ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಲೋಕಸಭಾ ಚುನಾವಣೆ | ಪ್ರಚಾರ ಆರಂಭಿಸಿದ ಸೋಮಣ್ಣ: ಸಿದ್ಧಗಂಗಾ ಮಠಕ್ಕೆ ಭೇಟಿ

Published 15 ಮಾರ್ಚ್ 2024, 15:37 IST
Last Updated 15 ಮಾರ್ಚ್ 2024, 15:37 IST
ಅಕ್ಷರ ಗಾತ್ರ

ತುಮಕೂರು: ತುಮಕೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಶುಕ್ರವಾರ ನಗರದ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಸಿದ್ಧಲಿಂಗ ಸ್ವಾಮೀಜಿ ಅವರ ಆಶೀರ್ವಾದ ಪಡೆದರು.

ಟಿಕೆಟ್‌ ಘೋಷಣೆಯಾದ ನಂತರ ಮೊದಲ ಬಾರಿಗೆ ಜಿಲ್ಲೆಗೆ ಭೇಟಿ ನೀಡಿದರು. ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ ಗದ್ದುಗೆಯ ದರ್ಶನ ಪಡೆದುಕೊಂಡರು.

ನಂತರ ಸುದ್ದಿಗಾರರ ಜತೆ ಮಾತನಾಡಿ ‘ನಾನು ತುಮಕೂರಿಗೆ ಬರಬೇಕು ಎಂದು ಬಯಸಿರಲಿಲ್ಲ. ಪಕ್ಷದ ಹೈಕಮಾಂಡ್ ನಾಯಕರು ಸ್ಪರ್ಧೆಗೆ ಅವಕಾಶ ಕಲ್ಪಿಸಿದ್ದಾರೆ. ವೇಗವಾಗಿ ಬೆಳೆಯುತ್ತಿರುವ ತುಮಕೂರಿಗೆ ಅಗತ್ಯ ಸೌಲಭ್ಯ ಕಲ್ಪಿಸಬೇಕು ಎಂಬುದು ನಮ್ಮ ದೂರದೃಷ್ಟಿ. ಒಂದು ಅವಕಾಶ ನೀಡಿದರೆ ಜಿಲ್ಲೆಯನ್ನು ವಾರಣಾಸಿಯ ಮಾದರಿಯಲ್ಲಿ ಅಭಿವೃದ್ಧಿ ಮಾಡುತ್ತೇನೆ’ ಎಂದು ಭರವಸೆ ನೀಡಿದರು.

ಶಾಸಕ ಬಿ.ಸುರೇಶ್‌ಗೌಡ, ‘ಮಾಧುಸ್ವಾಮಿ ಅವರಿಗೆ ಬಿಜೆಪಿ ಎಲ್ಲ ಸ್ಥಾನಮಾನ ನೀಡಿದೆ. ಅತ್ಯಂತ ಉನ್ನತ ಸ್ಥಾನ ನೀಡಲಾಗಿತ್ತು. ಚುನಾವಣೆಯಲ್ಲಿ ಎಲ್ಲರು ಒಗ್ಗಟ್ಟಾಗಿ ಸೋಮಣ್ಣ ಅವರನ್ನು ಗೆಲ್ಲಿಸುತ್ತೇವೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಶಾಸಕ ಜಿ.ಬಿ.ಜ್ಯೋತಿಗಣೇಶ್‌, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಚ್‌.ಎಸ್‌.ರವಿಶಂಕರ್‌, ಮುಖಂಡರಾದ ಎಂ.ವಿ.ವೀರಭದ್ರಯ್ಯ, ಡಾ.ಎಸ್‌.ಪರಮೇಶ್‌, ಎಂ.ಡಿ.ಲಕ್ಷ್ಮಿನಾರಾಯಣ್‌ ಇತರರು ಹಾಜರಿದ್ದರು.

ಬಿಜೆಪಿಯಿಂದ ರ್‍ಯಾಲಿ

ನಗರದಲ್ಲಿ ಶುಕ್ರವಾರ ಸಂಜೆ ವಿ.ಸೋಮಣ್ಣ ರ್‍ಯಾಲಿ ನಡೆಸಿದರು. ಎಸ್‌ಐಟಿ ಕಾಲೇಜು ಮುಂಭಾಗದಿಂದ ಶುರುವಾದ ರ್‍ಯಾಲಿಯು ಗಂಗೋತ್ರಿ ರಸ್ತೆ ಎಸ್‌.ಎಸ್‌.ಪುರಂ ಮುಖ್ಯರಸ್ತೆ ರಾಧಾಕೃಷ್ಣ ರಸ್ತೆ ಮುಖಾಂತರ ಭದ್ರಮ್ಮ ಛತ್ರ ವೃತ್ತದ ಬಳಿಯ ಬಿಜೆಪಿ ಕಚೇರಿಯ ತಲುಪಿತು. ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್‌.ಅಶೋಕ ಮಾತನಾಡಿ ‘ನಾವು ಈಗಾಗಲೇ 20 ಜನ ಅಭ್ಯರ್ಥಿಗಳ ಹೆಸರು ಪ್ರಕಟ ಮಾಡಿದ್ದೇವೆ. ಕಾಂಗ್ರೆಸ್‌ನವರು ಅಭ್ಯರ್ಥಿಗಾಗಿ ಹುಡುಕುತ್ತಿದ್ದಾರೆ. ಬಿಜೆಪಿಯವರು ಘೋಷಣೆ ಮಾಡಿದರೆ ಉಳಿದದ್ದನ್ನು ನಾವು ಆಯ್ದುಕೊಳ್ಳುತ್ತೇವೆ ಎಂಬ ದರಿದ್ರ ಸ್ಥಿತಿಗೆ ಕಾಂಗ್ರೆಸ್‌ ಬಂದಿದೆ. ಇಂತಹ ಕಾಂಗ್ರೆಸ್‌ ದೇಶಕ್ಕೆ ಅಗತ್ಯ ಇಲ್ಲ’ ಎಂದು ಟೀಕಿಸಿದರು. ಸಂಸದ ಜಿ.ಎಸ್‌.ಬಸವರಾಜು ಶಾಸಕ ಬೈರತಿ ಬಸವರಾಜು ವಿಧಾನ ಪರಿಷತ್‌ ಸದಸ್ಯ ಚಿದಾನಂದ್‌ ಎಂ.ಗೌಡ ಮುಖಂಡರಾದ ವೈ.ಎಚ್.ಹುಚ್ಚಯ್ಯ ಎಸ್.ಶಿವಪ್ರಸಾದ್‌ ಇತರರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT