ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಲೋಕಸಭೆ: ಅಭಿಪ್ರಾಯ ಸಂಗ್ರಹಕ್ಕೆ ಸೀಮಿತ

ಕಾಂಗ್ರೆಸ್‌ಗೆ ಮುದ್ದಹನುಮೇಗೌಡ ಕರೆ ತರಲು ಒತ್ತಡ; ಅಭ್ಯರ್ಥಿ ಪಟ್ಟಿ ಸಿದ್ಧಪಡಿಸಲು ಕಸರತ್ತು
Published 24 ಡಿಸೆಂಬರ್ 2023, 6:19 IST
Last Updated 24 ಡಿಸೆಂಬರ್ 2023, 6:19 IST
ಅಕ್ಷರ ಗಾತ್ರ

ತುಮಕೂರು: ತುಮಕೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಸಿದ್ಧಪಡಿಸಲು ಜಿಲ್ಲೆಯ ಉಸ್ತುವಾರಿಯಾದ ಕಂದಾಯ ಸಚಿವ ಕೃಷ್ಣಬೈರೇಗೌಡ ಕಸರತ್ತು ನಡೆಸಿದರು.

ಕಾಂಗ್ರೆಸ್ ಜಿಲ್ಲಾ ಕಚೇರಿಯಲ್ಲಿ ಶನಿವಾರ ಶಾಸಕರು, ಮಾಜಿ ಶಾಸಕರು, ಮುಂಚೂಣಿ ಘಟಕಗಳ ಮುಖಂಡರು, ಪ್ರಮುಖ ನಾಯಕರ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸಿದರು. ಶಾಸಕರ ಜತೆಗೆ ಪ್ರತ್ಯೇಕವಾಗಿ ಸಭೆ ನಡೆಸಿ ಮಾಹಿತಿ ಪಡೆದುಕೊಂಡರು. ಸಭೆಯಲ್ಲಿ ಯಾವುದೇ ಒಮ್ಮತದ ಅಭಿಪ್ರಾಯಗಳು ವ್ಯಕ್ತವಾಗಿಲ್ಲ. ಲೋಕಸಭೆಗೆ ನಿಲ್ಲಿಸಲು ‘ಸೂಕ್ತ, ಸಮರ್ಥ’ ಅಭ್ಯರ್ಥಿ ಇಲ್ಲದಿರುವ ಬಗ್ಗೆ ಸಭೆಯಲ್ಲಿ ಪ್ರಮುಖವಾಗಿ ಚರ್ಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಅಭ್ಯರ್ಥಿ ಆಯ್ಕೆ ವಿಚಾರವನ್ನು ಸಚಿವರಾದ ಜಿ.ಪರಮೇಶ್ವರ, ಕೆ.ಎನ್.ರಾಜಣ್ಣ ಹಾಗೂ ಹೈಕಮಾಂಡ್ ನಿರ್ಧಾರಕ್ಕೆ ಬಿಡಲು ಶಾಸಕರು ಒಲವು ವ್ಯಕ್ತಪಡಿಸಿದ್ದಾರೆ. ಜಿಲ್ಲೆಯ ಸಚಿವರು, ಶಾಸಕರ ಜತೆಗೆ ಬೆಂಗಳೂರಿನಲ್ಲಿ ಮತ್ತೊಂದು ಸುತ್ತಿನ ಸಭೆ ನಡೆಸಿ ನಿರ್ಧಾರ ಕೈಗೊಳ್ಳುವಂತೆ ಸಲಹೆಗಳು ಬಂದಿವೆ. ಶಾಸಕರು ಸ್ಪಷ್ಟ ಅಭಿಪ್ರಾಯ ತಿಳಿಸಿಲ್ಲ. ಇಂತಹವರನ್ನೇ ಅಭ್ಯರ್ಥಿಯನ್ನಾಗಿ ಮಾಡಬೇಕು ಎಂಬ ಪ್ರಮುಖವಾದ ಒತ್ತಡ ಕೇಳಿ ಬಂದಿಲ್ಲ. ಮುರಳೀಧರ ಹಾಲಪ್ಪ, ಆರ್.ನಾರಾಯಣ್, ನಿಖಿತ್‌ರಾಜ್ ಮೌರ್ಯ ಇತರರು ತಮಗೆ ಟಿಕೆಟ್ ನೀಡುವಂತೆ ಕೇಳಿಕೊಂಡರು.

ಕಾಂಗ್ರೆಸ್ ತೊರೆದು ಬಿಜೆಪಿ ಸೇರಿರುವ ಮಾಜಿ ಸಂಸದ ಎಸ್‌.ಪಿ.ಮುದ್ದಹನುಮೇಗೌಡ ಅವರನ್ನು ಪಕ್ಷಕ್ಕೆ ಕರೆತಂದು ಅಭ್ಯರ್ಥಿಯನ್ನಾಗಿ ಮಾಡಬೇಕು ಎಂದು ಹಲವರು ಸಲಹೆ ನೀಡಿದ್ದು, ಆ ಬಗ್ಗೆ ಸಭೆಯಲ್ಲಿ ಚರ್ಚೆಗಳು ನಡೆದಿವೆ. ಬಿಜೆಪಿ ಮುಖಂಡ, ಮಾಜಿ ಸಚಿವ ವಿ.ಸೋಮಣ್ಣ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡು ಸ್ಪರ್ಧೆಗೆ ಇಳಿಸಬೇಕು ಎಂದು ಕೆಲವರು ಹೇಳಿದ್ದಾರೆ. ಇದಕ್ಕೆ ವಿರೋಧವೂ ವ್ಯಕ್ತವಾಗಿದೆ. ‘ಅನುಕೂಲಕ್ಕಾಗಿ ಪಕ್ಷಕ್ಕೆ ಬರುವವರಿಗೆ ಟಿಕೆಟ್ ನೀಡಬಾರದು. ಪಕ್ಷದ ಕಾರ್ಯಕರ್ತರಿಗೆ ನೀಡಬೇಕು’ ಎಂದು ಕೆಲವರು ಒತ್ತಾಯಿಸಿದ್ದಾರೆ. ಈ ಬಗ್ಗೆ ಪರ– ವಿರೋಧ ಅಭಿಪ್ರಾಯಗಳು ಸಭೆಯಲ್ಲಿ ವ್ಯಕ್ತವಾಗಿವೆ.

‘ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತದಲ್ಲಿ ಇದ್ದರೂ ಲೋಕಸಭೆಗೆ ಅಭ್ಯರ್ಥಿಯನ್ನು ಹುಡುಕಾಡುವಂತಾಗಿದೆ. ಒಬ್ಬ ಸಮರ್ಥ ನಾಯಕ ಇಲ್ಲವಾಗಿದ್ದರೆ. ಚುನಾವಣೆ ಸಮೀಪಿಸುತ್ತಿದ್ದು, ಇಂತಹ ಸಮಯದಲ್ಲಿ ಅಭ್ಯರ್ಥಿಗಾಗಿ ಪರದಾಡುವಂತಾಗಿದೆ’ ಎಂದು ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಶೀಘ್ರವೇ ಸೂಕ್ತ ಅಭ್ಯರ್ಥಿಯನ್ನು ಆಯ್ಕೆಮಾಡಬೇಕು. ಗೆಲ್ಲುವ ಸಾಮರ್ಥ್ಯ ಇರುವವರನ್ನು ನಿಲ್ಲಿಸಬೇಕು ಎಂಬ ಒತ್ತಡವೂ ವ್ಯಕ್ತವಾಯಿತು ಎನ್ನಲಾಗಿದೆ.

‘ಕೃಷ್ಣಬೈರೇಗೌಡ ಅವರನ್ನು ಜಿಲ್ಲೆಯ ಉಸ್ತುವಾರಿಯನ್ನಾಗಿ ಹೈಕಮಾಂಡ್ ನೇಮಿಸಿದ್ದು, ಜಿಲ್ಲೆಗೆ ಬಂದು ಅಭಿಪ್ರಾಯ ಸಂಗ್ರಹಿಸಿದ್ದಾರೆ. ಇದರಿಂದ ಏನೂ ಆಗುವುದಿಲ್ಲ. ಸಭೆ ನಡೆಸಲಷ್ಟೇ ಸೀಮಿತವಾಗಿದ್ದಾರೆ. ಸಚಿವರಾದ ಜಿ.ಪರಮೇಶ್ವರ, ಕೆ.ಎನ್.ರಾಜಣ್ಣ ನಿರ್ಧಾರದ ಮೇಲೆ ಅಭ್ಯರ್ಥಿಯ ಆಯ್ಕೆ ನಿಂತಿದೆ. ಈಗ ಟಿಕೆಟ್ ಕೇಳುತ್ತಿರುವವರಿಗೆ ಟಿಕೆಟ್ ಕೊಡಬೇಕೆ? ಹೊರಗಿನಿಂದ ಕರೆತಂದು ನಿಲ್ಲಿಸಬೇಕೆ? ಎಂಬುದು ವರಿಷ್ಠರ ಹಂತದಲ್ಲಿ ನಿರ್ಧಾರವಾಗಲಿದೆ. ಸೂಕ್ತ ಅಭ್ಯರ್ಥಿ ಸಿಗದಿದ್ದರೆ ಕೆ.ಎನ್.ರಾಜಣ್ಣ ಅವರನ್ನೇ ಕಣಕ್ಕೆ ಇಳಿಸಲೂಬಹುದು. ಈ ಎಲ್ಲಾ ವಿಚಾರಗಳು ಮುಂದಿನ ಹಂತದಲ್ಲಿ ಚರ್ಚೆಯಾಗಲಿವೆ’ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಸಚಿವರ ಗೈರು:

ಜಿಲ್ಲೆಯ ಸಚಿವರಾದ ಜಿ.ಪರಮೇಶ್ವರ ಕೆ.ಎನ್.ರಾಜಣ್ಣ ದೆಹಲಿ ಪ್ರತಿನಿಧಿ ಟಿ.ಬಿ.ಜಯಚಂದ್ರ ಗೈರು ಹಾಜರಿ ಎದ್ದು ಕಾಣುತಿತ್ತು. ತುರ್ತಾಗಿ ಸಭೆ ನಿಗದಿಪಡಿಸಿದ್ದರಿಂದ ಸಚಿವರು ಪೂರ್ವ ನಿಯೋಜಿತ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ಹಾಗಾಗಿ ಬಂದಿಲ್ಲ ಎಂದು ಹೇಳಲಾಗುತ್ತಿದೆ. ಬೆಳಗಾವಿಯಲ್ಲಿ ನಡೆದ ವಿಧಾನ ಮಂಡಲದ ಅಧಿವೇಶನದ ಸಮಯದಲ್ಲಿ ಜಿಲ್ಲೆಯ ಸಚಿವರಿಂದ ಕೃಷ್ಣಬೈರೇಗೌಡ ಅಭಿಪ್ರಾಯ ಪಡೆದುಕೊಂಡಿದ್ದಾರೆ. ಶಾಸಕರಿಂದಲೂ ಒಂದು ಸುತ್ತಿನ ಮಾಹಿತಿ ಪಡೆದಿದ್ದಾರೆ. ಹಾಗಾಗಿ ಸಚಿವರು ಸಭೆಯಲ್ಲಿ ಪಾಲ್ಗೊಂಡಿರಲಿಲ್ಲ. ಮತ್ತೊಮ್ಮೆ ಬೆಂಗಳೂರಿನಲ್ಲಿ ಚರ್ಚಿಸಿ ನಿರ್ಧಾರ ತಿಳಿಸಲಿದ್ದಾರೆ ಎನ್ನಲಾಗಿದೆ. ಶಾಸಕರಾದ ಡಾ.ಎಚ್.ಡಿ.ರಂಗನಾಥ್ ಕೆ.ಷಡಾಕ್ಷರಿ ಎಸ್‌.ಆರ್.ಶ್ರೀನಿವಾಸ್ ಎಚ್.ವಿ.ವೆಂಕಟೇಶ್ ಜಿಲ್ಲಾ ಘಟಕದ ಅಧ್ಯಕ್ಷ ಚಂದ್ರಶೇಖರ್‌ಗೌಡ ಮಾಜಿ ಶಾಸಕರು ಸೇರಿದಂತೆ ಪ್ರಮುಖ ನಾಯಕರು ಸಭೆಯಲ್ಲಿ ಭಾಗವಹಿಸಿದ್ದರು.

ಜನವರಿಯಲ್ಲಿ ಅಭ್ಯರ್ಥಿ ಪಟ್ಟಿ

ತುಮಕೂರು: ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿಯನ್ನು ಜನವರಿ ಒಳಗೆ ಅಂತಿಮಗೊಳಿಸಲಾಗುತ್ತದೆ ಎಂದು ಕೃಷಿ ಸಚಿವ ಕೃಷ್ಣಬೈರೇಗೌಡ ಹೇಳಿದರು. ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿ ‘ಸಭೆಯಲ್ಲಿ ಸಚಿವರಾದ ಜಿ.ಪರಮೇಶ್ವರ ಕೆ.ಎನ್.ರಾಜಣ್ಣ ದೆಹಲಿ ಪ್ರತಿನಿಧಿ ಟಿ.ಬಿ.ಜಯಚಂದ್ರ ಭಾಗವಹಿಸಿರಲಿಲ್ಲ. ಅವರ ಸಮ್ಮುಖದಲ್ಲಿ ಬೆಂಗಳೂರಿನಲ್ಲಿ ಮತ್ತೊಂದು ಸಭೆ ನಡೆಸಿ ಅಭ್ಯರ್ಥಿಗಳ ಪಟ್ಟಿ ಸಿದ್ಧಪಡಿಸಿ ಹೈಕಮಾಂಡ್‌ಗೆ ಸಲ್ಲಿಸಲಾಗುವುದು. ಜನವರಿಯಲ್ಲಿ ಅಭ್ಯರ್ಥಿಗಳ ಅಂತಿಮ ಪಟ್ಟಿ ಹೊರ ಬೀಳಲಿದ್ದು ನಂತರ ಕ್ಷೇತ್ರದಲ್ಲಿ ಕೆಲಸ ಮಾಡಲಿದ್ದಾರೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT