ಭಾನುವಾರ, ಸೆಪ್ಟೆಂಬರ್ 19, 2021
29 °C
ಚುನಾವಣಾ ‌ರಾಜಕೀಯದ ದಾಳವಾಗಿ ಬಳಕೆ l ಪಕ್ಷಗಳ ಪರಸ್ಪರ ಕೆಸರೆರಚಾಟ l ಯಾರಿಗೂ ಬೇಡವಾದ ಶಾಶ್ವತ ಪರಿಹಾರ

ಮತ್ತೆ ಮುನ್ನೆಲೆಗೆ ಬಂದ ಮದಲೂರು ಕೆರೆ

ಎಚ್.ಸಿ.ಅನಂತರಾಮು Updated:

ಅಕ್ಷರ ಗಾತ್ರ : | |

Prajavani

ಶಿರಾ: ಪ್ರತಿ ಬಾರಿ ಚುನಾವಣೆಯ ಸಮಯ ದಲ್ಲಿ ಮುನ್ನೆಲೆಗೆ ಬರುತ್ತಿದ್ದ ಮದಲೂರು ಕೆರೆ ವಿಚಾರ ಈ ಬಾರಿ ಚುನಾವಣೆಗೆ ಮೊದಲೇ ಸದ್ದು ಮಾಡುತ್ತಿದೆ.

ಶಿರಾ ಉಪಚುನಾವಣೆಯಲ್ಲಿ ಮದಲೂರು ಕೆರೆಗೆ ನೀರು ಹರಿಸುವ ವಿಚಾರವೇ ಪ್ರಮುಖ ರಾಜಕೀಯ ಅಸ್ತ್ರವಾಗಿತ್ತು. ಈಗ ಮದಲೂರಿಗೆ ನೀರು ಹರಿಸುವಂತೆ ಒತ್ತಾಯಿಸಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಾದಯಾತ್ರೆಗೆ ಮುಂದಾಗಿ
ರುವುದು ಬಿಜೆಪಿಗೆ ನುಂಗಲಾರದ ತುತ್ತಾಗಿದೆ.

ಯೋಜನೆಯ ಹಿನ್ನೆಲೆ: ಪಟ್ಟ‌ನಾಯಕನ ಹಳ್ಳಿ ಮಠದಲ್ಲಿ 2005ರಲ್ಲಿ ನಡೆದ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನದಲ್ಲಿ ನಂಜಾವಧೂತ ಸ್ವಾಮೀಜಿ ಅವರು ಮಠದಿಂದ ಸರ್ವೇ ನಡೆಸಿ ಯೋಜನೆಯ ನಕ್ಷೆ ಪ್ರದರ್ಶಿಸಿ ಮೊದಲ ಬಾರಿಗೆ ಮದಲೂರು ಕೆರೆಗೆ ನೀರು ಹರಿಸುವಂತೆ ಧ್ವನಿ ಎತ್ತಿದ್ದರು.

2006ರಲ್ಲಿ ಶಾಸಕರಾಗಿದ್ದ ಬಿ.ಸತ್ಯನಾರಾಯಣ ಅವರು ಅಂದಿನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಮದಲೂರು ಕೆರೆಗೆ ಕರೆ ತರುವ ಮೂಲಕ ಯೋಜನೆಗೆ ಮಂಜೂರಾತಿ ಪಡೆದುಕೊಂಡರು.

