾರಕ್ಕೊಮ್ಮೆ ಕೂಲಿ ಮೊತ್ತ ಪಾವತಿಯಾಗುತ್ತಿದೆ.

3.34 ಲಕ್ಷ ಮಾನವ ದಿನ: ಲಾಕ್‌ಡೌನ್ ಹಿನ್ನೆಲೆಯಲ್ಲಿ ನರೇಗಾ ಕಾಮಗಾರಿಗಳನ್ನು ಆದ್ಯತೆ ಮೇರೆಗೆ ಚುರುಕುಗೊಳಿಸಲಾಗಿದೆ. ಇದುವರೆಗೆ 3.34 ಲಕ್ಷ ಮಾನವ ದಿನಗಳನ್ನು ಸೃಜಿಸಿ ಕೂಲಿ ಪಾವತಿಸಲಾಗಿದೆ. ಕೂಲಿಗೆ ನೋಂದಣಿ ಮಾಡಿಕೊಂಡಿದ್ದರೂ, ಕೆಲವರು ನಗರಗಳಿಗೆ ಉದ್ಯೋಗ ಅರಸಿ ವಲಸೆ ಹೋಗಿದ್ದರು. ಲಾಕ್‌ಡೌನ್‌ನಿಂದಾಗಿ ವಾಪಸಾಗಿದ್ದಾರೆ. ಅವರ ಜಾಬ್‌ ಕಾರ್ಡ್‌ಗಳನ್ನು ಸಕ್ರಿಯಗೊಳಿಸಿ, ಕೂಲಿ ನೀಡಲಾಗಿದೆ. ಅಲ್ಲದೆ, ಮಾರ್ಚ್‌ನಿಂದ ಈವರೆಗೆ ಹೊಸದಾಗಿ 1,490 ಮಂದಿ ನೋಂದಣಿ ಮಾಡಿಕೊಂಡಿದ್ದಾರೆ.

ಲಾಕ್‌ಡೌನ್ ಅವಧಿಯಲ್ಲಿ ಉದ್ಯೋಗಕ್ಕಾಗಿ, ಮಧುಗಿರಿ ತಾಲ್ಲೂಕಿನಲ್ಲಿ ಹೆಚ್ಚು ನೋಂದಣಿಯಾಗಿದ್ದು, ಸಾಕಷ್ಟು ಸಂಖ್ಯೆಯ ಕಾಮಗಾರಿಗಳು ನಡೆಯುತ್ತಿವೆ. ಈ ತಾಲ್ಲೂಕಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬೆಟ್ಟ, ಗುಡ್ಡಗಳಿದ್ದು, ಅಲ್ಲಿ ತಲಪರಿಗೆ ನಿರ್ಮಾಣ ಕೆಲಸ ನಡೆದಿದೆ.

‘ಜಿಲ್ಲೆಯಲ್ಲಿ ಪ್ರಸ್ತುತ 2,433 ವೈಯುಕ್ತಿಕ ಕಾಮಗಾರಿಗಳು ಹಾಗೂ 601 ಸಮುದಾಯ ಕಾಮಗಾರಿ ಪ್ರಾರಂಭಿಸಲಾಗಿದ್ದು, ಒಟ್ಟು 3,099 ವಿವಿಧ ಬಗೆಯ ಕಾಮಗಾರಿಗಳು ನಡೆಯುತ್ತಿವೆ’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಶುಭಾ ಕಲ್ಯಾಣ್‌ ತಿಳಿಸಿದರು.

ವೈಯಕ್ತಿಕ ಕೆಲಸಕ್ಕೂ ಅವಕಾಶ
ನರೇಗಾದಲ್ಲಿ ಕೃಷಿ ಹೊಂಡ, ಬದು ನಿರ್ಮಾಣ ಕಾಮಗಾರಿಗಳು ಹೆಚ್ಚು ನಡೆಯುತ್ತಿವೆ. ಕೆರೆ ಹೂಳೆತ್ತುವ ಕಾರ್ಯಕ್ಕೆ ಆದ್ಯತೆ ನೀಡಲಾಗಿದೆ. ಸಾಂಪ್ರದಾಯಿಕ ನೀರು ಸಂಗ್ರಹ ಘಟಕಗಳಾದ ಕಲ್ಯಾಣಿ, ಗೋಕಟ್ಟೆ ಅಭಿವೃದ್ಧಿಪಡಿಸಲಾಗುತ್ತಿದೆ. ಶಾಲಾ ಕಟ್ಟಡ ನಿರ್ಮಾಣ, ಕೃಷಿ ಅರಣ್ಯೀಕರಣ, ಸಸಿ ನೆಡಲು ಗುಂಡಿ ತೆಗೆಯುವುದು, ಶೆಡ್ ನಿರ್ಮಾಣ, ದನದ ಕೊಟ್ಟಿಗೆ, ಮಳೆ ನೀರು ಸಂಗ್ರಹ, ಹಿಪ್ಪು ನೇರಳೆ ಬೇಸಾಯ ಚಟುವಟಿಕೆ, ಎರೆಹುಳು ಗೊಬ್ಬರ ಘಟಕ ನಿರ್ಮಾಣ, ಸ್ಮಶಾನ ಅಭಿವೃದ್ಧಿ ಕಾಮಗಾರಿಗೆ ಅವಕಾಶ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT