ಮಧುಗಿರಿ(ತುಮಕೂರು): ತಾಲ್ಲೂಕಿನ ಬೆಲ್ಲದಮಡಗು ಗ್ರಾಮದ ತೋಟವೊಂದರಲ್ಲಿ ವರ್ಷದಿಂದ ಕೂಡಿ ಹಾಕಲಾಗಿದ್ದ ವೃದ್ಧ ದಂಪತಿಯನ್ನು ಅಧಿಕಾರಿಗಳು ಬಂಧಮುಕ್ತಗೊಳಿಸಿದ್ದಾರೆ.
ದಬ್ಬೇಘಟ್ಟ ಗ್ರಾಮದ ಹನುಮಂತರಾಯಪ್ಪ ಮತ್ತು ರಾಮಕ್ಕ ದಂಪತಿಯನ್ನು ಬೆಲ್ಲದಮಡಗು ಗ್ರಾಮದಲ್ಲಿರುವ ಲಕ್ಷ್ಮಿನಾರಾಯಣ ಎಂಬುವರ ತೋಟದಲ್ಲಿ ಕೆಲವು ತಿಂಗಳಿಂದ ಕೂಡಿ ಹಾಕಿ, ಕೆಲಸ ಮಾಡಿಸಲಾಗುತ್ತಿತ್ತು.
ಈ ಬಗ್ಗೆ ಗ್ರಾಮಸ್ಥರು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ದಂಪತಿ ಮೇಲೆ ದೌರ್ಜನ್ಯ ಎಸಗಲಾಗುತ್ತಿದ್ದು ಅವರನ್ನು ರಕ್ಷಿಸಬೇಕು. ತೋಟದ ಮಾಲೀಕನ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ದಲಿತಪರ ಸಂಘಟನೆ ಪದಾಧಿಕಾರಿಗಳು ಒತ್ತಾಯಿಸಿದ್ದರು.
ದೂರು ಬಂದ ತಕ್ಷಣ ಮಧುಗಿರಿ ತಹಶೀಲ್ದಾರ್ ಶಿರಿನ್ ತಾಜ್, ಸಿಡಿಪಿಒ ಕಮಲಾ, ಸಮಾಜ ಕಲ್ಯಾಣ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ದಿನೇಶ್ ಬುಧವಾರ ತೋಟಕ್ಕೆ ತೆರಳಿ ದಂಪತಿಯನ್ನು ಬಂಧಮುಕ್ತಗೊಳಿಸಿದ್ದಾರೆ.
‘ತೋಟದಲ್ಲಿ ಕೆಲಸ ನೀಡುವುದಾಗಿ ಹೇಳಿ ಕರೆಸಿಕೊಂಡು ತೋಟದಲ್ಲಿ ಕೂಡಿ ಹಾಕಲಾಗಿದೆ. ತಿಂಗಳಿಗೆ ₹14 ಸಾವಿರ ನೀಡುವುದಾಗಿ ಹೇಳಿ ವರ್ಷದ ಹಿಂದೆ ಕರೆ ತಂದಿದ್ದರು. ಜಮೀನಿನ ಗೇಟ್‌ಗೂ ಜಮೀನಿನ ಮಾಲೀಕ ಬೀಗ ಹಾಕಿಕೊಂಡು ಹೋಗಿದ್ದಾರೆ. ಆದರೆ, ಕೇವಲ ಎರಡು ತಿಂಗಳು ಮಾತ್ರ ಸಂಬಳ ನೀಡಿದ್ದು ಹತ್ತು ತಿಂಗಳಿನಿಂದ ಕೂಲಿ ನೀಡದೆ ಕೆಲಸ ಮಾಡಿಸಿಕೊಂಡಿದ್ದಾರೆ’ ಎಂದು ದಂಪತಿ ಅಧಿಕಾರಿಗಳ ಮುಂದೆ ಅಳಲು ತೋಡಿಕೊಂಡಿದ್ದಾರೆ.
ದಲಿತಪರ ಸಂಘಟನೆ ಪದಾಧಿಕಾರಿಗಳ ಸಭೆ ನಡೆಸಿದ ಉಪವಿಭಾಗಾಧಿಕಾರಿ ಗೋಟೂರು ಶಿವಪ್ಪ, ತೋಟದ ಮಾಲೀಕ ಬೆಂಗಳೂರಿನ ಲಕ್ಷ್ಮೀನಾರಾಯಣ ವಿರುದ್ಧ ಪ್ರಕರಣ ದಾಖಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ದಂಪತಿಗೆ ಕಚೇರಿಯಲ್ಲಿ ಜೀತಮುಕ್ತಿ ಪತ್ರ ನೀಡಲಾಯಿತು.
ಜೀವಿಕ ಸಂಘಟನೆಯ ಮಂಜುನಾಥ್, ಸಂಜೀವ ಮೂರ್ತಿ, ಬೆಲ್ಲದಮಡುಗು ಭರತ್ ಕುಮಾರ್, ಶಿವಕುಮಾರ್, ಸಣ್ಣಲಿಂಗಪ್ಪ, ರತ್ನಮ್ಮ, ದಲಿತ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹರಾಜು ಹಾಜರಿದ್ದರು.