2008ರಲ್ಲಿ ಪಟ್ಟನಾಯಕನ ಹಳ್ಳಿಯಲ್ಲಿ ನಡೆದ ನಂಜಾವಧೂತ ಸ್ವಾಮೀಜಿ ಅವರ ಗುರುವಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಾಜಿ ಸಚಿವ ಟಿ‌.ಬಿ.ಜಯಚಂದ್ರ, ಎರಡು ವರ್ಷದಲ್ಲಿ‌ ಮದಲೂರು ಕೆರೆಗೆ ನೀರು ಹರಿಸುವುದಾಗಿ ಹೇಳಿದ್ದರು. ಅದು ಅವರು ಮುಂದಿನ ಚುನಾವಣೆಯಲ್ಲಿ ಶಾಸಕರಾಗಿ ಆಯ್ಕೆಯಾಗಲು ಸಹಕಾರಿ ಯಾಗಿತ್ತು. ಆದರೆ ರಾಜ್ಯದಲ್ಲಿ ‌ಬಿಜೆಪಿ ಸರ್ಕಾರ ಅಧಿಕಾರಕ್ಕೆ‌ ಬಂದು ಬಿ.ಎಸ್.
ಯಡಿಯೂರಪ್ಪ ಮುಖ್ಯಮಂತ್ರಿ ಯಾದರು. ಜಯಚಂದ್ರ ಅವರು ವಿರೋಧ ಪಕ್ಷದಲ್ಲಿ ಕುಳಿತುಕೊಳ್ಳು ವಂತಾಯಿತು‌. ಯೋಜನೆ ಅನುಷ್ಠಾನಕ್ಕೆ ಹಲವು ಅಡ್ಡಿಯಾಗಿತು. ಅಂದಿನ ಯುಪಿಎ ಸರ್ಕಾರದಲ್ಲಿ ಪ್ರಭಾವ ಬೀರಿ ಕೇಂದ್ರ ಸರ್ಕಾರದಿಂದ ₹59.85 ಕೋಟಿ ಅನುದಾನವನ್ನು ತಂದು, 2012ರಲ್ಲಿ ಅಂದಿನ ಕೇಂದ್ರ ಸಚಿವ ಎಸ್.ಎಂ.ಕೃಷ್ಣ ಅವರಿಂದ ಯೋಜನೆಗೆ ಭೂಮಿಪೂಜೆ ಮಾಡಿಸಲಾಯಿತು.

ಕಳ್ಳಂಬೆಳ್ಳ ಕೆರೆಯಿಂದ ಮದಲೂರು ಕೆರೆಗೆ ನೀರು ಹರಿಸುವ 32 ಕಿ.ಮೀ ನಾಲೆ 2017ರಲ್ಲಿ ಪೂರ್ಣಗೊಂಡು ಪ್ರಾಯೋಗಿಕವಾಗಿ 13 ದಿನ ನೀರು ಹರಿಸಿದರು. ಆದರೆ ಮುಂದಿನ ಚುನಾವಣೆಯಲ್ಲಿ ಜಯಚಂದ್ರ ಅವರು ಸೋತು ಬಿ.ಸತ್ಯನಾರಾಯಣ ಶಾಸಕರಾಗಿ ಆಯ್ಕೆಯಾದರು. ಅವರ ಅವಧಿಯಲ್ಲಿ ಮದಲೂರು ಕೆರೆಗೆ ನೀರು ಹರಿಯಲಿಲ್ಲ.

ಶಾಸಕ ಬಿ.ಸತ್ಯನಾರಾಯಣ ಅವರ ನಿಧನದಿಂದ ತೆರವಾದ ಕ್ಷೇತ್ರದ ಉಪಚುನಾವಣೆ ಸಂದರ್ಭದಲ್ಲಿ ಮದಲೂರು ಕೆರೆ ಬಳಿ ನಡೆದ ಪ್ರಚಾರ ಸಭೆಯಲ್ಲಿ ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ‘6 ತಿಂಗಳಲ್ಲಿ ಕೆರೆ ತುಂಬಿಸಿ, ನಾನೇ ಬಂದು ಬಾಗಿನ ಅರ್ಪಿಸುತ್ತೇನೆ’ ಎಂದು ಭರವಸೆ ನೀಡಿದ್ದರು. ನಂತರ ಶಿರಾ ಕ್ಷೇತ್ರದಲ್ಲಿ ಮೊದಲ ಬಾರಿಗೆ ಬಿಜೆಪಿಯ ಡಾ.ಸಿ.ಎಂ.ರಾಜೇಶ್ ಗೌಡ ಶಾಸಕರಾಗಿ ಆಯ್ಕೆಯಾದರು.

ಆನಂತರ 50 ದಿನ ನೀರು ಹರಿಸಿದರೂ, ಕೆರೆ ಭರ್ತಿಯಾಗಲಿಲ್ಲ. ‘ಕಳೆದ ವರ್ಷ ಮುಖ್ಯಮಂತ್ರಿ ಅದೇಶದಂತೆ ಮದಲೂರು ಕೆರೆಗೆ ನೀರು ಹರಿಸಲಾಗಿದೆ. ಆದರೆ ಕಾನೂನಾತ್ಮಕ ವಾಗಿ ಈ ಕೆರೆಗೆ ನೀರು ಹಂಚಿಕೆಯಾಗಿಲ್ಲ. ಅದ್ದರಿಂದ ಈ ಬಾರಿ ನೀರು ಹರಿಸಲು ಸಾಧ್ಯವಿಲ್ಲ’ ಎಂದು ಸಚಿವ ಜೆ.ಸಿ‌.ಮಾಧುಸ್ವಾಮಿ ಹೇಳಿರುವುದು ಬಿಜೆಪಿ ಮುಖಂಡರಲ್ಲೇ ಗೊಂದಲಕ್ಕೆ ಕಾರಣವಾಗಿದೆ.

ಜೆ.ಸಿ.ಮಾಧುಸ್ವಾಮಿ ಅವರ ಹೇಳಿಕೆಗೆ ಕಾಂಗ್ರೆಸ್ ಮತ್ತು ಜೆಡಿಎಸ್ ತೀವ್ರ ವಿರೋಧ ವ್ಯಕ್ತಪಡಿಸಿ ಹೋರಾಟದ ಹಾದಿ ಹಿಡಿದಿವೆ. ವಿಧಾನ ಪರಿಷತ್‌ ಸದಸ್ಯ ಕೆ.ಎ.ತಿಪ್ಪೇಸ್ವಾಮಿ ನೇತೃತ್ವದಲ್ಲಿ ಜೆಡಿಎಸ್‌, ಆ‌ಗಸ್ಟ್‌ 16ರಂದು ಮದಲೂರಿನಿಂದ ಶಿರಾ ತಾಲ್ಲೂಕು ಕಚೇರಿಯವರೆಗೆ ಕಾಲ್ನಡಿಗೆ ಜಾಥಾ ಹಮ್ಮಿಕೊಂಡಿದೆ. ಮಾಜಿ ಸಚಿವ ಟಿ.ಬಿ.ಜಯಚಂದ್ರ ನೇತೃತ್ವದಲ್ಲಿ ಕಾಂಗ್ರೆಸ್, ಆಗಸ್ಟ್‌ 21ರಂದು ಮದಲೂರಿನಿಂದ ತುಮಕೂರಿನ ಜಿಲ್ಲಾಧಿಕಾರಿ ಕಚೇರಿ ವರೆಗೆ ಪಾದಯಾತ್ರೆ ಆಯೋಜಿಸಿದೆ.

ಮೂರು ರಾಜಕೀಯ ಪಕ್ಷಗಳು ತಮ್ಮ ರಾಜಕೀಯ ಲಾಭಕ್ಕಾಗಿ ಪ್ರಯತ್ನ ನಡೆಸುತ್ತಿದ್ದರೆ, ಈ ಬಾರಿ ಮದಲೂರು ಕೆರೆಗೆ ನೀರು ಹರಿಯಲಿದೆಯೇ ಎಂದು ಜನರು ಕಾಯುತ್ತಿದ್ದಾರೆ.

ನೀರು ಹರಿಯುವ ಕೆರೆಗಳು: ಮದಲೂರು ಕೆರೆ ಹಾಗೂ ಮಾರ್ಗ ಮಧ್ಯೆ ಬರುವ 11 ಕೆರೆಗಳಾದ ಅಜ್ಜೇನಹಳ್ಳಿ, ಭೂಪಸಂದ್ರ, ಚಿಕ್ಕಗೂಳ, ದೊಡ್ಡಗೂಳ, ನ್ಯಾಯಗೆರೆ, ಮಾಗೋಡು, ಗಿರಿನಾಥನಹಳ್ಳಿ, ಲಿಂಗದಹಳ್ಳಿ, ಕೊಟ್ಟ, ಗೊಲ್ಲಹಳ್ಳಿ, ಮದಲೂರು ಚಿಕ್ಕಕೆರೆಗಳು ಯೋಜನೆ ವ್ಯಾಪ್ತಿಯಲ್ಲಿವೆ.

 

ನೀರು ಬರುವುದು ಶತಸಿದ್ಧ

ಮದಲೂರು ಕೆರೆಗೆ ನೀರು ಬರುವುದು ಶತಸಿದ್ಧ. ಯಾರೇ ಪಾದಯಾತ್ರೆ ಮಾಡಲಿ, ಬಿಡಲಿ ನೀರು ಹರಿಯುವುದು ಖಚಿತ. ಕೊಟ್ಟ ಮಾತಿಗೆ ಸರ್ಕಾರ ಹಾಗೂ ಪಕ್ಷ ಬದ್ಧವಾಗಿದೆ. ಮದಲೂರು ಕೆರೆಗೆ ನೀರು ನಿಗದಿಯಾಗಿದೆ ಎಂದು ಹೇಳುತ್ತಾ ಕಾಂಗ್ರೆಸ್‌ ಜನರಲ್ಲಿ ಗೊಂದಲ ಮೂಡಿಸುತ್ತಿದೆ. ಕಾಂಗ್ರೆಸ್‌ನ ತಪ್ಪನ್ನು ಸರಿಪಡಿಸಿ ನೀರು ಹರಿಸಲಾಗುವುದು. ನೀರು ಹಂಚಿಕೆಗೂ ಯತ್ನಿಸಲಾಗುತ್ತಿದೆ.

---------

ಡಾ.ಸಿ.ಎಂ.ರಾಜೇಶ್ ಗೌಡ, ಶಾಸಕ

ನೀರು ನಮ್ಮ ಹಕ್ಕು

ಮದಲೂರು ಕೆರೆಗೆ ನೀರು ಹರಿಸಲು ಸರ್ಕಾರ ವಿಫಲವಾಗಿದೆ. ಕಳ್ಳಂಬೆಳ್ಳ ಕೆರೆಯಿಂದ ಮದಲೂರು ಕೆರೆಯವರೆಗೆ ₹60 ಕೋಟಿ‌ ವೆಚ್ಚದಲ್ಲಿ‌ ನೀರು ಹರಿಸಲು ಚಾನಲ್ ನಿರ್ಮಿಸಲಾಗಿದೆ. ಕಾನೂನಾತ್ಮಕವಾಗಿ ಕೆಲಸ ಮಾಡಲಾಗಿದೆ. ಮದಲೂರು ಕೆರೆಗೆ ನೀರು ಹಂಚಿಕೆಯಾಗಿದೆ. ಇದು ಸಚಿವ ಹಾಗೂ ಶಾಸಕರಿಗೆ ಆರ್ಥವಾಗುತ್ತಿಲ್ಲ. ಕೆರೆಗೆ ನೀರು ಪಡೆಯುವುದು ನಮ್ಮ ಹಕ್ಕು. ಅದಕ್ಕಾಗಿ ಹೋರಾಟ ಅನಿವಾರ್ಯ.

ಟಿ.ಬಿ.ಜಯಚಂದ್ರ, ಮಾಜಿ ಶಾಸಕ

ಜನರಿಗೆ ದ್ರೋಹ

ಮದಲೂರು ಕೆರೆಗೆ ನೀರು ಹರಿಸುವ ವಿಚಾರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಜನರಿಗೆ ದ್ರೋಹ ಬಗೆಯುತ್ತಿವೆ. ಕಾಂಗ್ರೆಸ್ ನೀರು ನಿಗದಿಯಾಗಿದೆ ಎನ್ನುತ್ತಿದ್ದರೆ, ಬಿಜೆಪಿ ಆಗಿಲ್ಲ ಎನ್ನುತ್ತಿದೆ. ನೀರು ಹಂಚಿಕೆ ಮಾಡದಿದ್ದರೆ ಕಾನೂನಾತ್ಮಕವಾಗಿ ಹಂಚಿಕೆ ಮಾಡಿ ನೀರು ಹರಿಸಲಿ. ನೀರು ನಿಗದಿಗೆ ಸರ್ಕಾರದ ಮೇಲೆ ಒತ್ತಡ ತರಲು ಪಾದಯಾತ್ರೆ ನಡೆಸುತ್ತಿದ್ದೇವೆ. ಇದರಲ್ಲಿ ಯಾವುದೇ ರಾಜಕೀಯ ಉದ್ದೇಶವಿಲ್ಲ.

ಆರ್.ಉಗ್ರೇಶ್, ಅಧ್ಯಕ್ಷ, ಜೆಡಿಎಸ್ ತಾಲ್ಲೂಕು ಘಟಕ

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.